ಪರಮಪೂಜ್ಯ ಶ್ರೀ ಶ್ರೀ ಶ್ರೀ ಈಶ್ವರಾನಂದಪುರಿ ಮಹಾಸ್ವಾಮಿಗಳು
ಶ್ರೀಕಾಗಿನೆಲೆ ಮಹಾಸಂಸ್ಥಾನ, ಕನಕಗುರುಪೀಠ,  ಶಾಖಾಮಠ : ಕೆಲ್ಲೋಡು,
ಹೊಸದುರ್ಗ ತಾಲ್ಲೂಕು, ಚಿತ್ರದುರ್ಗ ಜಿಲ್ಲೆ

ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ, ಬೆಂಗಳೂರು ವಿಭಾಗ
ಬೆಂಗಳೂರು ವಿಭಾಗದ ಕನಕ ಗುರುಪೀಠವು ಐತಿಹಾಸಿಕ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ಮೇ 16, 2002 ರಂದು ಸ್ಥಾಪನೆಯಾಯಿತು. ವಿಭಾಗೀಯ ಮಠಕ್ಕೆ ಶ್ರೀಶ್ರೀಶ್ರೀ ಈಶ್ವರಾನಂದಪುರಿ ಮಹಾಸ್ವಾಮೀಜಿಯವರು ಪೀಠಾಧಿಪತಿಯಾಗಿದ್ದಾರೆ.
ಮಲೆನಾಡಿನ ಸೊಬಗಿನ ಸೌಂದರ್ಯದಲ್ಲಿರುವ ಹೊಸದುರ್ಗದ ಪೀಠವು ನಗರದಲ್ಲಿ ಎರಡು ಎಕರೆ ಜಮೀನದಲ್ಲಿ ಕಾರ್ಯನಿರ್ವಹಿಸುತ್ತಿದೆ. 1 ರಿಂದ 7ನೇಯ ತರಗತಿಯವರೆಗೆ ಆಂಗ್ಲ ಮತ್ತು ಕನ್ನಡ ಮಾಧ್ಯಮದಲ್ಲಿ ಉತ್ತಮ ಶಿಕ್ಷಣ ನೀಡುತ್ತಿದ್ದು ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆಯುತ್ತಿದ್ದಾರೆ. ಮತ್ತು 50 ವಿದ್ಯಾರ್ಥಿಗಳು ವಸತಿ ನಿಲಯದಲ್ಲಿ ಇದ್ದಾರೆ. ಹೊಸದುರ್ಗದ ವಿಭಾಗೀಯ ಕನಕ ಗುರುಪೀಠವು ಎಂಬತ್ತು ಎಕರೆ ಜಮೀನು ಖರೀದಿಸಿದ್ದು ಅದರಲ್ಲಿ ಮೂವತ್ತು ಎಕರೆ ತೋಟ, ಮೂವತ್ತು ಎಕರೆ ಅಭಿವೃದ್ಧಿ (ಶಿಕ್ಷಣ ಸಂಸ್ಥೆಯ ಕಟ್ಟಡ)ಗಾಗಿದ್ದು, ಉಳಿದ ಇಪ್ಪತ್ತು ಎಕರೆ ಜಮೀನನ್ನು ಸಮಾಜದವರಿಗೆ ಲೀಜ್‍ಗೆ ಕೊಡಲಾಗಿದೆ.
ಹದಿನಾಲ್ಕು ಎಕರೆ ವಿಸ್ತೀರ್ಣ ಜಾಗದಲ್ಲಿ ಪ್ರಾಥಮಿಕ ಹಂತದಿಂದ ಪದವಿವರೆಗೆ ಶಿಕ್ಷಣ ಹಾಗೂ ವೃತ್ತಿ ಸಿಕ್ಷಣಗಳವರೆಗೆ ಕಟ್ಟಡಗಳ ನಿರ್ಮಾಣ, ಆಧುನಿಕ ತಂತ್ರಜ್ಞಾನಗಳ ಅಳವಡಿಕೆ ಬೋಧನಾಂಗ, ಪ್ರಸಾರಾಂಗಗಳವರೆಗೆ ವಿಸ್ತರಣೆ ಜೊತೆಯಲ್ಲಿ ಆಧುನಿಕ ತಂತ್ರಜ್ಞಾನದ ಸೌಲಭ್ಯವುಳ್ಳ ಬೃಹತ್ ಗ್ರಂಥಾಲಯವು ಇಲ್ಲಿನ ಪ್ರಮುಖ ಆಕರ್ಷಣೆಯಾಗಲಿದೆ. ಕೇಂದ್ರೀಯ ಪಠ್ಯಕ್ರಮದ ಶಾಲೆ ಹಾಗೂ ವಸತಿ ಶಾಲೆಯನ್ನು ಪ್ರಾರಂಭಿಸುವ ಸಂಕಲ್ಪವಾಗಿದೆ. ಐದು ಎಕರೆ ವಿಸ್ತೀರ್ಣದ ಜಾಗದಲ್ಲಿ 250 ಟನ್ ಭಾರದ 34 ಅಡಿ ಎತ್ತರದ ಕನಕದಾಸರ ಏಕಶಿಲಾ ವಿಗ್ರಹ ಕೆತ್ತನೆಯ ಕಾರ್ಯ ಪ್ರಗತಿಯಲ್ಲಿದ್ದು ವಿಗ್ರಹದ ಅಡಿಪಾಯದಲ್ಲಿ ಧ್ಯಾನಮಂದಿರಕ್ಕೆ ತಾಣ ಮಾಡಲಾಗುವುದು. ಇದರ ಅಂದಾಜು ವೆಚ್ಚ ಕನಿಷ್ಠ ಐದು ಕೋಟಿ ರೂಪಾಯಿಗಳು. ಇದು ಭಾರತದಲ್ಲಿಯೇ ಕನಕದಾಸರ ಪ್ರಥಮ ಎತ್ತರದ ವಿಗ್ರಹವಾಗಿದ್ದು ಭಕ್ತರ ದರ್ಶನಕ್ಕೆ ಸಿದ್ಧವಾಗಿದೆ.

ವಸತಿ ಸಮುಚ್ಚಯ
ಎರಡು ಎಕರೆ ವಿಸ್ತೀರ್ಣದ ಜಾಗದಲ್ಲಿ ಶಿಕ್ಷಣಾರ್ಥಿಗಳಿಗಾಗಿ, ಕಲಾಭಿಮಾನಿಗಳಿಗಾಗಿ, ಸಂಶೋಧನಾರ್ಥಿಗಳಿಗಾಗಿ ಹಾಗೂ ಪುಣ್ಯ ಕ್ಷೇತ್ರಕ್ಕೆ ಬರುವ ಪ್ರವಾಸಿ ಭಕ್ತರಿಗಾಗಿ ಸುಸಜ್ಜಿತ ವಸತಿ ಸಮುಚ್ಚಯ ನಿರ್ಮಿಸುವ ಯೋಜನೆಯಾಗಿದೆ.
ಹತ್ತು ಎಕರೆ ವಿಸ್ತೀರ್ಣದ ಜಾಗದಲ್ಲಿ ಕನಕದಾಸರ ವಿಗ್ರಹದ ಅವರಣದಲ್ಲಿ, ದಕ್ಷಿಣ ಭಾಗಕ್ಕೆ ಹೊಂದಿಕೊಂಡಂತೆ ಧಾರ್ಮಿಕ ಸಮುಚ್ಚಯದ ನಿರ್ಮಾಣವಾಗುತ್ತಿದೆ. ಒಂದು ಕಡೆ ಸಮಾಜದ ಕುಲದೈವಗಳಾದ ಶ್ರೀ ರೇವಣಸಿದ್ಧೇಶ್ವರ, ಶ್ರೀ ಬೀರೇಶ್ವರ, ಶ್ರೀ ಮೈಲಾರಲಿಂಗೇಶ್ವರ ಹಾಗೂ ಚಾಮುಂಡೇಶ್ವರಿ ಮಂದಿರಗಳು ನಿರ್ಮಾಣವಾಗಲಿವೆ. ಇವುಗಳಿಗೆ ಹೊಂದಿಕೊಂಡು ಇನ್ನೊಂದು ಕಡೆ ಭವ್ಯವಾದ ದಾಸೋಹ ಭವನದಿಂದ ಕನಕದಾಸರ ಪ್ರತಿಮೆ ತಾಣಕ್ಕೆ ಸಂಪರ್ಕ ಕಲ್ಪಿಸುವ ನೇರ ಒಳಮಾರ್ಗ, ಸಾವಿರಾರು ಜನರಿಗೆ ಅವಕಾಶ ಕಲ್ಪಿಸುವ ಮಂದಿರದ ಅಂದಾಜು ವೆಚ್ಚ ನಾಲ್ಕು ಕೋಟಿ ರೂಪಾಯಿಗಳು. ಕನಕದಾಸರ ಮೂರ್ತಿಯ ಸಮೀಪದಲ್ಲಿಯೇ ಸರ್ವಧರ್ಮಗಳ ಸಮನ್ವಯ ವೇದಿಕೆ ನಿರ್ಮಾಣ ಮನುಕುಲದ ಉದ್ಧಾರಕ್ಕಾಗಿ ನೆಲೆಗೊಳ್ಳಲಿದೆ. ಎಲ್ಲ ಧರ್ಮಗುರುಗಳ ಸಂದೇಶವಾಣಿಗಳಿಗೆ ಸ್ಥಳ, ಇದರ ಅಂದಾಜು ವೆಚ್ಚ ಎರಡು ಕೋಟಿ ರೂಪಾಯಿ. ದಾಸೋಹ ಮಂದಿರದ ಸ್ವಲ್ಪ ದೂರದಲ್ಲಿ ಆಧುನಿಕ ಸೌಲಭ್ಯವುಳ್ಳ ಕಲ್ಯಾಣ ಮಂದಿರ ಬಡವ-ಬಲ್ಲಿದನೆನ್ನದೇ ಎಲ್ಲರಿಗೂ ಸಮಾನವಾಗಿ ಸಲ್ಲಬೇಕೆಂಬುದೇ ಇದರ ಉದ್ದೇಶ.

Leave a Reply

Your email address will not be published. Required fields are marked *

error: Content is protected !!