ಹುಲಜಂತಿ ಮಾಳಿಂಗರಾಯ ಕುರುಬ ಜನಾಂಗದ ಒಬ್ಬ ಆರಾಧ್ಯ ದೈವವಾಗಿದ್ದಾನೆ. ಕರ್ನಾಟಕ ಮಹಾರಾಷ್ಟ್ರಗಳ ಗಡಿಭಾಗದಲ್ಲಿ ಇವನಿಗೆ ಅಸಂಖ್ಯಾತ ಭಕ್ತರಿದ್ದಾರೆ. ಪ್ರಾಚೀನ ಕರ್ನಾಟಕದ ಭಾಗವಾದ ಇಂದಿನ ಮಹಾರಾಷ್ಟ್ರದ ಸೊಲ್ಲಾಪೂರ ಜಿಲ್ಲೆಯ ಮಂಗಳವೇಡೆ(ಮಂಗಳವಾಡೆ) ತಾಲೂಕಿನ ಹುಲಿಜಂತಿ’ ಒಂದು ಪುಟ್ಟಗ್ರಾಮ. ಹುಲಿಜಂತಿಯ ಸಿದ್ಧ ಪುರುಷನಾದ ಮಾಳಿಂಗರಾಯನನ್ನು ಮಾಳಪ್ಪ ಎಂತಲೂ ಗುರುತಿಸುತ್ತಾರೆ. ಅತಿಮಾನವತೆಯಿಂದ ದೈವತ್ವಕ್ಕೇರಿ, ಪವಾಡಗಳನ್ನು ಜರುಗಿಸಿ ಮಹಿಮಾವಂತ ಪುರುಷನಾದವನು.ಮಾಳಿಂಗರಾಯನ ಪುರಾಣ’ವನ್ನು ಬರೆದ ಅವನ ವಂಶಜನಾದ ಅಡಿವೆಪ್ಪ ಸೋಮುತ್ತೆ ಪೂಜಾರಿಯವರ ಪ್ರಕಾರ ಮಾಳಿಂಗರಾಯ ತುಕ್ಕಪ್ಪನೆಂಬ ಕುರುಬನ ಮಗನೆಂದೂ, ಈ ತುಕ್ಕಪ್ಪನು ಬಾರಾಮತಿ ಪ್ರದೇಶದ 12 ಗ್ರಾಮಗಳ ಒಡೆಯನಾಗಿದ್ದನೆಂದು ಹೇಳಲಾಗುತ್ತದೆ.
ಮಾಳಿಂಗರಾಯನ ತನ್ನ ಗುರುವಿನ ಆದೇಶದಂತೆ ಕಪ್ಪು ಹುಲಿಯ ಗಿಣ್ಣದ ಹಾಲು ತಂದು ಹುಲಿಯ ಜಯಂತಿಯನ್ನು ಆಚರಿಸಿದ್ದಕ್ಕಾಗಿ ಜಾಗ್ರತಿಪುರ(ನಾರಾಯಣಪುರ) ಎಂದಿದ್ದ ಆ ಊರಿನ ಹೆಸರು ಹುಲಿ ಜಯಂತಿಪುರ’>ಹುಲಿಜಂತಿ ಎಂದಾಯಿತೆಂಬ ಕತೆಯಿದೆ. ಮಾಳಿಂಗರಾಯನಿಗೆ ಕ್ರೂರ ಮೃಗಗಳನ್ನು ಪಳಗಿಸಿಕೊಳ್ಳುವ ಅಲೌಕಿಕ ಕಲೆ ಕರಗತವಾಗಿತ್ತು. ಆದ್ದರಿಂದ ಅವನು ಸಾಮಾನ್ಯ ಜನತೆಯ ಆರಾಧ್ಯ ವ್ಯಕ್ತಿಯಾಗುತ್ತಾನೆ. ಇವನು ಶೂರನೂ ಧೀರನೂ ಆಗಿದ್ದನು. ಸೋಮರಾಜನೆಂಬವನಿಗೆ ವಚನ ಕೊಟ್ಟಂತೆ ಬೇಡರ ಕಾಟವನ್ನು ಕೊನೆಗಾಣಿಸಲು ಮಾಳಿಂಗರಾಯ ತನ್ನ ತಮ್ಮ ಜಕ್ಕರಾಯನೊಡಗೂಡಿ ಏಳುನೂರು ಜನ ಬೇಡರನ್ನು ಸದೆಬಡಿದು ಚೆಂಡಾಡಿ ರುಂಡಗಳನ್ನು ರಾಸಿ ಹಾಕಿಕೊಂಡು ಚಕ್ರಕಟ್ಟೆಯನ್ನು ಕಟ್ಟಿದನೆಂದು ಡೊಳ್ಳಿನ ಹಾಡುಗಳಿಂದ ತಿಳಿಯುತ್ತದೆ. ಇವನ ತಪಸ್ಸನ್ನು ಕೆಡಿಸಲು ಬಂದ ಶೀಲವಂತಿ ಎಂಬವಳನ್ನು ಸೋಲಿಸಿದ್ದು ಇವನು ಮಾಡಿದ ಇನ್ನೊಂದು ಪವಾಡವಾಗಿದೆ. ಇವನು ಅಲ್ಲಮಪ್ರಭುವಿನಂತೆ ಒಬ್ಬ ಸಿದ್ಧಪುರುಷನೆಂದೂ ಪ್ರಸಿದ್ಧನಾಗಿದ್ದಾನೆ.

