
ಬುಡಕಟ್ಟು ಜನಾಂಗ, ಕುರುಬರ ಕುಲದೇವರಾದ ಬೀರಪ್ಪ, ಬೀರಲಿಂಗೇಶ್ವರ, ಬೀರದೇವರು 12ನೇ ಶತಮಾನದಲ್ಲಿ ಬಸವಣ್ಣನವರ ವಚನಗಳಲ್ಲೂ ಬೀರದೇವರ ಉಲ್ಲೇಖವಿದೆ. ಬೀರದೇವರ ಶಕ್ತಿ ಅಪಾರವಾದುದ್ದು. ಕರ್ನಾಟಕ ರಾಜ್ಯದ ದಕ್ಷಿಣ ಕರ್ನಾಟಕ, ಮಧ್ಯ ಕರ್ನಾಟಕ, ಕರಾವಳಿ ಕರ್ನಾಟಕ, ಮುಂಬೈ ಕರ್ನಾಟಕ, ಕಲ್ಯಾಣ ಕರ್ನಾಟಕ ಎಲ್ಲಾ ಭಾಗಗಳಲ್ಲ್ಲೂ ಬೀರದೇವರ ದೇವಾಲಯಗಳು, ಆಚರಣೆಗಳನ್ನು ಇಂದಿಗೂ ಕಾಣಬಹುದು. ಇವತ್ತಿಗೂ ಬೀರದೇವರ ಪವಾಡಗಳನ್ನು ನೋಡುತ್ತಿದ್ದೇವೆ.
ಬೀರಪ್ಪ ದೇವಾಲಯ ಕೇವಲ ಯಾವುದೋ ಒಂದು ಊರಿಗೆ ಸೀಮಿತವಾಗಿರದೆ, ಕುರುಬ ಜನಾಂಗವಿರುವ ಹಲವು ಊರುಗಳಿಗೆ ವಿಸ್ತರಗೊಂಡಿರುವುದು ಆತನ ಖ್ಯಾತಿಗೆ ಕಾರಣವಾಗಿದೆ. ತನ್ಮೂಲಕ ಬೀರಪ್ಪ ಕುರುಬರ ಗ್ರಾಮ ದೇವತೆಯೆಂದು ಪರಿಗಣಿಸಲ್ಪಟ್ಟಿದ್ದಾನೆ. ಗ್ರಾಮ ದೇವತೆಯೆಂದೆನಿಸಿಕೊಂಡಿರುವುದು, ಹಲವು ಊರುಗಳಿಗೆ ವಿಸ್ತರಿಸಿಕೊಂಡುದು, ಆ ಬೀರಪ್ಪನು ಪ್ರಾಚೀನಕಾಲದ ವ್ಯಕ್ತಿ ಎನ್ನುವುದನ್ನು ಸೂಚಿಸುತ್ತದೆ. ಹೀಗಾಗಿ ಪುರಾಣ ಕಾಲದ ದೇವರು ಎಂದೆನಿಸುತ್ತಾನೆ. ಈತನ ಹೆಸರಿನಲ್ಲಿಯೇ ಕುರುಬರನ್ನು ಗುರುತಿಸುವ ಪರಿಪಾಠವಿದ್ದುದರಿಂದ ಅವರನ್ನು “ಈರಗಾರರು” ಎಂದೆನ್ನುತ್ತಾರೆ. ಹಾಲು ಮತ ಪ್ರಸಾರಕರಾದ ಮಾಳಪ್ಪ, ಗುರುನಾಥ, ಕರಿಯಪ್ಪ ಮೊದಲಾದವರೆಲ್ಲರಿಗಿಂತ ಬೀರಪ್ಪ ಪ್ರಖ್ಯಾತನಾದವನಾದುದರಿಂದ ಅವನ ಹೆಸರು ಉಳಿದುಕೊಂಡು ಬಂದಿದೆ.
“ಬೀರ” ಎನ್ನುವ ಪದ ಮೂಲತಃ ವೀರ ಎಂಬ ಪದದ ತದ್ಭವವಾದುದರಿಂದ, ಹಳ್ಳಿಗರು ಇದನ್ನು ’ಈರ’ ಎಂದು ಕರೆಯುತ್ತಾರೆ. ಈತನನ್ನು “ವೀರಶೈವರ ವೀರಭದ್ರನ ಅವತಾರ”ವೆಂದು ಪರಿಗಣಿಸಿರುವುದೂ ಆತನನ್ನು ಕುರಿತು ಹಾಡಿರುವ ಹಾಡುಗಳಿಂದ ಗೊತ್ತಾಗುತ್ತದೆ. ಹಳ್ಳಿಗಳಲ್ಲಿ, ಇಂದಿಗೂ, ದೇವರುಗಳಲ್ಲಿ ಭಿನ್ನತೆಯಿಲ್ಲ ಎಂಬುದನ್ನು ಎತ್ತಿತೋರಿಸಲು, ಲಿಂಗಾಯತರ ’ವೀರ’, ಕುರುಬರ ’ಬೀರ’, ಮುಸಲ್ಮಾನರ ’ಪೀರ’ ಇವೆಲ್ಲ ಪದಗಳೂ ಒಂದೇ ಅರ್ಥವನ್ನೊಳಗೊಂಡಿವೆಯೆಂದು ಹೇಳುವುದೇ ಸಾಕ್ಷಿ. ಬೀರಪ್ಪನನ್ನು ಹಲವು ಪದ್ಯಗಳಲ್ಲಿ ’ಬೀರೈಲಿಂಗ’, ’ಬೀರಲಿಂಗ’ ಎಂದು ಕರೆದಿರುವುದು ಅವು ಅವನು ’ಲಿಂಗಸ್ವರೂಪ’, ’ಶಿವಭಕ್ತ’ ಎಂದೇ ತಿಳಿಸುತ್ತವೆ. ಅವನನ್ನು ಕುರಿತ ಅನೇಕ ಹಾಡುಗಳು ಈ ಮಾತಿಗೆ ಸಮರ್ಥನೆಯನ್ನೊದಗಿಸುತ್ತವೆ. ಹಾಲುಮತ ಉದ್ಧಾರಕರ ಅನೇಕರ ಹೆಸರುಗಳಲ್ಲಿ ರೇವಣಸಿದ್ಧೇಶ್ವರರ ಹೆಸರು ಮೇಲಿಂದ ಮೇಲೆ ಕೇಳಿಬರುತ್ತಿದೆ. ಇದು ವೀರಶೈವರಿಗೂ ಕುರುಬ ಸಮಾಜಕ್ಕೂ ಇರುವ ಸಂಬಂಧವನ್ನು ಸೂಚಿಸುತ್ತದೆ. ರೇವಣಸಿದ್ಧ, ಮರಣಸಿದ್ಧರು ಕುರುಬ ಜನಾಂಗಕ್ಕೆ ಬಹುಪೂಜ್ಯರಾದ ಗುರುಗಳು. ಅನೇಕ ಕುರುಬರು, ಮೂಲತಃ ಅವರು