
ಕ್ರಿ.ಶ. 14ನೆಯ ಶತಮಾನದ ಪೂರ್ವದಲ್ಲಿ ಸ್ಥಾಪಿತವಾದ ವಿಜಯನಗರ ಸಾಮ್ರಾಜ್ಯ ದಕ್ಷಿಣ ಭಾರತದ ಇತಿಹಾಸದ ಮಹತ್ವಪೂರ್ಣ ಘಟನೆಯಾಗಿದೆ. ದಕ್ಷಿಣ ಭಾರತವನ್ನು ಇಸ್ಲಾಂ ಧರ್ಮದ ದಾಳಿಯಿಂದ ರಕ್ಷಿಸಲು ಈ ಸಾಮ್ರಾಜ್ಯ ಉದಯಿಸಿತು’ ಎಂದು ಸ್ಥೂಲವಾಗಿ ಹೇಳಬಹುದು. ಈ ಕಾರ್ಯವನ್ನು ನೆರವೇರಿಸಿ, ಧರ್ಮ, ಸಾಹಿತ್ಯ, ಕಲೆ, ಆಡಳಿತ ಮೊದಲಾದ ಕ್ಷೇತ್ರಗಳಲ್ಲಿ ತನ್ನ ಪ್ರಭಾವ ಭೀರಿದೆ. ಶಕ್ತಿಯುತ ರಾಷ್ಟ್ರಗಳ ವಿರುದ್ಧ ಉಗ್ರ ಹೋರಾಟ ನಡೆಸಿ ಗೆಲವು ಪಡೆದಿದ್ದರ ನೆನಪಿಗಾಗಿ ಈ ರಾಜ್ಯಕ್ಕೆ
ವಿಜಯನಗರ’ ಎಂದು ಹೆಸರಾಯಿತು ಎಂಬ ಅಭಿಪ್ರಾಯವಿದೆ. ಈ ಸಾಮ್ರಾಜ್ಯವು ಕರ್ನಾಟಕದ ಕೊನೆಯ ಪ್ರಸಿದ್ಧ ಮತ್ತು ವೈಭವಪೂರ್ಣ ಹಿಂದೂ ಸಾಮ್ರಾಜ್ಯವೆಂಬ ಹೆಸರು ಪಡೆದಿದೆ.
ವಿಜಯನಗರ ಸಾಮ್ರಾಜ್ಯ ಸಂಸ್ಥಾಪಕರಾದ ಹುಕ್ಕಬುಕ್ಕರು ಕುರುಬರು ಎಂಬುದನ್ನು ಎಲ್ಲ ಇತಿಹಾಸ ತಜ್ಞರು ಏಕ ಕಂಠದಲ್ಲಿ ಸಾರಿದ್ದಾರೆ. ಇದಕ್ಕೆ ಒತ್ತಾಸರೆಯಾಗಿ ಸುಮಾರು ಐವತ್ತೂ ಹೆಚ್ಚು ದಾಖಲೆಗಳು ಅವರು ಕುರುಬ ಕುಲಸಂಜಾತರೆಂದು ಸಾಕ್ಷಿ ಹೇಳುತ್ತವೆ. ವಿದೇಶಿ ಲೇಖಕರ ಹೇಳಿಕೆಗಳು, ಗೆಜೆಟ್ಟಿಯರ್‍ಗಳು, ಕೈಪಿಯತ್ತುಗಳು, ಗದ್ಯ ಕೃತಿಗಳು, ಕಾವ್ಯಗಳು, ಶಾಸನಗಳು, ಸರ್ವಜ್ಞನ ತ್ರಿಪದಿ, ಜನಪದ ಹಾಡು-ಕಥೆ-ವಾಡಿಕೆಗಳು ಇವುಗಳಲ್ಲಿ ಸೇರಿವೆ. ರಾಬರ್ಟ ಸಿವೆಲ್, ಗಸ್ಟೌ ಅಪರ್ಟ, ಎಚ್. ವಿಲ್ಸನ್, ಮಿ. ಕೌಟೋ ಮುಂತಾದ ಹತ್ತಾರು ವಿದೇಶಿ ವಿದ್ವಾಂಸ ಮಹನೀಯರು, ಇತಿಹಾಸ ತಜ್ಞರು ಹಕ್ಕಬುಕ್ಕರನ್ನು ಕುರುಬರೆಂದು ಹೇಳುತ್ತಾರೆ. ಇದಕ್ಕೆ ನಾವು ಅನೇಕ ದಾಖಲೆಗಳನ್ನು ನೋಡಬಹುದಾಗಿದೆ.
