ಪ್ರಾಕೃತ, ಪಾಲಿ ಭಾಷೆಗಳ ಪ್ರಭಾವದ ಸಮಯದಲ್ಲಿ ಭಾರತೀಯರು ಬೆರಗಾಗುವಂತೆ ಸಂಸ್ಕøತ ಭಾಷೆಯಲ್ಲಿ ಕಾವ್ಯಗಳನ್ನು ರಚಿಸಿದವನು ಕಾಳಿದಾಸನಾಗಿದ್ದಾನೆ. ಇವನು ಕುರುಬ ಕುಲಸಂಜಾತನೆಂದು ಅನೇಕ ಐತಿಹ್ಯಗಳು, ಕಥೆಗಳು ಜನಜನಿತವಾಗಿವೆ. ಇವೆ ಕತೆಗಳನ್ನು ಆಧರಿಸಿ ಮತ್ತು ಅವನ ಕಾವ್ಯಗಳಲ್ಲಿ ಬರುವ ಸಂಧರ್ಭ, ಸನ್ನಿವೇಶಗಳನ್ನು ವಿವೇಚಿಸಿ ಚಲನಚಿತ್ರಗಳನ್ನೂ ತಯಾರಿಸಲಾಗಿದೆ. ಇವುಗಳಲ್ಲಿ ಅವನು ಕುರುಬರ ಸಮಾಜದಲ್ಲಿ ಹುಟ್ಟಿಬಂದ ಮುಗ್ಧನೆಂದು ಚಿತ್ರಿಸಲಾಗಿದೆ. ಮಂತ್ರಿಯೊಬ್ಬನ ಕುತಂತ್ರದಿಂದ ಅವನು ಮಹಾರಾಜನ ಮಗಳೊಬ್ಬಳ ಕೈಹಿಡಿಯುತ್ತಾನೆ. ಅವಳು ಅವನನ್ನು ಕಾಳಿಕಾಮಾತೆಯ ಅನುಗ್ರಹದಿಂದ ಸಂಸ್ಕøತ ಪಂಡಿತನನ್ನಾಗಿ ಸಿದ್ಧ ಮಾಡುತ್ತಾಳೆ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ, ಅವನ ಹೆಂಡತಿಯು ರಾಜನ ಮಗಳಾದ್ದರಿಂದ ಸಂಸ್ಕøತ ಭಾಷಾವಿಶಾರದೆಯಾಗಿರಬಹುದು. ಅಚಾನಕವಾಗಿ, ಮೋಸದಿಂದ ಮದುವೆಯಾದ ಕುರುಬ ವ್ಯಕ್ತಿಯನ್ನು ಸಂಸ್ಕøತಭಾಷೆಯಲ್ಲಿ ಪರಿಣಿತನನ್ನಾಗಿ ಮಾಡಿ, ಶ್ರಮಿಸಿ ಮಹಾನ್ ಕವಿಯಾಗಿ ನಿರ್ಮಿಸಿದ್ದರಲ್ಲಿ ಆಶ್ಚರ್ಯಪಡುವಂತಹುದೇನೂ ಇಲ್ಲ.

 


ಇಂದಿನ ಮಧ್ಯಪ್ರದೇಶ ರಾಜ್ಯದಲ್ಲಿ, ಉಜ್ಜನಿಯ ಹತ್ತಿರದ ಒಂದು ಹಳ್ಳಿಯಲ್ಲಿ ಕಾಳಿದಾಸನು ಹುಟ್ಟುತ್ತಾನೆ. ಇಂದಿಗೂ ಉಜ್ಜಯಿನಿಯಿಂದ 10-12 ಕಿ.ಮೀ. ದೂರದ ಬೆಟ್ಟದಲ್ಲಿ ಕಾಳಿಮಾತೆಯ ಮಂದಿರವಿದೆ. ಇದು ಕಾಳಿದಾಸನ ಮನೆದೇವರು. ಕಾಳಿದಾಸನು ಉಜ್ಜಯಿನಿಯಲ್ಲಿ ಜನಿಸಿದ್ದರಿಂದ ಅವನ ಕಾಲದಲ್ಲಿ ದೇಶದ ಮಹತ್ವದ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಪಂಜಾಬಿನ ತಕ್ಷಶಿಲೆ, ಮಗಧದ ನಾಲಂದಾ, ಕಾಠೇವಾಡದ ವಲಭೀ, ಮಾಳವಾದ ಉಜ್ಜಯಿನಿ ಬರುತ್ತವೆ. ಈ ವಿದ್ಯಾಲಯಗಳಲ್ಲಿ ಹದಿನಾರು ವಿದ್ಯೆಗಳ ಅಭ್ಯಾಸ ನಡೆಯುತ್ತಿತ್ತೆಂದು ಕಾಳಿದಾಸನು ತನ್ನ ಕೃತಿಯಲ್ಲಿ ಹೇಳಿದ್ದಾನೆ. ಆದ್ದರಿಂದ ಕಾಳಿದಾಸನು ಉಜ್ಜಯಿನಿ ವಿದ್ಯಾಲಯದಲ್ಲಿಯೇ ವಿಧ್ಯಭ್ಯಾಸ ಮಾಡಿರುವಂತೆ ಕಂಡುಬರುತ್ತದೆ. ಆದ್ದರಿಂದ ಉಜ್ಜಯಿನಿಯ ಪರಿಸರವನ್ನು ತನ್ನ ಎಲ್ಲ ಕೃತಿಯಲ್ಲಿ ವರ್ಣಿಸಿದ್ದಾನೆ. ಕಾಳಿದಾಸನು ವೇದ, ಉಪನಿಷತ್ತು, ತತ್ಕಾಲೀನ ಪ್ರಸಿದ್ಧ ಪುರಾಣ, ಸ್ಮøತಿ, ಸಾಂಖ್ಯಗಳನ್ನು ಸೂಕ್ಷ್ಮವಾಗಿ ಅಧ್ಯಯನ ಮಾಡಿದ್ದನು. ಕಾಶ್ಮೀರದಿಂದ ದಕ್ಷಿಣದ ಅನೇಕ ಪ್ರದೇಶಗಳಲ್ಲಿ ಸಂಚರಿಸಿ ಪ್ರತ್ಯಕ್ಷ ಅಧ್ಯಯನದಿಂದ ಸಾಕಷ್ಟು ಜ್ಞಾನ ಸಂಪಾದಿಸಿದ್ದುದು ಕಂಡುಬರುತ್ತದೆ. ಈ ಹಿನ್ನಲೆಯಲ್ಲಿ, ಕಾಳಿದಾಸನ ಸಂಸ್ಕøತ ಜ್ಞಾನವು ವಿಶ್ವವಿದ್ಯಾಲಯದಲ್ಲಿ ಓದಿದ ಯಾವುದೇ ವಿದ್ವಾಂಸನನ್ನು ಮೀರುವಂತಹುದಾಗಿದೆ.


ಕಾಳಿದಾಸನ ಕಾಲವನ್ನು ಚರಿತ್ರೆಕಾರರು ಕ್ರಿ.ಶ. ನಾಲ್ಕನೆಯ ಶತಮಾನ ಎಂದು ಗುರುತಿಸುತ್ತಾರೆ. ಭಾರತದ ಸಂದರ್ಭದಲ್ಲಿ ಅದು ಭೌದ್ಧ ಧರ್ಮೀಯರು ಅತ್ಯಂತ ಪ್ರಭಾವಶಾಲಿಗಳಾಗಿದ್ದ ಕಾಲವಾಗಿತ್ತು ಮತ್ತು ಜಾತಿ ಪದ್ಧತಿ ಇಂದಿನಂತೆ ಸಂಕೀರ್ಣ ಸ್ಥಿತಿಯನ್ನು ತಲುಪಿರಲಿಲ್ಲ. ಶಿಕ್ಷಣವನ್ನು ಸಾರ್ವತ್ರೀಕರಿಸಿದ ಭಾರತದ ಮೊದಲ ಧರ್ಮವೆಂದರೆ ಭೌದ್ಧ ಧರ್ಮವಾಗಿದೆ. ಸಂಸ್ಕøತವು ಶಿಕ್ಷಣ ಮಾಧ್ಯಮವಾಗಿದ್ದ ಕಾಲದಲ್ಲಿ ಕುರುಬ(ವಿಶಾಲ ಹಾಲುಮತ) ಜನಾಂಗದಲ್ಲಿ ಜನಿಸಿದ ಕಾಳಿದಾಸನು ಸಂಸ್ಕøತ ಕಲಿತು ಮೇರು ಕವಿಯಾಗಿದ್ದುದು ಇಂತಹ ಸಾಮಾಜಿಕ ಮತ್ತು ಶೈಕ್ಷಣಿಕ ಸಂದರ್ಭದಲ್ಲಿ ಎಂದೂ ಗಮನಿಸಬಹುದು. ಅವನು ಕುರುಬ ಜಾತಿಯಲ್ಲಿ ಜನಿಸಿದವನಲ್ಲ, ಬ್ರಾಹ್ಮಣನು’ ಎಂದು ಅಪಪ್ರಚಾರ ನಿರತ ಇಂದಿನ ಶಾಸ್ತ್ರ ರಚನಕಾರರಾದ ಪುರೋಹಿತರು ಗಮನಿಸಬೇಕಾದ ಅಂಶವೆಂದರೆ ಕಾಳಿದಾಸನು ವಿಶಾಲ ಹಾಲುಮತ ಜನಾಂಗದ ಪ್ರತಿನಿಧಿಯಾಗಿದ್ದ ಮತ್ತು ಕುರುಬ, ಕುರುಂಬ, ಧನಗಾರ, ಇಡೈಯರ್ ಮುಂತಾದ ಪಶುಪಾಲಕ ಜಾತಿಗಳು ಅಂದು ಈಗಿನಂತೆ ಸೀಮಿತ ಅರ್ಥವನ್ನು ಪಡೆದಿರಲಿಲ್ಲ ಎಂಬುದಾಗಿದೆ. ಕಾಳಿದಾಸನುಮಾಳವ(ಇಂದಿನ ಮಧ್ಯಪ್ರದೇಶ)’ ದೇಶವನು. ಅಂದು ಮಾಳವ ದೇಶ ಹಾಲುಮತದವರ ಬೀಡಾಗಿತ್ತು. ಮಹಾಭಾರತದಲ್ಲಿ ಮಾಳವ ದೊರೆಯನ್ನು ಪಶುಪಾಲಕ ಕುರುಬ(ವಲ್ಲಭ ಎಂಬುದು ಗೌರವಾತ್ಮಕ ಬಿರುದು)ನೆಂದು ಹೇಳಲಾಗಿದೆ. ಕಾಳಿದಾಸನು ಹಾಲುಮತದವನು ಎಂಬ ಮೂಲ ಸತ್ಯಕ್ಕೆ, ಜನಪದರಲ್ಲಿ ಹುಟ್ಟಿದ ನಂಬಿಕೆಗೆ ಅನುಗುಣವಾಗಿ ಹುಟ್ಟಿಕೊಂಡಿರುವ ಕತೆಯೆಂದರೆ ಕಾಳಿದಾಸನು ಮರದ ಟೊಂಗೆಯ ತುದಿಯಲ್ಲಿ ನಿಂತು ಬುಡ ಕಡಿಯುವ ದಡ್ಡನನ್ನಾಗಿಸಿದ ಕತೆ! ಹೆಂಡತಿ ವಿದ್ಯಾವತಿಯಿಂದ ಸಂಸ್ಕøತ ಕಲಿತು ಮಹಾಕವಿಯಾದ ಈ ಕತೆ ಅವನು ಹಾಲುಮತದವನೆಂಬುದಕ್ಕೆ ಕೇವಲ ಪೂರಕವಾದ ಸಾಕ್ಷಿ ಮಾತ್ರ! ಜನಪದ ಕತೆ ಸುಳ್ಳಾಡುವುದಿಲ್ಲ. ಕಾಳಿದಾಸನ ವಿಷಯದಲ್ಲಿ ಅದು ಸ್ವಲ್ಪ ಅತಿರಂಜಿತವಾಗಿದೆ ಅಷ್ಟೆ!
ಈ ಮಹಾಕವಿ ರಚಿಸಿದ ಋತುಸಂಹಾರ’ ಕಾವ್ಯದಲ್ಲಿ ಆರು ಸರ್ಗಗಳಿದ್ದು, ಪ್ರತಿಯೊಂದರಲ್ಲಿ ಹದಿನಾರರಿಂದ ಇಪ್ಪತ್ತೆಂಟರವರೆಗೆ ಪದ್ಯಗಳಿವೆ. ಅದರಲ್ಲಿ ಗ್ರೀಷ್ಮ, ವರ್ಷಾ, ಶರದ್, ಹೇಮಂತ, ಶಿಶಿರ ಮತ್ತು ವಸಂತ ಋತುಗಳ ವರ್ಣನೆ ಇರುವುದು. ಅಲ್ಲದೇಕುಮಾರ ಸಂಭವ’ದಲ್ಲಿ ವಸಂತ ಋತುವಿನ, ವಿಕ್ರಮೋರ್ವಶಿಯ ಮತ್ತು ಮೇಘದೂತ’ದಲ್ಲಿ ವರ್ಷಾ ಋತುವಿನ ವರ್ಣನೆಯಿದ್ದು,ಶಾಕುಂತಲ’ದಲ್ಲಿ ಗ್ರೀಷ್ಮ ಋತುವಿನ ವರ್ಣನೆ ಇರುವುದು. ರಘುವಂಶ’ದಲ್ಲಿ ಬಹುಶಃ ಎಲ್ಲ ಋತುಗಳ ವರ್ಣನೆಯು ಕಂಡುಬರುತ್ತದೆ. ಗ್ರೀಷ್ಮ ಋತುವಿನ ಒಂದು ಪದ್ಯದಲ್ಲಿಸೂರ್ಯನ ಅತ್ಯಂತ ಪ್ರಖರವಾದ ಕಿರಣಗಳಿಂದಾಗಿ ಮೇಲಿನಿಂದ ಹಾಗೂ ತಪ್ತವಾದ ಮಣ್ಣಿನಿಂದಾಗಿ ಕೆಳಗಿನಿಂದ ದೇಹವು ಸುಡುತ್ತಿದ್ದುದರಿಂದ ವ್ಯಾಕುಲವಾಗಿ ಉಸಿರೆಳೆಯುತ್ತಿರುವ ವಕ್ರಗೆರೆಯ ಸರ್ಪವು ಜಾತಿ ವೈರತ್ವವನ್ನು ಮರೆತು ನವಿಲಿನ ನೆರಳಿನಲ್ಲಿ ಹೋಗಿ ಕುಳಿತುಕೊಳ್ಳುವುದು’ ಎಂದು ವರ್ಣಿಸಲಾಗಿದೆ. ಕವಿಯ ನೈಸರ್ಗಿಕ ಅನುಭವವು, ಆ ಪ್ರಾಣಿಪಕ್ಷಿಗಳ ಮೇಲಾಗುವ ಋತುವಿನ ಪರಿಣಾಮವನ್ನು ಹೀಗೆ ಎತ್ತಿ ತೋರಿಸಿದೆ.


