
ಭರತ ಭೂಮಿಯಲ್ಲಿ ಹಲವಾರು ಪುಣ್ಯ ಪುರುಷರು ಭಕ್ತಿ, ತ್ಯಾಗ, ಸೇವೆ, ಬಲಿದಾನಗಳ ಮೂಲಕ ದೇವತ್ವಕ್ಕೇರದ್ದಾರೆ ಹಲವು ಸಾಧಕರ ಜೊತೆಗೆ ಸಾಧಿಕೆಯರೂ ಸೇರಿದ್ದಾರೆ ಅಂಥವರ ಸಾಲಿನಲ್ಲಿ ಎದ್ದು ನಿಲ್ಲುವವಳೇ ಇಟಗಿಯ ಭೀಮವ್ವ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಚಿಕ್ಕ ಗ್ರಾಮ ಇಟಗಿ ಇದು ಶಾಂತಗಿರಿ ಮಲ್ಲಸರ್ಜ ದೇಸಾಯರ ಆಡಳಿತಕ್ಕೆ ಒಳಪಟ್ಟಿತ್ತು ಇಟಗಿಯ ಭೀಮವ್ವಳ ಪೂರ್ವದಲ್ಲಿಯೇ ಇಲ್ಲಿ ಧರ್ಮರ ಮಠವಿತ್ತು ಇದನ್ನು “ಧರ್ಮರ ಸದರ” (ದೇವರ ಪಡಸಾಲೆ) ಎಂತಲೂ ಕರೆಯುತ್ತಾರೆ ಈ ದೇವರ ಪಡಸಾಲೆಗೆ ಉಣ್ಣೆ ನೇಕಾರ ಧರ್ಮಪ್ಪ ಎಂಬುವವನು ಪೂಜಾರಿ ಅವನಿಗೆ ಹನುಮವ್ವ ಎಂಬುವವಳು ಪತ್ನಿಯಾಗಿದ್ದಳು. ಧರ್ಮಪ್ಪನ ಪೂರ್ವಜರು ಸೀತಿಮನಿಯ ಚಂದ್ರಗಿರಿಯವರು ಅಲ್ಲಿಂದ ರೋಣ ತಾಲ್ಲೂಕಿನ ಮಲ್ಲಾಪೂರಕ್ಕೆ ಬಂದು ಕೆಲವು ವರ್ಷ ನೆಲೆಸಿ ನಂತರ ಇಟಗಿಗೆ ಬರುತ್ತಾರೆ ಧರ್ಮಪ್ಪ ಪೂಜಾರಿಯ ಭವಿಷ್ಯ ಹೇಳಿಕೆ ಸುತ್ತಮುತ್ತೆಲ್ಲ ಪ್ರಸಿದ್ಧಿ ಧರ್ಮರ ಸ್ಥಳಕ್ಕೆ ಬಂದ ಭಕ್ತರ ಸಂಕಟಗಳನ್ನು ದೇವರ ಹೇಳಿಕೆಯಿಂದ ಪರಿಹರಿಸುತ್ತಿದ್ದನು.ಧರ್ಮಪ್ಪನಿಗೆ ಸಕ್ರೆಪ್ಪನೆಂಬ ಗಂಡುಮಗ ಜನಿಸಿದನು ಅವನು ಯವ್ವನಕ್ಕೆ ಬುರುತ್ತಿದ್ದಂತೆ ಭೂವವ್ವ ಎಂಬ ಕನ್ಯೆಯೊಂದಿಗೆ ಮದುವೆ ಮಾಡಿದನು ಮುಂದೆ ಸಕ್ರೆಪ್ಪನೂ ತಂದೆಯನ್ನು ಮೀರಿಸುವ ದೇವರ ಹೇಳಿಕೆ ಹೇಳತೊಗಿದನು ಇದರಿಂದ ಅವನಿಗೆ ದೇವರ ಸಮಾನವಾದ ಗೌರವವಿತ್ತು ದೈವಲೀಲೆ ಎಂಬಂತೆ ಅವನಿಗೆ ಮಕ್ಕಳಾಗಲಿಲ್ಲ. ಮಕ್ಕಳಿಗಾಗಿ ಎರಡನೆ ಮದುವೆಯನ್ನೂ ಮಾಡಿಕೊಳ್ಳಲಿಲ್ಲ. ಅವನು ಮಲ್ಲಾಪುರದ ಸೋಮಣ್ಣ ಎಂಬುವವನನ್ನು ದತ್ತು ತೆಗೆದುಕೊಂಡನು ಅವನು ವಯಸ್ಸಿಗೆ ಬರುತ್ತಿದ್ದಂತೆ ಗದಗ ಹತ್ತಿರದ ಕೊಪ್ಪ ಗ್ರಾಮದ ಬಿಲ್ಲಾರ ರಾಯಪ್ಪನ ಮಗಳು ಹನುಮವ್ವಳೊಂದಿಗೆ ಮದುವೆ ಮಾಡಿದನು ಸೋಮಣ್ಣನೂ ತನ್ನ ಪೂರ್ವಜರಂತೆ ದೇವರ ಹೇಳಿಕೆ ಮುಂದುವರೆಸಿದನು ಧರ್ಮದ ಗದ್ದುಗೆಗೆ ಜನರು ಬರಹೋಗುವುದು ಹೆಚ್ಚಾಯಿತು ಪರ ಊರುಗಳಿಂದ ಬರುವ ಭಕ್ತರಿಗಾಗಿ ಅನ್ನಪ್ರಸಾದ ಆರಂಭಿಸಿದನು.