 

ಇವನ ಭಕ್ತಿಗೆ ಮೆಚ್ಚಿದ ಪರಶಿವನು ಇವನ ತಲೆಗೆ ಮುಂಡಾಸವನ್ನು ಸುತ್ತಿದನೆಂದು ಹೇಳಲಾಗುತ್ತದೆ. ಇಂದಿಗೂ ಪ್ರತಿವರ್ಷ ದೀಪಾವಳಿ ಅಮವಾಸ್ಯೆಯಂದು ನಡೆಯುವ ಜಾತ್ರೆಯಲ್ಲಿ ಇವನ ದೇವಸ್ಥಾನದಲ್ಲಿ ಈ ಪವಾಡ ನಡೆಯುತ್ತದೆಂಬ ನಂಬಿಕೆಯನ್ನು ಭಕ್ತರು ಹೊಂದಿರುತ್ತಾರೆ. ಇವನ ಜಾತ್ರೆಯಲ್ಲಿ ಬಂಡಾರ ಹಾಗೂ ಕುರಿಯ ಉಣ್ಣೆಯನ್ನು ದೇವರ ಗುಡಿ ಮತ್ತು ಪಲ್ಲಕ್ಕಿಗಳ ಮೇಲೆ ಹಾರಿಸುತ್ತ ದೇವರಿಗೆ ಸಮರ್ಪಿಸುತ್ತಾರೆ. ಜತ್ತ ಸಂಸ್ಥಾನದ ಢಪಳೆ ಮನೆತನದ ಸಂಸ್ಥಾನಿಕರು ಕುರುಬರಾಗಿದ್ದು ಈ ಕ್ಷೇತ್ರ ಕೆಲವು ಕಾಲ ಅವರ ಆಡಳಿತಕ್ಕೆ ಒಳಪಟ್ಟಿದ್ದುದನ್ನು ವಿದ್ವಾಂಸರು ಒಪ್ಪಿಕೊಂಡಿದ್ದಾರೆ. ಮಾಳಿಂಗರಾಯನು ಹಾಲುಮತ ಚಾರಿತ್ರಿಕ ವೀರನಾಗಿದ್ದಾನೆ. ಇವನ ಕಾಲವನ್ನು ಕ್ರಿ.ಶ. 12-13ನೆಯ ಶತಮಾನವೆಂದು ಕೆಲವರು ಹೇಳಿದರೆ, ಇನ್ನೂ ಕೆಲವರು ಕ್ರಿ.ಶ. 15ನೆಯ ಶತಮಾನವೆಂದೂ ಹೇಳುತ್ತಾರೆ. ಇವನ ಕುರಿತ ಕಾವ್ಯಗಳು ಮತ್ತು ಡೊಳ್ಳಿನ ಹಾಡುಗಳು ಇವನೊಬ್ಬ ಐತಿಹಾಸಿಕ ವ್ಯಕ್ತಿಯೆಂದೂ ಒಪ್ಪಿಕೊಳ್ಳುತ್ತವೆ. ಮಾಳಿಂಗರಾಯನ ಜೀವನ ಸಾಧನೆಯನ್ನು ಸಿದ್ಧಪ್ಪ ಮೇಟಿ ಅವರು ಹಾಡಿರುವ ಮತ್ತು ವೀರಣ್ಣ ದಂಡೆ ಸಂಪಾಧಿಸಿರುವಜನಪದ ಹಾಲುಮತ ಮಹಾಕಾವ್ಯ’ ಕೃತಿಯು ಸೊಗಸಾಗಿ ಕಟ್ಟಿಕೊಟ್ಟಿದೆ. ಕರ್ನಾಟಕ-ಮಹಾರಾಷ್ಟ್ರ-ಆಂಧ್ರಪ್ರದೇಶಗಳ ಗಡಿನಾಡಿನಲ್ಲಿ ಹಾಡಲಾಗುವ ಡೊಳ್ಳಿನ ಹಾಡುಗಳಲ್ಲಿ ಇವನ ಜೀವನ, ಸಂಘರ್ಷ ಮತ್ತು ಹಾಲುಮತಪರ ಹೋರಾಟಗಳನ್ನು ಹಿಡಿದಿಡಲಾಗಿದೆ. ಸಿದ್ದಪ್ಪ ಮೇಟಿಯವರು ಇಂದಿನ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಸೈದಾಪುರ ಗ್ರಾಮದ ಹಾಲಮತದ ಕುರಿಗಾಹಿ ಕುಟುಂಬದ, ತೊಂಬತ್ತು ವರ್ಷದ ಹರೆಯದವರು. ಇವರು ಕಟ್ಟಿಕೊಟ್ಟ ಹಾಲುಮತ ಮಹಾಕಾವ್ಯವು 700 ಪುಟಗಳಷ್ಟು ಹರವನ್ನು ಹೊಂದಿದ್ದು ಜಾನಪದ ಲೋಕಕ್ಕೆ ವಿಸ್ಮಯವನ್ನುಂಟು ಮಾಡಿದೆ. ಇದನ್ನು ಕನ್ನಡ ಪುಸ್ತಕ ಪ್ರಾದಿಕಾರವು 2000ರಲ್ಲಿ ಪ್ರಕಟಿಸಿ ಉಪಕರಿಸಿದೆ. ಸಿದ್ದಪ್ಪ ಅವರ ಜಾನಪದ ಸಾಧನೆಗಾಗಿ ಕರ್ನಾಟಕ ಸರ್ಕಾರ ಜಾನಪದ ಸಿರಿ ಪ್ರಶಸ್ತಿ ನೀಡಿ ಗೌರವಿಸಿದೆ. ಈ ಕಾವ್ಯ ಕೊಡುವ ಸಂದೇಶಗಳಲ್ಲಿ ಬೀರಪ್ಪನಂತಹ ಗುರು. ಮಾಳಿಂಗರಾಯನಂತಹ ಶಿಷ್ಯ’’ ಅಪರೂಪದವರೆಂದು ಹೇಳುವುದು ಮುಖ್ಯವಾಗಿದೆ. ಹಾಲಿನಂಥ ಗುರು, ಸೀತಾಳದಂಥ ಶಿಷ್ಯ, ಸಮುದ್ರದಂಥ ಭಕ್ತರಿರಬೇಕೆಂದು ಈ ಕಾವ್ಯದ ಸಂದೇಶವಾಗಿದೆ. ಅದೇ ರೀತಿ ಮಾಳಿಂಗರಾಯನ ಬದುಕು ಮತ್ತು ಹೋರಾಟವನ್ನು ಕಟ್ಟಿಕೊಡುವ ಇನ್ನೊಂದು ಕಾವ್ಯ ಗಂಗಾಧರ ದೈವಜ್ಞ ಅವರು ಸಂಪಾದಿಸಿರುವ ಮತ್ತು ಅಡಿವೆಪ್ಪ ಒಡೆಯರು ಹಾಡಿರುವ `ಮಾಳಿಂಗರಾಯನ ಕಾವ್ಯ’ ಆಗಿದೆ. ಸುಮಾರು ಇನ್ನೂರು ಪುಟಗಳ್ಲಿ ಅರಳಿರುವ ಈ ಕಾವ್ಯವು ಮಾಳಿಂಗರಯನ ಹೋರಾಟದ ಬದುಕ್ನ್ನು ಚಿತ್ರಿಸುತ್ತದೆ.