ಸರ್ವಜ್ಞನ ಕಾಲಜ್ಞಾನ ವಚನ’ (ಸಂ. ತಿಪ್ಪೆರುದ್ರಸ್ವಾಮಿ ಎಚ್, ಸರ್ವಜ್ಞನ ವಚನಗಳು, ಡಿ.ವಿ.ಕೆ. ಮೂರ್ತಿ, ಮೈಸೂರು, 1975) ಈ ರೀತಿ ಹೇಳುತ್ತದೆ. ``ಕುರುಬ ಕುಲದೊಳಗೊಬ್ಬ | ಧರಣಿ ಪಾಲಕ ಹುಟ್ಟಿ ಉರವಣಿಸಿ ಕದನ ಹೆಚ್ಚಲು | ಹಂಪಿಯಲಿ ಕರಿಯ ಮೆಟ್ಟಿದನು ಸರ್ವಜ್ಞ || ಅದೇ ರೀತಿ ಚನ್ನಪ್ಪ ಕವಿಯ
ಶರಣಲೀಲಾಮೃತ’ ಕೃತಿಯಲ್ಲಿ ಈ ರೀತಿ ಹೇಳಲಾಗಿದೆ.`ಸುರಿತಾಳನವರೆದೂ |ಸಿರಿವರೆಯೆ ರಾಮನನು ಕುರುಬರಿಗೆ ಪಟ್ಟ | ಹದಿಮೂರು ಜನತನಕ ಬರಸಿಡಿಲು ಉರಿಘಾಳಿ | ಮೆರೆವ ತುರುಕರ ಧಾಳಿ ಧರೆಯ ತುಂಬುವ ಧೂಳೀ | ಶರಣರಿದ ಕೇಳಿ’’ (ಶರಣಲೀಲಾಮೃತ, ಚನ್ನಪ್ಪ ಕವಿ) ಆನೆಗೊಂದಿಯ ಮೇಲೆ ಮುಸಲ್ಮಾನರು ದಾಳಿಯಿಟ್ಟಾಗ, ಬುಕ್ಕರಾಯನ ಹೆಂಡತಿಯಾದ ಹೊನ್ನಮ್ಮನು ತನ್ನ ಗಂಡನಿಗೆ ಈ ರೀತಿ ಹುರಿದುಂಬಿಸುತ್ತಾಳೆ. ಶ್ರೀ ಹೊಸಕೆರೆ ಚಿದಂಬರಯ್ಯನವರು
ವಿದ್ಯಾರಣ್ಯ ಕಾವ್ಯಂ’ ಕೃತಿಯನ್ನು ರಚಿಸಿ ಕನ್ನಡ ಸಾಹಿತ್ಯವನ್ನು ಸಮೃದ್ಧಗೊಳಿಸಿದ್ದಾರೆ.
ಸರಿದೋರ್ಪುದೆ ನಿಮಗಿದು ಕೇ|
ಸರಿತಾನೇ ಶುನಕನೆನಿಸಿ
ಕೊಳ್ವುದು ಧರೆಯೋಳ್ ||
ಸರಿಯಿಲ್ಲದ ಬಲಮಿರ್ದುಂ |
ಸರಿಯೇನೀ ಕುರುಬನೆನಿಸಿ
ಕೊಳ್ವುದುನಾಡೋಳ್ ||
(ಶ್ರೀ ಹೊಸಕೆರೆ ಚಿದಂಬರಯ್ಯ, ವಿದ್ಯಾರಣ್ಯ ಕಾವ್ಯಂ, 1934, ಪದ 33, ಪುಟ 70)
ವಿದೇಶಿ ಇತಿಹಾಸ ತಜ್ಞರಾದ ರಾಬರ್ಟ ಸಿವೆಲ್ ಬಹು ಧೀರ್ಘ ಕಾಲ ಅಧ್ಯಯನ ಮಾಡಿ ಅನೇಕ ವಿದೇಶಿ ಬರಹಗಾರರ ಬರಹಗಳು, ಶಾಸನಗಳು, ಸಾಕ್ಷಿಗಳು, ಕೈಪಿಯತ್ತುಗಳು ಮತ್ತು ಗೆಜೆಟ್ಟಿಯರ್‍ಗಳನ್ನು ಅಭ್ಯಸಿಸಿ, ಜನಪದ ಕಾವ್ಯ, ಕಥೆ, ವಾಡಿಕೆ ನುಡಿಗಳನ್ನು ಪರಿಶೀಲಿಸಿ ತಮ್ಮ The Fogotten Empire Vijayanagara ಎಂಬ ಕೃತಿಯಲ್ಲಿ ಈ ರೀತಿ ದಾಖಲಿಸಿದ್ದಾರೆ. Mr. Sewell thus remarks “Two brothers, Hindus of the Kuruba caste who were men of strong religious feeling, servicing in the treasure of the kings of Warrangal, fled from that place on its sack and destruction in A.D. 1323 and took service under the petty Rajas of AnegoMdi. Both they and their chiefs were filled with horrow and disgust, at the conduct of the marauding Moslems, and pledged themselves to the cause of their country and their religion’’(Robert Sewell, Forgotten Empire Vijayanagara).
