ಕುರುಬರು / ಹಾಲುಮತ ಜನಾಂಗ ತುಂಬಾ ಪುರಾತನವಾದ ಜನಾಂಗ. ಮಾನವನು ಮೊದಲು ಕಾಡುಗಳಲ್ಲಿ ಬೇಟೆ ಆಡಿ ಮತ್ತು ಅಲ್ಲಿದ್ದ ಗೆಡ್ಡೆ, ಗೆಣಸು ತಿನ್ನುತಿದ್ದ. ಕ್ರಮೇಣ ಅವನು ಪ್ರಾಣಿಗಳನ್ನು ಪಳಗಿಸಿ ಸಾಕತೊಡಗಿದ, ಆ ನಂತರ ಅವನು ವ್ಯವಸಾಯ ಮಾಡುವುದನ್ನು ಕಲಿತ, ನಂತರ ಅವನು ಹಳ್ಳಿಗಳಲ್ಲಿ ವಾಸಿಸತೊಡಗಿದ. ಕುರುಬರಿಗೆ ಅತ್ಯಂತ ಪ್ರಾಚೀನವಾದ ಚರಿತ್ರೆಯಿದೆ.

ಭಾರತದ ದಕ್ಷಿಣಾಪಥದಲ್ಲಿ ದೊರೆತ ಗೋರಿ ಹಾಗೂ ಇತರೆ ಅವಶೇಷಗಳ ಆಧಾರದ ಮೇಲೆ ವಂಶಶಾಸ್ತ್ರಜ್ಞರಾದ ಹ್ಯಾಡೋನ್ ಅವರು ಕುರುಬರ ಚರಿತ್ರೆಯನ್ನು ಕ್ರಿ.ಪೂ. 4000-5000 ದಷ್ಟು ಹಿಂದಕ್ಕೆ ಒಯ್ತುತ್ತಾರೆ. ಮಧ್ಯ ಏಶಿಯಾದಿಂದ ಹೊರಟು ತಮ್ಮ ಬದುಕಿಗೆ ನೆಲೆಗಳನ್ನು ಹುಡುಕುತ್ತ ಇವರು ಬೋಲನ್ ಕಣಿವೆ ಮೂಲಕ ಭಾರತವನ್ನು ಪ್ರವೇಶಿಸಿ ಇಲ್ಲಿ ತಮ್ಮ ಸಂಸ್ಕೃತಿಯನ್ನು ರೂಪಿಸಿಕೊಂಡಿದ್ದಾರೆ. ಕುರುಬರನ್ನು ಹಟ್ಟಿಕಾರರೆಂದೂ ಕರೆಯುತ್ತಾರೆ. ಈ ಹಟ್ಟಿಕಾರರ ಉಲ್ಲೇಖ ರುದ್ರಾಧ್ಯಾಯದಲ್ಲಿ ಬರುತ್ತದೆಯಾದ್ದರಿಂದ ಕ್ರಿ.ಶ.ಪೂ 1200-2000 ವೇಳೆಗೆ ಕುರುಬ ಸಮಾಜ ಸುವಿಖ್ಯಾತವಾಗಿತ್ತೆಂದು ಶಂಭಾ ಜೋಷಿಯವರು ಅಭಿಪ್ರಾಯ ಪಟ್ಟಿದ್ದಾರೆ.