ಇದನ್ನು ಪ್ರಸಾರಾಂಗ ಕನ್ನ ವಿಶ್ವವಿದ್ಯಾಲಯವು ಪ್ರಕಟನೆ ಮಾಡಿದೆ. ಇವೆರಡೂ ಕಾವ್ಯಗಳಲ್ಲದೇ ಉತ್ತರ ಕರ್ನಾಟಕದ ಹಲವಾರು ಡೊಳ್ಳಿನ ಹಾಡುಗಳಲ್ಲಿ `ಮಾಳಿಂಗರಾಯನ ಬದುಕು, ಹೋರಾಟ, ಸಾಧನೆಗಳನ್ನು’ ಹೊಗಳಿ ಹಾಡಲಾಗುತ್ತದೆ. ಈ ಮೂರೂ ಸಾಹಿತ್ಯಿಕ ದಾಖಲೆಗಳಲ್ಲಿ ಪ್ರಸ್ತಾಪವಾಗಿರುವ ಚಾರಿತ್ರಿಕ ಅಂಶಗಳನ್ನು ಆಯ್ಕೆ ಮಾಡಿಕೊಂಡು ಅಧ್ಯಯನವು ಮಾಳಿಂಗರಾಯ ಮಧ್ಯಭಾರತದಲ್ಲಿ ಆಗಿ ಹೋದ ಹಾಲುಮತದ ಚಾರಿತ್ರಿಕ ವೀರನೆಂದು ಪರಿಗಣಿಸಿ ಅವನ ಜೀವನ ಚರಿತ್ರೆಯನ್ನು ಚರ್ಚಿಸಿದೆ. ಮಾಳಪ್ಪನ ಹುಟ್ಟು ಮತ್ತು ಬೆಳವಣಿಗೆ ತುಕ್ಕಪ್ಪರಾಯ ಮತ್ತು ಸ್ವಾಮಿರಾಯ ಇಬ್ಬರೂ ಅಣ್ಣತಮ್ಮಂದಿರು ಮತ್ತು ಕುರುಬ ಸಮೂಹದಿಂದ ಬಂದವರಾಗಿದ್ದಾರೆ. ಇವರಿಬ್ಬರೂ ಬಾರಾಮತಿ ಮತ್ತು ತೇರಾಮತಿ ಎಂಬ ಸಂಸ್ಥಾನಗಳ ಅಧಿಪತಿಗಳು. ಇವರದು ಆನೆಗೊಂದಿಯ ಮಹಾರಾಜರ ವಂಶವೆಂದು ಅಡಿವೆಪ್ಪ ಒಡೆಯರು ಹಾಡಿದ `ಮಾಳಿಂಗರಾಯನ ಕಾವ್ಯ’ದಲ್ಲಿ ಹೇಳಲಾಗಿದೆ. ಬಹು ದಿನಗಳವರೆಗೆ ಇವರಿಗೆ ಮಕ್ಕಳಾಗುವುದಿಲ್ಲ. ತುಕ್ಕಪ್ಪರಾಯನು ಮಕ್ಕಳಿಗಾಗಿ ಬಲ್ಲಾಳ ಗುಡ್ಡದಲ್ಲಿ ಹನ್ನೆರಡು ವರ್ಷಗಳ ಕಾಲ ತಪಸ್ಸನ್ನು ಮಾಡುತ್ತಾನೆ. ಇವನ ಉಗ್ರ ತಪಸ್ಸ್ಸಿಗೆ ಒಲಿದ ಮಹಾದೇವನು ಇವನಿಗೆ ಎರಡು ಹರಳುಗಳನ್ನು ಕೊಟ್ಟು ಹೋಗುತ್ತಾನೆ. ಮಾದೇವನ ಕೊಳ್ಳಗ ಅಲ್ಲೇನ ಮಣಿಕದ ಹರಳ ತಗಾದ
ಪಾರ್ವತಿ ಕೊಳ್ಳಾಗ ಅಲ್ಲೇನ ಜಂಬು ನೀಲದ ಮಣಿಯೇನ
ಸಂಜೆ ಮಾಡಿ ಅಲ್ಲೇನೆ ಹುಟ್ಟುಕ್ವಾಮರಿ ಆಕಳ
ಎರಡು ಮಣಿಗೆ ಅಲ್ಲೇನೆ ಮಂತರ ಮಾಡುತಾನೇನೆ
ಎರಡು ಮಣಿಯ ಒಯ್ಯಕಿ ದೇವರ ಜಗಲಿ ಮ್ಯಾಲೇನೆ’’
(ವೀರಣ್ಣ ದಂಡೆ(ಸಂ.), ಜನಪದ ಹಾಲುಮತ ಮಹಾಕಾವ್ಯ, ಪುಟ 335)
ಶಿವ ಪಾರ್ವತಿಯರ ಆದೇಶದಂತೆ ತುಕ್ಕಪ್ಪ, ಸ್ವಾಮಿರಾಯರ ಹೆಂಡಿರಾದ ಕಾನಮ್ಮ ಮತ್ತು ಅಮೃತಬಾಯಿ ಜಗುಲಿಯ ಮೇಲೆ `ಹರಳು’ಗಳನ್ನು ಇಟ್ಟು ಪೂಜೆ ಮಾಡುತ್ತಾರೆ. ಆಗ ಮಾಳಪ್ಪ ಶಿವನ ಪುತ್ರ, ಬಸವನ ಅವತಾರಿ, ಮಾಣಿಕ್ಯದ ಹರಳಿನಿಂದ ಹುಟ್ಟುತ್ತಾನೆ.