`ಹುಕ್ಕಬುಕ್ಕರಿಬ್ಬರೂ ಸಹೋದರರು ಕುರುಬ ಜಾತಿಯ ಹಿಂದೂಗಳಾಗಿದ್ದರು. ಗಾಢ ಧಾರ್ಮಿಕ ಭಾವನೆಗಳುಳ್ಳವರಾಗಿದ್ದರು. ವಾರಂಗಲ್ಲಿನ ರಾಜನ ಭಂಡಾರದಲ್ಲಿ ಸೇವೆಗೈಯುತ್ತಿದ್ದರು. ಅದು ಕ್ರಿ.ಶ. 1323ರಲ್ಲಿ ಲೂಟಿಯಾಗಿ ವಿನಾಶ ಹೊಂದಿದಾಗ ಅಲ್ಲಿಂದ ಕಾಲುಕಿತ್ತರು ಮತ್ತು ಆನೆಗುಂದಿಯ ಚಿಕ್ಕ ರಾಜನಲ್ಲಿ ಸೇವೆ ಕೈಗೊಂಡರು. ಅವರು ಮತ್ತು ಅವರ ದೊರೆಗಳು ಸೂರೆ ಮಾಡುತ್ತಿದ್ದ ಮುಸ್ಲಿಮರ ನಡತೆಯಿಂದ ಭಯ ಹಾಗೂ ಜಿಗುಪ್ಸೆಗೊಂಡು ತಮ್ಮ ದೇಶಕ್ಕಾಗಿ ಮತ್ತು ತಮ್ಮ ಧರ್ಮಕ್ಕಾಗಿ ಪಣತೊಟ್ಟರು. ಸಹೋದರರು ಆನೆಗೊಂದಿಯಲ್ಲಿ ಅನುಕ್ರಮವಾಗಿ ಅಮಾತ್ಯ ಮತ್ತು ಭಂಡಾರಿ ಹುದ್ದೆಗಳಿಗೆ ಏರಿದರು. . . .’’ ಎಂದು ಅವರ ಸಾಹಸಗಳನ್ನು ಹೇಳುತ್ತ ಹೋಗಿದ್ದಾನೆ(ಅನುವಾದ : ಸದಾನಂದ ಕನವಳ್ಳಿ, ಮರೆತು ಹೋದ ಮಹಾಸಾಮ್ರಾಜ್ಯ, 1992, ಪುಟ 23). ಈ ಐತಿಹಾಸಿಕ ಜೋಡಿ ಸೋದರರ ಹೆಸರು
ಹೂವಪ್ಪ’(ಹೂವಕ>ಹೂಕ>ಹುಕ್ಕ) ಮತ್ತು ಭೂತುಗ>ಭೂತಕ>ಭೂಕ>ಬುಕ್ಕ = ಶಿವಪ್ಪ’ ಅರ್ಥವನ್ನು ಸೂಸುತ್ತವೆ. ಬೂತುಕ ಎಂದರೆ ಬೂತ(ಪಿಶಾಚಿ)ಗಳೊಡನೆ ವರ್ತಿಸುವ ಶಿವ, ಕುರುಬರು ನಮ್ಮಲ್ಲಿ ಮೂಲತಃ ಶಿವಭಕ್ತರು. ಹೀಗಾಗಿ ಈ ಹೆಸರನ್ನು ಕುರುಬನಾದ ಬುಕ್ಕನಿಗೆ ಇಟ್ಟಿರಬೇಕು. ಇಂದಿಗೂ ಬೂತಪ್ಪ, ಬೂತಯ್ಯ ಹೆಸರುಗಳು ಕುರುಬರಲ್ಲಿ ಹೆಚ್ಚು ಕಂಡುಬರುತ್ತವೆ.’ ಎಂದು ಎಂ.