ಪರಮಪೂಜ್ಯ ಶ್ರೀ ಶ್ರೀ ಶ್ರೀ ಸಿದ್ದರಾಮಾನಂದಪುರಿ ಮಹಾಸ್ವಾಮಿಗಳು
ಶ್ರೀಕಾಗಿನೆಲೆ ಮಹಾಸಂಸ್ಥಾನ, ಕನಕಗುರುಪೀಠ, ಶಾಖಾಮಠ : ತಿಂಥಣಿ ಬ್ರಿಡ್ಜ್
ಗುಲ್ಬರ್ಗಾ ವಿಭಾಗ


ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕಗುರುಪೀಠದ ಗುಲ್ಬರ್ಗಾ ವಿಭಾಗದ ಕನಕ ಗುರುಪೀಠವು ರಾಯಚೂರು ಜಿಲ್ಲೆಯ ಸಿಂಧನೂರಿನ ಸುಕಾಲ ಪೇಟೆಯಲ್ಲಿ ಸ್ಥಾಪನೆಗೊಂಡಿತು. ಶ್ರೀ ಸಿದ್ಧರಾಮಾನಂದಪುರಿ ಮಹಾಸ್ವಾಮೀಜಿಯವರು ಪೀಠಾಧಿಪತಿಯಾಗಿ ನೇಮಕಗೊಂಡು ಕಾರ್ಯ ಚಟುವಟಿಕೆಗಳನ್ನು ಆರಂಭಿಸಿದರು. ವಿಭಾಗದ ಹಳ್ಳಹಳ್ಳಿಗಳಿಗೆ ಸಂಚರಿಸಿ, ಸಮಾಜದ ಭಕ್ತ ಜನರಿಗೆ ಉತ್ತಮ ಸಂಸ್ಕಾರ ನಿಡುವ ಕಾರ್ಯ, ಪ್ರತಿ ತಿಂಗಳು ಧಾರ್ಮಿಕ ಸಂಗಮ ಕಾರ್ಯಕ್ರಮವನ್ನು ಹಮ್ಮಿಕೊಂಡು ಜನಸಮೂಹಕ್ಕೆ ಒಳ್ಳೆಯ ಧಾರ್ಮಿಕ ಹಾಗೂ ಸಾಮಾಜಿಕ ಚಿಂತನೆಗೈಯುವಂತೆ ಪ್ರೇರಣೆ ನೀಡಿದರು. ಶ್ರೀ ಕಾಗಿನೆಲೆ ಮಹಾ ಸಂಸ್ಥಾನ ಕನಕ ಗುರುಪೀಠದ ಪ್ರಥಮ ಜಗದ್ಗುರು ಶ್ರೀಶ್ರೀಶ್ರೀ ಬೀರೇಂದ್ರ ತಾರಕಾನಂದಪುರಿ ಮಹಾ ಸ್ವಾಮೀಜಿಗಳ 12ನೇಯ ಪಟ್ಟಾಭಿಷೇಕ ಮಹೋತ್ಸವವನ್ನು ಬಹು ವಿಜೃಂಭಣೆಯಿಂದ ನೆರವೇರಿಸಿದರು.


ಮುಂದೆ ಕಾರಣಾಂತರದಿಂದ ಶ್ರೀಗಳು ಸುಕಾಲಪೇಟೆಯಿಂದ, ದೇವದುರ್ಗ ತಾಲೂಕಿನ ಕೃಷ್ಣಾ ನದಿಯ ತಟದಲ್ಲಿರುವ ತಿಂತಿಣಿ ಬ್ರಿಡ್ಜ ಹತ್ತಿರ ವೀರಗೋಟದ ಬೆಟ್ಟದ ಮೇಲೆ ಒಂದು ಚಿಕ್ಕದಾದ ಗುಡಿಸಲಿನ ಆಶ್ರಮದೊಂದಿಗೆ ಶ್ರೀಮಠ ಪ್ರಾರಂಭಗೊಂಡು ಇಂದು ಹದಿಮೂರು ಎಕರೆ ವಿಸ್ತೀರ್ಣದ ಜಮೀನಿನಲ್ಲಿ ಬಹು ಭಕ್ತರ ಆಕರ್ಷಣೀಯ ತಾಣವಾಗುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನದ ಕೆಲಸ ನಡೆದಿದೆ. ಯಾದಗಿರಿ ಜಿಲ್ಲೆಯ ಸುರಪುರ, ಬಳ್ಳಾರಿ ಜಿಲ್ಲೆಯ ಸಿರಗುಪ್ಪಾ ತಾಲೂಕಿನ ಸಿರಿಗೇರಿ ಹಾಗೂ ಶ್ರೀಮಠ ತಿಂತಿಣಿ ಬ್ರಿಡ್ಜನಲ್ಲಿ ಐ.ಟಿ.ಐ. ಕಾಲೇಜುಗಳು ಪ್ರಾರಂಭಗೊಂಡಿವೆ. ಶ್ರೀಮಠದಲ್ಲಿ ಒಂದರಿಂದ ಹತ್ತನೆಯ ತರಗತಿಯವರೆಗೆ, ಶ್ರೀ ಕಾಳಿದಾಸ ವಸತಿಶಾಲೆ ಪ್ರಾರಂಭಗೊಂಡಿದ್ದು, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ವಿದ್ಯಾರ್ಜನೆ ಮಾಡುತ್ತಲಿದ್ದಾರೆ. ವಿದ್ಯಾರ್ಥಿಗಳಿಗೆ ಶಾಲಾ ವಾಹನ ಸೌಕರ್ಯ ಒದಗಿಸಲಾಗಿದೆ.