ದೈವೀಶಕ್ತಿಯಿಂದ ಜನಿಸಿದ ಮಾಳಪ್ಪ ಮತ್ತು ಜಕ್ಕಪ್ಪರು ಪ್ರಾರಂಭದಿಂದಲೇ ಅನೇಕ ಪವಾಡಗಳನ್ನು ಮಾಡುತ್ತಾರೆ. ಮಾಳಪ್ಪನು ಮೂರುವರ್ಷದವನಿದ್ದಾಗ ಹಾವು ಕಡಿದ ಬಾಲಕನನ್ನು ಬದುಕಿಸುತ್ತಾನೆ. ಹಾವನ್ನು ಕೈಯಲ್ಲಿ ಹಿಡಿದು ಅದರ ಸೊಕ್ಕಡಗಿಸಿ ಸದಾ ನನ್ನ ಕೈಯಲ್ಲಿ ನಾಗಬೆತ್ತವಾಗಿ ಇರಬೇಕೆಂದು ಆಜ್ಞೆ ಮಾಡುತ್ತಾನೆ. ಏಳತಲಿ ಗುರು ಸೋನಾರ ಸಿದ್ಧ ಇವರನ್ನು ಕಂಡು ಇವರಿಬ್ಬರು ಅವತಾರ ಪುರುಷರು ಎಂದು ಹೊಗಳುತ್ತಾನೆ. ಮಾಳಪ್ಪ ಚಿಕ್ಕವನಿದ್ದಾಗಲೇ ಮಳೆ-ಬೆಳೆ ಭವಿಷ್ಯವನ್ನು ಹೇಳುತ್ತಾನೆ.


ಮಾಳಪ್ಪ ಹೇಳ್ತಾನ ಅಣ್ಣ ಜಕ್ಕಪ್ಪನ ಬಲ್ಯಕs ಬರಗಾಲ ಬೀಳೋದು ಅಣ್ಣಾ ಬಾರಾಮತಿ ಭಾಗಕs. . .’’ ತಂದೆ ತುಕ್ಕಪ್ಪರಾಯನಿಗೆ ನೀಡಿದ ವಚನ ಪೂರೈಸಿ, ಜಕ್ಕಪ್ಪ ತನ್ನ ಗುರು ಸೀಗಿ ಮಠದಲ್ಲಿರುವ ಭರಮಲಿಂಗನ ಹತ್ತಿರ ಹೋಗಿ ಸೇವೆಗೆ ನಿಲ್ಲುತ್ತಾನೆ. ಮಾಳಪ್ಪ ಬೀರಣ್ಣನ ಹತ್ತಿರ ಹೋಗಿ ಸೇವೆ ಮಾಡುತ್ತಾನೆ. ಮಾಳಪ್ಪನಿಗೆಸಿಡಿಯಾಣ ಶಿವಮನೆ, ಹುನ್ನೂರು ಗುರುಮನೆ’’ ಆಗುತ್ತದೆ. ಈ ಕಾವ್ಯದ ಕಥೆ ಪಾಂಡವರ ಚರಿತ್ರೆಯ ಹತ್ತಿರವೂ ಸುಳಿಯುತ್ತದೆ. ಬೀರಣ್ಣ ತನ್ನ ಶಿಶ್ಯನ ಭಕ್ತಿ ಮತ್ತು ಶಕ್ತಿ ಪರೀಕ್ಷಿಸಲು ನನಗೆ ಪಾಂಡವರ ಕೋಟೆಯಲ್ಲಿರುವ ಹುಳುಮುಟ್ಟದ ಹೂವು ಕಾಯಿಗಳನ್ನು ತಂದು ಪೂಜೆ ಮಾಡಬೇಕೆಂದು ಆದೇಶಿಸುತ್ತಾನೆ. ಗುರುವಿನ ಆಜ್ಞೆಯನ್ನು