ಕಲಿ-ಕವಿ-ಜ್ಞಾನಿ-ಸಂತನೂ ಆದ ಕನಕದಾಸರು ಹಾಲುಮತ ಕುರುಬ ಜನಾಂಗದ ದಾರ್ಶನಿಕ ಕವಿಯಾಗಿದ್ದಾರೆ. ಇವನ ತಂದೆ ಬೀರಪ್ಪ, ತಾಯಿ ಬಚ್ಚಮ್ಮ(ಭಕ್ತ್ಯಮ್ಮ). ಬೀರಪ್ಪನು ಬಾಡ-ಬಂಕಾಪುರ 78 ಗ್ರಾಮಗಳ ನಾಡಗೌಡ(ನಾಯಕ)ರಾಗಿದ್ದರು. ಬಹಳ ದಿನಗಳ ಕಾಲ ಮಕ್ಕಳಾಗದಿದ್ದ ಬೀರಪ್ಪ-ಬಚ್ಚಮ್ಮರು ತಿರುಪತಿ ತಿಮ್ಮಪ್ಪನಿಗೆ ನಡೆದುಕೊಂಡಾಗ, ಗಂಡು ಮಗುವೊಂದನ್ನು ಪಡೆಯುತ್ತಾರೆ. ಮಗುವಿಗೆ ತಿಮ್ಮಪ್ಪ ಎಂದು ಹೆಸರಿಡಲಾಗುತ್ತದೆ. ತಿಮ್ಮಪ್ಪನಿಗೆ ವಿಧಿಯೋಕ್ತವಾಗಿ ಶಾಸ್ತ್ರ ಮತ್ತು ಶಸ್ತ್ರವಿದ್ಯೆಗಳನ್ನು ನೀಡಲಾಗುತ್ತದೆ. ಅಪ್ರತಿಮ ಜಾಣನಾಗಿದ್ದ ತಿಮ್ಮಪ್ಪನು ಒಂದು ದಿನ ಭೂಮಿಯಲ್ಲಿ ಅಡಗಿದ್ದ ಅಪಾರನಿಧಿಯನ್ನು ಪಡೆಯುತ್ತಾನೆ. ಅಂದಿನಿಂದ ಅವನಿಗೆ ಕನಕ’ ಎಂಬ ಹೆಸರಾಗುತ್ತದೆ. ತಂದೆಯ ನಂತರ ಮಾಂಡಲಿಕ ರಾಜನಾದ ಕನಕಪ್ಪನು ಕನಕನಾಯಕ(ಇಲ್ಲಿ ನಾಯಕ ಎಂಬ ಪದ ಜಾತಿ ಸೂಚಕವಲ್ಲ, ಅದು ಪದವಿ ಸೂಚಕ) ಎಂಬ ಅಭಿದಾನದಿಂದ ಬಾಡ-ಬಂಕಾಪುರದ ನಾಡಗೌಡನಾಗುತ್ತಾನೆ. ವೀರನಾದ ಕನಕನಾಯಕನು ವಿಜಯನಗರದ ಪರವಾಗಿ ಅನೇಕ ಯುದ್ಧಗಳಲ್ಲಿ ಭಾಗವಹಿಸುತ್ತಾನೆ. ಇಂತಹ ಒಂದು ಯುದ್ಧದಲ್ಲಿ ಕನಕನಿಗೆ ಬಹಳಷ್ಟು ಗಾಯಗಳಾಗಿ, ಪ್ರಜ್ಞೆತಪ್ಪಿ ಬಿದ್ದಾಗ, ಅರೆಪ್ರಜ್ಞೆಯಲ್ಲಿ ಕೃಷ್ಣ(ತಿಮ್ಮಪ್ಪ) ತನ್ನ ದಾಸನಾಗಲು ಕರೆದಂತಾಗುತ್ತದೆ. ನಂತರ ಕನಕನಾಯಕ ತನ್ನ ಸಮಸ್ತ ಒಡೆತನ ಬಿಟ್ಟುಕೊಟ್ಟು ಕೃಷ್ಣನನ್ನು ಅರಸುತ್ತ ದೇಶಾಂತರ ಹೊರಡುತ್ತಾನೆ. ವೀರಯೋಧ ದೈವಭಕ್ತನಾಗಿ ಮಾರ್ಪಡುತ್ತಾನೆ. ದೇಶಾಂತರ ಹೊರಟ ಕನಕನು ವಿಜಯನಗರದಲ್ಲಿದ್ದ ರಾಜಗುರು ತಿರುಮಲೆ ತಾತಾಚಾರ್ಯ ಎಂಬುವವರಿಂದ ಶ್ರೀವೈಷ್ಣವ ದೀಕ್ಷೆ ಪಡೆಯುತ್ತಾನೆ. ಅನಂತರ ಜ್ಞಾನಿಗಳಾದ ವ್ಯಾಸರಾಯ ಸ್ವಾಮಿಗಳ ಶಿಷ್ಯನಾಗಿ ವೇದಾಂತ ರಹಸ್ಯಗಳನ್ನು ಅರಿತುಕೊಳ್ಳುತ್ತಾನೆ ಬಾಳೆಹಣ್ಣಿನ ಪ್ರಸಂಗ, ಕೋಣನ ಪ್ರಸಂಗ, ಮುಕ್ತಿ ಪ್ರಸಂಗ ಇವೆಲ್ಲ ಅಗ್ನಿಪರೀಕ್ಷೆಯಲ್ಲಿ ಗೆದ್ದು ವ್ಯಾಸರಾಯರಿಂದ,ಇವಗ ನಾಡೆಲ್ಲ ಹುಡುಕಿದರೂ ಈಡಾರ ಕಾಣೆ’ ಎಂದು ಮುಕ್ತಕಂಠದಿಂದ ಹೊಗಳಿಸಿಕೊಂಡಿದ್ದಾನೆ.