ಎಂ. ಕಲಬುರ್ಗಿ ಅವರು ಅಭಿಪ್ರಾಯಪಡುತ್ತಾರೆ. ಇವೆರಡನ್ನೂ ನೋಡಿದರೆ ದೇಸಿ ಹಿನ್ನೆಲೆಯಲ್ಲಿ ಹುಟ್ಟಿಬಂದ ಈ ಅಣ್ಣ ತಮ್ಮಂದಿರಿಗೆ ದೇಸಿ ಮೂಲದ ಹೆಸರುಗಳು ಸಹಜವೆನ್ನಿಸುತ್ತವೆ. ಹುಕ್ಕಬುಕ್ಕರು ಕ್ರಿ.ಶ. ಸುಮಾರು 1327 ರಿಂದ ಕ್ರಿ.ಶ. 1346ರವರೆಗೆ ಈಗಿನ ಹಂಪೆ(ಆಗ ಅದಕ್ಕೆ
ವಿಜಯವಿರುಪಾಕ್ಷ ಹೊಸಪಟ್ಟಣ’ ಎಂಬ ಹೆಸರಿತ್ತು)ಯನ್ನು ಕೇಂದ್ರಸ್ಥಳವಾಗಿ ಮಾಡಿಕೊಂಡು ಹರಿಯರ ಒಡೆಯರ್ ಮತ್ತು ಬುಕ್ಕಣ್ಣೊಡೆಯರ್ ಎಂಬ ತಮ್ಮ ಮೂಲ ಕುಲನಾಮದಿಂದ ಆಡಳಿತವನ್ನು ಮಾಡುತ್ತಾರೆ. ಈ ಅವಧಿಯಲ್ಲಿ ಬದುಕಿದ್ದ ನಾಲ್ವಡಿ ಬಲ್ಲಾಳ(ಇವನ ಹೆಸರಿನ ವಿರುಪಾಕ್ಷ ಪದವು ಮೇಲಿನ ಪಟ್ಟಣದ ಹೆಸರಿನೊಂದಿಗೆ ಬಂದಿರುವುದು ಗಮನಾರ್ಹ)ನ ಜೊತೆ ಇವರಿಗೆ ಒಳ್ಳೆಯ ಸಂಬಂಧವಿತ್ತು. ಸಾಯಣ ಮಾದವ(ಇವನೆ ಮುಂದೆ ವಿದ್ಯಾರಣ್ಯ ಎಂಬ ಹೆಸರು ಪಡೆದ)ರಂತಹ ಮುತ್ಸದ್ಧಿಗಳು ಇವರ ನೆರವಿಗೆ ನಿಂತರು. 1346 ರಲ್ಲಿ ನಾಲ್ವಡಿ ಬಲ್ಲಾಳ ತೀರಿಕೊಳ್ಳಲು ಹುಕ್ಕಬುಕ್ಕರು ಪಟ್ಟಕ್ಕೆ ಬಾಧ್ಯಸ್ಥರಾದರು. ನಂತರವಷ್ಟೆ ಅವರು ಆಳರಸರಂತೆ ಬಿರುದುಬಾವಲಿಗಳನ್ನು ಧರಿಸಿರುವುದು ಕಂಡು ಬರುತ್ತದೆ. ಇದರರ್ಥ ಇಷ್ಟೆ, ಅದೆನೆಂದರೆ ವಿಜಯನಗರವು ಇದುವರೆಗಿನ ಇತಿಹಾಸದಲ್ಲಿ ದಾಖಲಾದಂತೆ ಕ್ರಿ.ಶ. 1336ರಲ್ಲಿ ಸ್ಥಾಪನೆಯಾಗಲಿಲ್ಲ, ಬದಲಿಗೆ ಹುಕ್ಕಬುಕ್ಕರಿಂದ ಚಿಕ್ಕ ಆಡಳಿತ ಕೇಂದ್ರವಾಗಿ ಸ್ಥಾಪನೆಯಾಗಿದ್ದುದು ಕ್ರಿ.ಶ. ಸುಮಾರು 1326-27ರ ಸಮಯದಲ್ಲಿ ಮತ್ತು ಸ್ವತಂತ್ರ ಸಾಮ್ರಾಜ್ಯವೆಂದು ಘೋಷಿಸಿಕೊಂಡಿದ್ದು ಕ್ರಿ.ಶ.1346ರಲ್ಲಿ! ಇದರ ಧ್ಯೋತಕವಾಗಿ ಶೃಂಗೇರಿ ಮಠದಲ್ಲಿ ವಿಜಯೋತ್ಸವ ಆಚರಿಸಿಕೊಂಡ ಮತ್ತು ದತ್ತಿ ದಾನಗಳನ್ನು ಬಿಟ್ಟ ಐತಿಹಾಸಿಕ ದಾಖಲೆಗಳಿವೆ(ಡಾ. ವಸುಂಧರಾ ಫಿಲಿಯೋಜಾ, ವಿಜಯನಗರ ಸಾಮ್ರಾಜ್ಯ ಸ್ಥಾಪನೆ). ಇನ್ನೂ ಒಂದು ಸತ್ಯ ಸಂಗತಿಯೇನಂದರೆ, ಶೃಂಗೇರಿಯ ಶಾಸನದಲ್ಲಿ ಹುಕ್ಕಬುಕ್ಕರಿಗೆ ಗುರುಗಳಾಗಿದ್ದವರು
ಭಾರತೀತೀರ್ಥ ಶ್ರೀಪಾದರು’ ಎಂದಿದೆ. ಆ ಸಂದರ್ಭದಲ್ಲಿ ವಿದ್ಯಾರಣ್ಯರು ಶೃಂಗೇರಿಯಲ್ಲಿ ಇರಲೇ ಇಲ್ಲ. 1356ರ ಸುಮಾರಿಗೆ ಬುಕ್ಕನ ಪ್ರಾರ್ಥನೆಯ ಮೇರೆಗೆ, ವಿದ್ಯಾತೀರ್ಥರ ಆದೇಶದಂತೆ ವಾರಣಾಸಿಯಲ್ಲಿದ್ದ ವಿದ್ಯಾರಣ್ಯರು ವಿಜಯನಗರಕ್ಕೆ ಬಂದು, ಅಲ್ಲಿಂದ ಶೃಂಗೇರಿಗೆ ತೆರಳಿದರು. ಅವರು ಶೃಂಗೇರಿಯ ಮಠಾಧಿಪತಿಗಳಾಗಿದ್ದು 1375ರಲ್ಲಿ. ಅವರು 1386ರಲ್ಲಿ ಕಾಲವಶರಾದರು. ಆದ್ದರಿಂದ ವಿಜಯನಗರ ಸ್ಥಾಪನೆಯ ಕಾಲದಲ್ಲಿದ್ದವರು ವಿದ್ಯಾತೀರ್ಥಶ್ರೀಪಾದರು ಎಂಬುದು ಸ್ಪಷ್ಟ. ಆದ್ದರಿಂದ ವಿದ್ಯಾರಣ್ಯರನ್ನು ಕುರಿತು ಪ್ರಚಲಿತವಾಗಿರುವ ಕಥೆಗಳು ಐತಿಹಾಸಿಕ ಸತ್ಯವಲ್ಲ. ಕಾಳಾಮುಖ ಸಂಪ್ರದಾಯದ ಕಾಶೀವಿಲಾಸ ಕ್ರಿಯಾಶಕ್ತಿ ಎಂಬ ಋಷಿವರ್ಯರು ವಿಜಯನಗರದ ಅರಸರಿಗೆ ಗುರುಗಳಾಗಿದ್ದರು. ವಿಜಯ ವಿರುಪಾಕ್ಷ ಹೊಸಪಟ್ಟಣ’ವನ್ನು ವಿದ್ಯಾನಗರ ಎಂದು ಕರೆದದ್ದು ವಿದ್ಯಾರಣ್ಯರ ನೆನಪಿಗಲ್ಲ, ವಿದ್ಯಾತೀರ್ಥರ ನೆನಪಿಗಾಗಿ. ಮುಂದೆ ಈ ನಗರಕ್ಕೆ ವಿಜಯನಗರ ಎಂಬ ಹೆಸರಾಯಿತು(ಪ್ರೊ. ಸುಧಾಕರ, ಕುರುಬರ ಚರಿತ್ರೆ). ಹರಿಹರನು ಕ್ರಿ.ಶ. 1326 ರಿಂದ 1346ರವರೆಗೆ