ಕ್ರಿ.ಶ. ಮೂರನೆಯ ತಮಾನದಷ್ಟೊತ್ತಿಗೆ ಕುರುಬರು ಪ್ರಭುಗಳಾಗಿ ಅಧಿಕಾರದ ಗದ್ದುಗೆ ಏರಿದ್ದರು ಎಂದು ಸರ್ ಡಬ್ಲೂ. ಇಲಿಯಟ್ ಅಭಿಪ್ರಾಯಪಡುತ್ತಾರೆ. ದಕ್ಷಿಣ ಭಾರತದಲ್ಲಿ ದೊರೆಯುವ ಅತೀ ಪ್ರಾಚೀನ ನಾಣ್ಯಗಳೆಂದರೆ ಕುರುಬರದೇ ಎನ್ನುತ್ತಾರೆ ಇಲಿಯಟ್. ಕುರುಬರು ಮೊದಲು ಸ್ಥಾಪನೆ ಮಾಡಿದ ಪಟ್ಟಣದ ಹೆಸರು ಪುಲಾಲ. ಈ ರಾಜ್ಯಕ್ಕೆ ಕುರುಂಬರ ನಾಡು ಎಂದು ಕರೆಯುತ್ತಿದ್ದರು. ಕೇರಳದ ಮಲಬಾರ ಜಿಲ್ಲೆಯಲ್ಲಿ ಈ ಹೆಸರಿನ ಪ್ರದೇಶ ಇಂದಿಗೂ ದೊರೆಯುತ್ತದೆ. ವಿಜಯನಗರ ಸಾಮ್ರಾಜ್ಯಕ್ಕೆ ಅಡಿಪಾಯ ಹಾಕಿದ ಹಕ್ಕಬುಕ್ಕರು, ಕದಂಬರು, ಪಲ್ಲವರು, ದೇವಗಿರಿಯ ಯಾದವರು, ಇಂದೂರಿನ ಹೋಳ್ಕರ್, ಬಡೋದೆಯ ಗಾಯಕವಾಡರು, ರಾಷ್ಟ್ರಕೂಟ ದೊರೆಗಳು ಇವರೆಲ್ಲ ಕುರುಬರೇ ಎಂದು ಚರಿತ್ರೆಕಾರರು ನಿರ್ಣಯಿಸಿದ್ದಾರೆ.

ಹೀಗೆ ಕುರುಬರ ಚರಿತ್ರೆಯೇನೋ ಬಹು ಪ್ರಾಚೀನವಾಗಿದೆ. ಇತಿಹಾಸ ಕುರಿ ಹಿಕ್ಕೆಯಲ್ಲಿಯೇ ಲಿಂಗವನ್ನು ಕಂಡು ಭಗವಂತನನ್ನು ಮರುಳು ಮಾಡಿ ಕುರಿ ಹಟ್ಟಿಯಲ್ಲಿ ಬೀರಪ್ಪ, ಮಾಳಿಂಗರಾಯನನ್ನು ಸಾಕ್ಷತ್ಕಾರ ಮಾಡಿಕೊಂಡು ಶರಣ ಕುರುಬ ಗೊಲ್ಲಾಳೇಶರ ಮುಗ್ಧ ಭಕ್ತಿ ಪರಂಪರೆಗೆ ಕುರುಬರು ಸಾಕ್ಷಿಯಾಗಿದ್ದಾರೆ. ಪರಿಶ್ರಮಿಕರಾದ ಕುರಿ ಕಾಯುವ ಕುರುಬರು ಸದಾ ನಿಸರ್ಗದಲ್ಲಿದ್ದು ಮಳೆ ನಕ್ಷತ್ರ, ಮಳೆ-ಬೆಳೆ, ಬರಗಾಲ, ರಾಜನೀತಿ ಮಹತ್ವದ ದಿನಮಾನಗಳನ್ನು ತಮ್ಮ ರಟ್ಟುಮತ ಶಾಸ್ತ್ರದಲ್ಲಿ ಉಲ್ಲೇಖಿಸಿದ್ದಾರೆ.

ವಿಜಯನಗರ ಸಾಮ್ರಾಜ್ಯದ ಸ್ಥಾಪನೆ:

