ಶ್ರೀ ರಾಮುಲು ತಮ್ಮ ಹೇಳಿಕೆಯಂತೆ ಮಾಗಲು ಇನ್ನು ಒಂದು ದಶಕವೇ ಬೇಕು…!!
ಕಳೆದ ಚುನಾವಣೆಯಲ್ಲಿ ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಸಣ್ಣ ಪಕ್ಕಿರಪ್ಪ ,ಕಂಪ್ಲಿ ಕ್ಷೇತ್ರದಲ್ಲಿ ಶ್ರೀ ರಾಮುಲು ಅಲ್ಲುಡು ಸುರೇಶ್ ಬಾಬು ಸೋಲಲು ಶ್ರೀ ರಾಮುಲು ಸಿದ್ದರಾಯ್ಯ ವಿರುದ್ಧ ಬಾದಾಮಿ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದ್ದೆ ಕಾರಣ

ಬಾದಾಮಿಯಲ್ಲಿ ನಮ್ಮ ಜನಾಂಗದ ನಾಯಕ ಸಿದ್ರಾಮಯ್ಯನವರ ವಿರುದ್ಧ ನೀನು ನಿಲ್ತಿಯಾ ಅಂತಾ ಕುರುಬರೆಲ್ಲಾ ತಲೆ ಕೆಡಿಸಿಕೊಂಡು ನಿಂತು ಬಿಟ್ರು. ಅದರ ಬಿಸಿ ಬಾದಾಮಿಯಲ್ಲಿ ನೇರವಾಗಿ ಆಗಿದ್ರೆ ಕಂಪ್ಲಿ ಮತ್ತು ಬಳ್ಳಾರಿ ಗ್ರಾಮೀಣ ಕ್ಷೇತ್ರದಲ್ಲಿ ಪರೋಕ್ಷವಾಗಿ ತಟ್ಟಿದೆ.
ಶ್ರೀ ರಾಮುಲು ಮೊದಲ ಬಾರಿಗೆ ಎಂಎಲ್ಎ ಆದ ಕಾಲಕ್ಕೆ ಈ ಜಾತಿ ಜನಾಂಗಗಳ ಗಲಾಟೆ ಗದ್ದಲಗಳ ಪಂಚಾಯ್ತಿ ಮಾಡಿಕೊಂಡೆ ಬೆಳೆದಿದ್ದಾರೆ ನಿಜ. ರಾಮುಲುಗೆ ಜಾತಿಗಳ ಮೌಲ್ಯ ಮತ್ತು ಜಾತಿ ರಾಜಕಾರಣದ ತಳ ಮಟ್ಟದ ಜ್ಞಾನವಿದೆ ನಿಜ. ಆದರೆ ಯಾವಾಗ ರಾಜ್ಯ ರಾಜಕೀಯದಲ್ಲಿ ಚುರುಕಾದರೋ ಆಗಿನಿಂದ ಸ್ಥಳೀಯ ಪಟ್ಟುಗಳೆಲ್ಲ ಹೋಗಿಬಿಟ್ಟಿವೆ. ಅವರ ನೆಚ್ಚಿನ ಬಳ್ಳಾರಿಯ ಕೌಲ್ ಬಜಾರ್ ನಲ್ಲೇ ರಾಮುಲು ಹಿಡಿತ ಕಳೆದುಕೊಂಡಿದ್ದಾರೆ ಎಂಬ ಮಾತುಗಳು ಚಾಲ್ತಿಯಲ್ಲಿವೆ. ಮೊನ್ನೆ ಅವರೇ ಮಾದ್ಯಮವೊಂದಕ್ಕೆ ಹೇಳಿಕೆ ನೀಡಿದಂತೆ ತವರು ಜಿಲ್ಲೆಯ ನಂಟು ತಪ್ಪಿ ಸುಮಾರು ವರ್ಷಗಳೆ ಕಳೆದಿವೆ.
ಹಿಂದುಳಿದ ಸಮುದಾಯಗಳ ಬಗ್ಗೆ ಮಾತಾಡೋ ರಾಮುಲು ತಾವೇ ಪ್ರತಿನಿಧಿಸುವ ಎಸ್ಟಿ ಸಮುದಾಯಕ್ಕೆ ಈ ವರೆಗೆ ಮೀಸಲಾತಿ ಹೆಚ್ಚಿಸುವ ತಾವೇ ನೀಡಿದ ವಾಗ್ದಾನವನ್ನ ಈಡೇರಿಸುವ ಕೆಲಸ ಮಾಡಿಲ್ಲ. ಇವರೊಬ್ಬ ಹಿಂದುಳಿದ ಸಮುದಾಯದವರು ಎಂಬ ಕಾರಣಕ್ಕೆ ಬಿಜೆಪಿಯೂ ಇವರನ್ನ ಉಪ ಮುಖ್ಯಮಂತ್ರಿ ಮಾಡಿಲ್ಲ.
