ಗೋಲಗೇರಿಯ ಗೊಲ್ಲಾಳ

ಗೊಲ್ಲಾಳನು ಶರಣ ಪೂರ್ವ ಕಾಲದ ಐತಿಹಾಸಿಕ ವ್ಯಕ್ತಿ ಮತ್ತು ಶರಣ ಪಂಥವನ್ನು ಒಪ್ಪಿಕೊಂಡ ಕುರಿಗಾರ. ಆರ್. ನರಸಿಂಹಾಚಾರ್ಯರು ಕರ್ನಾಟಕ ಕವಿ ಚರಿತ್ರೆ ಕೃತಿಯಲ್ಲಿ ವೀರಗೊಲ್ಲಾಳನ ವಚನವೊಂದನ್ನು ಉಲ್ಲೇಖಿಸಿ ಇವನ ಕಾಲವನ್ನು ಕ್ರಿ.ಶ. 1160 ಎಂದು ಗುರುತಿಸಿದ್ದಾರೆ. ವೀರಗೊಲ್ಲಾಳನ ಇಪ್ಪತ್ತು ವಚನಗಳನ್ನು ಸಂಗ್ರಹಿಸಿರುವ ಫ.ಗು. ಹಳಕಟ್ಟಿ ಅವರು ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೇ ವೀರ ಬೀರೇಶ್ವರ’ ಎಂಬ ಅಂಕಿತನಾಮದಿಂದ ವಚನಕಾರನಾಗಿದ್ದ ಗೊಲ್ಲಾಳನು ಒಬ್ಬ ಐತಿಹಾಸಿಕ ವ್ಯಕ್ತಿ ಎಂದು ಹೇಳಿದ್ದಾರೆ (ಫ.ಗು.ಹಳಕಟ್ಟಿ, 770 ಅಮರಗಣಾಧೀಶ್ವರರ ಚರಿತ್ರೆಗಳು). ಇವನು ವಿಜಾಪುರ ಜಿಲ್ಲೆಯ ಸಿಂಧಗಿ ತಾಲೂಕಿನ ಗೋಲಗೇರಿ ಎಂಬ ಗ್ರಾಮದವನಾದ್ದರಿಂದ ಇವನಿಗೆ ಗೊಲ್ಲಾಳ ಎಂಬ ಹೆಸರು ಬಂದಿದೆ. ಈ ಕಾಟಕೂಟನೆಂಬ ಕುರುಬನ ಮಗನಾದ ಗೊಲ್ಲಾಳನದು ಕುರಿಕಾಯುವ ವೃತ್ತಿ. ಒಂದು ದಿನ ಕುರಿಕಾಯುವಾಗ ಶ್ರೀಶೈಲಕ್ಕೆ ಹೊರಟಿದ್ದ ಪರಿಶೆಯಲ್ಲಿ ಒಬ್ಬ ವೃದ್ಧ ಜಂಗಮ ಬರಿಗಾಲಿನಲ್ಲಿ ಹೊರಟಿದ್ದ. ಗೊಲ್ಲಾಳನು ಅವನಿಗೆ ತನಗೊಂದು ಶ್ರೀಶೈಲದಿಂದ ಶಿವಲಿಂಗವನ್ನು ತರಲು ಕೇಳಿಕೊಳ್ಳುತ್ತಾನೆ. ವೃದ್ಧ ತನಗೆ ಗೊಲ್ಲಾಳ ಧರಿಸಿದ ಕಾಲ್ಮರಿ(ಜೋಡು) ಕೊಟ್ಟರೆ ತಾನು ಅವನ ಆಸೆಯನ್ನು ಪೂರೈಸುವುದಾಗಿ ಹೇಳಿದಾಗ, ಗೊಲ್ಲಾಳ ತನ್ನ ಚಪ್ಪಲಿಗಳನ್ನು ಅವನಿಗೆ ಕೊಟ್ಟು ಕಳಿಸುತ್ತಾನೆ. ಆದರೆ ವೃದ್ಧ ಮರಳಿದಾಗ ಗೊಲ್ಲಾಳನಿಗೆ ಶಿವಲಿಂಗ ತರುವುದನ್ನು ಮರೆತುಬಿಡುತ್ತಾನೆ. ಗೊಲ್ಲಾಳನಿಗೆ ತಿಳಿಯದಂತೆ ಒಂದು ಕುರಿಹಿಕ್ಕೆಯನ್ನು ತಂದು ಅವನಿಗೆ ಕೊಡುತ್ತಾನೆ. ಅದನ್ನು ಶಿವಲಿಂಗವೆಂದು ತಿಳಿದ ಗೊಲ್ಲಾಳನು ಮುಗ್ಧತೆಯಿಂದ ಪೂಜಿಸುತ್ತಾನೆ. ತನ್ನ ಕುರಿಗಳ ಹಾಲನ್ನು ಅದಕ್ಕೆ ಅಭಿಷೇಕ ಮಾಡಿ ಪೂಜಿಸುವ ಪರಿ ಇತಿಹಾಸದಲ್ಲಿ ಇವನನ್ನು ಅಮರ ಭಕ್ತನನ್ನಾಗಿ ಮಾಡಿದೆ. ಗೊಲ್ಲಾಳನಿಗೆ ಗೊಲ್ಲಾಳ, ಗೊಲ್ಲಾಳರಾಯ, ಕಾಟಕೂಟ, ವೀರಗೊಲ್ಲಾಳ, ತರುಣಗೊಲ್ಲಾಳ, ಕುರುಬರ ಗೊಲ್ಲಾಳ, ಗೊಲ್ಲೇಶ್ವರ, ಕಾಟಕೂಟಗೊಲ್ಲ, ಕಾಟಕೂಟಸೂತ ಗೊಲ್ಲ, ಕಾಟಕೂಟ ಗೊಲ್ಲನ ಮಗ ಗೊಲ್ಲಾಳ ಇತ್ಯಾದಿ ಹೆಸರುಗಳಿಂದ ವಿವಿಧ ಪುರಾಣಗಳಲ್ಲಿ ಕರೆಯಲಾಗಿದೆ. ಇವನ ವಚನಗಳಲ್ಲಿ ಕುರಿ, ಆಡು, ಹೋತ, ಹಿಕ್ಕಿ ಮುಂತಾದ ಶಬ್ದಗಳು ಹೇರಳವಾಗಿ ಸಿಕ್ಕಿವೆ. ಇವನು ವೀರ ಬೀರೇಶ್ವರ ಲಿಂಗ, ವೀರ ಬೀರೇಶ್ವರ ಲಿಂಗವರಿದ ಶರಣ, ವೀರಬೀರೇಶ್ವರ ಲಿಂಗದೊಳಗಾದ ಶರಣಾ, ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೇ ಬೀರೇಶ್ವರ ಇತ್ಯಾದಿ ಸ್ಮರಣೆಗಳಲ್ಲಿ ವೀರ ಬೀರೇಶ್ವರ ಎಂಬ ಅಂಕಿತದೊಂದಿಗೆ ವಚನಗಳನ್ನು ರಚಿಸಿದ್ದಾನೆ. ಗೋಲಗೇರಿಯಿಂದ 4-5 ಕಿ.ಮೀ. ಅಂತರದಲ್ಲಿರುವ ಇವನ ಜನ್ಮಸ್ಥಳ ಡವಳಾರದಲ್ಲಿ ಬೀರಪ್ಪನ ಗುಡಿಯೂ ಇದೆ. ಇಂದು ಕರ್ನಾಟಕದಲ್ಲಿ ಲಿಂಗಾಯತ ಸಮುದಾಯದ ಅನೇಕ ಕುಟುಂಬಗಳು ಇವನನ್ನು ಮನೆದೇವರೆಂದು ಒಪ್ಪಿ ಪೂಜಿಸುತ್ತಾರೆ. ಅವರೆಲ್ಲ ಹಾಲುಮತ ಸಮುದಾಯದಿಂದ ಬಂದು ಶರಣಧರ್ಮವನ್ನು ಸ್ವೀಕರಿಸಿದ್ದಾರೆ ಎಂದು ತಿಳಿಯಬಹುದು. ನವ ಸಮಾಜದಲ್ಲಿ ಜಾತಿಮತಗಳು ಇರಬಾರದೆಂದು ವಿಶ್ವಗುರು ಬಸವಣ್ಣನವರು ಸ್ಥಾಪಿಸಿರುವ ಲಿಂಗಾಯತದಲ್ಲಿರುವ ಬಹು ಸಂಖ್ಯಾತರುಕುರುಬನಿಗೆ ಕುಲವಿಲ್ಲ-ಜಾತಿಯಿಲ್ಲ’ ಎಂಬ ಗಾದೆಗೆ ಅರ್ಹರಾಗಿರುವ ಹಾಲುಮತ ಮೂಲದವರು ಎಂಬುದು ಕುತೂಹಲವೂ ಮತ್ತು ನೈಜ ಸತ್ಯವೂ ಆಗಿದೆ.