ಮಾಧ್ವ ಪ್ರಭಾವಕ್ಕೆ ಒಳಗಾದ ಭಾಗವತ ದೃಷ್ಟಿಯ ಕವಿ, ಕೀರ್ತನಕಾರ, ಕನಕದಾಸರು ಸಾಮಾಜಿಕ ಕೆಳವರ್ಗವಾದ ಕುರುಬ ಸಮಾಜದಿಂದ ಬಂದು ದಾಸದೀಕ್ಷೆ ಪಡೆದು ಉತ್ತಮ ಕೃತಿಗಳನ್ನು ರಚಿಸಿ ದಾಸ ಸಾಹಿತ್ಯಕ್ಕೆ ಹೊಸ ಆಯಾಮವನ್ನು ದೊರಕಿಸಿಕೊಟ್ಟರು. ಇವರು ಹರಿಭಕ್ತಿಸಾರ, ಮೋಹನ ತರಂಗಿಣಿ, ನಳಚರಿತ್ರೆ, ರಾಮಧಾನ್ಯ ಚರಿತ್ರೆ ಮತ್ತು ನೃಸಿಂಹಸ್ತವ ಎಂಬ ಅಮೂಲ್ಯ ಕಾವ್ಯಕೃತಿಗಳನ್ನು ಕನ್ನಡ ಸಾರಸ್ವತ ಲೋಕಕ್ಕೆ ಕೊಟ್ಟಿದ್ದಾರೆ. ಇವರು ಬರೆದ ರಾಮಧಾನ್ಯ ಚರಿತೆ’ ಕಾವ್ಯವು ಕನ್ನಡ ಸಾರಸ್ವತ ಲೋಕದ ಮೊದಲ ವಿಡಂಬನಾತ್ಮಕ ಸಾಹಿತ್ಯವೆನ್ನಿಸಿದೆ.ಆದಿಕೇಶವ’ ಎಂಬ ಅಂಕಿತದಡಿಯಲ್ಲಿ ಕೀರ್ತನೆಗಳನ್ನು, ತತ್ವ ಗರ್ಭಿತವಾದ ಮುಂಡಿಗೆಗಳನ್ನು ರಚಿಸಿದ್ದಾರೆ. ಇವರ ಕೃತಿಗಳಲ್ಲಿ ಜನತೆಯ ಮೌಢ್ಯ, ಕಂದಾಚಾರ, ಪೊಳ್ಳು ನಂಬಿಕೆ, ವರ್ಣವ್ಯವಸ್ಥೆಯನ್ನು ಖಂಡಿಸಿದ್ದುದಲ್ಲದೆ ದೈವಭಕ್ತಿ, ಜೀವನದರ್ಶನ, ಸಮಾಜವಿಮರ್ಶೆ ಮತ್ತು ಲೋಕಾನುಭವಗಳು ಕಾವ್ಯಾತ್ಮಕವಾಗಿ ಹೊರಹೊಮ್ಮಿವೆ.