ಶ್ರೀ ರಾಮುಲು ಜೊತೆ ಸಿದ್ದರಾಮಯ್ಯನವರ ಸ್ನೇಹ ಅದು ಇದು ಎಲ್ಲಾ ಸುಳ್ಳು. ತಮ್ಮ ಕ್ಷೇತ್ರಗಳಲ್ಲಿ ಹಿಡಿತವಿಲ್ಲದೆ ರಾಮುಲು ನೆಲೆಗಾಗಿ ಹುಡುಕಾಡುತ್ತಿದ್ದಾರೆ. ಅಕ್ಷರಶಃ ದೇಶಾಂತರ ಹೋಗಿ ತಿರುಗಾಟ ನಡೆಸಿ ಮರಳಿ ಗೂಡಿಗೆ ಬಂದ ಹಕ್ಕಿಯಂತಾಗಿದ್ದಾರೆ ರಾಮುಲು. ಮರಳಿ ಬಂದು ತಳವೂರಲು ನೋಡಿದರೆ ಅಲ್ಲಿ ನಾಗೇಂದ್ರ ಎಂಬ ಬಲಿತ ಹಕ್ಕಿ ಗೂಡುಕಟ್ಟಿ ಬೆಚ್ಚಗೆ ಮಲುಗಿದೆ.
ಉತ್ತರ ಕರ್ನಾಟಕದ ಯಾವುದೇ ಕ್ಷೇತ್ರದಲ್ಲೂ ಕುರುಬ ಸಮುದಾಯದ ಓಟುಗಳು ಬಹುಸಂಖ್ಯೆಯಲ್ಲಿ ಇರುವುದು ಸತ್ಯ. ಯಾವುದಕ್ಕೂ ಕಳೆದ ಚುನಾವಣೆಯ ಕಹಿ ನೆನಪಿನಂತೆ ಆಗಬಾರದು , ಆ ಜನಾಂಗದ ಓಟು ಸೇಪ್ಟಿಯಾಗಿಟ್ಟುಕೊಳ್ಳೋಣ ಎಂಬ ಮುಂದಾಲೋಚನೆಯಿಂದ ನಾನು ಕುರುಬರ ವಿರೋಧಿಯಲ್ಲ , ನಾನು ಸಿದ್ದರಾಮಯ್ಯನವರ ಸ್ನೇಹಿತ , ನಾವೆಲ್ಲಾ ಹೊಂದಾಣಿಕೆ ಚುನಾವಣೆ ನಡೆಸಿದ್ದೇವೆ ಅಂತಾ ಹೇಳಿದ್ದಾರೆ ಅಷ್ಟೆ….
ಶ್ರೀ ರಾಮುಲು ಜಾತಿ ವ್ಯವಸ್ಥೆ, ಚುನಾವಣಾ ವ್ಯವಸ್ಥೆ , ತಮ್ಮ ನಿಲುವುಗಳ ಬಗ್ಗೆ ಹೇಳಿರುವುದೆಲ್ಲಾ ಸರಿಯಾಗಿದೆ . ಆದರೆ ಅವರು ಹಾಗಿಲ್ಲ. ಅವರು ಪ್ರತಿನಿಧಿಸುವ ಪಕ್ಷ ಅವರ ಆಶಯಗಳಿಗೆ ಪೂರಕವಾಗಿಲ್ಲ. ಮುಂದಿನ ಚುನಾವಣೆಗೆ ಜಾತಿಯಾಧಾರದಲ್ಲಿ ವಿಶ್ವಾಸ ಗಳಿಸುವ ಹೇಳಿಕೆಯನ್ನಷ್ಟೆ ರಾಮುಲು ಹೇಳಿದ್ದಾರೆ ಅಷ್ಟೆ. ರಾಮುಲು ತಮ್ಮ ಹೇಳಿಕೆಯಂತೆ ಸೈದ್ಧಾಂತಿಕವಾಗಿ ಮಾಗಲು ಇನ್ನು ಒಂದು ದಶಕವೇ ಬೇಕು. ಅವರೊಳಗೆ ಜಾತಿ ,ಧರ್ಮ, ಸಮುದಾಯಗಳ ಪರಿಸ್ಥಿತಿಯನ್ನು ಅವಲೋಕಿಸಿ ಅಭಿವ್ಯಕ್ತಿಸುವಷ್ಟು ಜ್ಞಾನ ಇದ್ದರೂ ಅದು ಪಕ್ವಗೊಳ್ಳಲು ಇನ್ನೂ ಹತ್ತು ವರ್ಷ ಬೇಕು. ಈಗಿನ ಅವರ ಹೇಳಿಕೆ ಏನಿದ್ದರೂ ಚುನಾವಣಾ ತಂತ್ರವಷ್ಟೆ…!!

ರಾಮು ಅರಕೇರಿ..
17.8.2022