ಗೋಲಗೇರಿಯಲ್ಲಿರುವ ಗೊಲ್ಲಾಳೇಶ್ವರನ ದೇವಸ್ಥಾನವು ಹತ್ತನೆಯ ಶತಮಾನಕ್ಕೆ ಮೊದಲು ಬೀರೇಶ್ವರ’ನ ದೇವಾಲಯವಾಗಿತ್ತೆಂದು ಅನೇಕ ವಚನಕಾರರು ಮತ್ತು ಕವಿಗಳು ತಾವು ಆರಾಧಿಸುವ ದೈವದ ದೇವಾಲಯಗಳಲ್ಲಿ ಕಾವ್ಯ, ವಚನಗಳನ್ನು ರಚಿಸಿ ಆ ದೇವರ ನಾಮವನ್ನು ಅಂಕತವನ್ನಾಗಿ ಇಟ್ಟುಕೊಳ್ಳುವ ಪರಿಪಾಠವು ಪ್ರಾಚೀನ ಕಾಲದಲ್ಲಿ ಇತ್ತು. ಗೊಲ್ಲಾಳನು ಬೀರೇಶ್ವರ ದೇವಾಲಯದಲ್ಲಿ ಇದ್ದು, ವಚನಗಳನ್ನು ರಚಿಸಿ,ವೀರ ಬೀರೇಶ್ವರಾ ಲಿಂಗ’ ಎಂದು ವಚನಾಂಕಿತವನ್ನು ಹೊಂದಿದ್ದಾನೆಂದು ನಂಬಬಹುದು.
ಈ ದೇವಾಲಯವು ಬೀರಪ್ಪನ ದೇವಾಲಯವಾಗಿತ್ತೆಂದು ಹೇಳಲು ಇನ್ನೊಂದು ಪ್ರಬಲ ಸಾಕ್ಷಿಯಿದೆ. ಈ ದೇವಾಲಯದ ಆವರಣದಲ್ಲಿ ಭರಮ(ಬ್ರಹ್ಮ)ನನ್ನು ಪ್ರತಿನಿಧಿಸುವ ಒಂದು ಗುಂಡುಕಲ್ಲು ಇದೆ. ಕರ್ನಾಟಕದ ಯಾವುದೇ ಬೀರದೇವರ ಗುಡಿಗೆ ಹೋದರೂ ಅಲ್ಲಿ ಬೀರಪ್ಪನ ತಂದೆಯಾದ ಬ್ರಹ್ಮನ ಒಂದು ಪುಟ್ಟ ಗುರುತು ಇದ್ದೇ ಇರುತ್ತದೆ. ಅದೇ ರೀತಿ ಇಲ್ಲಿಯೂ ಭರಮಪ್ಪನ ದೇವಾಲಯವಿದೆ. ಬೀರದೇವರ ಪರಂಪರೆಯಲ್ಲಿ ಈರಗಾರ, ದಳವಾಯಿಗಳ ಪ್ರಮುಖಪಾತ್ರ ಇರುತ್ತದೆ. ಅವರು ಬೀರಪ್ಪನ ವೀರಭಂಟರಾಗಿದ್ದಾರೆ. ಇವರನ್ನು ನಾವು ಬೀರದೇವರ ಜಾತ್ರೆಯಲ್ಲಿ ನೋಡುತ್ತೇವೆ. ಬೀರಪ್ಪನ ಇನ್ನೊಂದು ರೂಪವಾದ ವೀರಭದ್ರನ ಪರಂಪರೆಯಲ್ಲಿ ಇವರನ್ನು ಪುರವಂತರು ಎಂದು ಕರೆಯಲಾಗುತ್ತದೆ. ಗೋಲಗೇರಿಯ ಜಾತ್ರೆಯಲ್ಲಿ ನೂರಾರು ಈರಗಾರರು ಪುರವಂತರ ರೂಪದಲ್ಲಿ ಅಸ್ತ್ರಶಸ್ತ್ರಗಳೊಂದಿಗೆ ಪುರವಂತಿಕೆ ಮಾಡುತ್ತಾರೆ. ಕ್ರಿ.ಶ. 1027ರ ಶಾಸನದಲ್ಲಿ ಪ್ರಸ್ತಾಪವಿರುವ ಈ ದೇವಾಲಯವು ಇಂದು ಜಾತಿವಾದಿಗಳ ಕೈಯಲ್ಲಿ ವೀರಭದ್ರನ ದೇವಾಲಯದಂತೆ ಭಾಸವಾಗುತ್ತದೆ. ಎಲ್ಲಿ ವೀರಭದ್ರ ಮತ್ತು ಅವನ ಪುರವಂತಿಕೆ ಇರುತ್ತದೆಯೋ ಅದು ಪ್ರಾಚೀನ ಬೀರಪ್ಪನ ದೇವಾಲಯವಾಗಿದೆ
