ಮೈಲಾರಲಿಂಗನ ಪರಮ ಭಕ್ತರು. ಧಾರ್ಮಿಕ ಪರಂಪರೆಯನ್ನು ಪಡೆದಂತಹ ಈ ಕಲೆಯು ಕುರುಬ ಜನಾಂಗದವರಲ್ಲಿ. ಗೊರವರಲ್ಲಿ ಕೆಲವರು ತಮ್ಮನ್ನು ಮೈಲಾರಲಿಂಗನಿಗೆ ಅರ್ಪಿಸಿಕೊಳ್ಳುತ್ತಾರೆ. ಇದನ್ನು ‘ಹೊರೆ ಹೊರುವುದು’ ಅಥವಾ ‘ದೇವರನ್ನು ಹೊರುವುದು’ ಎಂದು ಕರೆಯುವರು. ಸಂತಾನ ವೃದ್ಧಿ, ಕಷ್ಟ ನಿವಾರಣೆಗೆ ಈ ಹರಕೆಯನ್ನು ಮಾಡಿಕೊಳ್ಳುತ್ತಾರೆ.

ಗೊರವರ ವಿಧಿಗಳು ಮತ್ತು ದೀಕ್ಷೆ

ದೀಕ್ಷೆಗೆ ಬದ್ಧರಾದ ಗೊರವರಲ್ಲಿ ಅನೇಕ ಪ್ರಕಾರಗಳಿವೆ.

೧. ನಾಯಿ ಗೊರವರು
೨. ಕರಡಿ ಗೊರವರು
೩. ಪಾರಿ ಗೊರವರು
೪. ಮದ್ದಲಿ ಗೊರವರು
೫. ಶಿವ ಗೊರವರು
೬. ಕಿನ್ನರಿ ಗೊರವರು
೭. ಕುದುರೆಕಾರರು
೮. ಕಂಚಾವೀರರು
೯. ಬಲ್ಲಿನವರು
೧೦. ನಿಶಾನೆಯವರು
೧೧. ತ್ರಿಶೂಲದವರು

ಹೀಗೆ ಪ್ರಕಾರವಿದ್ದು, ಹಾಗೆಯೇ ಅನೇಕ ಪ್ರಕಾರದ ಗೊರವಿಯರೂ ಇರುವರು,

೧. ಸಾಮಾನ್ಯ ಮುದ್ರೆಯವರು
೨. ವಾಲಿಗೊರವಿಯರು
೩. ಚವುರದವರು
೪. ಎಲಿಚೆಂಚಿ ಚವುರದವರು
೫. ಶಿವಾರದಾಳಿಯವರು
೬. ಕಾವಂತೆಯರು

ಮೊದಲಾದವರಿದ್ದಾರೆ. ಸಾಮಾನ್ಯವಾಗಿ ಲಗ್ನಕ್ಕಿಂತ ಮೊದಲು ಗೊರವ ಅಥವಾ ಗೊರವಿಯರು ದೀಕ್ಷೆ ಪಡೆಯುವುದು ಸಂಪ್ರದಾಯವಾಗಿದೆ.

ಒಂದು ನಿರ್ದಿಷ್ಟ ದಿನದಂದು ಗೊರವರಿಗೆ ದೀಕ್ಷೆಯನ್ನು ಕೊಡಲಾಗುತ್ತದೆ. ಇದು ಮೈಲಾರಲಿಂಗನ ಸನ್ನಿಧಿಯಲ್ಲಿ ನಡೆಯುತ್ತದೆ. ಈ ಸಂದರ್ಭದಲ್ಲಿ ಅವರಿಗೆ ಕಂಬಳಿಯ ನಿಲುವಂಗಿಯನ್ನು ತೊಡಿಸುತ್ತಾರೆ. ಗಂಟೆ, ಜೋಳಿಗೆ, ಭಂಡಾರಬಕ್ಸ, ಬೆತ್ತ, ದೋಣಿ, ಡಮರು, ಶೂಲ ಮೊದಲಾದ ವಸ್ತುಗಳನ್ನು ಪೂಜಿಸಿ ಅವರಿಗೆ ನೀಡಲಾಗುತ್ತದೆ. ತ್ರಿಶೂಲವನ್ನು ಹಿಡಿಯುವಾಗ ಮತ್ತು ಇಡುವಾಗ ಮೇಲ್ಮುಖವಾಗಿರುತ್ತದೆ. ಕೆಂಪು ಬಣ್ಣದ ಮುರಗಿ ಮುಂಡಾಸು, ಕೊರಳಿಗೆ ಕವಡೆಯ ಸರಗಳನ್ನು ಧರಿಸಲಾಗುತ್ತದೆ. ಇದನ್ನು ಒಟ್ಟಾಗಿ ‘ಮುದ್ರೆ’ ಎಂದು ಕರೆಯುವರು. ನಂತರ ಅವರಿಂದ ಪ್ರತಿಜ್ನೆಯನ್ನು ಮಾಡಿಸಲಾಗುತ್ತದೆ.