ಕನಕದಾಸರ ಕವಿತಾಶಕ್ತಿ ಸಂಪೂರ್ಣವಾಗಿ ಅರಳಿರುವುದು ಅವರ ಕೀರ್ತನೆಗಳಲ್ಲಿ, ವಿಚಾರ ಸ್ವಾತಂತ್ರ್ಯದಲ್ಲಿ ಮತ್ತು ಕಾವ್ಯದಲ್ಲಿ ಎನ್ನಬಹುದು. ಇವರ ಪ್ರತಿಭಾಶಾಲಿ ಅಂತರಂಗದ ಆಳವನ್ನೂ, ಭಕ್ತಿ ನಿರ್ಭಯತೆಯನ್ನೂ ತಿಳಿಸುವ ಕೀರ್ತನೆಗಳು ನುಡಿಗೆ ಮೆರಗು ನೀಡುವೆ. ಕವಿ ಎಷ್ಟೇ ದೊಡ್ಡವನಿರಲಿ, ಜಾತ್ಯಾತೀತನಿರಲಿ ಅವನ ಕಾವ್ಯದಲ್ಲಿ ಅವನು ಬೆಳೆದ ಪರಿಸರ, ಜೀವನಾನುಭವ, ಅವನ ಕುಲದ ಸೋಂಕು ಸ್ವಲ್ಪವಾದರೂ ಇದ್ದೇ ಇರುತ್ತದೆ. ಇದಕ್ಕೆ ಯಾವ ಕವಿಗಳೂ ಹೊರತಲ್ಲ. ಕನಕದಾಸರ ಕಾವ್ಯದಲ್ಲೂ ಅಲ್ಲಲ್ಲಿ ಅವನು `ಕುರುಬ ಸಮಾಜ’ದಿಂದ ಬಂದವನು ಎಂಬ ಹೊಳವು ಸಿಗುತ್ತದೆ. ಕನಕದಾಸರು ಬೇರೆ ಜಾತಿಯವರೆಂದು ವಾದಿಸುವ ಮೇಲ್ಜಾತಿಯ ಕರ್ಮಠ ವ್ಯಕ್ತಿತ್ವದ ಭೇದ(ಡ)ವಾದಿಗಳಿಗೆ ಇದು ಸೂರ್ಯರಶ್ಮಿಯಂತೆ ಕಣ್ಣು ಕುಕ್ಕುವ ಸತ್ಯವಾಗಿದೆ. ಉದಾಹರಣೆಗೆ,

 1. ರಾಮಧಾನ್ಯ ಚರಿತೆ : ಭತ್ತ ಮತ್ತು ರಾಗಿಗಳಿಗೆ ಜಗಳವಾಗಿ ಅಲ್ಲಿ ಭತ್ತದ ಕುಲ ಶ್ರೇಷ್ಟತೆಯ ಅಹಂ ಕಾಣಿಸುತ್ತದೆ. ಅದಕ್ಕೆ ಭತ್ತ ಹೇಳುತ್ತದೆ –
  ಏನಲವೋ ನರೆದಲಗ ನೀನು ಸಮಾನನೇಯೆನಗಿಲ್ಲಿ, ನಾ ಚಂದನ ನೀ ಕಟ್ಟಿಗೆ ನಾ ಹನುಮ ನೀ ಕಪಿ ನಾ ಗೋಕ್ಷೀರ ನೀ ಕುರಿಹಾಲು’ ಇಲ್ಲಿ ಗಮನಿಸಬೇಕಾದ ಅಂಶವೆಂದರೆ ಕನಕದಾಸರು ಕುಲದ ಅಭಿಮಾನದಿಂದ ಗೋಕ್ಷೀರಕ್ಕೆ ಪ್ರತಿಯಾಗಿಕುರಿಹಾಲು’ ಎಂದು ದಾಖಲಿಸಿದ್ದಾರೆ. ಅವರು ಕುರುಬರಲ್ಲದಿದ್ದರೆ ಎಮ್ಮೆ ಹಾಲು, ನಾಯಿ ಹಾಲು ಎಂದು ದಾಖಲಿಸಬಹುದಿತ್ತು. ಇದು ಕುಲದ ಅಭಿಮಾನ ಮತ್ತು ಕುರಿ’ ಮತ್ತುಕುರುಬ’ ಸಮುದಾಯ ಕುರಿತು ಅವರಲ್ಲಿದ್ದ ಪ್ರೀತಿಯನ್ನು ತೋರಿಸುತ್ತದೆ.
 2. ಮೋಹನ ತರಂಗಿಣಿ’ ಕಾವ್ಯದಲ್ಲಿ ಕೃಷ್ಣ - ಭಾಣಾಸುರರ ಯುದ್ಧದಲ್ಲಿ ಕೃಷ್ಣನನ್ನು ಬಾಣಾಸುರ ಹಿಮ್ಮಟ್ಟಿದ್ದಕ್ಕೆ ಹಂಗಿಸುತ್ತಾನೆ. ಅದಕ್ಕೆ ಕೃಷ್ಣ ಹೇಳುವ ಮಾತು ಈ ರೀತಿ ಇದೆ. ``ತಗರು ಹಿಮ್ಮೆಟ್ಟಿ ಧಾರಿಣಿಯೊಳು ಬರಸಿಡಿ| ಲೊಗೆವಂತೆ ಬಂದೆರೆಗುವುದು || ತೆಗೆದೆಸೆಯಲು ಸರಲ್ಗಳು ಪೋಗಿ ಗರ್ಭವ | ಬಗೆಯದೆ ಮಾರ್ಪುದೆ ಮರುಳೆ || ಇಲ್ಲಿ ಟಗರು ಹೇಗೆ ಮೊದಲು ಹಿಮ್ಮೆಟ್ಟಿ ನಂತರ ಮುನ್ನುಗ್ಗಿ ಬಂದು ಎದುರಾಳಿಯನ್ನು ಗುದ್ದುತ್ತದೆ ಎಂಬ ವಾಸ್ತವಿಕ ಸತ್ಯದ ದಾಖಲೀಕರಣವಿದೆ. ಇದನ್ನು ಕುರುಬ ಸಮುದಾಯದಿಂದ ಬಂದ ಕವಿಯಲ್ಲದೆ ಇನ್ನಾರು ಮಾಡಲು ಸಾಧ್ಯವಿದೆ? ಇವರು