ಸೋಮಣ್ಣ-ಹನುಮವ್ವ ದಂಪತಿಗಳಿಗೆ ನಾಲ್ಕು ಜನ ಗಂಡು ಮಕ್ಕಳು ಅವುಗಳಲ್ಲಿ ಎರಡು ಮಕ್ಕಳು ಚಿಕ್ಕಂದಿನಲ್ಲಿಯೇ ತೀರಿಕೊಂಡವು ಉಳಿದ ಮಕ್ಕಳಲ್ಲಿ ಹಿರಿಯವನೆ ಅರ್ಜುನಪ್ಪ ಎರಡನೆಯ ಸಕ್ರಪ್ಪ. ಹೆಣ್ಣು ಮಕ್ಕಳು ಹುಟ್ಟಲಿಲ್ಲ. ಇದರಿಂದ ಬಂಜೆ ಎಂಬ ಪಟ್ಟ ದೊರೆಯುವಂತಾಯಿತಲ್ಲ ಎಂದು ಕೊರಗತೊಡಗಿದಳು ಹೆಣ್ಣು ಸಂತಾನಕ್ಕಾಗಿ ಬಾದಾಮಿಯ ಬನಶಂಕರಿಗೆ ನಡೆದು ಕೊಳ್ಳತೊಡಗಿದಳು ಪ್ರತಿ ಹುಣ್ಣಿಮೆಗೆ ಕಾಲ್ನಡಿಗೆಯಿಂದ ಬನಶಂಕರಿಯ ದರ್ಶನ ಪಡೆಯುವ ವ್ರತ ಹಿಡಿದಳು. ಬನಶಂಕರಿ ಮಂದಿರದ ಪೌಳಿಯಲ್ಲಿ ಕುಳಿತು ಹೆಣ್ಣು ಮಗುವಿಗಾಗಿ ಹಲಬುತ್ತಿದ್ದಳು ಭಕ್ತಿಯಿಂದ ಕನ್ಮುಚ್ಚಿ ಕುಳಿತಾಗ ಯಾರೋ ತಲೆಯಮೇಲೆ ಕೈಯಾಡಿಸಿದಂತಾಯಿತಂತೆ ಮೈ ನಡುಗಿದ ಅನುಭವವಾಯಿತು ದೇವಿ ಹಗಲು ಕನಸಿನಲ್ಲಿ ಬಂದಂತಾಗಿ ಮೊದಲು ಇಟಗಿಯಲ್ಲಿ ಕೊಟ್ಟಿಗೆಯವರ ಮನೆಯ ತೊಟ್ಟಿಲು ತೂಗೂವುದು ಆ ಕಾರ್ಯಕ್ಕೆ ನೀನು ಹೋಗಿ ಬಂದ ನಂತರ ನಿನ್ನ ಗರ್ಭ ನಿಲ್ಲುವುದು ಎಂದು ಹೇಳಿದ ಹಾಗಾಯಿತಂತೆ ಆ ಕನಸಿನ ಮಾತು ಸುಳ್ಳಾಗಲಿಲ್ಲ ಒಂದೆರಡು ತಿಂಗಳಲ್ಲಿ ಹನುಮವ್ವಳಿಗೆ ಮುಟ್ಟುನಿಂತಿತು. ನವಮಾಸಗಳು ತುಂಬಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು ಅವಳಿಗೆ “ಭೀಮವ್ವ” ಎಂದು ನಾಮಕರಣ ಮಾಡಿದರು. ಹರಕೆ ಹೊತ್ತಂತೆ ಕೂಸಿಗೆ ಒಂಭತ್ತು ತಿಂಗಳು ತುಂಬುತ್ತಿದ್ದಂತೆ ಬನಶಂಕರಿಯ ಪುಣ್ಯಕ್ಷೇತ್ರಕ್ಕೆ ಬಂದು ಕೂಸಿನ ಜವಳ ತೆಗೆದರು ಬಿದಿಗೆಯ ಚಂದ್ರನಂತೆ ಭೀಮವ್ವ ದಿನದಿಂದ ದಿನಕ್ಕೆ ಬೆಳೆಯತೊಡಗಿದಳು, ಬಾಲ್ಯದಲ್ಲಿ ಸಹಜ ಲೀಲೆಗಳನ್ನು ತೋರುತ್ತ ಧರ್ಮರ ಗದ್ದುಗೆಯ ಕುರಿತು ಅಂತರಂಗದಲ್ಲಿ ಭಕ್ತಿಯ ಆಶಾಗೋಪುರ ಕಟ್ಟತೊಡಗಿದಳು ಹಂತ ಹಂತವಾಗಿ ಅವಳು ಧಾರ್ಮಿಕ ಬದುಕಿಗೆ ಹತ್ತಿರ ಹತ್ತಿರವಾಗತೊಡಗಿದಳು ಧರ್ಮದ ಗದ್ದುಗೆಯ ಸೇವೆ ಅವಳ ದಿನನಿತ್ಯದ ಪ್ರಮುಖ ದಿನಚರಿಗಳೊಂದಾಯಿತು ವಯಸ್ಸಿಗೆ ಮೀರಿದ ಪ್ರೌಢ ವಿಚಾರಗಳು ಅವಳಲ್ಲಿ ಮೊಳಕೆವೊಡೆಯ ತೊಡಗಿದವು ಅವಳ ಈ ತೀವ್ರ ಬೆಳವಣಿಗೆಯನ್ನು ಗಮನಿಸಿದ ಅವಳ ತಾಯಿ ಹನುಮವ್ವ ತನ್ನ ತಮ್ಮನಿಗೆ ಕೊಡುವ ನಿರ್ಧಾರಕ್ಕೆ ಬಂದಳು ಆದರೆ ಭೀಮವ್ವಳಿಗೆ ಸಂಸಾರ ಬಂಧನದಲ್ಲಿ ಸಿಲುಕಿಸಿಕೊಳ್ಳುವ ಮನಸ್ಸಿರಲಿಲ್ಲ ಇದರಿಂದ ತಂದೆ-ತಾಯಿಗಳಿಗೂ ಮತ್ತು ಹನುಮವ್ವಳ ತವರಿನವರಿಗೂ ಚಿಂತೆಯಾಯಿತು ಪರಿಪರಿಯಾಗಿ ಬೇಡಿ ಕಾಡಿ ಭೀಮವ್ವಳನ್ನು ಮದುವೆಗೆ ಒಪ್ಪಿಸುವುದಕ್ಕೆ ಮುಂದಾದರೂ ಮನೆಯವರ ಕಿರಿಕಿರಿಗೆ ಬೇಸತ್ತು ಭೀಮವ್ವ ಕೆಲವು ಷÀರತ್ತುಗಳನ್ನು ಮುಂದಿಟ್ಟಳು ಮದುವೆಯಾದರೂ ತನ್ನನ್ನು ಧರ್ಮದ ಗದ್ದುಗೆ ಸೇವೆಯಿಂದ ದೂರ ಮಾಡುವಂತಿಲ್ಲಗಂಡನ ಮನೆಯವರು ಯಾವತ್ತೂ ಅಡ್ಡಿಪಡಿಸಬಾರದು ದೇವರ ಸೇವೆಗೆಂದು ನನಗೆ ಬರಬೇಕೆಂದಾಗ ತವರುಮನೆಗೆ ಬಂದು ಧರ್ಮದ ಗದ್ದುಗೆ ಸೇವೆ ಮಾಡಿಕೊಂಡು ಹೋಗಲು ಅನುಮಾಡಿಕೊಡಬೇಕು ಇದಕ್ಕೆ ತಪ್ಪಿದರೆ ನಾನು ಶಾಶ್ವತವಾಗಿ ತವರೂರಲ್ಲಿಯೇ ಉಳಿದು ಧರ್ಮದಗದ್ದುಗೆ ಸೇವೆ ಮಾಡಿಕೊಂಡಿರುವೆ ಎಂದು ಕಡ್ಡಿಮುರಿದಂತೆ ಹೇಳಿಬಿಟ್ಟಳು. ಅವಳ ಷÀರತ್ತಿಗೆ ಎರಡೂ ಮನೆಯವರು ಒಪ್ಪಕೊಂಡರು ಒಂದು ಶುಭ ಮುಹೂರ್ತ ದಿನದಂದು ಇಟಗಿ ಮತ್ತು ಕೊಪ್ಪ ಗ್ರಾಮದ ಹಿರಿಯರನ್ನು ಸೇರಿಸಿ ಅವರ ಎದುರು ಭೀಮವ್ವಳ ಮದುವೆ ನಿಶ್ಚಿಯಿಸಿದರು. ಸೋಮಣ್ಣನ ಹಿರಿಯ ಮಗ ಸಕ್ರಪ್ಪನ ಉಸ್ತುವಾರಿಯಲ್ಲಿ ಸೋದರಮಾವ ಒಗೆಪಾಡಪ್ಪನೊಂದಿಗೆ ಸರಳವಾಗಿ ಮದುವೆಯೂ ನಡೆಯಿತು.