ಗೋಲಗೇರಿ ಗೊಲ್ಲಾಳನು ಹಾಲುಮತಸ್ಥರ ಆರಾಧ್ಯ ದೈವವೂ, ದಾರ್ಶನಿಕನೂ ಆಗಿರುತ್ತಾನೆ. ಪ್ರತಿವರ್ಷ ಯುಗಾದಿ ಪ್ರತಿಪದೆಯಿಂದ ಗೋಲಗೇರಿ ಲಿಂಗಯ್ಯನ ಜಾತ್ರೆಯ ಕಾರ್ಯಕ್ರಮಗಳು ಪ್ರಾರಂಭವಾಗಿ ದವನದ ಹುಣ್ಣಿಮೆಯಾದ ಐದು ದಿನಕ್ಕೆ ಮುಕ್ತಾಯವಾಗುತ್ತವೆ. ಪ್ರತಿಪದೆಯಿಂದ ಗೊಲ್ಲಾಳನ ಪುರಾಣವನ್ನು ಪಠಿಸಲು ಆರಂಭಿಸುತ್ತಾರೆ. ಇದು ಹಾಲುಮತಸ್ಥರ ಪವಿತ್ರ ಆಚರಣೆಯಾಗಿದೆ. ಅಂದು ಐದು ನೈವೇದ್ಯಗಳನ್ನು ಮಾಡಿ ಲಿಂಗಯ್ಯ, ಬಸವಣ್ಣ, ಅವ್ವಮ್ಮ, ಮಲಕಮ್ಮ, ನಾಗರಹೆಡೆಗಳು ಇರುವಲ್ಲಿಗೆ ಪೂಜಾರಿ ಮನೆಯವರು ಬಾಜಾಬಜಂತ್ರಿಗಳೊಂದಿಗೆ ಉಘ್ಘಡಿಸುತ್ತ ನೈವೇದ್ಯ ಕೊಟ್ಟು ಬರುತ್ತಾರೆ. ಹೋಳಿಗೆ, ಹುಗ್ಗಿ, ಅನ್ನ, ಇವು ನೈವೇದ್ಯದ ಭಕ್ಷಗಳಾಗಿವೆ.
ಇಂದಿಗೂ ಗೋಲಗೇರಿಯು ಹಾಲುಮತಸ್ಥರ ಪವಿತ್ರ ಕ್ಷೇತ್ರವಾಗಿದೆ. ಇಲ್ಲಿರುವ ಗೋಲಗೇರಿ ಲಿಂಗಯ್ಯ ದೈವತವು ಗೊಲ್ಲಾಳನ ಆರಾಧನಾ ದೈವವಾಗಿತ್ತು. ಪ್ರತಿವರ್ಷ ಯುಗಾದಿ ಪ್ರತಿಪದೆಯಿಂದ ಗೋಲಗೇರಿ ಲಿಂಗಯ್ಯನ ಜಾತ್ರೆಯ ಕಾರ್ಯಕ್ರಮಗಳು ಪ್ರಾರಂಭವಾಗಿ ದವನದ ಹುಣ್ಣಿಮೆಯಾದ ಐದು ದಿನಕ್ಕೆ ಮುಕ್ತಾಯವಾಗುತ್ತದೆ. ಪ್ರತಿಪದೆಯಾದ ಐದನೆಯ ದಿನಕ್ಕೆ ಗೊಲ್ಲಾಳನ ತೊಟ್ಟಿಲು ಕಾರ್ಯ ನಡೆಯುವುದು. ಅಂದು ಐದು ತರದ(ವೈವಿದ್ಯ ಖಾದ್ಯಗಳ) ನೈವೇದ್ಯಗಳನ್ನು ಕೊಡುವರು. ಮರುದಿವಸದಿಂದ ಉಚಾಯಿ ಕಾರ್ಯವು ನಡೆಯುವುದು. ಉಚಾಯಿ ಎಂದರೆ ಹುಚ್ಚಯ್ಯನ ಉತ್ಸವವಾಗಿದೆ. ಉಚಾಯಿ ಎಂದರೆ ಉತ್ಸವದ ತದ್ಬವ ಎಂದು ಭಾವಿಸಬಹುದು. ತೇರು ಎಳೆಯುವ ದಿನಕ್ಕಿಂತ ಮೊದಲು ಒಂಬತ್ತು ದಿನ ಹುಚ್ಚಯ್ಯನ ಸಣ್ಣತೇರು ಎಳೆಯುವರು. ಅಂದು ಹದಿನಾಲ್ಕು ಊರ ಗೌಡ, ಕುಲಕರ್ಣಿ, ಓಲೆಕಾರ ಮತ್ತು ಬಿದಾಯಿ ಜನರಿಗೆ ಊಟವನ್ನು ಹಾಕಿಸಲಾಗುತ್ತದೆ.

ಚಿಂತನಪರ ವಚನಕಾರ
ಶರಣ ವೀರಗೊಲ್ಲಾಳನು ರಚಿಸಿದ ಒಟ್ಟು ವಚನಗಳ ಸಂಖ್ಯಾಮೊತ್ತ ತಿಳಿದು ಬಂದಿಲ್ಲವಾದರೂ ಇದುವರೆಗೆ ಲಭ್ಯವಾಗಿರುವ ವಚನಗಳ ಸಂಖ್ಯೆ ಕೇವಲ ಹತ್ತು, ಇವನ ವಚನಗಳು ಹೆಚ್ಚಾಗಿ ಬೆಡಗಿನಿಂದ ಕೂಡಿದ್ದು, ಚಿಂತನಪರವಾಗಿದೆ.
ಗೊಲ್ಲಾಳನ ಕೆಲವು ವಚನಗಳು ಈ ರೀತಿ ಇವೆ.

  1. ಹೋತು ಹುಸಿ, ಆಡು ಬಹು ಮಾತಿನ ನೀತಿ
    ಕುರಿ ಸಕಲೇಂದ್ರಿಯದ ಹೊಲನೆಲ,
    ತಗರು ತಥ್ಯಮಿಥ್ಯದ ಹೋರಟೆ
    ಹುಲಿ ದ್ವೇಷದಾಗರ, ತೋಳಕೊಂದು ತಿಂಬಕಾಟ
    ಚೋರ ಮೃತ್ಯು ಇಂತಿವು ಮೊದಲಾದ
    ಬಹು ವಿಧದ ಪ್ರಕೃತಿಗಳಲ್ಲಿ ಕಾಯದ ಹೊಲನೆಲನಲ್ಲಿ
    ಸಕಲೇಂದ್ರಿಯವೆಂಬ ಹಿಂಡು ಮುಂದೆಯಾಗಿವೆಯೇಕೋ ?
    ಇದರ ಸಂಗವ ಬಿಡಿಸು, ನಿಮ್ಮ ನಿಜದಂಗವ ತೋರಿ
    ಭವಪಾಶದಂಗವ ಹರಿದು, ನಿಮ್ಮ ಘನಲಿಂಗದಲ್ಲಿರಿಸು
    ನೆರೆ ವೀರ ಬೀರೇಶ್ವರಾ || 2 ||
  2. ಆಡು ಆರುದಿಂಗಳು ಹುಟ್ಟಿ, ಮೂರು ದಿನ ಬದುಕಿ
    ಒಂದು ದಿನ ಸತ್ತಿತ್ತು.
    ಕುರಿ ಕುರುಹ ಮೇದು, ಮರಿಗೆ ಮೊಲೆಗೊಟ್ಟಿತ್ತು,
    ಮರಿಯು ಮೊಲೆಯ ನುಂಗಿ, ಕುರುಹಿನೊಳಗಡಗಿತ್ತು
    ಆಡು ಕುರಿ ಬಂದ ಬಟ್ಟೆಯ ಶೋಧಿಸಿಕೊಂಡು
    ತೋಳನ ತೊಡಕಿನಲ್ಲಿ ಸಾಯದೆ, ಅರಿ ವೀರಬೀರೇಶ್ವರ ಲಿಂಗವಾ || 2||
  3. ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
    ಮರಿಯ ನಡೆಸುತ್ತ ದೊಡ್ಡೆಯ ಹೊಡೆವುತ್ತ,
    ಅಡ್ಡಗೋಲಿನಲ್ಲಿ ಹೋಹ ಚುಕ್ಕಿಬೊಟ್ಟಿನವ ತಿಟ್ಟುತ್ತ
    ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ
    ಅಭಿಸಂದಿಯ ಕೋಲಿನಲ್ಲಿಡುತ್ತ
    ಈ ಹಿಂಡಿನೊಳಗೆ ತಿರುಗಾಡುತ್ತಿದ್ದೇನೆ.
    ಈ ವಿಕಾರದ ಹಿಂಡ ಬಿಡಿಸಿ,
    ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
    ಎನ್ನೊಡೆಯ ವೀರಬೀರೇಶ್ವರ ಲಿಂಗಾ ||3||
    ಹೆಂಡತಿ ಮಕ್ಕಳು, ಮನೆ, ಸಂಸಾರವೆಲ್ಲ ಈ ಇಹಲೋಕದಲ್ಲಿ ಒಂದು ಕುರಿಯ ಹಿಂಡಿದ್ದಂತೆ. ಬುತ್ತಿಯ ಗಂಟು(ಊಟ) ಕಟ್ಟಿ, ನೀರಿನ ಬಿಂದಿಗೆ ಹೊತ್ತು, ಕುರಿಮರಿಗಳನ್ನು ನಡೆಸುತ್ತ ಅಲ್ಲಲ್ಲಿ ದೊಡ್ಡಿ(ಕುರಿಗಳ ತಂಗುದಾಣ)ಯನ್ನು ನಿರ್ಮಿಸಿ ಉಳಿಯುತ್ತ, ಅಡ್ಡದಾರಿಯನ್ನು ತುಳಿದು ಹೋಗುವ ಚುಕ್ಕಿಬೊಟ್ಟಿನ ಕುರಿಯನ್ನು ಸರಿ ದಾರಿಗೆ ತರುತ್ತ, ಹಿಂಡನಗಲಿ ಹೋಗುವ ಕುರಿಯನ್ನು ಹಿಂಡಿಗೆ ಮರಳಿ ಸೇರಿಸಿಕೊಳ್ಳುತ್ತ ಈ ಸಂಸಾರವೆಂಬ ಕುರಿ ಹಿಂಡಿನಲ್ಲಿ ತಿರುಗಾಡುತ್ತಿದ್ದೇನೆ. ಈ ಲೋಕದ ವಿಕಾರದ ಬಾಳ ಬಂಧನ ಬಿಡಿಸಿ, ನಿನ್ನ ಪಾದವ ತೋರಿ ಸಜ್ಜನರ ಸಂಗದಲ್ಲಿರಿಸಿ ನನಗೆ ಸದ್ಗತಿಯ ತೋರು ವೀರಬೀರೇಶ್ವರ ಲಿಂಗದೇವ ಎಂದು ವೀರಗೊಲ್ಲಾಳ ಈ ಬಂಧನದಿಂದ ಬಿಡಿಸಿಕೊಳ್ಳುವ ಮಹದಾಸೆ ತೋರುತ್ತಾನೆ.
    ಒಟ್ಟಾರೆ ವೀರಗೊಲ್ಲಾಳನ ವಚನಗಳಲ್ಲಿ ಈ ಲೋಕದ ಬದುಕು ನಶ್ವರ, ಪರಲೋಕದ ಮೋಕ್ಷವೇ ಶಾಶ್ವತ, ಅದಕ್ಕಾಗಿ ಇಲ್ಲಿ ಸತ್ಕರ್ಮಗಳಿಂದ ಜೀವನ ಸಾಗಿಸಿ ಪರಂಧಾಮವನ್ನು ಪಡೆಯಬೇಕೆಂಬ ನಿಲುವು ಎದ್ದು ಕಾಣುತ್ತದೆ. ಇಂದಿನ ನವನಾಗರಿಕತೆಯ ಜಂಜಾಟದಲ್ಲಿ, ಯಾಂತ್ರಿಕ ಜೀವನ ನಡೆಸುವ ಮಾನವನಿಗೆ `ಒಂದಾದರೂ ಸತ್ಕಾರ್ಯ ಮಾಡುವ’ ಕಿವಿ ಮಾತನ್ನು ಈ ಶರಣ ಹೇಳುತ್ತಾನೆ.
  1. ಆಡು ಆರುದಿಂಗಳು ಹುಟ್ಟಿ, ಮೂರುದಿನ ಬದುಕಿ,
    ಒಂದುದಿನ ಸತ್ತಿತ್ತು.
    ಕುರಿ ಕುರುಹ ಮೇದು, ಮರಿಗೆ ಮೊಲೆಗೊಟ್ಟಿತ್ತು.
    ಮರಿಯು ಮೊಲೆಯ ನುಂಗಿ, ಕುರುಹಿನೊಳಗಡಗಿತ್ತು.
    ಆಡು ಕುರಿ ಬಂದ ಬಟ್ಟೆಯ ಸೋಧಿಸಿಕೊಂಡು,
    ತೋಳನ ತೊಡಕಿನಲ್ಲಿ ಸಾಯದೆ, ಅರಿ ವೀರಬೀರೇಶ್ವರಲಿಂಗವಾ.