ಗೊರವ ಸಂಪ್ರದಾಯವನ್ನು ಸ್ವೀಕಾರಿಸಿದವರಲ್ಲಿ ‘ಮಡಿಯವರು’ ಮತ್ತು ‘ಮೈಲಿಗೆಯವರು’ ಎಂಬ ಎರಡು ವಿಧಗಳು ಇರುವುದು. ಮೈಲಿಗೆಯವರು ಸರಳ ಆಚರಣೆಯನ್ನು ಪಾಲಿಸುವರು. ಒಂದೇ ಹೊತ್ತು ಸ್ನಾನ ಮಾಡುತ್ತಾರೆ ಮತ್ತು ನೀರು ಸಿಗದಿದ್ದ ಊರುಗಳಲ್ಲಿ ‘ಮುದ್ರೆ’ಯನ್ನು ತೊಳೆಯಲು ಒಂದೇ ತಂಬಿಗೆ ನೀರು ಸಾಕಾಗುತ್ತದೆ. ಬೇರೆಯವರಿಂದ ಎಲೆ-ಅಡಿಕೆ, ಬೀಡಿ ಸಿಗರೇಟು ಕೇಳಿ ಪಡೆಯಬಹುದು. ಮನೆಯವರು, ಮಕ್ಕಳು ಅಥವಾ ಬೇರೆಯವರು ನೀಡಿದ್ದನ್ನು ಉಣ್ಣಬಹುದು. ಆದರೆ ‘ಮಡಿಯವರು’ ತುಂಬಾ ಕಟ್ಟುನಿಟ್ಟು. ದಿನನಿತ್ಯ ತಪ್ಪದೆ ಎರಡು ಹೊತ್ತು ಸ್ನಾನ ಮಾಡಿ ಮೂರು ಹೊತ್ತು ಪೂಜೆ ಮಾಡುತ್ತಾರೆ. ಭಕ್ತರ ಮನೆಯಲ್ಲಿ ದೋಣಿ ತುಂಬುವ ಕಾರ್ಯಕ್ರಮವಿದ್ದರೆ ತಾವೇ ಅಡಿಗೆ ಮಾಡಿ ದೇವರಿಗೆ ನೈವೇದ್ಯ ಅರ್ಪಿಸಬೇಕು. ಯಾರನ್ನು ಮುಟ್ಟುವುದಿಲ್ಲ. ಬೇರೆಯ ಕಡೆಗಳಲ್ಲಿ ನೀರು ಆಹಾರ ಸೇವಿಸಬಾರದು ಎಂಬ ನಿಷೇಧಗಳಿವೆ.