ಹಕ್ಕ ಬುಕ್ಕರಾಯರು ಕುರುಬ ಜನಾಂಗದವರು ಮೊದಲಿಗೆ ಹಕ್ಕ ಬುಕ್ಕರಾಯರು ವಾರಂಗಲ್ ರಾಜರ ಸೇನಾದಿಪತಿಯಾಗಿದ್ದು ಮಲ್ಲಿಕಾಪುವಾರಂಗಲ್ ಮೇಲೆದಂಡೆತ್ತಿ(ಯುದ್ದಕ್ಕೆ) ಬಂದಾಗ ಯುದ್ದದಲ್ಲಿ ಸೋತು ಸೆರೆಯಾಳಾಗಿ (ರಾಜಾಧಾನಿ ದೆಹಲಿ) ಮುಸ್ಲಿಂ ಧರ್ಮಕ್ಕೆ ಮತಾಂತರಗೊಂಡರೆ ಪ್ರಾಣ ಭಿಕ್ಷೆ ದೊರೆಯುತ್ತದೆ ಎಂಬ ಬೆದರಿಕೆಗೆ ಮಣಿಯದೆ ಮಲ್ಲಿಕಾಪ್ರ್ನ ಸಾಮ್ರಾಜ್ಯದಲ್ಲಿ ಹಿಂದೂಗಳ ಮೇಲೆ ಆಗುತ್ತಿರುವ ದೌರ್ಜನ್ಯವನ್ನು ಕಣ್ಣಾರೆ ಕಂಡು ಮರುಗಿದ ಹಕ್ಕರಾಯರು ದೆಹಲಿಯಿಂದ ತಪ್ಪ್ಪಿಸಿಕೊಂಡು ಬಂದು ತಮ್ಮ ಅಳಿದುಳಿದ ಸೈನ್ಯವನ್ನು ಅಪಾರ ಸಂಖ್ಯೆಯಲ್ಲಿದ್ದ ಕುರುಬಜನಾಂಗವನ್ನು ಒಟ್ಟುಗೂಡಿಸಿ ವಿದ್ಯಾರಣ್ಯರೆಂಬ ಮಹಾತ್ಮರ ಮಾರ್ಗದರ್ಶನದಂತೆ ವಿಜಯನಗರ ಸಾಮ್ರಾಜ್ಯದ ಸ್ಥಾಪನೆ ಮಾಡಿದರು. ಈ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯನ್ನು ಕರ್ನಾಟಕದ ಇತಿಹಾಸದಲ್ಲಿ ಸ್ವರ್ಣಯುಗವೆಂದೆ ಕರೆಯಲಾಗಿದೆ. ವಿಜಯನಗರ ಸಾಮ್ರಾಜ್ಯದ ಪತನದ ನಂತರ ಕುರುಬ ಜನಾಂಗದವರು ಕಡೆಗಣಿಸಲ್ಪಟ್ಟರು ಆಲ್ಲದೆ ತುಂಬಾ ಹಿಂದುಳಿದರು, ಹೊಸ ರಾಜಕೀಯ ಬೆಳವಣಿಗೆಗಳು ಅವರ ಅರಿವಿಗೆ ಬರುವುದು ನಿಧಾನವಾಯಿತು, ತದ ನಂತರ ಬ್ರಿಟಿಷರ ವಿರುದ್ದ ಹೋರಾಡಿದ ಹೋಳ್ಕರ್ ಮಹಾರಾಜರು ಮತ್ತು ಸಂಗೊಳ್ಳಿ ರಾಯಣ್ಣನಂತಹ ದೇಶಪ್ರೇಮಿಗಳ ಹೋರಾಟ ಜನರನ್ನು ಸಂಘಟಿಸುವ ಶಕ್ತಿ ಮತ್ತು ಯುಕ್ತಿ ಯನ್ನು ಕಂಡ ಬ್ರಿಟಿಷ್ ಸರ್ಕಾರ ಕುರುಬರನ್ನು ರಾಜ್ಯಾಡಳಿತದಿಂದ ದೂರವಿಟ್ಟಿತು. ಉತ್ತರ ಕರ್ನಾಟಕದ ಮುಸಲ್ಮಾನ್ ದೊರೆಗಳು ತಮ್ಮ ವಿಜಯನಗರ ಸಾಮ್ರಾಜ್ಯದ ಮೇಲಿನ ದ್ವೇಷದಿಂದ ಕುರುಬರನ್ನು ಹಿಂಸಿಸಲು ಪ್ರಾರಂಭಿಸಿದರು ಇದರ ಪರಿಣಾಮ ನೂರರು ವರ್ಷಗಳಿಂದ ನೆಲೆಸಿದ ನಾಡನ್ನು ತೊರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇದಕ್ಕಿಂತ ಹೆಚ್ಚಾಗಿ ತಮ್ಮ ಪ್ರಾಮಾಣಿಕತೆ ಪರಾಕ್ರಮ ಆಡಳಿತ ನೈಪುಣ್ಯತೆಗಳಿಂದ ಇತಿಹಾಸದಲ್ಲಿ ದೊಡ್ಡ ದೊಡ್ಡ ರಾಜ್ಯಗಳನ್ನೇ ಸ್ಥಾಪಿಸಿ ಮೆರೆದ ಈ ನಮ್ಮ ಜನಾಂಗದ ರಾಜರು, ಚಕ್ರವರ್ತಿಗಳು ಸಹ ತಮ್ಮ ಕೀರ್ತಿ ವೈಭವಗಳ ಪ್ರಚಾರ ಪ್ರಸಿದ್ದಿಗಳಿಗಾಗಿ ಮೇಲು ವರ್ಗದ ಜನರಿಗೆ ತಮ್ಮ ಆಸ್ಥಾನದಲ್ಲಿ ಮಹತ್ತರವಾದ ಸ್ಥಾನಮಾನಗಳನ್ನು ನೀಡಿ ಗೌರವಿಸಿದರೇ ವಿನಃ ತಮ್ಮ ಸಮೂದಾಯದ ಅಭಿವೃದ್ದಿಗಾಗಿ, ವಿಕಾಸಕ್ಕಾಗಿ ಯಾವುದೇ ಮುಖ್ಯ ಯೋಜನೆಗಳನ್ನು ರೂಪಿಸಲಿಲ್ಲ. ತಾವು ದೈವಸಂಜಾತರೆಂದು, ವೀರಪುತ್ರರೆಂದು, ದಾನಚಿಂತಾಮಣಿಗಳೆಂದು ಹೆಸರುಗಳಿಸುವ ನಿರಂತರ ಪ್ರಯತ್ನದಲ್ಲಿಯೇ ಅವರ ಆಯುಷ್ಯ ಮುಗಿದು ಹೋಯಿತು. ಅವರ ಆಸ್ಥಾನಗಳಲ್ಲಿದ್ದ ವಿದ್ವಾಂಸರು ಆ ರಾಜರ, ಚಕ್ರವರ್ತಿಗಳ ಮೂಲವನ್ನು, ವೈಷಮ್ಯವನ್ನು, ವೈವಿಧ್ಯತೆಯನ್ನು ದಾಖಲಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿಲ್ಲ ಜನಾಂಗದ ಜ್ಞಾನ, ಸಮಾಜ ವಿಜ್ಞಾನಗಳ ದೃಷ್ಠಿಯಿಂದಲಾದರೂ ಅದರೆಡೆಗೆ ಗಮನ ಹರಿಸದೆ ಈ ಜನಾಂಗದ ಪುರಾಣ, ಇತಿಹಾಸ, ಜ್ಞಾನ, ವಿಜ್ಞಾನಗಳಲ್ಲಿಯೂ ಅರಿವಿಗೆಬಾರದಂತೆ ಮರೆವಿನ ಅವಜ್ಞೆಯ ಅನಾದರದ ಕಮರಿಗಳಲ್ಲಿ ಹೂತು ಹೋದರು.