ಪಾಲಿಸಲು ಪಾಂಡವರ ಕೋಟೆಗೆ ಹೋಗುತ್ತಾನೆ. ಇವನ್ನು ಫರೀಕ್ಷಿಸಲು ಬೀರಪ್ಪನು ಕಾಡು, ಕೋಟೆಗಳ ತುಂಬ ವಿಷಜಂತುಗಳನ್ನು ಸೃಷ್ಟಿಸುತ್ತಾನೆ. ಅವೆಲ್ಲವನ್ನೂ ಗೆದ್ದು ಬೀರಪ್ಪ ಪಾಂಡವರ ಕೋಟೆಗೆ ಹೋಗಿ, ಅಲ್ಲಿರುವ ಹುಳುಮುಟ್ಟದ ಹೂವುಕಾಯಿ ತೆಗೆದುಕೊಂಡು, ಬಂದಿಕಾನೆಯಲ್ಲಿದ್ದ ಸಿದ್ಧರನ್ನು ಬಿಡಿಸುತ್ತಾನೆ. ಧರ್ಮರಾಯನ ಮುಂದೆ ಹೊಯ್ಕಳು(ಭವಿಷ್ಯ) ಹೇಳಿ ಸಿಡಿಯಾಣಕ್ಕೆ ಬರುತ್ತಾನೆ. ಗುರುವಿನ ಪೂಜೆ ಮಾಡುತ್ತಾನೆ. ಪಾಂಡವರು ಕೃಷ್ಣಪ್ರಿಯರು, ಅವರಿಗೆ ಹೊಯ್ಕಳು ಹೇಳುವುದೆಂದರೆ ಶೈವತ್ವದ ಪಾರಮ್ಯವನ್ನು ಅವರಿಗೆ ಸಾರುವುದು ಎಂದು ಐತಿಹಾಸಿಕವಾಗಿ ತಿಳಿಯಬಹುದಾಗಿದೆ.
ಬೀರಪ್ಪನು ಮಾಳಪ್ಪನ ಶಕ್ತಿಯನ್ನು ಇನ್ನಷ್ಟು ಪ್ರಕಟಗೊಳಿಸುವುದಕ್ಕೋಸ್ಕರ ನನಗೆ ಹುಲಿಗಿಣ್ಣ ತಿನ್ನುವ ಆಸೆಯಾಗಿದೆ ಎಂದು ಹೇಳುತ್ತಾನೆ.
ಹುಲಿಗುಡ್ಡಕ್ಕೆ ಹೋಗಿದ್ದ ಮಾಳಣ್ಣಾ s
ಹುಲಿಯಾಗಿ ಕೂಗ್ಯಾನ ಗುಡದಾಗೇನ s
ಗುಡುಗಿನ ಸಪ್ಪಳ ಕೇಳಿ ಹುಲಿ ಬಂತೇನ s
ಹುಲಿಹಾಲ ಹಿಂಡಿಕೊಂಡಾನ ಹುಲಿಗಿ ವರವಾ ತಾ ಕೊಟ್ಟಾನ s
ಗುರುವಿಗಿ ಉಣಸ್ಯಾನ s ತಂದ ಹುಲಿಗಿಣ್ಣ s
ಮಾಳಪ್ಪನನ್ನು ವೀರಮಾಳಪ್ಪ, ವೀರಮಾಳಿಂಗರಾಯ, ಕರಿ ಹುಲಿ ಮಾಳಿಂಗರಾಯ’ ಎಂದೂ ಕರೆದಿದ್ದಾರೆ. ಹುಲಿಗಿಣ್ಣ ಉಣಿಸುವ ಮತ್ತು ಹುಲಿಗಳನ್ನು ಸಾಕುವುದರ ಮೂಲಕ ಇವನೊಬ್ಬ ವೀರನಾಗಿದ್ದ ಎಂದೂ ಹೇಳಬಹುದು.