ಭೀಮವ್ವಳ ಗಂಡನ ಮನೆಯಲ್ಲಿಯೂ ಉಣ್ಣೆ ನೇಕಾರಿಕೆಯಿತ್ತು ತನ್ನ ಮನೆಯಲ್ಲಿ ಅನುಭವ ಪಡೆದ ಭೀಮವ್ವ ಮನೆಯ ಎಲ್ಲ ಕೆಲಸಗಳನ್ನು ಅಚ್ಚುಕಟ್ಟಾಗಿ ಮುಗಿಸಿ ಉಣ್ಣೆ ನೂಲುವುದಕ್ಕೆ ಕುಳಿತು ಕೊಳ್ಳುತ್ತಿದ್ದಳು ಭೀಮವ್ವಳ ವಿಶ್ರಾಂತಿಯಿಲ್ಲದ ದುಡಿಮೆ ಎಲ್ಲರಿಗೂ ಮೆಚ್ಚುಗೆಯಾಗಿತ್ತು ಗಂಡನಂತೂ ಅವಳ ಬಗ್ಗೆ ಪ್ರೇಮಿಯಾಗಿದ್ದನು ಧರ್ಮಗುರುವಿನ ಸೇವೆಯ ಹುಚ್ಚು ಹಚ್ಚಿಕೊಂಡ ಭೀಮವ್ವಳು ಇದ್ದಕ್ಕಿದ್ದಂತೆ ರಾತ್ರೋರಾತ್ರಿ ಕೊಪ್ಪದಿಂದ ಹೊರಟು 8-10 ಕಿ.ಮೀ ದೂರದ ಇಟಗಿಗೆ ಬಂದು ಬಿಡುತ್ತಿದ್ದಳು. ಮರುದಿನ ಬೆಳಿಗ್ಗೆ ಮತ್ತೆ ಅವಳನ್ನು ಗಂಡನ ಮನೆ ಕೊಪ್ಪಕ್ಕೆ ಕರೆತರುತ್ತಿದ್ದರು ಇದು ನಿರಂತರವಾಗಿ ನಡೆದೇ ಇತ್ತು ಭೀಮವ್ವಳ ವರ್ತನೆ ಗಂಡನ ಮನೆಯವರಿಗೆ ಸಾಮಾನ್ಯವಾಗಿದ್ದರೂ ಅಕ್ಕಪಕ್ಕದ ಮನೆಯವರು ಇದನ್ನೇ ದೊಡ್ಡ ವಿಷಯ ಮಾಡಿಕೊಂಡು ಭೀಮವ್ವ ರಾತ್ರಿಯಲ್ಲಿ ಎಲ್ಲಿಗೋ ಹೋಗುತ್ತಿದ್ದಾಳೆಂದು ಅವಳ ಶೀಲದ ಬಗ್ಗೆ ಸಂಶಯಗೊಂಡರು ಇನ್ನು ಕೆಲವರು ಅವಳಿಗೆ ದೆವ್ವ ಹಿಡಿದಿದೆಯೆಂದರು ಕೊಪ್ಪದ ಆಂಜನೇಯ ಮಂದಿರದ ಪೂಜಾರಿ ಸೀರಪ್ಪ ಅವಳ ಚಾರಿತ್ರ್ಯವಧೆಗೆ ಮುಂದಾದನು ಅವನು ಮಂತ್ರ, ತಂತ್ರ, ಮಾಟ, ಚೀಟಿ, ಚಿಪಾಟಿ ಮಾಡುವಲ್ಲಿ ಪ್ರಸಿದ್ಧನಾಗಿದ್ದನು ಇದರಿಂದ ಅವನನ್ನು ಹಾಕಿಕೊಳ್ಳುವ ಧೈರ್ಯ ಯಾರಿಗೂ ಇರಲಿಲ್ಲ. ಅವನು ಹೇಳಿದ್ದೇ ಆಟವಾಗಿತ್ತು ಇದರಿಂದ ಬಿಲಾರ ಮನೆತನದ ಮಾನ ಬೀದಿಪಾಲು ಆಗುವಂತಾಗಿತ್ತು ಗಂಡನ ಮನೆಯವರಿಗೆ ಭೀಮವ್ವಳ ಭಕ್ತಿ, ಧರ್ಮದ ಗದ್ದುಗೆಯ ಸೇವೆ ತಿಳಿದಿತ್ತು ಅವರಾರೂ ಅವಳ ಮೇಲೆ ಶಂಕಿಸುವ ಹಾಗಿರಲಿಲ್ಲ ಆದರೆ ಜನರ ಬಾಯಿ ಮುಚ್ಚುವುದು ಹೇಗೆ?