ವೈಷ್ಣವ-ಭಾಗವತ ಸಂಪ್ರದಾಯರಾದರೂ ಬೀರಪ್ಪನ ಭಕ್ತರು. ಅವರ ಹಲವಾರು ಕೀರ್ತನೆಗಳಲ್ಲಿ ಬೀರಪ್ಪನನ್ನು ಸ್ತುತಿಸಿದ್ದಾರೆ. ಇವೆಲ್ಲ ದಾಖಲೆಗಳು ಅವರು ಹಾಲುಮತ ಕುರುಬರೆಂದೇ ಹೇಳುತ್ತವೆ. ಸಾಮಾಜಿಕ ಚಿಂತನೆಯನ್ನು ಕುರಿತ ರಚನೆಗಳನ್ನು ಚರ್ಚೆಗೆ ಒಳಪಡಿಸುವುದಾದರೆ, ಕನ್ನಡದ ಹರಿದಾಸ ಸಾಹಿತ್ಯವನ್ನು ಸಾಮಾಜಿಕ ಚಿಂತನೆಯೊಂದಿಗೆ ಸಂಪದ್ಭರಿತಗೊಳಿಸಿದ ದಾಸಶ್ರೇಷ್ಟರ ಮೊದಲ ಸಾಲಿನಲ್ಲಿ ಮೊದಲನೆಯವರೆಂದರೆ ಕನಕದಾಸರು. ಹನ್ನೆರಡನೆಯ ಶತಮಾನದ ವಚನ ಸಾಹಿತ್ಯ ಸಂದರ್ಭದಲ್ಲಿ ಬಸವಣ್ಣನವರು ಹೇಗೆ ಸಾಮಾಜಿಕ, ಧಾರ್ಮಿಕ, ಸಾಂಸ್ಕøತಿಕ ಕ್ಷೇತ್ರಗಳ ಶುದ್ಧೀಕರಣದ ಹರಿಕಾರರಾಗಿ ಅಹರ್ನಿಶಿ ದುಡಿದರೋ ಹಾಗೆ ಹದಿನಾರನೆಯ ಶತಮಾನದ ದಾಸ ಸಾಹಿತ್ಯದ ಸಂದರ್ಭದಲ್ಲಿ ಕನಕದಾಸರು ದುಡಿದರು. ಬಸವಣ್ಣನವರು ಹೇಗೆ ಶ್ರೀಸಾಮಾನ್ಯರಲ್ಲೊಬ್ಬರಾಗಿ, ಅವರೊಡನೆ ಕುಂತು, ನಿಂತು, ಮಲಗಿ, ಅವರ ಕಷ್ಟಸುಖಗಳಲ್ಲಿ ಭಾಗಿಯಾಗಿ, ಅವರನ್ನು ಕೈಹಿಡಿದು ಸಲಹುವ ತಾಯಿಯಾಗಿ, ದಾರಿ ತೋರುವ ಮಾರ್ಗದರ್ಶಕರಾಗಿ ಜನರ ಪ್ರೀತಿ ವಿಶ್ವಾಸಗಳನ್ನು ಗಳಿಸಿಕೊಂಡು ಜನಪ್ರಿಯ ವಚನಕಾರರಾಗಿದ್ದರೋ ಹಾಗೆ ಕನಕದಾಸರೂ ಜನಪ್ರಿಯ ಕೀರ್ತನೆಕಾರರಾಗಿದ್ದರು. ಆದ್ದರಿಂದಲೇ ಇವರಿಬ್ಬರ ಹೆಸರಿನಲ್ಲಿ ಇರುವ ಊರು, ಕೆರೆ, ಕ್ಷೇತ್ರಗಳು ಕರ್ನಾಟಕದಾದ್ಯಂತ ಕಂಡುಬರುತ್ತವೆ. ಕನಕದಾಸರು ಕೀರ್ತನಕಾರರಷ್ಟೇ ಅಲ್ಲ, ಕವಿಯೂ, ಸಾಮಾಜಿಕ ಚಿಂತಕರೂ, ಜಾತಿಪದ್ಧತಿಯ ಕಡುವಿರೋಧಿಯೂ ಹೌದು. ಈ ಕಾರಣಕ್ಕಾಗಿಯೇ ಕಾಲಕಾಲಕ್ಕೂ ಸನಾತನಿ ಕರ್ಮಠರ ತಿರಸ್ಕಾರ ಮತ್ತು ವಿರೋಧದ ಸಂಚಿಗೆ ಬಲಿಯಾಗಿದ್ದುದು ಕಂಡುಬರುತ್ತದೆ. ಕನಕದಾಸರ ಸಾಧನೆಯ ಬದುಕಿನ ಫಲಿತವೇ ಅವರನ್ನು ಸಾಮಾಜಿಕ ನ್ಯಾಯದ ಹರಿಕಾರನನ್ನಾಗಿಯೂ ರೂಪಿಸಿತ್ತು ಮತ್ತು ಇದು ಸಹಜ ಎನ್ನುವಂತೆಯೂ ಬೆಳೆದುದಾಗಿತ್ತು. ಭಾವ-ಸ್ವಭಾವಗಳ ಮುಖಾಮುಖಿಯೊಂದಿಗೆ ಅನುಸಂಧಾನಗೊಂಡದ್ದಾಗಿತ್ತು. ಕನಕದಾಸರ ಕೀರ್ತನೆಗಳು ಅವರನ್ನು ಕವಿಯಾಗಿಸಿದರೆ, ಅವರ ಕಾವ್ಯಗಳು ಮಹಾಕವಿಯನ್ನಾಗಿಸಿವೆ. ಮೋಹನ ತರಂಗಿಣಿ, ನಳಚರಿತ್ರೆ, ಹರಿಭಕ್ತಿಸಾರ, ಕೃತಿಗಳ ನಡುವೆ ಒಬ್ಬ ಮಹತ್ವದ ಕವಿಯಾಗಿ ಕಾಣಿಸಿಕೊಳ್ಳುವ ಕನಕದಾಸರುರಾಮಧಾನ್ಯ ಚರಿತ್ರೆ’ಯಂತಹ ಕೃತಿಯ ಮೂಲಕ ಒಬ್ಬ ಬಂಡಾಯ ಕವಿಯಾಗಿ, ಸಾಮಾಜಿಕ ಚಿಂತಕರಾಗಿ ಕಾಣಿಸಿಕೊಳ್ಳುತ್ತಾರೆ.