ಶೈವರಾದುದರಿಂದ. ವೀರ ಶೈವಕ್ಕೆ ಮತಾಂತರ ಹೊಂದಿರುವುದರಿಂದ ಹಲವರು ಲಿಂಗಾಯತ ಕುರುಬರೂ ಇರುವುದೇ ಸಾಕ್ಷಿ. ಅಲ್ಲದೆ ಕುರುಬರು ಹಾಡುವ ಅನೇಕ ಹಾಡುಗಳಲ್ಲಿ ವೀರಶೈವ ಮತ ತತ್ವಪ್ರತಿಪಾದನೆ, ಶಿವಶರಣರ ಕಥೆಗಳೂ ಇವೆ. ಇತರ ಎಲ್ಲ ಸಮಾಜದವರಂತೆ ಕುರುಬ ಜನಾಂಗದವರು ಬೀರಪ್ಪನನ್ನಲ್ಲದೆ ಇನ್ನು ಹಲವು ಗಂಡು ದೇವತೆಗಳನ್ನು, ಸ್ತ್ರೀ ದೇವತೆಗಳನ್ನೂ ಪೂಜಿಸುತ್ತಾರೆ. ಆದರೆ ಈಶ್ವರಾಧನೆ ಎಲ್ಲಕ್ಕಿಂತಲೂ ಮಿಗಿಲು ಎಂದೂ ಭಾಗಿಸುತ್ತಾರೆ. ಕಾಲಕಾಲಕ್ಕೆ ತಕ್ಕಂತೆ ಜನಪದ ಸಾಹಿತ್ಯದಲ್ಲಿ ಹಲವು ಅಂಶಗಳು ಸೇರ್ಪಡೆಯಾಗಿರುವುದರಿಂದ. ಅಲ್ಲಿ ಮೂಲ ಅಂಶಗಳನ್ನು ಕಂಡು ಹಿಡಿಯುವುದು ದುಸ್ತರವೇ ಸರಿ. ಬೀರಪ್ಪನ ಕಥೆಯೂ, ಈ ಬೀರಪ್ಪನ ಚರಿತ್ರೆಯೂ ಹಾಗೆಯೇ ಆಗಿವೆ. ಬೀರನ ಕಥೆ ಮೂಲ ಸ್ವರೂಪದಲ್ಲಿ ಹೇಗಿತ್ತೆಂಬುದನ್ನು ತಿಳಿಯಲು ಸಾಕಷ್ಟು ಪುರಾವೆಗಳು ಬೇಕಾಗುತ್ತವೆ.
“ಪಂಡಿತರುಂ ವಿವಿಧಕಳಾ| ಮಂಡಿತರುಂ ಕೇಳತಕ್ಕ ಕೃತಿಯಂ ಕ್ಷಿತಿಯೊಳ್
ಕಂಡರ್ ಕೇಳ್ವೊಡೆ ಗೋರವರ | ಡು(ದು)ಂಡುಚಿಯೇ ಬೀದಿವರೆಯೇ ಬೀರನಕತೆಯೇ”
– ಎಂಬ ಮಧುರ ಕವಿಯ ಬೀರನ ಕತೆ ಎಷ್ಟರಮಟ್ಟಿಗೆ ಖ್ಯಾತಿ ಪಡೆದಿತ್ತೆಂಬುದನ್ನು ಎತ್ತಿ ತೋರಿಸುತ್ತದೆ. ಬೀರ, ಕುರುಬರ ಕಥಾಪುರುಷ ಎಂಬುದರಿಂದ ಮತ್ತು ಅವನ ಕಥೆಯಲ್ಲಿ ಅನೇಕ ಅಂಶಗಳು ನಂಬಲರ್ಹವಲ್ಲದಂತಹವು ಎಂಬ ಭಾವನೆಗಳು ಅಡಕವಾಗಿರುವುದರಿಂದ, ಅದು ಕೇಳಲು ಯೋಗ್ಯವಲ್ಲ ಎಂದು ತೀರ್ಮಾನಿಸುತ್ತಾನೆ ಮಧುರ ಕವಿ. ಈ ಪದ್ಯದಲ್ಲಿ ಬೀರನ ಕಥೆಯ ಜೊತೆಗೆ ಗೊರವರ ದುಂಡುಚಿಯ ಪ್ರಸ್ತಾಪವೂ ಇದೆ. ಗೊರವರು ಮೈಲಾರನ ಭಕ್ತರು. ಮೈಲಾರ, ಕುರುಬರಿಗೂ ಬೇಕಾದ ದೇವತೆ. ಈ ಬೀರನ ಕಥೆಯನ್ನು ಈರಗಾರರು. ಜಾತ್ರೆ ಮೊದಲಾದ ಕಾರ್ಯಕ್ರಮಗಳಲ್ಲಿ, ರಥೋತ್ಸವಗಳಲ್ಲಿ, ಬೀದಿಗಳಲ್ಲಿ ಮಜಲು ಮಜಲುಗಳಲ್ಲಿ ಅನೇಕ ಕಥೆಗಳ ಜೊತೆಗೆ ಹಾಡಿನ ಮೂಲಕ ಜನತೆಗೆ ತಿಳಿಸುತ್ತಾರೆ; ಈ ಬೀರಪ್ಪನು ಸು.೧೪೦೦ ರಲ್ಲಿದ್ದ ಮಧುರ ಕವಿಯ ಕಣ್ಣಿಗೆ ಬಿದ್ದಂತೆ ಬಸವಣ್ಣನವರ ದೃಷ್ಟಿಗೂ ಬಿದ್ದಿದ್ದಾನೆ. ಬಸವಣ್ಣನರ ಒಂದು ವಚನದಲ್ಲಿ ಈ ಬೀರಪ್ಪನ ಉಲ್ಲೇಖ ಈ ರೀತಿ ಬಂದಿದೆ:
“ಹಾಳು ಮೊರಡಿಗಳಲ್ಲಿ, ಊರ ದಾರಿಗಳಲ್ಲಿ, ಕೆರೆ ಬಾವಿ, ಹೂ ಗಿಡು ಮರಂಗಳಲ್ಲಿ,
ಗ್ರಾಮ ಮಧ್ಯಗಳಲ್ಲಿ, ಚೌಪಥ ಪಟ್ಟಣ ಪ್ರದೇಶದಲ್ಲಿ, ಹಿರಿಯಾಲದ ಮರದಲ್ಲಿ,
ಮನೆಯ ಮಾಡಿ, ಕರೆವೆಮ್ಮೆಯ, ಹಸುಗೂಸು, ಬಸುರು, ಬಾಣತಿ,
ಕುಮಾರಿ, ಕೊಡಗೂಸೆಂಬವರ ಹಿಡಿದು ತಿಂಬ, ತಿರಿದುಂಬ-
ಮಾರಯ್ಯ, ಬೀರಯ್ಯ, ಕೇಚರಗಾವಿಲ, ಅಂತರ ಬೆಂತರ,
ಕಾಳಯ್ಯ, ದೂಳಯ್ಯ, ಕೇತಯ್ಯಗಳೆಂಬ ನೂರುಮಡಕೆಗೆ,
ನಮ್ಮ ಕೂಡಲಸಂಗಮದೇವ ಶರಣೆಂಬುದೊಂದು ದಡಿ ಸಾಲದೆ?
(ಬಸವಣ್ಣನವರ ವಚನ : ೫೫೭)

ಬಸವಣ್ಣನವರು ಈ ವಚನದಲ್ಲಿ ಜಾನಪದರು ನಂಬಿ ಆರಾಧಿಸುತ್ತಿದ್ದ ಹಲವು ಕಿರುಕೊಳ ದೈವಗಳನ್ನು ಖಂಡಿಸಿ, ಕೂಡಲ ಸಂಗಮದೇವರು ಒಬ್ಬರೇ ನಿಜವಾದ ದೇವರೆಂದು ಹೇಳುತ್ತಾರೆ. ಈ ಖಂಡನೆಯಲ್ಲಿ ಬೀರಯ್ಯ, ಮಾರಯ್ಯ, ಕಾಳಯ್ಯ, ದೂಳಯ್ಯ, ಮೊದಲಾದವರ ಹೆಸರುಗಳೂ ಬಂದಿರುವುದು ಗಮನಾರ್ಹ. ಬೀರಯ್ಯನು ಕ್ರಿ.ಶ. ೧೨ನೆಯ ಶತಮಾನಕ್ಕಿಂತಲೂ ಹಿಂದಿನ ದೇವರು ಎಂಬುದು ಇದರಿಂದ ಸುಸ್ಪಷ್ಟವಾಗುತ್ತದೆ. ಕಿರುಕುಳ ದೈವಗಳಲ್ಲಿ ಈತನೂ ಒಬ್ಬನಾಗಿದ್ದಾನೆ – ಇಲ್ಲಿ.. ಮಾಳಪ್ಪ ಬೀರಪ್ಪನ ಶಿಷ್ಯರಲ್ಲಿ ಒಬ್ಬನೆಂದು ಕೆಲವು ಹಾಡುಗಳಲ್ಲಿ ವ್ಯಕ್ತವಾಗಿದೆ, ಬೀರ ಸಮಸ್ತರಿಗೂ ಹಿತಬಯಸುವ ದೇವರೆಂದು ಕುರುಬರ ಹಾಡುಗಳಲ್ಲಿ ವ್ಯಕ್ತವಾಗಿದೆ. ’ಭಾಸುರಾಂಗ ಬೀರಪ್ಪ’, ’ಗುರುಬೀರಪ್ಪ’, ’ಬೀರಲಿಂಗ’ ಎಂದು ವರ್ಣಿಸಿದುದನ್ನು ನೋಡಿದರೆ, ಅವನು ಪ್ರಕಾಶಮಾನನಾದ ವ್ಯಕ್ತಿಯಾಗಿದ್ದನೆಂದು ಹೇಳಬಹುದು. ’ಆಡು ಕಾಯಲು ಹೋದ ಬೀರಣ್ಣ, ನಾಡು ನೋಡಲು ಹೋದ ಬೀರಣ್ಣ’ – ಎಂದಿರುವಲ್ಲಿ ಅವನೂ ಕುರಿಕಾಯುತ್ತಿದ್ದ ಎಂಬುದೂ ಸುಸ್ಪಷ್ಟ, ಎಂದ ಮೇಲೆ ಅವನು ಕುರುಬರ ಬುಡಕಟ್ಟಿಗೆ ಸೇರಿದ್ದನೆಂದು ಹೇಳುವುದರಲ್ಲಿ ಸಂದೇಹವಿಲ್ಲ. ಬೀರಪ್ಪ (ಶಿವ) ಪಾರ್ವತಿಯರ ಬೆವರಿನ ಪುತ್ರಮ ಸರಸ್ವತಿಯ ಕುಮಾರ, ನಾರಾಯಣನ ಅಳಿಯ ಎಂದು ಹಾಡುಗಳಲ್ಲಿ ವ್ಯಕ್ತವಾಗಿದೆ. ಈ ಮಾತುಗಳನ್ನು ಗಮನಿಸಿದರೆ ಅವನು ಶಿವ-ಶಕ್ತಿ-ಬ್ರಹ್ಮ – ಸರಸ್ವತಿ-ನಾರಾಯಣ-ಮೊದಲಾದವರ ಶಕ್ತಿ ಹಾಗೂ ಅನುಗ್ರಹದಿಂದ ಜನಿಸಿದ- ದೈವಾನುಗ್ರಹ ಪಡೆದ ಕುಮಾರ ಎಂಬುದನ್ನು ಹೇಳುವುದು ಜಾನಪದ ಕವಿಗಳ ಆಶಯವಾಗಿತ್ತೆಂಬುದು ಸುಸ್ಪಷ್ಟ. ಈ ಮಗನ ಜನನ, ತವರು ಮನೆಗೆ ಕೇಡನ್ನುಂಟು ಮಾಡುತ್ತಿದೆಯೆಂಬ ಗ್ರಹಿಕೆಯಿಂದಾಗಿ, ಬೀರಪ್ಪನನ್ನು ಹೆತ್ತ ತಾಯಿ, ಕುಂತಿ ಕರ್ಣನನ್ನು ಗಂಗಾ ಪಾಲು ಮಾಡಿದಂತೆ, ಈತನನ್ನೊಯ್ದು ಅಡವಿಯ ಪಾಲು ಮಾಡಿದಳು. ಅಲ್ಲಿ ಅವನನ್ನು ಕೊಲ್ಲಲಿಕ್ಕೆಯೂ ಪ್ರಯತ್ನ ಮಾಡಿದರು ಅವರ ಸೋದರ ಮಾವ, ಕೊಲೆ ಗಾರರಿಗೆ ಕೂಸಿನ ಮುಖ ನೋಡಿ ಕೊಲ್ಲಲಿಕ್ಕೆ ಮನಸ್ಸು ಬರಲೇ ಇಲ್ಲ. ’ಏಳು ದಿನದ ಕೂಸು ಒಡನುಡೀತು’ ಎಂದು ಒಂದು ಪದ್ಯದಲ್ಲಿ ಬಂದಿದೆ. ಅದನ್ನು ನೋಡಿದರೆ ಬೀರಪ್ಪ ಕೂಸಿದ್ದಾಗಲೇ ದೈವಾನುಗ್ರಹ ಸಂಪಾದಿಸಿದ್ದ ಎನ್ನುವುದು ತಿಳಿದುಬರುತ್ತದೆ. ಕೂಸು ಅಡವಿಯಲ್ಲಿ ಜೇನುತುಪ್ಪದಿಂದ ಬೆಳೆಯಿತು. ಕೂಸನ್ನ ಕಾಯುವುದಕ್ಕೆ ಕಾಳಿಂಗರಾಯ ಇದ್ದ. ಹೀಗಾಗಿ ಕೂಸಿಗೆ ಯಾವ ಅಪಾಯಗಳೂ ಸಂಭವಿಸಲಿಲ್ಲ. ಈ ಹಂತದಲ್ಲಿ ಬೀರಪ್ಪನ ಜನನ, ಬಾಲ್ಯದ ಬಗೆಗೆ ಹಲವು ರೀತಿಯ ಕಥೆಗಳಿವೆ; ಅವುಗಳಲ್ಲಿ ಅತಿಮಾನುಷ ಅಂಶಗಳನ್ನು ಹೇಳುವುದೇ ಮುಖ್ಯ. ಯಾವ ಊರಲ್ಲಿ ಹುಟ್ಟಿದ ಬೀರಪ್ಪ ಎಂಬುದೂ ತಿಳಿದು ಬರುವುದಿಲ್ಲ. ಜಾನಪದ ಕವಿಗಳಿಗೆ ಇಂತಹ ಮಹಾನುಭಾವ ತಮ್ಮ ತಮ್ಮ ಊರಲ್ಲೇ ಹುಟ್ಟಿದ್ದ ಎಂದು ಹೇಳುವದರಲ್ಲೇ ಆಸಕ್ತಿ. ಹೀಗಾಗಿ ಬೇರೆ ಬೇರೆ ಹಾಡುಗಳಲ್ಲಿ ಬೇರೆ ಬೇರೆ ಊರ ಹೆಸರೂ ಬರುತ್ತವೆ. ’ಹಬ್ಬಲಿ ಕೋಣಗನೂರವ, ಗೂಳೀಕೋಣಗನೂರವನಾಗಿ ಬೆಳೆವ’ ಎಂದು ಹಾಡುಗಳಲ್ಲಿ ಬರುವ ಮಾತೇ ಇದಕ್ಕೆ ನಿದರ್ಶನ. ಅಡವಿಯೊಳಗೆ ತೊಟ್ಟಿಲಲ್ಲಿ ತೂಗಾಡುತ್ತಿದ್ದ ಆ ಅದ್ಭುತ ಬಾಲಕನನ್ನು ನೋಡಿದವರು ದೇವೇಂದ್ರನ ಮಕ್ಕಳು ’ಮಲೀ ಮೂಗು ಇಲ್ಲದ ಏಳು ಸೂಳೇರು, ಹಗಲ ಹಂಗನ ಬ್ಯಾಟಿ, ಇರುಳು ಗಿಡಗನ ಬ್ಯಟಿ ಆಡುವರು’ ಇವರ ಕಣ್ಣಿಗೆ ಕೂಸು ಬಿತ್ತು. ’ಮಲೀಮೂಗು ಚಿಗರಿದವರಿಗೇ ಕೂಸು’ ಎಂದು ನಿರ್ಣಯಿಸಿದರು. ಇವರೊಳಗ ’ಹಿರಿಯಾಕೀಗೆ ಮಲೀಮೂಗು ಚಿಗರಿದುವು’. ಕೂಸಿಗೆ ಕೈ ಹಾಕಿದಳು. ’ಕಾಳಿಂಗ, ನಾ ಸಾಕೀನಿ ಕೂಸಿನ್ನ’ ಅಂದ. ಆಗ ಹರಮಾಯವ್ವ (ಹಿರೀ ಸೂಳೆ, ನೋಡು ಕಾಳಿಂಗ, ’ನಾಡಿನಾಗ ನಿನ್ನ ಹಬ್ಬ ಮಾಡ್ಸಿ, ತವರಿಗೆ ಸೂಸೆಯಂದಿರ‍್ನ ಕರಿಸಿ, ನಿನಗ ಹಾಲು ಎರೆಯಹಂಗ ಮಾಡ್ತೀನಿ’ ಕೂಸು ಕೊಡು ಎಂದ್ಳು. ಅಂದಿನಿಂದ ಪಂಚಮಿ ಹಬ್ಬ ಹುಟ್ಟಿತು. ಈ ಮಾತು ನೋಡಿದರ ಬೀರಪ್ಪನ ಕಥೆಗೂ ಪಂಚಮಿ ಹಬ್ಬಕ್ಕೂ ಸಂಬಂಧ ಇದೆ ಅನ್ನುವುದು ತಿಳಿಯುತ್ತದೆ. ಇದರ ಮೂಲ ದ್ರಾವಿಡದಲ್ಲಿ ಎನ್ನುವ ಸೂಚನೆ ಇಲ್ಲಿರುವಂತೆ ಕಾಣುತ್ತದೆ. ಬೀರಪ್ಪನೂ ದ್ರವಿಡ ಕುಲಕ್ಕೆ ಸೇರಿದವನಿರಬೇಕು, ಬೀರಪ್ಪನ ಕತೆಗುಂಟ ಅನೇಕ ಅದ್ಭುತ-ರೋಮಾಂಚಕಾರಕ ಘಟನೆಗಳು ಸುತ್ತುವರಿದಿವೆ. ಕೂಸಿನ ಜೊತೆಗೇ ಇದ್ದ ಇತರ ಆರು ಜನ ಸ್ತ್ರೀಯರಿಗೆ ಅಸಮಾಧಾನ. ಕೂಸಿನ ಸಾಕು ತಾಯೀನ್ನ ಕೊಲ್ಲಬೇಕಂದ್ರು. ಕೂಸಿಗೆ ಈ ವಿಷಯ ಗೊತ್ತಾಗಿ ತಾಯಿಗೆ ತಿಳಿಸಿತು. ’ಆ ನಾಡ ಬಿಡಬೇಕು’ ಅಂತಾ ಹೇಳಿತು. ತಾಯಿ ಬೀರಪ್ಪನ ಕಟಿಗೊಂಡು ’ಮೂಡಲದಿಂದ ಪಡವಲ ದಿಕ್ಕಿಗೆ’ ಬಂದಳು. ಇಲ್ಲಿ ಈ ಕೂಸಿನ ಪವಾಡ ಕಂಡು ಬರುತ್ತದೆ. ಅಲ್ಲದೆ ಅವನು ಸಿದ್ಧಿ ಪುರುಷ-ಸಾಮಾನ್ಯ ಕೂಸಾಗಿದ್ದಿಲ್ಲ ಅನ್ನೋದು ನಮಗೆ ತಿಳೀತದ, ಲೋಕ ಹಿತಕ್ಕಾಗಿ ಬೀರಣ್ಣ ಪಾರ್ವತೀನ್ನ ಹೀಂಗ ಸ್ತುತಿ ಮಾಡಿದ: “ಇಸ ಬಿಡಬೇಡ ತಾಯಿ, ಮರ್ತ್ಯದಲ್ಲಿ | ನೀನು ಉಳಿಸವ್ವ ಜನರಿಗೋ” ಮಳೆ ಬಾರದಿದ್ರ ಕುರುಬರು ಬೀರಣ್ಣನ್ನ ಪ್ರಾರ್ಥಿಸದರ ಮಳೆಬರತದಂತ:
ಬೀರಲಿಂಗನ ಸ್ತೋತ್ರಮಾಡುತ ವಿಚಾರಮಾಡ್ಯಾನ ತನ್ನ ಮನಕ
ಚಿಂತೀಯ ಮಾಡಬ್ಯಾಡರಿ ನಾಳೆ ಮಳೆಯು ಬರುವುದು ಮಧ್ಯಾಹ್ನಕ ||
ಹೀಂಗ ಕಂಗಾಲಾದ ಜನರಿಗೆ ಮಳೀ ತರಸವಾ ಬೀರಪ್ಪ ಅಂತಾ ಕುರುಬರ ನಂಬಿಕೆ. ಬೀರಯ್ಯ ಸಾಮಾನ್ಯ ಅಲ್ಲ; ಅವನು ‘ಪಂಚಲಿಂಗ ಬೀರಯ್ಯ’; ಅಂದಮ್ಯಾಲ ಅವನಿಗೆ ಮಳೆ ತರಸೋ ಸಾಮರ್ಥ್ಯ ಇಲ್ಲವೇ?
ಕುರುಬರ ಮೂಲಪುರುಷ ಪದ್ಮಗೊಂಡ. ’ಅವನ್ನ ಕುರಿ ರಕ್ಷಣೆಗೆ, ಶಿವ ಬೀರ ದೇವರನ್ನು ಅವನ ಬೆನ್ನಿಗೆ ಕಳಿಸ್ಯಾನ’ ಎಂದು ಕುರುಬರು ಹಾಡ್ತಾರ. ಹಾಲುಕರದು ಹೈನಮಾಡೋದನ್ನ ಕಲಿಸದವ. ಕುರುಬರಿಗೆ ತೊಂದರೆ ಕೊಡುತ್ತಿದ್ದ ಕೋಣಾಸುರನನ್ನು ಕೊಂದು, ತನ್ನ ಶಕ್ತಿ, ಪ್ರದರ್ಶಿಸಿ ದೇವಪುರುಷನಾದ. ಇಂದಿಗೂ ಕುರುಬರು ಹಬ್ಬ ಹರಿದಿನಗಳಲ್ಲಿ ಆತನ ಮಹಮೆಯನ್ನು ಹಾಡ್ತಾರ. ಬೀರಣ್ಣ ಶಿವನ ಪ್ರತಿರೂಪ ಶಿವಡೊಳ್ಳಾಸುರನನ್ನು ಕೊಂದು ಡೊಳ್ಳೇಶ್ವರನಾದ. ಹಾನಗಲ್ಲಿಂದ ೪-೫ ಮೈಲು ದೂದರಲ್ಲಿ ಈ ಡೊಳ್ಳೇಶ್ವರನ ಹೆಸರಿನಿಂದ ಒಂದು ಊರೇ ಇದೆ. ಬೀರಪ್ಪ ಚಾರಿತ್ರಿಕ ವ್ಯಕ್ತಿಯೆನ್ನುವಂತೆ ಗೋಚರಿಸುತ್ತದೆ. ಈತ ಸಿದ್ಧಪುರುಷನೂ, ಬೇಡಿದ ಭಾಗ್ಯವ ನೀಡುವವನೂ ಮಹಿಮಾಪುರುಷನೂ, ಆಗಿದ್ದಂತೆ ತಿಳಿದು ಬರುತ್ತದೆ. ಒಂದು ಪದ್ಯದಲ್ಲಿ ಬೀರಪ್ಪ:
‘‘ನಾರಿ ಮಾಯವ್ನ ಕಂದಾನು ಎಂದರ
ಸೂರಮದೇವಿಯ[2] ಕಂದಾನು ಎಂದರ
ಕನ್ನೆ ಕಾಮವ್ವನ ಗಂಡಾನು ಎಂದರ
ನಗರಿ ಪಟ್ಟಣದ ಅರಸಾನು ಬೀರಪ್ಪ” – ಎಂದು ವರ್ಣಿಸಿದುದನ್ನು
ನೋಡಿದರೆ, ಅವನು ಮದುವೆಯಾದದ್ದು ಕಾಮವ್ವನನ್ನು, ಈಕೆ ಚಾರಿತ್ರಿಕ ವ್ಯಕ್ತಿಯೋ ಅಥವಾ ಕಾಮತತ್ವವನ್ನೇ ಮದುವೆಯಾಗಿದ್ದನೋ ಹೇಳುವುದು ಕಠಿಣ. ಈತನ ಬಣ್ಣವನ್ನು ಕುರಿತು ಹಾಡುಗಳಲ್ಲಿ ಹೀಗೆ ಹೇಳಲಾಗಿದೆ.