ಬೀರಪ್ಪನಿಗೆ ತನ್ನ ಶಿಷ್ಯ ಮಾಳಿಂಗರಾಯನ ಕೀರ್ತಿ ಭೂಲೋಕದಲ್ಲಿ ಮಾತ್ರವಲ್ಲ, ಕೈಲಾಸದಲ್ಲಿಯೂ ಪಸರಿಸಬೇಕು. ಕೈಲಾಸದಲ್ಲಿ ಗರ್ವದಿಂದ ಶಿವನ ಸೇವೆಯನ್ನು ಮಾಡುತ್ತಿದ್ದ ಅಮೋಘಸಿದ್ಧನ ಸೊಕ್ಕು ಮುರಿಯಬೇಕೆಂದು ಲಿಂಗಬೀರಪ್ಪ ತನ್ನ ಶಿಷ್ಯ ಮಾಳಿಂಗರಾಯನಿಗೆ ಕೈಲಾಸದಲ್ಲಿರುವ ಅಜಾನುವೃಕ್ಷದ ಹೂವುಗಳನ್ನು ತಂದು ನನಗೆ ಪೂಜೆ ಮಾಡಬೇಕೆಂದು ಹೇಳುತ್ತಾನೆ. ಈ ಕಾವ್ಯದಲ್ಲಿ ಅಜಾನುವೃಕ್ಷದ ಹೂವಿಗಾಗಿ ಇಬ್ಬರು ಭಕ್ತ(ಅಮೋಘಸಿದ್ಧ ಮತ್ತು ಮಾಳಿಂಗರಾಯ)ರ ಮಧ್ಯೆ ಸ್ಪರ್ಧೆ ಏರ್ಪಡುತ್ತದೆ.
ಅಮೋಘಸಿದ್ಧ ಅಜಾನುವೃಕ್ಷದ ಹೂವುಗಳಿಂದ ಪ್ರತಿನಿತ್ಯ ಶಿವನನ್ನು ಪೂಜಿಸಿರುತ್ತಾನೆ. ಪ್ರತ್ಯಕ್ಷ ಶಿವನ ಪೂಜೆ ಮಾಡುವ ನಾನೇ ಶ್ರೇಷ್ಠಸಿದ್ಧ ಎಂಬ ಅಹಂಕಾರ ಅವನಲ್ಲಿರುತ್ತದೆ. ಮಾಳಿಂಗರಾಯ ಕೈಲಾಸಕ್ಕೆ ಬಂದು ಅಜಾನುವೃಕ್ಷ ಕಾಯುತ್ತಿದ್ದ ಶಿವಗಣವನ್ನು ಎಚ್ಚರಿಸುತ್ತಾನೆ. ಅವರೆಲ್ಲ ಮಾಳಿಂಗರಾಯನ ಮೇಲೆ ಯುದ್ಧಕ್ಕೆ ಬರುತ್ತಾರೆ. ಭಂಡಾರ ಎಸೆದು ಅವರನ್ನು ಮೂರ್ಛೆಗೊಳಿಸಿ, ಅಜಾನುವೃಕ್ಷದ ಹೂವುಗಳನ್ನು ತೆಗೆದುಕೊಂಡು ಹೋಗಿ ಶಿವನಪೂಜೆ ಮಾಡುತ್ತಾನೆ. ಅಮೋಘಸಿದ್ಧನು ಕೆಳಗೆ ಬಿದ್ದಿರುವ ಹೂವುಗಳನ್ನು ತೆಗೆದುಕೊಂಡು ಹೋಗಿ ಶಿವನ ಪೂಜೆ ಮಾಡುತ್ತಾನೆ. ಬಾಡಿದ ಅಮೋಘಸಿದ್ಧನ ಮುಖ ನೋಡಿ ಮನಸ್ಸಿನಲ್ಲಿ ನಕ್ಕು ಮಾಳಿಂಗರಾಯನೇ ಹೆಚ್ಚಿನ ಸಿದ್ಧ ಎಂದು ಹೇಳುತ್ತಾನೆ. ಆಮೋಘಸಿದ್ಧನು ಮಾಳಿಂಗರಾಯನನ್ನು ಫರೀಕ್ಷಿಸಲು ಮಾರು ವೇಷದಲ್ಲಿ ಬರುತ್ತಾನೆ. ಇಬ್ಬರ ಮಧ್ಯೆ ಕಂಬಳಿ ಬೀಸಿ ಮಳೆ ಕರೆಯುವ ಪ್ರಸಂಗ ಏರ್ಪಡುತ್ತದೆ. ಅಮೋಘಸಿದ್ಧ ಸೋಲುತ್ತಾನೆ. ಅವನ ಅಹಂಕಾರವೂ ಇಳಿಯುತ್ತದೆ.