ಕುಮಾರಸಂಭವ’ ಕೃತಿಯಲ್ಲಿ ಕವಿಯು ಹಿಮಾಲಯದ ಸುಖಕರ ವಾತಾವರಣದ ವರ್ಣನೆಯನ್ನು ಮಾಡಿದ್ದು, ಇದರಲ್ಲಿ ಪಾರ್ವತಿಯ ಜನನ ಬಾಲ್ಯ ಮತ್ತು ಯೌವನದ ವರ್ಣನೆಯೂ ಅದ್ಭುತವಾಗಿ ಮೂಡಿಬಂದಿದೆ. ಬ್ರಹ್ಮದೇವರ ವರದಿಂದ ತಾರಕಾಸುರನು ಪ್ರಬಲವಾಗಿ ದೇವತೆಗಳಿಗೆ ತೊಂದರೆ ಕೊಟ್ಟಿದ್ದರಿಂದ ದೇವತೆಗಳು ಬ್ರಹ್ಮನ ಸೂಚನೆಯಂತೆ ಶಿವಪಾರ್ವತಿಯರ ವಿವಾಹವನ್ನು ಜರುಗಿಸಿ, ಆ ಸಂಬಂಧದಿಂದ ಹುಟ್ಟಿದ ಕಾರ್ತಿಕೇಯನನ್ನು ಸೇನಾಪತಿಯನ್ನಾಗಿ ಮಾಡಿ ಆತನಿಂದ ತಾರಕಾಸುರನನ್ನು ಕೊಲ್ಲಿಸಿದರೆಂಬುದು ಈ ಕಾವ್ಯದ ಸಾರಾಂಶವಾಗಿದೆ. ಮೇಘದೂತ ಕಾವ್ಯದಲ್ಲಿ ಮೋಡವನ್ನೇ ತನ್ನ ದೂತನನ್ನಾಗಿಸಿದ ವರ್ಣನೆಯು ಅಮೋಘವಾಗಿ ಮೂಡಿ ಬಂದಿದೆ.ಎಲೈ ಮೇಘವೆ, ಅಲಕಾ ಪಟ್ಟಣದಲ್ಲಿ ಗಗನವನ್ನು ಚುಂಬಿಸುವಂತೆ ಕಟ್ಟಡಗಳ ಚಿತ್ರ ಮೊದಲಾದವುಗಳಿಂದ ಸುಶೋಭಿತವಾಗಿ ಮೃದಂಗ ದ್ವನಿಯಿಂದೊಡಗೂಡಿ, ರತ್ನ ಖಚಿತವಾಗಿದ್ದು, ವೃಕ್ಷಗಳು ಪುಷ್ಪಭರಿತವಾಗಿ, ನವಿಲುಗಳು ಆನಂದಮಯವಾಗಿ, ರಾತ್ರಿ ಬೆಳದಿಂಗಳೊಡಗೂಡಿ, ಅಲ್ಲಿ ಶಂಕರನು ವಾಸಿಸುತ್ತಿರಲು ಮನ್ಮಥನು ತನ್ನ ಬಿಲ್ಲನ್ನು ಪ್ರಯೋಗಿಸಲಾರದೇ ಸುಂದರ ವಾತಾವರಣವನ್ನು ಸವಿಯುತ್ತಿರುವನು’ ಎಂದು ವರ್ಣಿಸಿರುವುದು ಅಧ್ಭುತ ಕವಿಸಮಯವಾಗಿದೆ. ಇಂತಹ ವರ್ಣನೆಯು ಕುರುಬರ ಕಾಲಿದಾಸನಿಂದಲ್ಲದೇ ಮತ್ತಾರಿಂದಲೂ ಸಾದ್ಯವಾಗಿಲ್ಲ. ಈ ಕಾವ್ಯದಲ್ಲಿ ಕವಿಯು ತನ್ನ ಕವಿತ್ವದ ಸಮಸ್ತವನ್ನೂ ಬಳಸಿ ಸೌಂದರ್ಯಾನ್ವೇಷಣೆಯನ್ನು ಮಾಡಿದ್ದಾನೆ.