ಹರಿಯಪ್ಪೊಡೆಯರ್’ ಎಂಬ ಹೆಸರಿನಿಂದ ಆಡಳಿತ ನಡೆಸಿದ್ದುದು ಕಂಡುಬರುತ್ತದೆ. ಕ್ರಿ.ಶ.1346ರಲ್ಲಿ ಅಧಿಕೃತವಾಗಿ ಸಾಮ್ರಾಜ್ಯದ ದೊರೆಯೆಂದು ಘೋಷಿಸಲ್ಪಟ್ಟನು. ವಿಜಯನಗರದ ಸ್ಥಾಪಕನಾದ ಹರಿಹರ ಶೂರನೂ ದೂರದೃಷ್ಟಿಯುಳ್ಳವನೂ ಆದ ಒಬ್ಬ ಸಮರ್ಥ ದೊರೆ. ಪೂರ್ವ ಪಶ್ಚಿಮ ಸಮುದ್ರಾಧಿಪತಿ, ಅರಿರಾಯರ ವಿಭಾಡ, ಭಾಷೆಗೆ ತಪ್ಪುವ ರಾಯರ ಗಂಡ ಎಂಬುದಾಗಿ ಶಾಸನಗಳು ಅವನ ಬಿರುದುಗಳನ್ನು ಉಗ್ಗಡಿಸಿವೆ. ಒಂದನೆಯ ಹರಿಹರನ ರಾಜ್ಯ ಸುವ್ಯವಸ್ಥೆಯಿಂದ ಕೂಡಿತ್ತು. ಧಾರ್ಮಿಕ ಮತ್ತು ರಾಜಕೀಯ ಆಶೋತ್ತರಗಳನ್ನಿರಿಸಿಕೊಂಡು ಸ್ಥಾಪಿಸಿ ಅಭಿವೃದ್ದಿ ಪಡಲೆತ್ನಿಸಿದ ವಿಜಯನಗರ ಸಾಮ್ರಾಜ್ಯವು ಒಂದನೆಯ ಹರಿಹರದೇವನ ಜೀವದುಸಿರಾಗಿತ್ತು. ಒಂದನೆಯ ವೀರ ಹರಿಹರನಿಗೆ ಗಂಡು ಮಕ್ಕಳಿರಲಿಲ್ಲ. ಇವನ ನಂತರ ಇವನ ಮೊದಲನೆಯ ತಮ್ಮ(ಸಂಗಮನ ಎರಡನೆಯ ಮಗ)ನಾದ ಕಂಪಣ(ಕೆಂಪಣ್ಣ) ಮೊದಲೇ ತೀರಿಕೊಂಡಿದ್ದರಿಂದ; ಎರಡನೆಯ ತಮ್ಮ ಬುಕ್ಕರಾಯ ಪಟ್ಟವೇರುತ್ತಾನೆ. ಆದ್ದರಿಂದ ಕ್ರಿ.ಶ.1347ರಲ್ಲಿ ಬುಕ್ಕದೇವ(ಇವನು ಸಂಗಮನ ಮೂರನೆಯ ಮಗ)ನನ್ನು ಕೂಡು ದೊರೆ’ ಅಥವಾ
ಯುವರಾಜ’ ಎಂದು ನೇಮಿಸಿಕೊಂಡು ತನಗೆ ಆಡಳಿತದಲ್ಲಿ ಸಹಾಯಕನನ್ನಾಗಿ ಮಾಡಿಕೊಂಡಿದ್ದುದು ತಿಳಿದುಬರುತ್ತದೆ.