ಕುರುಬ ಜನಾಂಗದವರು ತಮ್ಮಸಂಸ್ಕ್ರತಿ ಹಾಗೂ ಸಂಪ್ರದಾಯಗಳಿಗೆ ಪರಕೀಯರಿಂದ ದಕ್ಕೆಯಾದಾಗ ತಮ್ಮ ಕುಲ, ಗೋತ್ರ, ಮತ, ಬಿಟ್ಟುಕೊಡದೆ ತಾವು ನೂರಾರು ವರ್ಷಗಳಿಂದ ನೆಲೆಸಿದ್ದ ನಾಡನ್ನು ತೊರೆದು ಬಂದವರು ಇಂತಹ ಸ್ವಾಭಿಮಾನಿ “ಕುರುಬ” ಜನಾಂಗವು ಇಂದು ಭಾರತದ ಹಲವಾರು ಕಡೆ ಹರಿದು ಹಂಚಿಹೋಗಿದೆ. ಕುರುಬರು ಮೂಲತಃ ಬುಡಕಟ್ಟು ಜನಾಂಗದವರು, ಪ್ರಾಚೀನ ಕಾಲದಿಂದ ಹಿಡಿದು, ಆಧುನಿಕ ಕಾಲದಲ್ಲೂ ಇಂದಿಗೂ ಸಹ ತನ್ನ ಕಲು ಕಸಬನ್ನು ಬಿಟ್ಟಿಲ್ಲ, ದೈವಾರಾಧನೆಗಳನ್ನು ಬಿಟ್ಟಿಲ್ಲ, ಹಾಲುಮತಸ್ಥರು ದೈವಾಂಶ ಸಂಭೂತರೆಂಬುದು ಈಗಲೂ ಸಹ ಅದನ್ನು ಉಳಿಸಿಕೊಂಡು ಬರುತ್ತಿದ್ದಾರೆ. ಇಂತಹ ಭವ್ಯ ಸಂಸ್ಕತಿಯನ್ನು ಆಚರಿಸುವ, ಅನುಕರಿಸುವ ಕುರುಬ ಜನಾಂಗ ಅಕ್ಷರ, ಅರಿವು, ಅವಕಾಶ, ಅನುಕೂಲಗಳು ಇಲ್ಲದೇ ಸಾಮಾಜಿಕ ಸ್ತರ ವ್ಯವಸ್ಥೆಯಲ್ಲಿ ತೀರಾ ಸಂಕಷ್ಟ ಪರಿಸ್ಥಿತಿಯನ್ನು ಎದುರಿಸುವಂತಹ ಸಂದರ್ಭದಲ್ಲಿ ಕರ್ನಾಟಕದಲ್ಲಿ ಸಂಘಟನೆಯ ಹಿತದೃಷ್ಠಿಯಿಂದ ಕುರುಬ ಸಮಾಜದ ಮುತ್ಸದ್ದಿಗಳು 16ನೇ ಶತಮಾನದಲ್ಲಿ ಸಾಮಾಜಿಕ ನ್ಯಾಯವೆಂಬ ಬಿಚ್ಚುಗತ್ತಿಯ ಸಾಹಿತ್ಯದ ಮೂಲಕ ಜನಮಾನಸದಲ್ಲಿ ವೈಚಾರಿಕ ಪ್ರಜ್ಞೆ ಮೂಡಿಸಿದ ವಿಶ್ವಮಾನ್ಯ ಮಹಾನ್ ಮಾನವತಾವಾದಿ ದಾಸಶ್ರೇಷ್ಟ ಶ್ರೀ ಭಕ್ತ ಕನಕದಾಸರನ್ನು ತಮ್ಮ ಸಾಂಸ್ಕತಿಕ ನಾಯಕರನ್ನಾಗಿ ಆರಾಧಿಸತೊಡಗಿದರು. ಭಾರದ ದೇಶದ ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಕೆಚ್ಚೆದೆಯಿಂದ ಹೋರಾಡಿದ, ಹುತಾತ್ಮ, ಸ್ವಾಮಿನಿಷ್ಠೆ ಮತ್ತು ದೇಶಭಕ್ತಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಆಗಸ್ಟ್ 15 ರಾಯಣ್ಣ ಹುಟ್ಟಿದ ದಿನ ಭಾರತ ದೇಶಕ್ಕೆ ಸ್ವಾತಂತ್ರ್ಯ ಸಿಕ್ಕದಿನ ಜನವರಿ 26, ರಾಯಣ್ಣ ಹುತಾತ್ಮರಾದ ದಿನ ಭಾರತ ಗಣರಾಜ್ಯವಾದುದು. ಇಂತಹ ಮಹಾನ್ ದೇಶಭಕ್ತ ಇಂದಿನ ಯುವ ಶಕ್ತಿಗೆ ಆದರ್ಶವಾಗಿದ್ದಾರೆ.