“ಹರಹರ ಎನ್ನ ಕರಿಯದೇವರಿಗೆ, ಎಂತ ಮಾಲಿಗಳು ಬಂದಾವೋ”
ಈ ಮಾತೂ ಬೀರಪ್ಪ ದ್ರಾವಿಡದೇವತೆ ಎಂಬುದನ್ನು ಸೂಚಿಸುವಂತಿದೆ. “ಸೆರಿ ಅಂಬಲೀ ಕೊಡುವ ತಂದೆ ನೀ ಬೀರಪ್ಪ, ಭೂಮಿಗೆ ಮಲಗಂಬಳಿ ತಂದಾತ” ಎಂದೂ ಹಾಡಲಾಗಿದೆ. ಹೊಟ್ಟೆಗೆ ಅನ್ನ, ಮಲಗಲು, ಹೊದೆಯಲು ಕಂಬಳಿ ತಂದಾತನೂ ಬೀರಪ್ಪನೇ ಎಂದ ಮೇಲೆ ಕುರುಬರ ಬದುಕಿಗೆ ಭಾಗ್ಯದೇವತೆಯಾಗಿ ಈತ ಬಂದಾತ ಎನ್ನುವುದು ನಿಸ್ಸಂಶಯ. ಈ ಕಂಬಳಿ “ಮಾದೇವ ಮೊದಲೀಗೆ ಮದುವ್ಯಾಗ ಹೊತ್ತಂತಹುದು” ಎಂದಿದೆ ಒಂದು ಹಾಡಿನಲ್ಲಿ. ಬೀರಪ್ಪನಿಂದಲೇ ಕುರುಬ ಜನಾಂಗ ಬದುಕಿನ ಮಾರ್ಗ ಕಂಡುಕೊಂಡಿದೆ: ಕುರಿ ಸಾಕುವುದು, ಹೈನ ಮಾಡುವುದು, ಕಂಬಳಿ ನೇಯುವುದು – ಇತ್ಯಾದಿ – ಎಂದ ಮೇಲೆ ಅವರಿಗೆಲ್ಲ ಅವನು ಪೂಜ್ಯ ಪುರುಷನೇ. ಒಂದು ಪದ್ಯದಲ್ಲಿ, ಕುರುಬರನ್ನು: “ಊರು ಕೇರಿಗಳಲ್ಲಿ ಬೀರಮಂದಿಯ ವಾಸ” ಎಂದು ಬರೆದುದನ್ನು ನೋಡಿದರೆ, ಕುರುಬರು ಎನ್ನುವುದಕ್ಕೆ “ಬೀರಮಂದಿ” ಎಂದು ಕರೆಯುವುದೂ ರೂಢವಾಗಿದೆಯೆಂದಂತಾಯ್ತು. ಭೈರವೇಶ್ವರ ಕಥಾಮಣಿಸೂತ್ರ ರತ್ನಾಕರದಲ್ಲಿ (ಭಾಗ-೨, ಪುಟ ೮೦) ಗೊಲ್ಲಾಳನ ಕಥೆ ಹೇಳುವಾಗ “ಗೊಲ್ಲಾಳಯ್ಯನು ‘ವೀರಬೀರೇಶ್ವರ’ನೆಂಬ ತಮ್ಮ ಇಷ್ಟಲಿಂಗದಲ್ಲಿ ಮುಕ್ತರಾದರು ಎಂದು ಬರೆಯಲಾಗಿದೆ. ಇಷ್ಟಲಿಂಗವೂ ಅನೇಕರು ನಂಬಿ ಮೊದಲು ಪೂಜಿಸಿದ್ದ ಲಿಂಗಗಳೇ ಎಂಬ ಭಾವನೆ ಇಲ್ಲಿ ಇದೆ. “ಮಾರಮ್ಮನಿಗೆ ಗಂಡನಿಲ್ಲ, ಬೀರ ದೇವರಿಗೆ ಹೆಂಡತಿಯಿಲ್ಲ” ಎಂದು ಒಂದುಗಾದೆಯನ್ನು ಕಿಟೆಲ್ ಕೋಶವು ಕೊಡುತ್ತದೆ. (ಮದ್ರಾಸ್ ವಿಶ್ವವಿದ್ಯಾಲಯದ ಪುನರ್ಮುದ್ರಣ) (೧೯೭೦). ಹಿಂದಿನ ಮಾತುಗಳಲ್ಲಿ ಅವನ ಮದುವೆಯ ಪ್ರಸ್ತಾಪ ಬಂದಿತ್ತು. ಈ ಗಾದೆ ಅವಿವಾಹಿತ ಎಂಬುದನ್ನು ಸೂಚಿಸುತ್ತದೆ.
ಕೆಲವು ಹಾಡುಗಳಲ್ಲಿ ಬೀರಪ್ಪನನ್ನು ಹೀಗೆ ಬಣ್ಣಿಸಲಾಗಿದೆ:
“ದೇವರದೇವನೆ ಬೀರಪ್ಪ,
ಕಾಳಿಯ ರಮಣನೆ ಬೀರಪ್ಪ,
ಮಳೆಯನ್ನು ಕಾಲಕ್ಕೆ ಬೀರಪ್ಪ,
ದನಕರು ಕುರಿ ಆಡು ಬೀರಪ್ಪ,
ನೀ ಮನವಿಟ್ಟು ಹೆಚ್ಚಿಸೋ ಬೀರಪ್ಪ
ನಮ್ಮ ಚೆಲುವ ಬೀರಪ್ಪ”- ಎಂದು
ಬೀರಪ್ಪ, ದೇವರೆಂದ ಮೇಲೆ ಅವನು ಚೆಲುವನೂ ಆಗಿರಬೇಕಲ್ಲವೇ? ಆ ಅಂಶವನ್ನೂ ಇಲ್ಲಿ ಹೇಳಲಾಗಿದೆ. ಬೀರದೇವರ ಪ್ರಾರ್ಥನೆಗಳಲ್ಲಿ ಕುರುಬರು ಹೀಗೆ ಕೇಳಿಕೊಳ್ಳುತ್ತಾರೆ:
“ನಮ್ಮ ಮಕ್ಕಳು ವಿದ್ಯಾವಂತರಾಗಲಿ; ದುಷ್ಟಬುದ್ಧೀ ಬಿಡಲಿ; ಧನದಾನ್ಯ
ದೇಶದಲ್ಲಿ ಬೆಳೆಯಲಿ; ಕೆರೆಕಟ್ಟಿ ತುಂಬಲಿ; ರೊಕ್ಕ ಮನೆಗೆ ಹೆಚ್ಚಾಗಲಿ;
ನಮ್ಮ ಬದುಕು ಹಸನಾಗಲಿ”. (ಹಳ್ಳಿಯ ಹಾಡುಗಳು; ಸಂಪಾದರು: ವಿನೀತ ರಾಮಚಂದ್ರರಾಯರು ೧೯೬೦)