ಗೊರವರ ವೇಷಭೂಷಣ

ಕಂಬಳಿಯ ಕುಲಾವಿ, ಕವಡೆ ಸರ, ಹೆಗಲಲ್ಲಿ ಜೋಳಿಗೆ, ದೋಣಿ, ಭಂಡಾರಬಕ್ಸ, ಗಂಟೆ, ತ್ರಿಶೂಲ, ನಾಗಬೆತ್ತ, ಡಮರು ಇವುಗಳು ಸಾಮಾನ್ಯವಾದ ಸಲಕರಣೆಗಳಾಗಿರುವುದು. ಕರಡಿ ಗೊರವರು ಕವಡೆಯ ದೊಡ್ಡ ಸರಗಳನ್ನು ಧರಿಸಿದರೆ ಇನ್ನು ಕೆಲವರು ಒಂದೆರಡು ಕವಡೆಗಳನ್ನು ಮಾತ್ರ ಧರಿಸುತ್ತಾರೆ. ಇವರು ಕರಡಿಯ ಕೂದಲು ಸಹಿತವಾದ ಚರ್ಮದ ಟೊಪ್ಪಿಯನ್ನು ಧರಿಸುತ್ತಾರೆ. ಕೈಯಲ್ಲಿ ಕೊಳಲು ಇರುತ್ತದೆ. ಗೊರವರು ನುಡಿಸುವಂತಹ ವಾದ್ಯವನ್ನು ‘ಪಾರಿ’ ಎಂದು ಕರೆಯುವರು. ತಗಡಿನ ಎರಡು ಮೂರು ಗಂಟೆಗಳನ್ನು ಉದ್ದವಾದ ಕಟ್ಟಿಗೆಯೊಂದಕ್ಕೆ ಸಾಲಾಗಿ ಕಟ್ಟಿ ಅದನ್ನು ಹಗ್ಗದಿಂದ ಬಿಗಿದು ಹೆಗಲ ಮೇಲಿಂದ ಕೆಳಕ್ಕೆ ಇಳಿ ಬಿಟ್ಟಿರುತ್ತಾರೆ. ಇದನ್ನು ಪಾರಿ ಗೊರವರು ಮಾತ್ರ ಧರಿಸುತ್ತಾರೆ. ಇದೇ ರೀತಿ ಕಿನ್ನರಿ ಗೊರವ ‘ಕಿನ್ನರಿ’ಯನ್ನು, ಮದ್ದಲೆ ಗೊರವ ‘ಮದ್ದಲೆ’ಯನ್ನು ಪಡೆದಿರುತ್ತಾನೆ. ಘೋಳ, ತುಂತುಣಿ, ತಾಳ, ಕಾಲ್ಗೆಜ್ಜೆ ಇವುಗಳು ಗೊರವರ ವೇಷಭೂಷಣವಾಗಿರುವುದು.

ಗೊರವರ ಕುಣಿತದ ಪ್ರಕಾರಗಳು

೧. ಕುದುರೆಕಾರರು. ೨. ಕಾರಣಿಕದ ಗೊರವರು. ೩. ಕಂಚಾವೀರರು

ಗೊರವರ ಕುಣಿತ

ಹಬ್ಬ, ಜಾತ್ರೆಯ ಸಂದರ್ಭದಲ್ಲಿ ಅಲ್ಲದೇ ಆಹ್ವಾನಿಸುವ ಭಕ್ತರ ಮನೆಗಳಲ್ಲಿ ಈ ಕುಣಿತ ನೆರವೇರುತ್ತದೆ. ಹೊಸಮನೆ ಕಟ್ಟಿದ ಭಕ್ತರು ಗೊರವರನ್ನು ಆಹ್ವಾನಿಸುತ್ತಾರೆ. ಈ ಸಂದರ್ಭದ ಕುಣಿತವನ್ನು ‘ಮಾಣಿಸೇವೆ’ ಅಥವಾ ‘ಒಗ್ಗಸೇವೆ’ ಎಂದು ಕರೆಯಲಾಗುತ್ತದೆ. ಹೊಸ ಮನೆಯಲ್ಲಿ ನಡುವೆ ಹಾಸಿದ ಕರಿಯ ಕಂಬಳಿಯ ಮೇಲೆ ಪುಟ್ಟ ‘ದೋಣಿ’ಗಳಲ್ಲಿ ಹಾಲು ತುಂಬಿಡುತ್ತಾರೆ. ಬಾಳೆಹಣ್ಣು, ಕಜ್ಜಾಯಗಳು ರಸಾಯನವನ್ನು ತುಂಬಿಡುವುದುಂಟು. ನೈವೇದ್ಯವನ್ನು ಪೂಜಿಸಿದ ನಂತರ ಗೊರವರು ಲಯ ಬದ್ದವಾಗಿ ಹೆಜ್ಜೆಯನ್ನು ಹಾಕುತ್ತಾರೆ. ದೈವದ ಮಹಿಮೆಯನ್ನು ಹೇಳುತ್ತಾ ಕುಣಿತದ ನಡುವೆಯೇ ಅಂಗಾತ ಹಾಗೇ ಮಲಗಿದಂತೆ ಮಾಡಿ ಹಾಲನ್ನು ಕುಡಿಯುತ್ತಾರೆ. ದಕ್ಷಿಣ ಕರ್ನಾಟಕದ ಭಾಗದಲ್ಲಿ ಇದನ್ನು ‘ಮಣೇವು ಸೇವೆ’ , ‘ಮಣೇವು ಕುಣಿತ’ ಎಂದು ಕರೆಯುವರು. ಸಾರ್ವಜನಿಕವಾಗಿ ಪ್ರದರ್ಶಿಸುವಂತಹ ಗೊರವರ ಕುಣಿತವು ಸೊಗಸಾಗಿರುವುದು. ಎತ್ತರದ ಕಟ್ಟೆ, ಗದ್ದುಗೆ ಅಥವಾ ವೇದಿಕೆಯ ಮೇಲೆ ಸಾಲಾಗಿ ನಿಲ್ಲುವ ಹತ್ತು ಹನ್ನೆರಡು ಜನ ಗೊರವರು ಈ ಕಲಾ ತಂಡದಲ್ಲಿ ಇರುತ್ತಾರೆ. ಮೊದಲು ದೈವದ ಸ್ತುತಿಯನ್ನು ಮಾಡುವರು. ನಂತರ ಕೊಳಲನ್ನು (ಪಿಳ್ಳಂಗೋವಿ) ಊದಿ ತನ್ನ ಡಮರುಗವನ್ನು ಢಗ ಢಗ ಢಗ ಢಗ ಎಂದು ಬಡಿದು ನಿಲ್ಲುತ್ತಾನೆ. ನಂತರ ಒಟ್ಟಾಗಿ ದೈವದ ಸ್ತುತಿಯು ಆರಂಭವಾಗುತ್ತದೆ. ಸದ್ದಿಗೆ ತಕ್ಕಂತೆ ಮುಂದೆಜ್ಜೆ, ಹಿಂದೆಜ್ಜೆ ಹಾಕುತ್ತಾ ಕುಣಿತ ಹಾಕುತ್ತಾರೆ.