2. ಕಂಥೆಯ ಕಟ್ಟಿ, ತಿತ್ತಿಯ ಹೊತ್ತು,
ಮರಿಯ ನಡಸುತ್ತ , ದೊಡ್ಡೆಯ ಹೊಡೆವುತ್ತ ,
ಅಡ್ಡಗೋಲಿನಲ್ಲಿ ಹೋಹ ಚುಕ್ಕಿ ಬೊಟ್ಟಿನವ ತಿಟ್ಟುತ್ತ ,
ಹಿಂಡನಗಲಿ ಹೋಹ ದಿಂಡೆಯ ಮಣೆಘಟ್ಟನ ಅಭಿಸಂದಿಯ ಕೋಲಿನಲ್ಲಿಡುತ್ತ.
ಈ ಹಿಂಡಿನೊಳಗೆ ತಿರುಗಾಡುತಿದ್ದೇನೆ.
ಈ ವಿಕಾರದ ಹಿಂಡ ಬಿಡಿಸಿ,
ನಿಜನಿಳಯ ನಿಮ್ಮಂಗವ ತೋರಿ, ಸುಸಂಗದಲ್ಲಿರಿಸು,
ಎನ್ನೊಡೆಯ ವೀರಬೀರೇಶ್ವರಲಿಂಗಾ.