ಬೇರೆ ಕೆಲವು ಪದ್ಯಗಳಲ್ಲಿ ಹೀಗೆ ಹೇಳಲಾಗಿದೆ: ಬೀರಪ್ಪ ಪಾರ್ವತಿಯ ವರದಿಂದ ಜನಿಸಿದ: ಬಿಲ್ಲಾಸುರನನ್ನು ಯಾರಿಗೂ ಕೊಲ್ಲಲಾಗಲಿಲ್ಲ. ಶಿವನು ವೀರಭದ್ರನಾಗಿ ಅವನನ್ನು ಸಂಹರಿಸಿದಂತೆ; ಆ ವೀರಭದ್ರನಿಗೆ, ಶಿವನು, “ನಿನ್ನ ಕೀರ್ತಿ ಭೂಲೋಕದಲ್ಲಿ ಅಜರಾಮರವಾಗಲಿ” – ಕಾರಣ ನೀನು ಬೀರದೇವರಾಗಿ ಅಲ್ಲಿ ಜನಿಸಿ, ಹಾಲು ಮತದ ದೇವರಾಗಿ, ಅಲ್ಲಿ ಮೆರಿ; ಎಂದುದಕ್ಕೆ ಬೀರನಾದ. ಈ ಕಥೆಯೂ, ವೀರ ಭದ್ರನಿಗೂ ಬೀರಪ್ಪನಿಗೂ ಭೇದವಿಲ್ಲ ಎಂಬುದನ್ನು ಪ್ರಚಾರ ಮಾಡುವುದಕ್ಕಾಗಿಯೇ ಇದೆ. ಶಿವನಿಗೆ ಅವನಿಗೆ ೧೨ನೆಯ ದಿವಸಕ್ಕೆ ’ಬೀರಪ್ಪ’ ಎಂಬ ನಾಮಕರಣ ಮಾಡಿದನಂತೆ. ಅವನು ಜನಿಸಿದ ಕಾಲದಲ್ಲಿ ದೇವತೆಗಳು ಪುಷ್ಪವೃಷ್ಟಿಕರೆದರು. ಎಲ್ಲ ದೇವತೆಗಳು ಸುಪ್ರೀತರಾದರು. ಅವರು ಜನಿಸಿದ ಮುಹೂರ್ತವೇ ಶುಭ ಮುಹೂರ್ತ; ದೇವಕುಮಾರ ಎಂದು ಬಣ್ಣಿಸಲಾಗಿದೆ ಹಲವು ಹಾಡುಗಳಲ್ಲಿ;
ಇನ್ನು ಕೆಲವು ಹಾಡುಗಳಲ್ಲಿ ಹೀಗೆ ಬಣ್ಣಿಸಲಾಗಿದೆ;
“ಅಂದನ ಗಿರಿಯಾಗ ಹುಟ್ಟೀದ ಬೀರಯ್ಯ;
ಮುಂದನ ಗಿರಿಯಾಗ ಬೆಳೆದಾನ ಬೀರಯ್ಯ;”
ಅಂದನ ಗಿರಿಯೆಂದರೆ ಗರ್ಭ, ಮಂದನ ಗಿರಿಯೆಂದರೆ ಮೊಲೆಹಾಲು ಎಂದು. ಮುಂದೆ ಈ ಮಾತುಗಳನ್ನು ಪದ್ಯಗಳಲ್ಲಿ ವಿವರಿಸಲಾಗಿದೆ. ಈ ಮಾತುಗಳಲ್ಲಿ ಅವನು ಎಲ್ಲರಂತೆಯೇ ತಾಯಗರ್ಭದಲ್ಲಿ ಜನಿಸಿ. ತಾಯ ಮೊಲೆಹಾಲಿನಿಂದ ಬೆಳೆದಿದ್ದಾನೆಂಬುದನ್ನು ಹೇಳಲಾಗಿದೆ. ಸರ್ವಮೃಗ, ಸರ್ವಪಕ್ಷಿಗಳೂ ಹಾಡಿ, ಉಲಿದು, ಹಾಲುಣಿಸಿ ಕೂಸನ್ನು ರಂಜಿಸಿ ಬೆಳೆಸಿವೆ. ’ಅಕ್ಕಮಾಯವ್ವನೂ ಯಾರಿಗೋ ಜನಿಸಿ. ಎಲ್ಲಿಯೋ ಬೆಳೆದವಳು’- ಎಂದರೆ ಗಂಧರ್ವ ಕನ್ಯೆಯಿಂದ ಜನಿಸಿ ಕುರುಬ ಚಾಮರಾಯನ ಹೆಂಡತಿ ಶಾಂಭವಿಯ ಕೈಯಲ್ಲಿ ಬೆಳೆದವಳು, ಶಾಂಭವಿ ಅಕ್ಕ ಮಾಯವ್ನ ಜೊತೆಗೆ ಮಾಯಿ, ಮಾಂಕಾಳಿ, ಮಂಡಮ್ಮ, ಲಕ್ಷ್ಮೀ ಎಂಬ ಇತರ ನಾಲ್ವರನ್ನೂ ಬೆಳೆಸಿದ್ದಳು. ಈ ಐವರೂ ಸ್ತ್ರೀಯರು ತಂದೆಯ ಜೊತೆಗೆ ಕುರಿಕಾಯಲು ಹೋದಾಗ ತೊಟ್ಟಿಲದಲ್ಲಿ ಬೀರಪ್ಪನನ್ನು ಕಂಡರು. ಶಿವನು ಈ ಐವರಲ್ಲಿ ಬೀರಪ್ಪನನ್ನು ಅಕ್ಕ ಮಾಯವ್ನ ಉಡಿಯಾಗ ಹಾಕಿದ ಎಂದು ಬಣ್ಣಿಸಲಾಗಿದೆ. ಈ ಎಲ್ಲ ಮಾತುಗಳ ಆಶಯವನ್ನು ನೋಡಿದರೆ ಬೀರಪ್ಪನು ’ಅನಾಥನಾಗಿ’ ಯಾರಿಗೋ ಜನಿಸಿ, ಎಲ್ಲಿಯೋ ಬೆಳೆದು, ವೀರನು, ಬುದ್ಧಿವಂತನೂ ಆದನೆಂಬುದು ತಿಳಿದು ಬರುತ್ತದೆ. (ಕಾಡುಹೂಗಳು ಸಂಗ್ರಾಹಕರು : ಜಿ.ಬಿ. ಖಾಡೆ -೧೯೭೩) ಹಬ್ಬಗಳಲ್ಲಿ ಕುರುಬರು ಬೀರಪ್ಪನ ಪ್ರೀತ್ಯರ್ಥವಾಗಿ ಡೊಳ್ಳುಬಾರಿಸುವುದನ್ನು ನೋಡಿದರೆ ಡೊಳ್ಳು ಅವನಿಗೆ ಪ್ರಿಯ ವಾದ್ಯವೂ ಎನಿಸುತ್ತದೆ. ಅಲ್ಲದೆ ಈ ವಾದ್ಯವನ್ನು ತಯಾರಿಸುವ- ಬಾರಿಸುವ ವಿದ್ಯೆಯನ್ನೂ ಕಲಿಸಿರಬೇಕು ಎನಿಸುತ್ತದೆ. ಈ ಕಾರಣದಿಂದಲೂ ಅವನು ಪೂಜಾರ್ಹ ವ್ಯಕ್ತಿಯಾಗಿದ್ದಾನೆ; ಆತನ ಸ್ಮಾರಕವಾಗಿ ದೇವಾಲಯಗಳು ರಚನೆಗೊಂಡಿವೆ. ಈ ಗೌರವ ಸಾಮಾನ್ಯವಾದುದೇನಲ್ಲ, ಭಕ್ತಿಯಿಂದ ಹಾಡುವುದು, ಬಾರಿಸುವುದು, ಕುಣಿವುದು – ಇವೆಲ್ಲವುಗಳನ್ನು ನೋಡಿದರೆ ಇವೆಲ್ಲ ಅವನಿಗೆ ಪ್ರಿಯವಾದ ಅಮಶಗಳೆನಿಸುತ್ತವೆ. ಹೀಗೆ ವ್ಯಕ್ತಿಯೊಬ್ಬನು ತಾನು ಗೈದ ಲೋಕಹಿತಕಾರ‍್ಯದಿಂದ ದೈವತ್ವಕ್ಕೇರಿದುದರ ಕುರುಹು. ಬೀರಪ್ಪನು ಅವನ ಜನನ ಹೇಗೇ ಇರಲಿ, ದೊಡ್ಡವನಾದ ಮೇಲೆ ಅವನಿಗೆ ಉತ್ಕೃಷ್ಟ ಸ್ಥಾನಕೊಟ್ಟಿದ್ದಾರೆ ಈ ಜನರು.