ಸೀರಪ್ಪ ಭೀಮವ್ವಳಿಗೆ ನಿಜವಾಗಿಯೂ ದೆವ್ವ ಹಿಡಿದಿದೆ ಅದನ್ನು ಬಿಡಿÀಸಬೇಕು ಎಂದು ಮಾವ ಸೋಮಣ್ಣನನ್ನು ಒಪ್ಪಿಸಿದನು ಒಂದುದಿನ ಭೀಮವ್ವಳಿಗೆ ತಿಳಿಯದಂತೆ ದೆವ್ವ ಬಿಡಿಸುವ ಎಲ್ಲ ವ್ಯವಸ್ಥೆಗಳನ್ನು ಮಾಡಲಾಯಿತು ಭೀಮವ್ವ ತನ್ನ ಗಂಡನೊಂದಿಗೆ ಕೋಣೆ ಸೇರುತ್ತಿದ್ದಂತೆ ಅವರೆಲ್ಲರು ಹೊರಗಿನಿಂದ ಕೀಲಿ ಹಾಕಿದರು ಹೊರಗೆ ನಸುಕಿನವರೆಗೆ ದೆವ್ವ ಬಿಡಿಸುವ ಪೂಜೆಗಳು ನಡೆದವು ನಸುಕಿನಲ್ಲಿ ಬಾಗಿಲ ಕೀಲಿ ತೆಗೆದು ನೋಡಲಾಗಿ ಅಲ್ಲಿ ಭೀಮವ್ವ ಇರಲಿಲ್ಲ ಅವಳು ಮಾಯವಾಗಿರುವುದನ್ನು ಕಂಡು ಎಲ್ಲರೂ ದಂಗಾಗಿ ಹೋದರು ಕೋಣೆಯಲ್ಲಿ ಇಲ್ಲದ ಭೀಮವ್ವಳಿಗಾಗಿ ಹುಡುಕಾಟ ನಡೆಸಿದರು ಅವಳ ಗಂಡ ಒಗೆದಾಡಪ್ಪನನ್ನು ಕೇಳಲಾಗಿ ಅವಳು ಎಲ್ಲಿ ಹೋಗಿದ್ದಾಳೆಂದು ನನಗೆ ಗೊತ್ತಿಲ್ಲ. ಅವಳು ಸಾಮಾನ್ಯವಾಗಿ ಧರ್ಮರ ಗದ್ದುಗೆ ಪೂಜೆಗೆ ಇಟಗಿಗೆ ಹೋಗಿರಬಹುದೆಂದು ಸಹಜವಾಗಿ ಉತ್ತರಿಸಿದನು. ಅದನ್ನು ಖಾತ್ರಿ ಪಡಿಸಲು ಊರ ಜನರೊಂದಿಗೆ ಸೀರಪ್ಪನು ಸೂರ್ಯ ಉದಯಕ್ಕೂ ಮೊದಲು ಇಟಗಿಗೆ ತಲುಪಿದನು ಅಲ್ಲಿ ಬಂದು ನೋಡುತ್ತಾರೆ ಭೀಮವ್ವ ಪೂಜೆಯಲ್ಲಿ ಮಗ್ನಳಾಗಿದ್ದಾಳೆ ಇದನ್ನು ಕಂಡ ಸಿರಪ್ಪನ ಎದೆ ಝಲ್ಲೆಂದಿತು ಸೀರಪ್ಪನನ್ನು ನೋಡುತ್ತ ಭೀಮವ್ವ “ಇನ್ನು ಮೂರು ದಿನದಾಗ ಈ ಪೂಜಾರಿ ಸೀರಪ್ಪನ ಹಗ್ಗ ಹರಿದು ಹರಣ ಹಾರುತ್ತದೆ” ಎನ್ನುತ್ತಿದ್ದಂತೆ ಕೂಡಿದ ಜನ ಗಡಗಡನೇ ನಡುಗಿದರು.