ಹರಿಹರನ ನಂತರ(ಕ್ರಿ.ಶ. 1356) ಅವನ ಎರಡನೆಯ ತಮ್ಮ ಬುಕ್ಕಂಣೊಡೆಯರ್ ಸಿಂಹಾಸನ ಏರುತ್ತಾನೆ. ನಿರಂತರ ಅಣ್ಣನೊಂದಿಗೆ ಆಡಳಿತ ಅನುಭವ ಹೊಂದಿದ್ದ ಬುಕ್ಕದೇವರಾಯನಿಗೆ ರಾಜ್ಯಾಡಳಿತ ಹೊರೆಯಾಗುವುದಿಲ್ಲ. ಬಹಮನಿ ಮತ್ತು ಮಧುರೆಯ ಸುಲ್ತಾನರ ಉಪಟಳವನ್ನು ನೀಗಿಸಿ, ತನ್ನ ಮಗ ಶೂರ ಕಂಪಣ್ಣೊಡೆಯನ ಸಹಾಯದಿಂದ ಬಹುಕಾಲ ಸ್ಥಾನಬ್ರಷ್ಟನಾಗಿ ತಿರುಪತಿಯಲ್ಲಿ ಅಜ್ಞಾತವಾಸದಲ್ಲಿದ್ದ ಶ್ರೀರಂಗನಾಥನ ಮೂರ್ತಿಯನ್ನು ಮರಳಿ ತಂದು ಶ್ರೀರಂಗದಲ್ಲಿ ಪ್ರತಿಷ್ಠಾಪನೆ ಮಾಡುತ್ತಾನೆ.

ಬುಕ್ಕದೇವರಾಯನು ಇತಿಹಾಸದಲ್ಲಿ ಅಮರನಾಗಿರುವುದು ಈ ರಣರಂಗದ ಸಾಧನೆಗಿಂತ ಮಿಗಿಲಾಗಿ ಅವನ ಧರ್ಮ ಸಮನ್ವತೆಯ ಮನೋಭಾವಕ್ಕಾಗಿ, ಪರಮತ ಸಹಿಷ್ಣುತೆಗಾಗಿ. ಎಲ್ಲ ಮತಗಳು ಸಾರುವ ತತ್ವವೊಂದೇ ಎಂದರಿತಿದ್ದ ಈ ರಾಯನು ಒಮ್ಮೆ ಶ್ರವಣಬೆಳಗೊಳದಲ್ಲಿ ಜೈನರಿಗೂ, ವೈಷ್ಣವರಿಗೂ ವಾದವಿವಾದ ನಡೆದು ವಿಕೋಪಕ್ಕೆ ಹೋಗಿದ್ದಾಗ ಎರಡೂ ಕಡೆಯ ಪ್ರಮುಖರನ್ನು ಕರೆಸಿ ಭಿನ್ನಾಭಿಪ್ರಾಯವನ್ನು ಹೋಗಲಾಡಿಸುತ್ತಾನೆ. ಇತರರ ಮತಗಳನ್ನು ತೆಗಳುವುದು ತಮ್ಮ ಮತಗಳನ್ನು ತೆಗಳಿಕೊಂಡಂತೆಯೆ’ ಎಂಬ ಮಹಾಧರ್ಮವನ್ನು ಅವರಿಗೆ ಬೋಧಿಸುತ್ತಾನೆ. ಇಂದಿಗೂ ಈ ಬೋಧನೆಯನ್ನೊಳಗೊಂಡ ಶಿಲಾ ಶಾಸನವು ಶ್ರವಣಬೆಳಗೊಳದಲ್ಲೂ, ಅದರ ಪ್ರತಿಯು ಕಲ್ಲೆಹಪಟ್ಟಣ(ಕಲ್ಯ)ದಲ್ಲೂ ಇದ್ದು ಇವನನ್ನು ಅಮರಗೊಳಿಸಿವೆ. ಬುಕ್ಕದೇವನ ಕಾಲದಲ್ಲಿ ದಕ್ಷಿಣ ಕರ್ನಾಟಕದಲ್ಲಿ ಅನೇಕ ಛತ್ರಗಳು ದೇವಾಲಯಗಳು ಕಟ್ಟಲ್ಪಟ್ಟವು. ಅರಸಿಕೆರೆಯ ಗುಡ್ಡದ ಮೇಲೆ