  ಕನಕದಾಸರ ಹರಿಭಕ್ತಿಸಾರ’ ಎಂಬ ಕೃತಿ ಆಧ್ಯಾತ್ಮ ಸಾಧನೆಯ, ದೈವಭಕ್ತಿ ಭೋಧನೆಯ, ಸುಭಗಸುಂದರ ಶೈಲಿಯ ಚಿಕ್ಕ ಹಾಗೂ ಚೊಕ್ಕ ಕೃತಿ. ಪಂಡಿತ ಪಾಮರರ ಹೃದಯವನ್ನು ಆದ್ರ್ರಗೊಳಿಸುವ, ಭಗವದ್ ಭಕ್ತಿ ಅಂಕುರವಾಗುವಂತೆ ಮಾಡುವ ಕೃತಿ. ಶಾಶ್ವತವಾದ ದೇವಾಧಿದೇವನ ಗುಣಗಾನ, ಅಶಾಶ್ವತವಾದ ದೇಹದ ಅವಸಾನ, ಇರುವಷ್ಟು ಕಾಲದಲ್ಲಿ ತಾನು ಏರಬೇಕಾದ ಅನುಭಾವದ ಸೋಪಾನಗಳನ್ನು ತುಂಬಿದ ತೊರೆಯಂತೆ ಗಂಭೀರವಾಗಿ ಹೇಳಿರುವ ರೀತಿ ಚಿತ್ತಾಕರ್ಷಕ. ದೀನ ನಾನು ಸಮಸ್ತ ಲೋಕಕೆ ದಾನಿ ನೀನು ವಿಚಾರಿಸಲು ಮತಿ ಹೀನ ನಾನು ಮಹಾಮಹಿಮ ಕೈವಲ್ಯಪತಿ ನೀನು ಏನ ಬಲ್ಲೆನು ನಾನು ನೆರೆ ಸು ಜ್ಞಾನ ಮೂರುತಿ ನೀನು ನಿನ್ನ ಸ- ಮಾನರುಂಟೆ ದೇವ ರಕ್ಷಿಸು ನಮ್ಮನನವರತ || ಎಂಬ ಪದ್ಯವನ್ನು ಒಮ್ಮೆ ಓದಿದವರು ಮತ್ತೆಮತ್ತೆ ಮನಸ್ಸಿನಲ್ಲಿ ನೆನೆಸಿಕೊಂಡು ಗುನುಗುನಿಸದಿರರು. ಹಾಗೆಯೇ ಪ್ರತಿಯೊಬ್ಬ ಮನುಷ್ಯನಲ್ಲಿಯೂ ಪರಮಾತ್ಮನಿದ್ದಾನೆಂದೂ, ಅವನಿರುವ ತನಕ ದೇಹದ ಚಟುವಟಿಕೆ ಇರುತ್ತದೆಂದೂ, ಅವನು ಕಾಲ್ತೆಗೆದ ತಕ್ಷಣ ದೇಹ ಚಟುವಟಿಕೆ ನಿಲ್ಲುತ್ತದೆಯೆಂದೂ ದೇಹದ ಅನಿತ್ಯತೆಯನ್ನು ಮನಗಾಣಿಸುವನೆಂಟ ನೀನಿರ್ದಗಲಿದೊಡೆ ಒಣ ಹೆಂಟೆಯಲಿ ಮುಚ್ಚುವರು’ ಎಂಬುದನ್ನು ಓದಿದ ರಾಜಸಿಕ, ತಾಮಸಿಕ ಜನರಲ್ಲೂ ಇದ್ದಷ್ಟು ಕಾಲ ಸಾತ್ವಿಕ ಮಾರ್ಗದಲ್ಲಿ ಹೋಗೋಣ’ ಎಂಬ ಭಾವನೆ ಅಂಕುರಿಸಲು ಸಾಧ್ಯ. ಕನಕದಾಸರನಳಚರಿತ್ರೆ’ ಎಂಬ ಕೃತಿ ಸರಳವಾಗಿ, ಬಿಟ್ಟ ಬಾಣದಂತೆ ನೇರವಾಗಿ ಪರಸ್ಪರ ನಿಷ್ಕಲ್ಮಷ ಪ್ರೇಮದ ಗುರಿಯತ್ತ ಸಾಗುವ, ಪರಸ್ಪರ ಪ್ರೇಮದಲ್ಲಿಯೇ ಸುಖಶಾಂತಿಯಿದೆ ಎಂದು ಸಾರುವ ಉತ್ತಮ ಕಾವ್ಯವಾಗಿದೆ. ಪಂಡಿತ ಪಾಮರರಿಬ್ಬರ ಮನಸ್ಸನ್ನು ಸೆರೆ ಹಿಡಿಯುವ ಮೋಹಕ ಶಕ್ತಿ ಅಭಿವ್ಯಕ್ತಿಯಲ್ಲಿ ಅಡಕಗೊಂಡಿದೆ. ಪ್ರಾಥಮಿಕ, ಮಾಧ್ಯಮಿಕ ಶಾಲೆಯ ಮಕ್ಕಳೂ ಸಹ ಒಮ್ಮೆ ಓದಿದ ಅಡ್ಡ ಮೋರೆಯ ಗಂಟು ಮೂಗಿನ ಗಿಡ್ಡ ದೇಹದ’ ಎಂಬ ಪಧ್ಯವನ್ನು ಎಂದೆಂದಗೂ ಮರೆಯಲಾರರು. ಅಂತಹ ಚಿತ್ರಕ ಶಕ್ತಿ ಅಭಿವ್ಯಕ್ತಿಯಲ್ಲಿದೆ. ಕನಕದಾಸರರಾಮಧಾನ್ಯ ಚರಿತ್ರೆ’ ಭರತಖಂಡದ ವರ್ಗವರ್ಣ ವ್ಯವಸ್ಥೆಯ ವಿರುದ್ಧ ಖಡ್ಗ ಝಳಪಿಸುವ, ಮೇಲು ಕೀಳು ಜಾತಿ ವ್ಯವಸ್ಥೆಯ ಪೊಳ್ಳುತನವನ್ನು ಬಯಲು ಮಾಡುವ, ಧರಾಮರರು ಧರಾಮರರಾಗಿ ವರ್ತಿಸದೇ ಶೂದ್ರರೊಡನೆ ಕೂಡಿ ಬಾಳಬೇಕೆಂಬ ರಾಮಸಂದೇಶವನ್ನು ಹೊತ್ತ ಅಣಕು ಮಹಾಕಾವ್ಯ ಎಂದರೆ ತಪ್ಪಾಗದು. ದೇವರಿಗೆ ಪರಮಾನ್ನ ನೀ, ಮನುಜಾವಳಿಗೆ ಪಕ್ವಾನ್ನಮೀತನು, ನೀವು ನೀವು ಧರೆಯೊಳಗಿಬ್ಬರತಿ ಹಿತದಲಿ ಬಾಳುವುದು’ ಎಂಬ ರಾಮನ ಬುದ್ಧಿವಾದ, ಬ್ರಾಹ್ಮಣ ಶೂದ್ರ ವೈಮನಸ್ಯಕ್ಕಿಂತ ಸಾಮರಸ್ಯವೇ ಸಮಾಜದ ಶಾಂತಿ ಸುಭಿಕ್ಷಕ್ಕೆ ಸೋಪಾನ ಎಂಬ ಸತ್ಯವನ್ನು ಪ್ರಚುರಪಡಿಸುವ ಕೃತಿಯಾಗಿದೆ. ರಾಗಿ ತನ್ನನ್ನು ಬಾಯಿಗೆ ಬಂದ ಹಾಗೆ ಬಯ್ದು ಹಿಯಾಳಿಸಿದ ನೆನಗೊಬ್ಬಿನ ನೆಲ್ಲನ್ನು ಕೊನೆಯಲ್ಲಿ ಸಂತೈಸಲು ಹೋಗಬಾರದಿತ್ತು. ಆ ಸನ್ನಿವೇಶ ನಿರ್ಮಾಣವನ್ನು ಕೈಬಿಡಬೇಕಾಗಿತ್ತು ಎಂದು ಕೆಲವರಿಗೆ ಅನ್ನಿಸಬಹುದು. ಆದರೆ ಶತ್ರುವನ್ನೂ ಸಹ ಮಿತ್ರನನ್ನಾಗಿ ಕಂಡು ಅವನ ಮನಃ ಪರಿವರ್ತನೆಗೆ ಪ್ರಯತ್ನಿಸಬೇಕು ಎಂದು ಕನಕದಾಸರ ಪೂರ್ಣದೃಷ್ಟಿಗೆ ಅದು ಪೂರಕವಾಗಿದೆ. ಇವರಮೋಹನ ತರಂಗಿಣಿ’ ಕೃಷ್ಣ-ರುಕ್ಮಿಣಿಯರ, ರತಿ-ಮನ್ಮಥರ, ಉಷಾ-ಅನಿರುದ್ಧರ’ ಪ್ರೇಮಕಥೆಯ ಮೂಲಕ, ಪರಸ್ಪರ ಪ್ರೇಮ ವಿಶ್ವಾಸಗಳಲ್ಲೇ ಮನುಷ್ಯ ಸಮಾಜದ ಸುಖಶಾಂತಿ ಇರುವುದು ಎಂದು ರುಜುವಾತುಪಡಿಸುವ ಹಾಗೂ ಹರಿಹರ ಹಗರಣಕ್ಕೆ ಪರದೆ ಎಳೆಯುವಂತೆ ಹರಿಹರ ಮೈತ್ರಿಯನ್ನು ಸಾದರ ಪಡಿಸುವ ಮಹತ್ವಾಕಾಂಕ್ಷೆಯ ಕೃತಿಯಾಗಿದೆ. ಶಿವನ ಭಕ್ತನಾದ ಬಾಣಾಸುರನ ಮಗಳು ಉಷೆಗೂ, ಕೃಷ್ಣನ ಮೊಮ್ಮಗನಾದ ಅನಿರುದ್ಧನಿಗೂ ವಿವಾಹವಾಗುವುದು ಹರಿಹರ ಮೈತ್ರಿಯನ್ನು ಸಾಂಕೇತಿಕವಾಗಿ ಸೂಚಿಸುವ ವಿಧಾನವಷ್ಟೆ. ಆದರೆ ಕೃತಿ ಅಷ್ಟಾದಶವರ್ಣನೆಯ ಅಷ್ಟಪದಿಯ ಹಿಡತಕ್ಕೆ ಒಳಗಾಗಿ ಕೆಲವು ಕಡೆ ಏಕತಾನಕ್ಕೆ ಒಳಗಾಗಿದ್ದರೂ ಇದರಲ್ಲಿ ಕನಕದಾಸರ ಕಾವ್ಯ ಪ್ರತಿಭೆ ಮಿಂಚಿದೆ.
  ಕನಕದಾಸರ ಐದನೆಯ ಕೃತಿ ನೃಸಿಂಹಸ್ತವ’ದ ಹಸ್ತಪ್ರತಿಯನ್ನು ಆರ್. ನರಸಿಂಹಾಚಾರ್ಯರು ನೋಡಿದ್ದರೂ, ಇಂದು ಅದೇನಾಯಿತು ಎಂಬುದರ ಕುರಿತು ತಿಳಿಯುವುದಿಲ್ಲ. ಈ ಕೃತಿ ಕಾಣೆಯಾಗಿದ್ದುದರ ಹಿಂದೆ ಪಟ್ಟಭದ್ರ ಹಿತಾಸಕ್ತಿಗಳ ಕೈವಾಡವನ್ನು ಗ್ರಹಿಸಬಹುದು. ಈ ಕೃತಿಯು ಬೇರೆಯಾದ ಶಿರೋನಾಮೆಯಲ್ಲಿ, ಬೇರೆ ಲೇಖಕರ ಹೆಸರಿನಲ್ಲಿ ಬೆಳಕು ಕಂಡಿರಬಹುದಾದ ಸಾಧ್ಯತೆಯನ್ನೂ ಅಲ್ಲಗಳೆಯುವಂತಿಲ್ಲ. ಒಟ್ಟಾರೆ ಈ ಕೃತಿಯು ನರಸಿಂಹನನ್ನು ಕುರಿತ ಸ್ತ್ರೋತ್ರರೂಪಿ ಕೃತಿ ಎಂದು ಊಹಿಸಬಹುದಾಗಿದೆ. ಕನ್ನಡ ಸಾರಸ್ವತಲೋಕಕ್ಕೆ ಕನಕರು ಕೊಟ್ಟ ಅಭೂತಪೂರ್ವ ಕಾಣಿಕೆಗಳೆಂದರೆ ಅವರ ಮುಂಡಿಗೆಗಳಾಗಿವೆ. ಮೇಲ್ನೋಟಕ್ಕೆ ಇವು ಬಿಡಿಸಲಾರದ ಒಗಟಿನಂತೆ ಕಂಡರೂ, ಒಡಲಲ್ಲಿ ಅತ್ಯಪೂರ್ವವಾದ ಅರ್ಥದ ಹೂರಣವನ್ನು ಹೊಂದಿವೆ. ಅಲ್ಲಮಪ್ರಭುಗಳ ಬೆಡಗಿನ ವಚನಗಳನ್ನು ನೆನಪಿಸುವ ಇವು ಕನಕದಾಸರ ಅದ್ಭುತ ಪ್ರತಿಭೆಯನ್ನು ಅನಾವರಣಗೊಳಿಸುತ್ತವೆ. ಇನ್ನು ಕನಕದಾಸರ ಕೀರ್ತನೆಗಳನ್ನು ಚರ್ಚಿಸುವುದಂತೂ ಸುಳಿಬಾಳೆ ಹಣ್ಣನ್ನು ಸುಲಲಿತವಾಗಿ ತಿಂದ ಹಾಗೆಯೆ ಸಾಹಿತ್ಯದ ಸವಿಯಾಗಿದೆ. ಇವರ ಕೀರ್ತನೆಗಳು ಆಧುನಿಕ ಕಾಲದ ಭ್ರಷ್ಟತೆ, ವ್ಯಕ್ತಿತ್ವ ಹೀನತೆ, ಸಾಮಾಜಿಕ, ಧಾರ್ಮಿಕ ಲೋಕದ ಡಂಬಾಚಾರಗಳನ್ನು ಖಂಡಿಸುತ್ತವೆ. ಪುರಂದರದಾಸ(ಉಳಿದ ದಾಸರಂತೆ)ರ ಕೀರ್ತನೆಗಳು ದೈವವನ್ನು ಕೀರ್ತಿಸುವುದು ಎಲ್ಲೆಡೆ ಕಂಡುಬರುತ್ತದೆ. ಆದರೆ ಕನಕದಾಸರ ಕೀರ್ತನೆಗಳು ಜಾತಿ ಪದ್ಧತಿ, ವೈದಿಕ ಧರ್ಮಸೇರಿದಂತೆ ಎಲ್ಲ ಧರ್ಮ-ಮತದವರ ಡಂಬಾಚಾರದ ಆಚರಣೆಗಳು, ಸಾಮಾಜಿಕ ಮೂಢನಂಬಿಕೆ, ಅನಿಷ್ಟ ಆಚರಣೆಗಳನ್ನು ನೇರವಾಗಿ ಖಂಡಿಸಿ ತರಾಟೆಗೆ ತೆಗೆದುಕೊಳ್ಳುವುದು ಕಂಡುಬರುತ್ತದೆ. ಇವು ಕೀರ್ತನೆಗಳಾಗಿರದೇ ವಿಡಂಬಣೆಗಳಾಗಿರುವುದು ಕುತೂಹಲಕರವಾದ ಅಂಶವೂ ಹೌದು. ಉದಾಹರಣೆಗೆ, ಪುರಂದರದಾಸರುತೂಗಿರೋ ರಂಗನ ತೂಗಿರೋ ಕೃಷ್ಣನ. . .’ ಎಂದು ಕೃಷ್ಣನನ್ನು ಹಾಡಿ ಹೊಗಳಿದರೆ, ಕನಕದಾಸರು `ಆರು ಬದುಕಿದರಯ್ಯ ಹರಿ ನಿನ್ನ ನಂಬಿ, ಕಲಹ ಬಾರದ ಮುನ್ನ ಕರ್ಣನೊಬ್ಬನ ಕೊಂದೆ, ಸುಲಭದಲಿ ಕೌರವನ ಮನೆಯ ಮುರಿದೆ. . .’ ಎಂದು ತರಾಟೆಗೆ ತೆಗೆದುಕೊಂಡಿದ್ದನ್ನು ಗ್ರಹಿಸುತ್ತೇವೆ.
  ಹೀಗೆ ಪ್ರತಿ ಕೀರ್ತನೆಯಲ್ಲಿಯೂ ತನ್ನ ಇಷ್ಟದೈವ ಮತ್ತು ಮನುಷ್ಯರ ವರ್ತನೆಯ ಋಣಾತ್ಮಕ ಅಂಶಗಳನ್ನು ಹಿಡಿದೆತ್ತಿ ವಿಡಂಬಿಸಿ, ಖಂಡಿಸಿ ಧನಾತ್ಮಕ ಗುಣಾಂಶಗಳನ್ನು ಎತ್ತಿ ಸಾರಿದ ಅಂಶಗಳನ್ನು ಹೊಂದಿವೆ.
  ಕನಕದಾಸರ ಕೀರ್ತನೆಗಳು ಒಂದು ಸಮಾಜದ ಅಂಕುಡೊಂಕುಗಳನ್ನು ವಿಡಂಬಿಸುತ್ತ, ಒಬ್ಬ ಸಾಮಾನ್ಯ ಭಕ್ತನು ತನ್ನ ಅಪ್ರತಿಮ ಕಾರ್ಯವೈಖರಿಗಳಿಂದ ತನ್ನ ವಿರೋಧಿಗಳನ್ನು ಗೆದ್ದಿರುವುದು, ಈ ಗೆಲುವು ಸಾಹಿತ್ಯ ರೂಪದಲ್ಲಿ ನೂರಾರು ವರ್ಷಗಳಿಂದ ಬಾಯಿಂದ ಬಾಯಿಗೆ ಹರಿದು ಜನಮಾನಸದಲ್ಲಿ ಇನ್ನೂ ಉಳಿದಿರುವುದು, ವ್ಯಾಸಕೂಟ-ದಾಸಕೂಟದ ವ್ಯವಸ್ಥೆಯಲ್ಲಿ ದಲಿತನೊಬ್ಬನ ಭಕ್ತಿಮಾರ್ಗದ ಗೆಲುವೆಂದೇ ಹೇಳಬಹುದು. * *
 1.  
https://www.youtube.com/watch?v=zYUQmT1vdR4&list=PLk-KXIdK5sBNoMO3qrca46Qgixu8ies_O&index=3
https://www.youtube.com/watch?v=qgnij3NaVm0

Leave a Reply

Your email address will not be published. Required fields are marked *

error: Content is protected !!