ಭೀಮವ್ವ ಅಂದೇ ಕೊಪ್ಪದ ಜನರೊಡನೆ ಗಂಡನ ಮನೆಗೆ ಮರಳಿದಳು ಎರಡು ರಾತ್ರಿ ಕಳೆದರೂ ಬೇರೆಲ್ಲಿಗೂ ಹೋಗಲಿಲ್ಲ ಇದರಿಂದ ಸೀರಪ್ಪನು ಹಾಕಿದ ಮಂತ್ರದಫಲವಿದು ಎಂದು ಜನರಂದುಕೊಂಡರು ಮೂರನೆಯ ದಿನ ಸೀರಪ್ಪ ಇದ್ದಕ್ಕಿದ್ದಂತೆ ಸಾವನಪ್ಪಿದನು ಭೀಮವ್ವಳ ಶಾಪಕ್ಕೆ ಪೂಜಾರಿ ಸತ್ತನೆಂದು ಜನರಿಗೆ ಖಾತ್ರಿಯಾಯಿತು ಭೀಮವ್ವ ಇದಾವುದರ ಪರಿವೇ ಇಲ್ಲದವಳಂತೆ ಉಣ್ಣೆ ನೂಲತೊಡಗಿದಳು ಭೀಮವ್ವ ತಾನು ನೂಲುವುದಲ್ಲದೆ ಅನೇಕರಿಗೆ ನೂಲುವುದನ್ನು ಹೇಳಿಕೊಡುತ್ತಿದ್ದಳು ಇದು ಅವರ ಜೀವನೋಪಾಯಕ್ಕೆ ದಾರಿಯಾಗುತ್ತಿತ್ತು ನೂಲುವಾಗ ಅನೇಕ ವೀರ, ಭಕ್ತ, ಶಿವಶರಣೆಯ ಕಥೆಗಳನ್ನು ಹೇಳುತ್ತ ರಾಟಿಯಿಂದಲೇ ಯುವತಿಯರಿಗೆ ಭಕ್ತಮಾರ್ಗ ತೋರಿಸುತ್ತಿದ್ದಳು..

4-6 ವರ್ಷಗಳ ಸಂಸಾರದ ಫಲವಾಗಿ ಭೀಮವ್ವ ಎರಡು ಹೆಣ್ಣು ಮಕ್ಕಳಿಗೆ ಜನ್ಮ ನೀಡಿದಳು. ಮಕ್ಕಳಿಗೆ ಹಿರೆಬಾಲವ್ವ ಮತ್ತು ಚಿಕ್ಕಬಾಲವ್ವ ಎಂದು ಹೆಸರಿಟ್ಟಳು ಮತ್ತೆ ಕೆಲವು ವರ್ಷಗಳಲ್ಲಿ ಇನ್ನೆರಡು ಹೆಣ್ಣು ಮಕ್ಕಳು ಜನಿಸಿದವು ಆದರೆ ಅವು ಅಲ್ಪ ವಯಸ್ಸ್ಸಿನಲ್ಲಿಯೇ ತೀರಿದವು ಮನೆಯ ಪರಂಪರೆಯಂತೆ ಇರುವ ಎರಡು ಮಕ್ಕಳನ್ನು ತನ್ನ ಸಹೋದರರಿಗೆ ಕೊಟ್ಟು ಮದುವೆ ಮಾಡಿದಳು ಬಹಳ ದಿನಗಳ ನಂತರ ಕಾಳಿಂಗ ಎಂಬ ಪುತ್ರನು ಜನಿಸಿದನು ಎಮಟು ವರ್ಷದ ವರೆಗೆ ಅವನಿಗೆ ಮಾತು ಬರಲಿಲ್ಲ ಮೂಕನಾಗಿದ್ದು ನಂತರ ಹಂತ ಹಂತವಾಗಿ ಮತು ಕಲಿತನು ಭೀಮವ್ವ ಕೆಲವು ದಿನ ಇಟಗಿಯಲ್ಲಿಯೂ ಕೆಲವು ದಿನ ಕೊಪ್ಪದಲ್ಲಿಯೂ ಇರುವುದು ನಡದೇಯಿತ್ತು ಮಗ ಕಾಳಿಂಗನಿಗೆ ವಯಸ್ಸು ತುಂಬುತ್ತಿದ್ದಂತೆ ಮದುವೆ ಮಾಡಿದಳು ಅವನು ಪ್ಯಾಟಿ ಎಂಬಲ್ಲಿ ತನ್ನ ಹೆಂಡತಿಯೊಂದಿಗೆ ವಾಸಿಸತೊಡಗಿದನು ಆದರೆ ಭೀಮವ್ವಳ ತಮ್ಮಂದಿರು ಮಾತ್ರ ಇಟಗಿಯಲ್ಲಿಯೇ ಉಳಿದರು ಕೆಲವು ವರ್ಷಗಳು ಕಳೆಯುತ್ತಿದ್ದಂತೆ ಭಯಂಕರ ಬರಗಾಲ ಬಿದ್ದಿತು ಮೇವು ತರಲು ಗಂಡನು ಬೇರೆ ಊರಿಗೆ ಹೋಗಿಬರುವ ಸಮಯದಲ್ಲಿ ಪ್ಲೇಗಿನ ಗಡ್ಡೆಗಳು ಕಾಣಿಸಿಕೊಂಡವು ಎರಡೇ ದಿನಗಳಲ್ಲಿ ತೀರಿದನು ಭೀಮವ್ವ ಕೊಪ್ಪದಲ್ಲಿಯ ಎಲ್ಲ ಆಸ್ತಿಯನ್ನು ಮೈದುನನನಿಗೆ ಬರೆದುಕೊಟ್ಟು ಇಟಗಿಯಲ್ಲಿ ಶಾಶ್ವತವಾಗಿ ಬಂದು ನೆಲೆಸಿದಳು ಅವಳು ಇಟಗಿಗೆ ಬರುತ್ತಿದ್ದಂತೆ ತನ್ನದೇ ಆದ ನೂತನ ಧರ್ಮರ ಗದ್ದುಗೆ ಸ್ಥಾಪಿಸಿಕೊಂಡಳು.