ಮಳೆಮಲ್ಲೇಶ್ವರ’ ಎಂದು ಈಗ ಕರೆಸಿಕೊಳ್ಳುವ ಈಶ್ವರ ದೇವಾಲಯ ಬುಕ್ಕರಾಯನ ಕಾಲದಲ್ಲಿ ಕಟ್ಟಲ್ಪಟ್ಟಿತು(ಡಾ. ವಸುಂಧರಾ ಫಿಲಿಯೋಜಾ, ವಿಜಯನಗರ ಸಾಮ್ರಾಜ್ಯ ಸ್ಥಾಪನೆ, ಪುಟ 56). ಕುರುಬರ ಕುಲಗುರು ರೇವಣಸಿದ್ಧರಿಗೆ ಮಳೆಮಲ್ಲೇಶ’ ಎಂಬ ಇನ್ನೊಂದು ಹೆಸರಿರುವುದನ್ನು ಪ್ರೊ. ಸುಧಾಕರರು ಹೇಳುತ್ತಾರೆ. ಕರ್ನಾಟಕದಲ್ಲಿ ಜನಪ್ರಿಯನಾದ ಈ ಅರಸನ ಹೆಸರಿನ ಬುಕ್ಕಾಪಟ್ಟಣ, ಬುಕ್ಕಸಾಗರ ಅಥವಾ ಬುಕ್ಕಾಂಬುದಿ ಇತ್ಯಾದಿ ಹೆಸರಿನ ಊರು ಮತ್ತು ಕೆರೆಗಳನ್ನು ನೋಡುತ್ತೇವೆ. ವಿಶ್ವದ ವಿಶಾಲ ಮತ್ತು ಪ್ರಚಂಡ ಬಲಶಾಲಿ ಸಾಮ್ರಾಜ್ಯವೆಂದು ವಿದೇಶಿ ಪ್ರವಾಸಿಗರಿಂದ ಹೊಗಳಿಸಿಕೊಂಡ ಸಾಮ್ರಾಜ್ಯವನ್ನು ಆಳಿದ ಬಲಾಢ್ಯ ಅರಸರಲ್ಲಿ ಪ್ರೌಢ ಪ್ರತಾಪ ದೇವರಾಯ ಮತ್ತು ಕೃಷ್ಣದೇವರಾಯರು ಪ್ರಮುಖರು. ಪ್ರತಾಪ ದೇವರಾಯ ಸಂಗಮ ವಂಶದ ದೊರೆಯಾದರೆ, ಕೃಷ್ಣದೇವರಾಯ ತುಳುವ ವಂಶದ ದೊರೆಯಾಗಿದ್ದಾನೆ. ಇಬ್ಬರೂ ಸಹ ಹಾಲುಮತ ಮೂಲದ ಕುರುಬರ ಒಡೆಯರ ಜಾತಿಗೆ ಸೇರಿದವರೆಂಬ ವಾದವನ್ನು ವಿದ್ವಾಂಸರು ಮಂಡಿಸುತ್ತಾರೆ. ಒಟ್ಟಾರೆ ಇತಿಹಾಸಕಾರರ, ವಿದ್ವಾಂಸರ ಅಭಿಪ್ರಾಯಗಳನ್ನು ಗಮನಿಸಿ
ವಿಜಯನಗರವನ್ನು ಆಳಿದ ಸಂಗಮ ವಂಶದವರು ಕರ್ನಾಟಕದ ಕುರುಬ(ಒಡೆಯರು>ಯಾದವ ಮೂಲ)ರು, ಸಾಳುವ ಮತ್ತು ತುಳು ವಂಶಜರು ತುಳುನಾಡಿನ ಕುರುಬರು(ತುರ್ವಸು ಮೂಲ) ಮತ್ತು ಅರವೀಟ(ಡು) ವಂಶಜರು ತೆಲುಗು ಕುರುಬರು ಆಗಿದ್ದಾರೆ. ಕೃಷ್ಣದೇವರಾಯನ ತಂದೆ ಒಡೆಯರ ಕುಲದವನು, ತಾಯಿಯು ತುಳುನಾಡಿನ ಪಶುಪಾಲಕ ಜನಾಂಗದವಳು’ ಎಂದು ಅಭಿಪ್ರಾಯಪಡಬಹುದು. ಯಾಕೆಂದರೆ ಪ್ರಾಚೀನ ಕಾಲದಲ್ಲಿ ಪಶುಪಾಲಕರಾದ ಕುರುಬರನ್ನು ಯದು-ತುರ್ವಸರೆಂದು ಜೋಡಿ ಹೆಸರಿನಿಂದ ಕರೆಯಲಾಗುತ್ತಿತ್ತು.
ಆದ್ದರಿಂದ ವಿಜಯನಗರವನ್ನು ಆಳಿದ ಪ್ರಮುಖ ನಾಲ್ಕೂ ಮನೆತನಗಳು ಕುರುಬ(ಹಾಲುಮತ)ರ ಮನೆತನಗಳಾಗಿವೆಯೆಂಬುದು ವಿಶೇಷವಾಗಿದೆ.