ಮುಂದುವರೆದು ಎಲೈ ಕಾಮಾಚಾರಿಯಾದ ಮೇಘವೆ, ಮೈಮೇಲಿರುವ ಶುಭ್ರವಾದ ಬಟ್ಟೆಯನ್ನು ಬದಿಗೆ ಸರಿಸಿದ ಓರ್ವ ಸ್ತ್ರೀಯು ತನ್ನ ಪ್ರಿಯಕರನ ತೊಡೆಯ ಮೇಲೆ ಕುಳಿತುಕೊಳ್ಳುವಂತೆ ಮತ್ತು ಪಕ್ಕದಲ್ಲಿಯೇ ಗಂಗಾನದಿಯು ಹರಿಯುತ್ತಿರುವಂತಹ ಅಲಕಾ ಪಟ್ಟಣವು ದೃಷ್ಟಿಗೆ ಬೀಳುತ್ತಲೇ ಅದನ್ನು ನೀನು ಗುರುತಿಸುವೆ’ ಎಂದು ಮೇಘಕ್ಕೆ ವಿವರಣೆಯನ್ನು ನೀಡುವುದು ಕಾಳಿದಾಸನೊಬ್ಬನಿಂದಲೇ ಸಾಧ್ಯವಾದುದಾಗಿದೆ. ಸೇತುಬಂಧ ಕಾವ್ಯವು ರಾಮಾಯಣಕ್ಕೆ ಸಂಬಂಧಿಸಿದ್ದು, ಶ್ರೀರಾಮನು ಸಮುದ್ರದ ಮೇಲೆ ಸೇತುವೆಯನ್ನು ನಿರ್ಮಿಸಿ ಕಪಿಗಳ ಸೈನ್ಯ ಸಮೇತನಾಗಿ ಲಂಕೆಯ ಮೇಲೆ ದಾಳಿಯಿಟ್ಟು, ಅಲ್ಲಿ ಘೋರವಾದ ಯುದ್ಧವನ್ನು ಮಾಡಿ ರಾವಣನನ್ನು ಕೊಂದು ಸೀತಾದೇವಿಯನ್ನು ಬಂಧಮುಕ್ತಳನ್ನಾಗಿಸಿದ ಕತೆಯು ಅತಿ ಸುಂದರವಾಗಿ ಮೂಡಿ ಬಂದಿದೆ. ಕಾವ್ಯದಲ್ಲಿ ಸುಂದರವಾದ ಕಲ್ಪನೆ, ಮನೋಹರವಾದ ಅಲಂಕಾರ ಮತ್ತು ಹೃದಯಂಗಮವಾದ ವರ್ಣನೆಗಳಿವೆ. ಈ ಕಾವ್ಯವನ್ನು ಸೂಕ್ತಿರತ್ನಗಳ ಸಾಗರ ಎಂದು ವರ್ಣಿಸಲಾಗಿದೆ. ರಘುವಂಶ’ ಕಾವ್ಯವು ಕಾಳಿದಾಸನ ಎಲ್ಲ ಕಾವ್ಯಗಳಿಗಿಂತ ಉತ್ಕøಷ್ಟವಾದುದೆಂದು ಪರಿಗಣಿಸಲ್ಪಟ್ಟಿದೆ. ಈ ಕಾವ್ಯದಲ್ಲಿ ಇಪ್ಪತ್ತೆಂಟು ರಾಜರ ವರ್ಣನೆಯಿದ್ದು ಅವರಲ್ಲಿ ರಘು ಅತ್ಯಂತ ಪರಾಕ್ರಮಿಯೂ, ದಾನಶೂರನೂ ಆಗಿದ್ದರಿಂದ ಕವಿಯು ಇದಕ್ಕೆ ರಘುವಂಶವೆಂದು ಹೆಸರಿಟ್ಟು ಕರೆದಿದ್ದಾನೆ. ಈ ರಾಜರುಗಳು ಶೂರರೂ, ನ್ಯಾಯಪರರೂ, ವಿದ್ವಾಂಸರೂ, ಸಂಯಮಿಗಳು, ದಾನಶೂರರೂ ಆಗಿದ್ದರಲ್ಲದೇ, ಈ ಎಲ್ಲ ಗುಣಗಳು ಶ್ರೀರಾಮನಲ್ಲಿ ಮೇಳೈಸಿದ್ದವು ಎನ್ನುವುದು ಈ ಮಹಾಕಾವ್ಯದ ತಿರುಳಾಗಿದೆ. ಪ್ರಜೆಗಳ ರಕ್ಷಣೆ, ಪೋಷಣೆ ಹಾಗೂ ಶಿಕ್ಷಣಗಳನ್ನು ತಂದೆಯಂತೆ ನೋಡುವ ಇಂದ್ರಿಯ ನಿಗ್ರಹವುಳ್ಳ ಉದಾತ್ತ ಚರಿತ್ರೆಯ ಉತ್ತುಂಗ ಪ್ರಾಸಾದವನ್ನು ನಿರ್ಮಿಸಿದ ಕವಿ ಪ್ರತಿಭೆಯು ಸಾಟಿಯಿಲ್ಲದ್ದು.