ಭೀಮವ್ವಳ ಧರ್ಮದ ಕಾರ್ಯಗಳು ಸಾಂಗವಾಗಿ ಸಾಗಿದವು ಆದರೆ ತನ್ನ ಕುಲ ಕಸುಬು ಉಣ್ಣೆ ನೂಲುವುದನ್ನು ಅವಳು ನಿಲ್ಲಿಸಲಿಲ್ಲ ಅವಳ ಬಾಯಿಂದ ಹರಟ ಪ್ರತಿಯೊಂದು ವಾಕ್ಯಗಳು ಸತ್ಯವಾಗತೊಡಗಿದವು ರೋಗಗಳಿಗೆ ಅವಳು ಹೇಳಿದ್ದು ಔಷಧಗಳಾಗಿ ಕೆಲಸ ಮಾಡತೊಡಗಿದವು ಮಲ್ಲಸರ್ಜ ದೇಸಾಯಿಯವರಿಗೆ ಆಗಿದ್ದ ಭಗೇಂದ್ರ ಹುಣ್ಣನ್ನು ಬದನೆಕಾಯಿಯಿಂದ, ಭರಮಗೌಡನಿಗಾದ ಬೇತಾಳ ಹುಣ್ಣನ್ನು ಉಳ್ಳೆಗಡ್ಡಿ(ಈರುಳ್ಳಿ)ಯಿಂದ ಊರ ಜನರಿಗೆ ನಾಲ್ಕು ದಿನಗಳಿಗೊಮ್ಮ ಬರುವ ಜ್ವರ ಕಡಿಮೆ ಮಾಡಲು ತನ್ನಲ್ಲಿಯ ರೊಟ್ಟಿ ನೀಡುವುದರಿಂದ ಗುಣಪಡಿಸತೊಡಗಿದಳು ಚನ್ನವೀರವ್ವಳ ಮಗನಿಗೆ ಬಂದ ಕಾಲರಾ ರೋಗವನ್ನು ಮಜ್ಜಿಗೆಯಿಂದ, ಸಂಕನೂರಿನ ಅಯ್ಯಪ್ಪನಿಗಾದ ಕುಷ್ಟರೋಗವನ್ನು ಹಳೆಯ ಗಿಣ್ಣದಿಂದ, ಛಾಯಾಸಾಬನ ಗೂದಿಯನ್ನು ನೀರು ಹಾಕಿ, ಹಡಪಿಗನ ಷಂಡತನವನ್ನು, ಶಿವಕ್ಕಳಿಗೆ ಅಂಟಿದ ಕುಷ್ಟರೋಗವನ್ನು ಕರ್ಪೂರದಿಂದ, ಮೊಲೆಹುಣ್ಣಿಗೆ ಬಳ್ಳೋಳ್ಳಿಯಿಂದ ಹೀಗೆ ಅನೇಕ ರೋಗಗಳನ್ನು ತನ್ನದೇ ಆದ ಪದ್ಧತಿಯಿಂದ ವಾಸಿ ಮಾಡುತ್ತಿದ್ದಳು ಅವಳ ಧರ್ಮದ ಮನೆಯು ಒಂದು ಆಸ್ಪತ್ರೆಯಂತೆ ಗೋಚರಿಸುತ್ತಿತ್ತು ನಿಡಗುಂದಿ ಕೊಪ್ಪದವರ ಬಾಲಕ ಆಕಸ್ಮಿಕವಾಗಿ ತೀರಿಕೊಂಡ ಭೀಮಮ್ಮ ಆ ಮಗುವಿನ ಜೀವ ಮರಳುವಂತೆ ಮಾಡಿದಳು ಹೀಗೆ ಅನೇಕ ಪವಾಡ ಕಥೆಗಳು ಜನಪದದಲ್ಲಿ ಮನೆಮಾತಾಗಿವೆ ಒಟ್ಟಾರೆ ಅವಳ ಕೈಗುಣ ಎಂದು ಜನರು ನಂಬಿದ್ದರು ನಂಬಿಕೆ ಇದ್ದೆಡೆಗೆ ದೇವನಿರುತ್ತಾನೆ ಎಂಬಂತೆ ಬಡವರ ಪಾಲಿಗೆ ಅವಳು ಕೈಗೆಟುಕುವ ದೇವತೆಯಾಗಿದ್ದಳು.