3. ಕಲ್ಲು ಲಿಂಗವಲ್ಲ, ಉಳಿಯ ಮೊನೆಯಲ್ಲಿ ಒಡೆಯಿತ್ತು.
ಮರ ದೇವರಲ್ಲ, ಉರಿಯಲ್ಲಿ ಬೆಂದಿತ್ತು.
ಮಣ್ಣು ದೇವರಲ್ಲ, ನೀರಿನ ಕೊನೆಯಲ್ಲಿ ಕದಡಿತ್ತು.
ಇಂತಿವನೆಲ್ಲವನರಿವ ಚಿತ್ತ ದೇವರಲ್ಲ.
ಕರಣಂಗಳ ಮೊತ್ತದೊಳಗಾಗಿ ಸತ್ವಗೆಟ್ಟಿತ್ತು.
ಇಂತಿವ ಕಳೆದುಳಿದ ವಸ್ತುವಿಪ್ಪೆಡೆ ಯಾವುದೆಂದಡೆ : ಕಂಡವರೊಳಗೆ ಕೈಕೊಂಡಾಡದೆ,
ಕೊಂಡ ವ್ರತದಲ್ಲಿ ಮತ್ತೊಂದನೊಡಗೂಡಿ ಬೆರೆಯದೆ,
ವಿಶ್ವಾಸ ಗ್ರಹಿಸಿ ನಿಂದಲ್ಲಿ ಆ ನಿಜಲಿಂಗವಲ್ಲದೆ,
ಮತ್ತೊಂದು ಪೆರತನರಿಯದೆ ನಿಂದಾತನೆ ಸರ್ವಾಂಗಲಿಂಗಿ,
ವೀರಬೀರೇಶ್ವರಲಿಂಗದೊಳಗಾದ ಶರಣ.