ಕ್ವಾಣಗನೂರು ಮಠದಲ್ಲಿದ್ದ ದೇಗೊಂಡ ಗೌಡನ ಆಹ್ವಾನದಂತೆ ಅವನ ಜೊತೆ ಸ್ಪರ್ಧೆಗಿಳಿಯಲು ಮಾಳಪ್ಪ ಭಂಡಾರ ಹಿಡಿದು, ತನ್ನ ಶಿಶ್ಯರೊಂದಿಗೆ ಹೋಗುತ್ತಾನೆ. ನೀರಿನ ಮೇಲೆ ಕಂಬಳಿ ಹಾಸಿ ತಾನು ಮತ್ತು ತನ್ನ ಇಪ್ಪತ್ನಾಲ್ಕು ಸಾವಿರ ಶಿಷ್ಯರನ್ನು ಅದರ ಮೇಲೆ ನಡೆದಾಡಿಸುವ ಮೂಲಕ ತನ್ನಲ್ಲಿದ್ದ ಶಕ್ತಿಯನ್ನು ಮಾಳಿಂಗರಾಯ ಲೋಕಕ್ಕೆ ತಿಳಿಸುತ್ತಾನೆ. ಮಾಳಿಂಗರಾಯ ಕ್ವಾಣಗನೂರ ಕರಿಸಿದ್ಧನ ಮಠದಲ್ಲಿ ಎಲ್ಲ ಸಿದ್ಧರನ್ನು ಸೋಲಿಸುತ್ತಾನೆ.
ಕ್ವಾಣೂರ ಮಠದಾಗ ದೇಗೊಂಡ ಗೌಡಾs
ಅಲ್ಲೇ ಇದ್ದಾನರೀs
ಚಾಡಿಕ್ವಾರ ಮೊಡಿಗಾರ ಬಂಗಾಲಿ ಮಂದೀs
ಅಲ್ಲೇ ಕೂಡಿತರೀs
ಕುಟಿಲ ಸಿದ್ಧರನ ಮಾಳಿಂಗರಾಯಾs
ನಮೋನಮೋ ಮಾಡ್ಯಾನರಿs
ಏಳಬಂಡಿ ಅಲ್ಲಿ ತುಂಡ ಮಾಡಿ ಮಾಳಪ್ಪs
ತಾನೇ ಒಗದಾನರೀs
ಚಮೂಲಿ ರಂಗಾ ಹೊಯ್ತಾನ ಹೆಂಗಾs
ಜನರೆಲ್ಲಾ ನೋಡೋಣ ಬರ್ಯೆಂದರೀs
ಮಾಳಪ್ಪ ದೇಗೊಂಡಗೌಡನ ಜೊತೆ ಮೋಡಿಕಾರರ ಆಟ ಆಡಿ ಅವನನ್ನು ಸೋಲಿಸುತ್ತಾನೆ. ಮತ್ತು ಮಾಳಪ್ಪ ಮೋಡಿಗಾರ ಆಟ ಆಡುವುದರಲ್ಲಿ ನಿಪುಣನಾಗಿದ್ದ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹೀಗೆ ಮಾಳಿಂಗರಾಯನು ಒಬ್ಬ ಚಾರಿತ್ರಿಕ ಪುರುಷನಾಗಿದ್ದು, ಪಶುಗಳ ದರೋಡೆಕೋರರಾದ ಬೇಡರೊಂದಿಗೆ, ಜಾತಿ ಅಹಂಕಾರದ ಭಕ್ತರೊಂದಿಗೆ ಸಂಘರ್ಷ ಮಾಡಿ ಹಾಲುಮತ ಧರ್ಮವನ್ನು ಕಾಪಾಡಿದ ವೀರನಾಗಿದ್ದಾನೆ.


ವಿಜಯಪುರದಿಂದ ಹುಲಿಜಂತಿ 80 ಕಿಮೀ ದೂರವಿದೆ.
ಪ್ರತಿ ವರ್ಷ ದೀಪಾವಳಿಯಂದು ದೇಶದ ವಿವಿಧ ಭಾಗಗಳಿಂದ ಹುಲಿಜಂತಿಗೆ ಭಕ್ತರು ಭೇಟಿ ನೀಡುತ್ತಾರೆ. ಭಂಡಾರದ ಮಳೆಯಲ್ಲಿ ತೋಯ್ದು ಭಕ್ತಿಪರವಶರಾಗುತ್ತಾರೆ. ಸ್ವತಃ ಶಿವಪಾರ್ವತಿಯರೇ ಪ್ರತ್ಯಕ್ಷರಾಗಿ ಮುಂಡಾಸನ್ನು ಸುತ್ತುತ್ತಾರೆ ಎಂಬುವುದು ಪವಾಡವಾಗಿದೆ.

https://www.youtube.com/watch?v=MEffJ-iSKKQ

Leave a Reply

Your email address will not be published. Required fields are marked *

error: Content is protected !!