ಗೊರವರ ಕಥನ ಮೇಳ

ಗೊರವರನ್ನು ಆಹ್ವಾನಿಸುವಂತಹ ಭಕ್ತರ ಮನೆಯಲ್ಲಿ ಇಡೀ ರಾತ್ರಿ ಕಥೆ ನಡೆಸಿಕೊಂಡು ಬರುವುದು ಇವರ ವೃತ್ತಿ. ಮೈಲಾರಲಿಂಗನ ಕಾವ್ಯವಲ್ಲದೆ ಇತರೆ ಕಥೆಗಳನ್ನು ಹೇಳುತ್ತಾರೆ. ದಕ್ಷಿಣಭಾಗದ ‘ಮುಡುಕು ತೊರೆ’ ಕ್ಷೇತ್ರಕ್ಕೆ ಸೇರಿದಂತಹ ಗೊರವರು ಮಾದೇಶ್ವರ, ಮಂಟೇಸ್ವಾಮಿ ಕಥನಗಳನ್ನೂ ಹಾಡುವುದುಂಟು. ಹಿನ್ನೆಲೆಗೆ ಡಮರುಗ ವಾದ್ಯವನ್ನು ಬಳಸುವರು. ಕಂಚಿನ ತಾಳ, ದಮ್ಮಡಿ, ಕೈಗೆ ಗೆಜ್ಜೆ ಕಟ್ಟಿಕೊಳ್ಳುವುದು ಉಂಟು. ಈ ರೀತಿಯಾಗಿ ಗೊರವರು ಕಾವ್ಯ ಕಥನ ರೂಪವನ್ನು ಉತ್ತಮವಾಗಿ ನಿರೂಪಿಸುವ ಕ್ರಮವು ಸೊಗಸಾಗಿರುವುದು.

ವಿಶ್ವವಿಖ್ಯಾತ ಶ್ರೀಕ್ಷೇತ್ರ ಮೈಲಾರದಲ್ಲಿ ನಡೆಯುವ ಕಾರ್ಣಿಕ :
ಪ್ರತಿ ವರ್ಷ ಇಂದಿನ ವಿಜಯನಗರ ಜಿಲ್ಲೆ, ಹೂವಿನ ಹಡಗಲಿ ತಾಲ್ಲೂಕು ಮೈಲಾರದ ಶ್ರೀ ಮೈಲಾರಲಿಂಗೇಶ್ವರರ ಕಾರ್ಣೀಕೋತ್ಸವದಂದು ಗೊರವಯ್ಯನವರು ನುಡಿಯುವ ಒಂದು ಕಾರ್ಣಿಕ ನುಡಿಗಾಗಿ ಲಕ್ಷಾಂತರ ಜನರು ಮೈಲಾರಕ್ಕೆ ಬರುತ್ತಾರೆ.
ಕಾರ್ಣೀಕ ನುಡಿಯುವ ಗೊರವಯ್ಯನವರು ವ್ರತಾಚರಣೆ ಮಾಡಿ, ಬಿಲ್ಲನೇರಿ ದೈವವಾಣಿಯನ್ನು ನುಡಿಯುತ್ತಾರೆ.

Leave a Reply

Your email address will not be published. Required fields are marked *

error: Content is protected !!