ಭೀಮವ್ವ ಸುಫೀ ಸಂತರ ಬಗ್ಗೆ ಗೌರವ ಹೊಂದಿದ್ದಳೆಂದು ತೋರುತ್ತದೆ ಆದ್ದರಿಂದ ತನ್ನ ಗದ್ದುಗೆಯ ಗರಡಿ ಮನೆಯ ಪಕ್ಕದಲ್ಲಿಯೇ ದರ್ಗಾ ಕಟ್ಟಿಸಿದ್ದಾಳೆ ಊರರವರಿಗಾಗಿ ಸ್ವಂತ ಖರ್ಚಿನಲ್ಲಿ ಬಾವಿ ತೋಡಿಸಿದಳು ಹೀಗೆ ಅವಳು ಜನರಿಗಾಗಿ ದುಡಿದಳು ಭಕ್ತರಿಗಾಗಿ ತನ್ನ ಜೀವವನ್ನೇ ಸವೆಸಿದಳು. ಇಂತಹ ಪುಣ್ಯ ಜೀವಿಗೆ ಸಂಗನಬಸವ್ವ ಎಂಬವವಳು ನಶ್ಯದಲ್ಲಿ ವಿಷ ಹಾಕಿದಳು ಅದನ್ನು ಅರಿತ ಭೀಮವ್ವ ನಸಗುನ್ನಿ ತಪ್ಪಲ ತರಿಸಿ ಅದರಿಂದ ಗುಣಮುಖ ಹೊಂದಿ ಮತ್ತೆ ಜನರೆದುರು ದೇವತೆಯಾಗಿ ನಿಂತಳು. ಭೀಮವ್ವಳಿಗೆ ನಶ್ಯದಲ್ಲಿ ವಿಷಹಾಕಿದ ಚನ್ನಬಸವ ಕೆಂಜುಗ ಕಡಿಸಿಕೊಂಡು ಇಲ್ಲೆ ಹಾವು ಕಡಿಸಿಕೊಂಡು ತೀರಿ ಹೋದಳೆಂದು ಜನರಾಡಿ ಕೊಳ್ಳುತ್ತಾರೆ.

ಜನರ ರೋಗಗಳಿಗೆ ಸಂಜೀವಿನಿಯಾಗಿದ್ದ ಭೀಮವ್ವಳನ್ನೂ ಅಂತಿಮವಾಗಿ ಕಾಲರಾ ಎಂಬ ಮಹಾಮಾರಿ ಅವಳನ್ನು ಬಲಿತೆಗೆದುಕೊಂಡಿತು ಇಂದು ಅವಳು ಭುಮಿಯಲ್ಲಿ ಮಣ್ಣಿನಲ್ಲಿ ಲೀನವಾಗಿ ಹೋಗಿದ್ದರೂ ಅವಳ ಮೇಲಿನ ನಂಬಿಕೆ ವಿಶ್ವಾಸ ಭಕ್ತಿಯ ಪರಾಕಾಷ್ಠೆಯಿಂದ ಅವಳ ಗದ್ದುಗೆ ಔಷಧಿ ರೂಪದಲ್ಲಿ ಕೆಲಸ ಮಾಡುತ್ತಿದೆ ಅವಳ ಗದ್ದುಗೆಯನ್ನು ನೆಚ್ಚಿಕೊಂಡು ಬಂಧ ಭಕ್ತರಿಗೆ ಅವಳ ಆತ್ಮ ಎಂದಿಗೂ ನಿರಾಶೆಯನ್ನುಂಟು ಮಾಡಿಲ್ಲವೆಂದು ಹೇಳುತ್ತಾರೆ
ಇಂದು ಇಟಗಿ ಸುಕ್ಷೇತ್ರವಾಗಿ ನಿಂತಿದೆ ಜನರ ನಂಬಿಕೆಯೇ ಇದಕ್ಕೆ ಆಧಾರ.
ಭೀಮಾಂಭಿಕೆ ಅಗೋಚರವಾಗಿ ನಂಬಿ ಬಂದ ಭಕ್ತರ ಇಷ್ಟಾರ್ಥಗಳನ್ನು ನೆರವೇರಿಸುತ್ತಾಳೆ ಎಂಬ ನಂಬಿಕೆಯಿದೆ ಹೀಗಾಗಿ ಭಕ್ತ ಸಮೂಹವೇ ಹರಿಸು ಬರುತ್ತದೆ. ಹಿಂದೂ – ಮುಸ್ಲಿಂ ಬೇಧಬಾವಗಳಿಲ್ಲದೆ ಜಗನ್ನಾಥೆಯನ್ನು ಪೂಜಿಸುತ್ತಾರೆ . ಮಕ್ಕಳಾಗದವರು ದೇವಸ್ಥಾನದಲ್ಲಿ ಕಾಯಿ ಕಟ್ಟಿ ತೂಗಿಸದರೆ ಮಕ್ಕಳಾಗುತ್ತವೆ ಎಂಬ ನಂಬಿಕೆಯಿದೆ.