ಕೊಪ್ಪಳ ಜಿಲ್ಲೆ ಕುಷ್ಟಗಿ ತಾಲೂಕಿನ ಬಾದಿಮನಾಳ ಗ್ರಾಮದಲ್ಲಿ ಶಾಖಾಮಠವಿದ್ದು, ಪ್ರತಿವರ್ಷ ಇಲ್ಲಿ ಸಾಮೂಹಿಕ ವಿವಾಹ ಮಹೋತ್ಸವವು ಜರುಗುವುದರಿಂದ ಸಮಾಜದ ಸಾಕಷ್ಟು ಜನರಿಗೆ ಉಪಯುಕ್ತವಾಗಿದೆ.
ಹತ್ತು ವರ್ಷಗಳಿಂದ ಪ್ರತಿವರ್ಷದ ಜನವರಿ ತಿಂಗಳ ಮಕರ ಸಂಕ್ರಾಂತಿ ಹೊಸವರ್ಷದ ಸಂದರ್ಭದಲ್ಲಿ ಶ್ರೀ ಮಠದಲ್ಲಿ ಮೂರು ದಿನಗಳ `ಹಾಲುಮತ ಸಂಸ್ಕøತಿ ವೈಭವ’’ ಕಾರ್ಯಕ್ರಮವು ಅದ್ಧೂರಿಯಿಂದ ಜರುಗಿ ಯಶಸ್ವಿಯಾಗುತ್ತ ಸಾಗಿದೆ. ಈ ಸಮಾರಂಭದಲ್ಲಿ ಹಾಲುಮತ ಸಾಹಿತ್ಯ ಗೋಷ್ಟಿ, ಟಗರಿನ ಕಾಳಗ, ಸಂಗ್ರಾಣಿ ಕಲ್ಲು ಹಾಗೂ ಉಸುಕಿನ ಚೀಲ ಎತ್ತುವ ಶಕ್ತಿ ಪ್ರದರ್ಶನದ ಸ್ಪರ್ಧೆಗಳು, ಮಹಿಳಾ ಸಮಾವೇಶ, ಶಿಕ್ಷಣ ಹಾಗೂ ಸಾಹಿತಿಗಳು ಹಾಗೂ ಶಿಕ್ಷಣ ತಜ್ಞರಿಂದ ಗೋಷ್ಟಿಗಳನ್ನು ರಚನಾತ್ಮಕ ಹಾಗೂ ವೈಚಾರಿಕ ವಿಷಯಗಳ ಮಂಡನೆ, ನಾಡಿನ ಹಿರಿಯ ಮುತ್ಸದ್ಧಿ ರಾಜಕಾರಣಿಗಳು ಅಧಿಕಾರಿಗಳು ಸಮಾಜಸೇವಕರು ಒಂದೆಡೆ ಸೇರಿ ಕುರಿ ಸಂರಕ್ಷಣೆ, ಕಂಬಳಿ ಉದ್ಯಮ, ಹೈನುಗಾರಿಕೆ ಮುಂತಾದ ವಿಷಯಗಳ ಕುರಿತು ಚಿಂತನ, ಮಂಥನ ನಡೆದು ಉತ್ತಮ, ಸಧೃಢ ಸಮಾಜದ ನಿರ್ಮಾಣ ಹಾಗೂ ಹಾಲುಮತ ಸಂಸ್ಕøತಿಯ ಹಿರಿಮೆ ಕುರಿತು ಚರ್ಚೆಗಳು ನಡೆಯುತ್ತವೆ. ಸಂಜೆ ಸಾಂಸ್ಕøತಿಕ ಕಾರ್ಯಕ್ರಮಗಳಲ್ಲಿ ಹಾಲುಮತ ಸಮಾಜದ ಹಿರಿಯ ಚೇತನಗಳ ಕುರಿತು ಭಕ್ತಿಪ್ರಧಾನ ನಾಟಕಗಳು, ನಡಿನ ಹೆಸರಾದಂತಹ ಕಲಾವಿದರಿಂದ ಉತ್ತಮವಾದ ಕಾರ್ಯಕ್ರಮಗಳು ಜರುಗುತ್ತ ಬಂದಿವೆ. ಕಳೆದ ವರ್ಷದಿಂದ ಶ್ರೀಮಠದಿಂದ ಹಾಲುಮತ ಸಮಾಜದ ವಿಶಿಷ್ಟ ಸಾಧನೆಗೈದ ಸಾಧಕರಿಗೆ ಹಾಲುಮತ ಭಾಸ್ಕರ’ ಪ್ರಶಸ್ತಿಯನ್ನು ನೀಡಲಾಗುತ್ತದೆ. ಅದೇ ರೀತಿ ಉತ್ತಮ ಸಾಧಕರಿಗೆ ಕನಕರತ್ನ ಹಾಗೂ ಸಿದ್ಧಶ್ರೀ ಪ್ರಶಸ್ತಿ ಮತ್ತು ನಗದು ಬಹುಮಾನವನ್ನು ನೀಡಿ ಗೌರವಿಸುವ ವಿನೂತನ ಪರಂಪರೆಯನ್ನು ಹಮ್ಮಿಕೊಳ್ಳಲಾಗಿದೆ. ಶ್ರೀಮಠದ ಪ್ರಕಾಶನ `ಹಾಲುಮತ-ವಿಶ್ವಪಥ’ ಮೂಲಕ ಹಾಲುಮತ ಕುರುಬ ಸಮುದಾಯದ ದಾರ್ಶನಿಕರ, ಸಾಮ್ರಾಟರ, ಸಾಧಕರ ಮತ್ತು ಸಂಸ್ಕøತಿಗೆ ಸಂಬಂಧಪಟ್ಟ ಕೃತಿಗಳನ್ನು ಪ್ರಕಟಿಸಲಾಗುತ್ತದೆ.