4. ಕೊರಡು ಕೊನರುವಲ್ಲಿ, ಬರಡು ಕರೆವಲ್ಲಿ,
ಕಲ್ಲಿನ ಶಿಲೆಯೊಡೆದು ರೂಪುದೋರುವಲ್ಲಿ,
ಬಳ್ಳವಲ್ಲಾಡದೆ ಲಿಂಗವಾಹಲ್ಲಿ, ಇಂತವರಲ್ಲಿಯ ಗುಣವೊ ?
ಇಂತಿವೆಲ್ಲವನರಿವ ಕಲ್ಲೆದೆಯವನ ಗುಣವೊ ?
ಇಂತಿವ ಬಲ್ಲಡೆ ವಿಶ್ವಾಸದಲ್ಲಿಯೆ ವೀರಬೀರೇಶ್ವರಲಿಂಗವು ತಾನಾಗಿಪ್ಪ.


5. ಕ್ರೀಯ ಹಿಡಿದಲ್ಲಿ ಸಂದೇಹಕ್ಕೊಳಗಾಗಿ,
ನಿಃಕ್ರೀಯೆ ಎಂದಲ್ಲಿ ಆತ್ಮಂಗೆ ಗೊತ್ತ ಕಾಣದೆ,
ಫಲವಿಲ್ಲದ ವೃಕ್ಷದ ಹೂವ ಕಂಡು, ವಿಹಂಗಕುಲ ಚರಿಸದೆ ಮಚ್ಚಿದಂತೆ,
ಕಡೆಯಲ್ಲಿ ಹೊಲಬುಗೆಡದೆ, ಅರಿ ನಿಜವಸ್ತು ಒಂದೆಂದು,
ಕುರುಹಿನಲ್ಲಿ ಕುಲಕೆಡದೆ ಕೂಡು, ವೀರಬೀರೇಶ್ವರಲಿಂಗವ.

6. ಮೂರುವರ್ಣದ ಬೊಟ್ಟುಗ, ಆರು ವರ್ಣದ ಅಳಗ,
ಐದು ವರ್ಣದ ಸಂಚಿಗ
ಇವರೊಳಗಾದ ನಾನಾ ವರ್ಣದ
ಅಜಕುಲ, ಕುರಿವರ್ಗ, ಕೊಲುವ ತೋಳನ ಕುಲ,
ಮುಂತಾದ ತ್ರಿವಿಧದ ಬಟ್ಟೆಯ ಮೆಟ್ಟದೆ ಮೂರ ಮುಟ್ಟದೆ, ಆರ ತಟ್ಟದೆ,
ಐದರ ಬಟ್ಟೆಯ ಮೆಟ್ಟದೆ, ಒಂದೇ ಹೊಲದಲ್ಲಿ ಮೇದು,
ಮಂದೆಯಲ್ಲಿ ನಿಂದು, ಸಂದೇಹ ಕಳೆದು, ಉಳಿಯದ ಸಂದೇಹವ ತಿಳಿದು,
ವೀರಬೀರೇಶ್ವರಲಿಂಗದಲ್ಲಿಗೆ ಹೋಗುತ್ತಿರಬೇಕು.