ಕುರುಬರು ಎಲ್ಲೆಲ್ಲಿದ್ದಾರೆ ?

ಭಾರತ ದೇಶದ ಎಲ್ಲಾ ರಾಜ್ಯಗಳಲ್ಲೂ ಒಂದೇ ರೀತಿಯ ಕುಲ ಕಸುಬು, ಆಚರಣೆಗಳನ್ನು ಮಾಡುತ್ತಾ ಕುರುಬರು ವಿವಿಧ ಹೆಸರುಗಳಿಂದ ಕರೆಯಲ್ಪಡುತ್ತಿದ್ದಾರೆ. ದೇಶದ ಜನಸಂಖ್ಯೆಯ 10%ರಷ್ಟು (140 ಕೋಟಿಯಲ್ಲಿ 14 ಕೋಟಿಯಷ್ಟು) ಕುರುಬರು ಇದ್ದಾರೆ. ಕರ್ನಾಟಕ ರಾಜ್ಯದಲ್ಲಿ ಬೀದರ್ ಜಿಲ್ಲೆಯಿಂದ ಹಿಡಿದು ಚಾಮರಾಜನಗರ ಜಿಲ್ಲೆಯವರೆವಿಗೂ ಒಟ್ಟು 31 ಜಿಲ್ಲೆಗಳಲ್ಲೂ 226 ತಾಲ್ಲೂಕುಗಳಲ್ಲಿ 190 ತಾಲ್ಲೂಕುಗಳಲ್ಲೂ ಕುರುಬರು ವಾಸ ಮಾಡುತ್ತಿದ್ದಾರೆ.

ಇತಿಹಾಸ ಪುರುಷರು :

ವಿಶ್ವ ಶ್ರೇಷ್ಠವಾದ ಭಾರತೀಯ ಸಂಸ್ಕತಿಯಲ್ಲಿ ಹಾಲುಮತ (ಕುರುಬ) ಸಂಸ್ಕತಿಯು ಪ್ರಾಚೀನವಾದದ್ದು ಈ ಹಾಲುಮತ ಸಂಸ್ಕತಿಯ ಹುಟ್ಟು, ಬೆಳವಣಿಗೆ, ಪಾಲನೆ ಪೋಷಣೆಯಲ್ಲಿ ಶ್ರೀಮದ್ ಜಗದ್ಗುರು ಶ್ರೀ ರೇವಣಸಿದ್ದೇಶ್ವರರು, ಶ್ರೀ ಬೀರಲಿಂಗೇಶ್ವರರು, ಶ್ರೀ ಮೈಲಾರಲಿಂಗೇಶ್ವರರು, ಶ್ರೀ ಹುಲಿಜಂತಿ ಮಾಳಿಂಗರಾಯರು, ಶ್ರೀ ಅಮೋಘಸಿದ್ಧರು, ಶ್ರೀ ಚಿಂಚಲಿ ಮಾಯಾಮ್ಮನವರು ಶ್ರೀ ಬೊಮ್ಮಗೊಂಡೇಶ್ವರರು, ಶ್ರೀ ಕುರುಬ ಗೊಲ್ಲಾಳೇಶರು, ಶ್ರೀ ತುರುಗಾಹಿ ರಾಮಣ್ಣನವರು, ಶ್ರೀ ಇಟಗಿ ಭೀಮಾಂಭಿಕೆಯವರು, ಶ್ರೀ ಸಜ್ಜಲಗುಡ್ಡದ ಶರಣಮ್ಮನವರು, ಶ್ರೀ ಸಂತ ಬಾಳುಮಾಮರವರು, ಶ್ರೀ ಮುಗಳಖೋಡದ ಯಲ್ಲಾಲಿಂಗರು, ಶ್ರೀ ಲಡ್ಡು ಮುತ್ಯಾರವರು, ದಾಸಶ್ರೇಷ್ಠ ಶ್ರೀ ಕನಕದಾಸರು, ಶ್ರೀ ಕವಿರತ್ನ ಕಾಳಿದಾಸರು, ಶ್ರೀ ಬಳ್ಳಾರಿಯ ಗಾದಿ ಲಿಂಗಪ್ಪನವರು, ಶ್ರೀ ಚಂದ್ರಗುಪ್ತ ಮೌರ್ಯರು, ಶ್ರೀ ಸಾಮ್ರಾಟ ಅಶೋಕರು, ಶ್ರೀ ಹಕ್ಕ-ಬುಕ್ಕರು, ಶ್ರೀ ವೀರಪಾಂಡ್ಯ ಕಟ್ಟಬೊಮ್ಮನ್‍ನವರು, ಕ್ರಾಂತಿವೀರ ಶ್ರೀ ಸಂಗೊಳ್ಳಿ ರಾಯಣ್ಣನವರು, ಶ್ರೀ ಅಹಿಲ್ಯಾಬಾಯಿ ಹೋಳ್ಕರ್‍ರವರು, ಮಲೇಮಹದೇಶ್ವರ ದೇವಾಲಯದ ನಿರ್ಮಾತೃ ಶ್ರೀ ಜುಂಜೇಗೌಡರು, ಕೋಲಾರದ ಪರಮಹಂಸ ಶ್ರೀ ಗಟ್ಟಿಹಳ್ಳಿ ಆಂಜಿನಪ್ಪನವರು, ಸಹಕಾರ ಕ್ಷೇತ್ರದ ಪಿತಾಮಹ ಶ್ರೀ ಸಿದ್ದನಗೌಡ ಪಾಟೀಲರಂತಹ ಅನೇಕ ಮಹಾನ್ ಇತಿಹಾಸ ಪುರುಷರ ಕೊಡುಗೆ ಅನನ್ಯವಾದದ್ದು. .