ಪ್ರತಿವರ್ಷ ಶ್ರಾವಣಮಾಸದ ತಿಂಗಳಲ್ಲಿ `ಹಾಲುಮತ ಜಾಗರಣೆ ಯಾತ್ರೆ’ ಎಂಬ ಧಾರ್ಮಿಕ ಕಾರ್ಯಕ್ರಮವನ್ನು ಹಮ್ಮಿಕೊಂಡು ಹಳ್ಳಿ ಹಳ್ಳಿಗಳಿಗೆ ಹಾಲುಮತದ ಮಹತ್ವ, ಸಾಮರಸ್ಯದ ಬದುಕಿನ ಮಹತ್ವ ಕುರಿತು ಕಾರ್ಯಕ್ರಮಗಳು ನಡೆಯುತ್ತವೆ. ಹಾಗೂ ಪ್ರತಿ ವರ್ಷ ಜುಲೈ ತಿಂಗಳಲ್ಲಿ ಪ್ರಥಮ ಜಗದ್ಗುರುಗಳಾಗಿದ್ದ ಶ್ರೀಶ್ರೀಶ್ರೀ ಬೀರೇಂದ್ರ ಕೇಶವತಾರಕಾನಂದ ಪುರಿ ಮಹಾಸ್ವಾಮೀಜಿಯವರ ಪುಣ್ಯ ಸ್ಮರಣೆಯ ಕಾರ್ಯಕ್ರಮ ನಡೆಯುತ್ತದೆ. ಸಾವಿರಾರು ಜನ ಭಾಗವಹಿಸುತ್ತಾರೆ. ಪ್ರತಿವರ್ಷ ಶ್ರೀಮಠದ ಅಭಿವೃದ್ಧಿ, ಸಮಾಜಸೇವಾ ಕಾರ್ಯಕ್ರಮಗಳಿಗೆ ಭಕ್ತಿ ಕಾಣಿಕೆ ನೀಡುವವರಿಗೆ `ಪುಣ್ಯಚೇತನ’ ಎಂದು ಗುರುತಿಸಿ ಸೇವೆಯನ್ನು ಪಡೆಯುವ ಕಾರ್ಯಕ್ರಮ ನಿರಂತರವಾಗಿ ಸಾಗಿ ಬಂದಿದೆ. 

Leave a Reply

Your email address will not be published. Required fields are marked *

error: Content is protected !!