7. ಸ್ಥಲಂಗಳನರಿದಿಹೆನೆಂದಡೆ ತ್ರಿವಿಧಸ್ಥಲ ಎನಗಿಲ್ಲ.
ಷಡುಸ್ಥಲವ ಮುನ್ನವೆ ಅರಿಯೆ.
ತತ್ತ್ವವನರಿದಿಹೆನೆಂದಡೆ ಇಪ್ಪತ್ತೈದರ ಗೊತ್ತಿನವನಲ್ಲ.
ಮಿಕ್ಕಾದ ಸತ್ಕ್ರೀಯದಲ್ಲಿ ನಡೆದಿಹೆನೆಂದಡೆ
ಭಕ್ತಿ ಜ್ಞಾನ ವೈರಾಗ್ಯ ತ್ರಿವಿಧ ಲಕ್ಷ್ಯವಿಧ ನಾನಲ್ಲ.
ನಿಷ್ಠೆಯಲ್ಲಿ ದೃಷ್ಟವ ಕಂಡಿಹನೆಂದಡೆ ವಿಶ್ವಾಸ ಎನಗಿಲ್ಲ.
ವಿರಕ್ತಿಯಲ್ಲಿ ವೇಧಿಸಿಹೆನೆಂದಡೆ,
ತ್ರಿವಿಧ ಮಲದ ಮೊತ್ತದೊಳಗೆ ಮತ್ತನಾಗಿದೇನೆ.
ಮತ್ತೆ ನಿಶ್ಚಯವನರಿದಿಹೆನೆಂದಡೆ,
ಆತ್ಮಂಗೆ ಲಕ್ಷವಿಡುವದೊಂದು ಗೊತ್ತ ಕಾಣೆ.
ಇಂತೀ ಕಷ್ಟತನುವಿನಲ್ಲಿ ಬಂದು, ಧೂರ್ತನಾಗಿ ಕೆಟ್ಟುಹೋಗುತ್ತಿದೇನೆ.
ಗುಡಿಸಿದ ಹಿಕ್ಕೆಯಲ್ಲಿ ಬಂದು ತನ್ನ ನಿಷ್ಠೆಯ ತೋರಿ,
ಎನಗೆ ಸದ್ಭಕ್ತಿಯ ಬೀರಿ, ವಿಶ್ವಾಸಿಗಳಿಗೆಲ್ಲಕ್ಕೆ ಕೃತ್ಯದೊಳಗಾಗಿ,
ನಿತ್ಯನೇಮಂಗಳಲ್ಲಿ ಅಚ್ಚೊತ್ತಿದಂತಿರು.
ನೀನೆ ಮುಕ್ತನಹೆ, ನಿಜನಿತ್ಯನಹೆ, ಜಗಕೆ ಕತರ್?ವಹೆ.
ಎನ್ನ ಹಿಕ್ಕೆಗೆ ಬಂದು ಸಿಕ್ಕಿದೆಯಲ್ಲಾ,
ಮಹಾಮಹಿಮ ವೀರಬೀರೇಶ್ವರಾ.

8. ಹೋತನ ಕೊಯ್ದು, ಕುರಿಯ ಸುಲಿದು,
ಮರಿಯ ಕೊರಳನೊತ್ತಿ , ಕಾವಲ ಕುನ್ನಿಯ ಕೆಡಹಿ,
ತೋಳನ ಕುಲವ ಗೆದ್ದು, ಕುರುಬನ ಕುರುಹಿನ ಕುಲವಡಗಿ,
ನೆರೆ ಅರಿವಿನ ಕುಲದಲ್ಲಿ ಅಡಗಬೇಕು,
ವೀರಬೀರೇಶ್ವರಲಿಂಗವನರಿದ ಶರಣ.

9. ಹೋತನ ಹೊಡದು, ಆಡ ಕೂಡಿ, ಕುರಿಯ ನಿಲಿಸಿ,
ತಗರ ತಡದು, ಹಿಂಡನೊಬ್ಬುಳಿತೆಮಾಡಿ,
ಹುಲಿ ತೋಳ ಚೋರ ಭಯಮಂ ಕಳೆದು,
ಹಿಂಡಿಗೊಡೆಯನಾಗಿ ಕಾವ ಗೊಲ್ಲಾಳ ನೀನೆ, ವೀರಬೀರೇಶ್ವರಾ.

10. ಹೋತು ಹುಸಿ, ಆಡು ಬಹುಮಾತಿನ ನೀತಿ,
ಕುರಿ ಸಕಲೇಂದ್ರಿಯದ ನೆಲ ಹೊಲ, ತಗರು ತಥ್ಯಮಿಥ್ಯದ ಹೋರಟೆ,
ಹುಲಿ ದ್ವೇಷದಾಗರ, ತೋಳ ಕೊಂದು ತಿಂಬ ಕಾಟ.
ಚೋರ ಮೃತ್ಯು ಇಂತಿವು ಮೊದಲಾದ
ಬಹುವಿಧದ ಪ್ರಕೃತಿಗಳಲ್ಲಿ ಕಾಯದ ನೆಲಹೊಲನಲ್ಲಿ,
ಸಕಲೇಂದ್ರಿಯವೆಂಬ ಹಿಂಡು ಮಂದೆಯಾಗಿವೇಕೊ ?
ಇದರ ಸಂಗವ ಬಿಡಿಸು, ನಿಮ್ಮ ನಿಜದಂಗವ ತೋರಿ,
ಭವಪಾಶದಂಗವ ಹರಿದು, ನಿಮ್ಮ ಘನಲಿಂಗದಲ್ಲಿರಿಸು,
ನೆರೆ ವೀರಬೀರೇಶ್ವರಾ.

https://www.youtube.com/watch?v=AO-3TKSP8WE&t=27s

Leave a Reply

Your email address will not be published. Required fields are marked *

error: Content is protected !!