ಕುರುಬರ ಜೀವನ ಶೈಲಿ :

ಮೂಲತಃ ಕುರುಬರು ಬುಡಕಟ್ಟು ಜನಾಂಗದವರು, ನಾಚಿಕೆ ಸ್ವಭಾವವನ್ನು ಹೊಂದಿರುವವರು, ಎಲ್ಲಾ ಸಮಾಜದವರೊಂದಿಗೂ ಬೆರೆಯುವ ಮನಸ್ಸುಳ್ಳವರು, ಮುಗ್ಧ ಮನಸ್ಸುಳ್ಳವರು, ತನ್ನದ್ದಲ್ಲದ್ದರ ಬಗ್ಗೆ ಆಸೆ ಪಡುವವರಲ್ಲ. ದೈವಾರಾಧನೆಯಲ್ಲಿ ಹೆಚ್ಚು ನಂಬಿಕೆಯಿಟ್ಟುಕೊಂಡಿರುವವರು, ಕುಲದೇವರಾದ ಬೀರಪ್ಪನನ್ನು ಪೂಜಿಸುತ್ತಾರೆ. ಆರಾಧಿಸುತ್ತಾರೆ, ಬೀರಪ್ಪನವರ ಆಚರಣೆಗಳನ್ನು ತಪ್ಪದೇ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಇಂದಿಗೂ ಆಚರಿಸಿಕೊಂಡು ಬರುತ್ತಿದ್ದಾರೆ.

ಶೈಕ್ಷಣಿಕ ಮತ್ತು ಉದ್ಯೋಗ :

ಮೂಲತಃ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಾಗಿ ವಾಸ ಮಾಡುತ್ತಿರುವ ಜನಾಂಗವಾಗಿದ್ದು, ಕುರಿ ಸಾಕಾಣಿಕೆ ಮೂಲ ಕಸುಬಾಗಿರುವುದರಿಂದ ಮಕ್ಕಳನ್ನು ಶಾಲೆಯಿಂದ ದೂರವಿಟ್ಟಿದ್ದಾರೆ. ಕುರಿಸಾಕಾಣಿಕೆ, ಕಂಬಳಿ ನೇಯ್ಗೆ, ವ್ಯವಸಾಯ ಹಾಗೂ ಇತ್ತೀಚಿಗೆ ವಿದ್ಯಾವಂತರಾಗಿ ಸರ್ಕಾರಿ, ಅರೆ ಸರ್ಕಾರಿ ಮತ್ತು ಸಣ್ಣ ಪುಟ್ಟ ವ್ಯಾಪಾರ ಮತ್ತು ಖಾಸಗಿ ಉದ್ಯೋಗಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

Leave a Reply

Your email address will not be published. Required fields are marked *

error: Content is protected !!