ಕಾಳಿದಾಸನ ನಾಟಕಗಳಲ್ಲಿ ಮಾಲವಿಕಾಗ್ನಿಮಿತ್ರ ನಾಟಕದಲ್ಲಿ ಕವಿಯು ರಾಜನ ಮೂಲಕ ಮಾಲವಿಕೆಯ ವರ್ಣನೆಯನ್ನು ಈ ಕೆಳಗಿನಂತೆ ವರ್ಣಿಸಿದ್ದಾನೆ. ಈಕೆಯ ಕಣ್ಣುಗಳು ವಿಶಾಲವಾಗಿವೆ. ಮೊಗದ ಕಾಂತಿಯು ಶರದೃತುವಿನ ಚಂದ್ರನಂತಿದೆ. ಬಾಹುಗಳು ಸ್ವಲ್ಪ ಬಾಗಿವೆ. ಶಿಥಿಲವಲ್ಲದ ಹಾಗೂ ಉನ್ನತವಾದ ಸ್ತನಗಳು ವಕ್ಷ ಸ್ಥಳವನ್ನು ವ್ಯಾಪಿಸಿವೆ. ಪಾಶ್ವಭಾಗವು ಸರಳವಾಗಿದೆ. ಮಧ್ಯಭಾಗವು ಅರ್ಧ ಹಸ್ತದಷ್ಟು ಮಾತ್ರ ಅಗಲವಿದೆ. ನಿತಂಬವು ಸ್ಥೂಲವಾಗಿದ್ದು, ಕಾಲಿನ ಬೆರಳುಗಳು ಸ್ವಲ್ಪ ಡೊಂಕಾಗಿವೆ. ನೃತ್ಯಾಚಾರ್ಯರಿಗೆ ಒಪ್ಪಿಗೆಯಾಗುವಂತೆ ಈಕೆಯ ಶರೀರವು ರಚಿಸಲ್ಪಟ್ಟಿದೆ’ ಹೀಗೆ ಸಾಗುವ ವರ್ಣನೆಯು ಎಣೆಯಿಲ್ಲದ ಶಬ್ದ ವೈಭವದಲ್ಲಿ ಮಿಂದುಹೋಗಿದೆ. ಈ ರೀತಿಯ ಕವಿಯ ವರ್ಣನೆಯು ಕಾಳಿದಾಸನಿಗಲ್ಲದೇ ಮತ್ಯಾರಿಗೆ ಸಾಧ್ಯ? ಎಂಬ ಪ್ರಶ್ನೆಯನ್ನು ಹುಟ್ಟುಹಾಕುತ್ತದೆ. ಮಾಲವಿಕೆಯ ಮುಖವನ್ನು ಅರಳುತ್ತಿರುವ ಕಮಲಕ್ಕೆ ಹೋಲಿಸಿ ಸುಂದರ ಉಪಮೆಯನ್ನು ಕಾಳಿದಾಸ ನೀಡಿರುವನು. ಒಟ್ಟು ಐದು ಅಂಕಗಳ ಈ ನಾಟಕವು ಅನೇಕ ಘಟನೆಗಳಿಂದ ಕೂಡಿದ್ದು, ಕಥಾನಕವು ಭರದಿಂದ ಸಾಗಿರುವುದು ಕಂಡುಬರುವುದು. ವಿಕ್ರಮೋರ್ವಶಿಯ’ ನಾಟಕವು ಐದು ಅಂಕಗಳೊಡನೆ ರಚಿತವಾಗಿರುವ ಸುಂದರ ನಾಟಕವಾಗಿದೆ. ಪುರೂರವ ಅರಸನು ಸೂರ್ಯಪೂಜೆ ಮಾಡಿ ಹಿಂದಿರುಗುವಾಗ, ಊರ್ವಶಿ ಎಂಬ ಸುಂದರಳಾದ ಅಪ್ಸರೆಯನ್ನು ಅವಳ ಸಖಿಯಾದ ಚಿತ್ರಲೇಖೆಯನ್ನು ಕೇಶಿ ಎಂಬ ದೈತ್ಯನು ಬಂಧಿಸಿದ್ದಾನೆಂದು ರಾಜನಿಗೆ ಸುದ್ದಿ ಬರುತ್ತದೆ. ರಾಜನು ಆಕೆಯ ಶೋಧ ಮಾಡಿ ಚಿತ್ರಲೇಖೆಯ ಜೊತೆಗೆ ಮೂರ್ಚಿತಳಾಗಿದ್ದ ಊರ್ವಶಿಯನ್ನು ಕರೆತರುವನು. ಮೂರ್ಚೆಯಿಂದ ಎಚ್ಚರಾದಾಗ ಆ ಊರ್ವಶಿಯ ವರ್ಣನೆಯನ್ನು ರಾಜನು ಮಾಡುತ್ತಾ, `ಈ ಸುಂದರಿಯನ್ನು ನಿರ್ಮಿಸಿರುವ ಬ್ರಹ್ಮನು ರಮ್ಯಕಾಂತಿಯ ಚಂದ್ರನಾಗಲಿ, ಶೃಂಗಾರ ರಸಾತ್ಮಕ ಮನ್ಮಥನಾಗಲಿ ಇಲ್ಲವೇ ಕುಸುಮಾಕರ ವಸಂತನಾಗಲಿ ಇದ್ದಿರಬೇಕು. ಎಕೆಂದರೆ ವೇದಾಭ್ಯಾಸದಿಂದ ರಸಿಕರಹಿತನಾದ ಮತ್ತು ಉಪಭೋಗಿಸುವಂತಹ ವಿಷಯಗಳ ಬಗ್ಗೆ ಯಾರಿಗೆ ಎಳ್ಳಷ್ಟೂ ಆಸಕ್ತಿ ಇಲ್ಲವೋ ಅಂತಹ ಬ್ರಹ್ಮದೇವ ರೂಪದಲ್ಲಿರುವ ವೃದ್ಧ ಋಷಿಗೆ ಇಷ್ಟು ಮನೋಹರವಾದ ಸೌಂದಯ್ವನ್ನು ಹೇಗೆ ನಿರ್ಮಿಸಲು ಶಕ್ಯವಾಗುವುದು!’’ ಎಂಬ ವರ್ಣನೆಯು ಮನೋಜ್ಞವಾಗಿದೆ. ಶಾಕುಂತಲ’ ಎಂಬ ನಾಟಕವು ಸರ್ವಾಂಗ ಸುಂದರ ಮತ್ತು ನಿರ್ಧೋಷವಾಗಿದ್ದು, ಅಭಿಜ್ಞಾನ ಶಾಕುಂತಲ’ದ ಮೇಲೆಯೇ ಕಾಳಿದಾಸನ ಕೀರ್ತಿಯು ಹರಡಿರುವುದು. ಮಾಲವಿಕಾಗ್ನಿ ಮಿತ್ರ ಹಾಗೂ ವಿಕ್ರಮೋರ್ವಶಿಯ ನಾಟಕಗಳು ಒಂದೊಂದು ರೀತಿಯಲ್ಲಿ ರಮ್ಯವಾದಂತಹ ನಾಟಕಗಳಿದ್ದರೂ ಶಾಕುಂತಳ ನಾಟಕವು ಕಾಳಿದಾಸನು ಸರ್ವಶ್ರೇಷ್ಠ ನಾಟಕನಾರನೆಂದು ಸಾಬೀತುಪಡಿಸಿರುವುದು. ಈ ನಾಟಕವನ್ನು ಕ್ರಿ.ಶ. 1789ರಲ್ಲಿ ಸರ್ ವಿಲಿಯಮ್ಸ ಜೋನ್ಸ್ ಎಂಬ ವಿದ್ವಾಂಸನು ಇಂಗ್ಲೀಷ ಭಾಷೆಗೆ ಭಾಷಾಂತರಿಸಿದ್ದು, ಇದು ಯುರೋಪಿನ ಅನೇಕ ವಿದ್ವಾಂಸರ ಗಮನವನ್ನು ಸೆಳೆದುದೇ ಅಲ್ಲದೆ ಬೇರೆಬೇರೆ ಪಾಶ್ಚಾತ್ಯ ಭಾಷೆಗಳಲ್ಲಿ ಭಾಷಾಂತಗೊಂಡಿದೆ. ಈ ನಾಟಕವು ವಿಶ್ವದ ಎಲ್ಲ ಭಾಷೆಗಳಲ್ಲಿಯೂ ಭಾಷಾಂತರಗೊಂಡುಕಾಳಿದಾಸಸ್ಯ ಸರ್ವಸ್ವಮಭಿಜ್ಞಾನ ಶಾಕುಂತಲಂ’ ಎಂದು ವರ್ಣಿಸಲ್ಪಟ್ಟಿರುವುದು. ನಾಟಕದ ಕೇಂದ್ರಬಿಂಧು ಶಾಕುಂತಲೆ-ದುಷ್ಯಂತರಿದ್ದು ಸೂತ್ರದಾರನು ಇಡೀ ನಾಟಕವನ್ನು ಪ್ರೇಕ್ಷಕರ ಮುಂದೆ ಪ್ರತಿಬಿಂಬಿಸುತ್ತಾನೆ. ಅರಸನು ಬಾಣದಿಂದ ಜಿಂಕೆಗಳತ್ತ ಗುರಿಯಿಟ್ಟಾಗ ಓರ್ವ ವೈಖಾನಸನು ಅದು ಆಶ್ರಮದ ಜಿಂಕೆ ಕೊಲ್ಲಬೇಡವೆಂದು ಅಡ್ಡಿಪಡಿಸುತ್ತಾನೆ. ರಾಜನು ಬಾಣವನ್ನು ಹಿಂತೆಗೆದುಕೊಂಡಾಗ, ಅವನು ನಿನಗೆ ಚಕ್ರವರ್ತಿಯಾಗುವ ಮಗ ಹುಟ್ಟುತ್ತಾನೆ’ ಎಂದು ಆಶೀರ್ವದಿಸುತ್ತಾನೆ. ಹೀಗೆ ಕಣ್ವ ಋಷಿಗಳ ಆಶ್ರಮಕ್ಕೆ ಬಂದ ದುಷ್ಯಂತ ದೊರೆಯು ಅಲ್ಲಿ ಶಕುಂತಳೆಯಿಂದ ಸೇವಿತನಾಗುತ್ತಾನೆ. ಭರತನೆಂಬ ಮಗನನ್ನು ಪಡೆಯುತ್ತಾರೆ. ರಾಜಕೀಯ ಕಾರಣಗಳಿಗಾಗಿ ರಾಜಧಾನಿಗೆ ಹಿಂದಿರುಗುವ ರಾಜನು ಶಕುಂತಲೆಯನ್ನು ಮರೆತು ಬಿಡುತ್ತಾನೆ. ಗರ್ಭಿಣಿ ಶಕುಂತಲೆಯು ಅವನ ಅರಮನೆಗೆ ಬಂದು ತನ್ನನ್ನು ಸ್ವೀಕರಿಸಿಕೊಳ್ಳಲು ಕೇಳಿಕೊಳ್ಳುತ್ತಾಳೆ. ಸಾಕ್ಷಿಗಾಗಿ ಕೊಟ್ಟ ಉಂಗುರವನ್ನು ನದಿಯಲ್ಲಿ ಕಳೆದುಕೊಂಡ ಶಕುಂತಲೆಯನ್ನು ದುಷ್ಯಂತ ಸ್ವೀಕರಿಸುವುದಿಲ್ಲ. ಮುಂದೊಂದು ದಿನ ಮೀನಗಾರನೊಬ್ಬನು ತಂದುಕೊಟ್ಟ ಉಂಗುರವನ್ನು ಗುರುತಿಸಿ ಅರಣ್ಯಕ್ಕೆ ಬಂದು ಹೆಂಡತಿ ಮತ್ತು ಮಗನನ್ನು ಗುರುತಿಸಿ ಕರೆದೊಯ್ಯುವ ದುಷ್ಯಂತನು ಭರತನನ್ನು ಒಬ್ಬ ಧೀಮಂತ ಚಕ್ರವರ್ತಿಯಾಗುವಂತೆ ಬೆಳೆಸುತ್ತಾನೆ. ಈ ಭರತ ಚಕ್ರವರ್ತಿಯಿಂದಲೇ ನಮ್ಮ ದೇಶಕ್ಕೆ ಭಾರತ ಎಂಬ ಹೆಸರು ಬಂದಿದೆಯೆಂಬ ನಂಬಿಕೆಯು ಹಲವರಲ್ಲಿದೆ.
ಸಾಹಿತ್ಯ, ಸಂಗೀತ, ನೃತ್ಯ, ಕಲೆ ಹೀಗೆ ಎಲ್ಲ ಜ್ಞಾನಶಿಸ್ತುಗಳನ್ನು ಕಲಿತಿದ್ದ ಕಾಳಿದಾಸ ಭಾರತದೇಶವನ್ನು ಸುತ್ತಿ ಅದರ ಪ್ರತಿಯೊಂದು ಪ್ರದೇಶಗಳನ್ನು ಅರಿತು ಮೇಘದೂತ’ ಕಾವ್ಯವನ್ನು ರಚಿಸಿದ್ದುದು ಕಂಡುಬರುತ್ತದೆ. ಅವನ ಇತರ ಕೃತಿಗಳೆಂದರೆ ಅಭಿಜ್ಞಾನ ಶಾಕುಂತಲ, ವಿಕ್ರಮೋರ್ವಶಿ, ಮಾಲವಿಕಾಗ್ನಿಮಿತ್ರ, ರಘುವಂಶ, ಕುಮಾರ ಸಂಭವ ಮತ್ತು ಋತುಸಂಹಾರಗಳಾಗಿವೆ.ಪ್ರತಿಭೆ ಯಾವ ಜಾತಿ, ಜನಾಂಗ ಮತ್ತು ವರ್ಗದ ಸೊತ್ತಲ್ಲ’ ಎಂಬ ಮಾತಿನಂತೆ ಕ್ರಿ.ಶ. 4ನೆಯ ಶತಮಾನದ ಈ ರಚನೆಗಳು ಇಂದಿಗೂ ಜನರ ಮನಸ್ಸನ್ನು ಮುಟ್ಟುತ್ತವೆ, ಕವಿಗಳಿಗೆ ಸವಾಲನ್ನು ಒಡ್ಡುತ್ತವೆ.

Leave a Reply

Your email address will not be published. Required fields are marked *

error: Content is protected !!