ಕುರುಬರು ಯಾವಾಗಲೂ ಕುರಿಹಿಂಡನ್ನು ಅಟ್ಟಿಕೊಂಡು ಅಡವಿ-ಅಡವಿ ತಿರುಗುತ್ತ ಕಾಲಕಳೆಯುವುದರಿಂದ ಅವರು ಧೀರರಾಗಿರಬೇಕಾಗುತ್ತದೆ. ಅದಕ್ಕಾಗಿ ಅವರು ವೀರರೂ ಆಗಿರಬೇಕಾದುದು ಅನಿವಾರ್ಯ. ಈ ಗುಣಗಳ ಬೆಳವಣಿಗೆಗೆ ಒಬ್ಬ ವೀರನ ಕಥೆ ಅವರಿಗೆ ಬೇಕಾಗಿತ್ತು. ಬೀರದೇವರ ಕಥೆಯಲ್ಲಿ ಅವರಿಗೆ ಆ ಅಂಶಗಳು ಗೋಚರಿಸಿರಬೇಕು. ಕುರುಬರ ಮೂಲಪುರುಷ-ಆದಿಗೊಂಡ (ಆದಿಗೌಡ) ರೇವಣಸಿದ್ಧನ ವರದಿಂದ ಆರು ಮಕ್ಕಳನ್ನು ಪಡೆದನು. ಅವರೆಂದರೆ: ಅಮರಗೊಂಡ ಶಿವಗೊಂಡ, ಬೀರಗೊಂಡ, ಮುರಿಗೊಂಡ.[3] ಮುದುಗೊಂಡ, ಪರಮಗೊಂಡ3 ಇವರೆಲ್ಲ ಶಿವಭಕ್ತರು. ಇವರೆಲ್ಲರ ತಾಯಿ ಆದಮ್ಮ, ಕುರುಬರ ಮೂಲಪುರುಷ ಆದಿಗೊಂಡನ ತಂದೆ ಮುದ್ದಪ್ಪ ಎಂಬುದೂ ಇದ್ದಂತಿದೆ. ಎಂದ ಮೇಲೆ ಕುರುಬರ ಈ ಹೆಸರುಗಳನ್ನು ನೋಡಿದರೆ ಸಿದ್ಧರಾಮನ ತಂದೆ ಮುದುಗೌಡ- ಅವರು ಪೂಜಿಸುತ್ತಿದ್ದ ’ಧೂಳಿ ಮಾಕಾಳ’ನ ನೆನಪಾಗುತ್ತದೆ. ಪುರಾತನ ಕಾಲದಿಂದಲೂ ಇದ್ದ ಈ ಕುರುಬರಿಗೆ ರೇವಣಸಿದ್ಧೇಶ್ವರರಿಂದ ಹೆಚ್ಚಿನ ಬೋಧೆಯಾದಂತಿದೆ. ಬೀರದೇವರು ಮಾತ್ರ ಇದಕ್ಕಿಂತಲೂ ಪೂರ್ವದವನೆಂಬುದು ಈ ಆರು ಮಕ್ಕಳಲ್ಲಿ ಆಗಲೇ ಒಬ್ಬನ ಹೆಸರು ’ಬೀರಪ್ಪ’ ಎಂದಿರುವುದು ಗೋಚರಿಸುತ್ತದೆ. ಆದಿ ಬೀರಪ್ಪನಿಂದ ಇಲ್ಲಿಯ ವರೆಗೆ ಎಷ್ಟು ಜನರಿಗೆ ಈ ಹೆಸರು ಇಟ್ಟಿದ್ದಾರೋ ಹೇಳುವುದು ಕಷ್ಟ, [4] ಬೀರಪ್ಪನನ್ನು ಹೆತ್ತ ತಾಯಿ ಅವನಿಂದ ಅಗಲುವಾಗ ಆಕೆ ಈ ರೀತಿ ಹರಸಿದಂತಿದೆ.
“ಕಲ್ಲಿನಕಿನ ಕಣಿಯಾಗು, ಮುಳ್ಳಿನಕಿನ ಮೊನೆಯಾಗು;
ಮತ್ತೊಂದು ಯುಗದಲ್ಲಿ ನನ್ನಲ್ಲಿ ಹುಟ್ಟು; ವೈರಿಯ ಹಸ್ತಕ್ಕಿಂತ
ನಿನ್ನ ಹಸ್ತ ಮೇಲಾಗಲಿ, ಕೋಟಿ ಹಸ್ತನಾಗು”-
ಈ ಹರಕೆ ಬೀರಪ್ಪನ ಜೀವನದಲ್ಲಿ ಫಲಿಸಿದಂತೆ ಕಂಡುಬರುತ್ತದೆ. ಬೀರಪ್ಪ ನನ್ನು ಕೊಲ್ಲಲಿಕ್ಕೆ ಹೋದವರು ಮರಳಿ ಬರುವಾಗ ಅವನ ಶಾಪದ ಫಲವೋ ಎಂಬಂತೆ ಒಬ್ಬನು ಒಂದು ಕಲ್ಲು ಆದ; ಇನ್ನೊಬ್ಬ ಹೊಲದ ನೀರಪ್ಪ ಆದ; ಮೂರನೆಯವ ಸೀಮಿಕಲ್ಲು ಆದ, ನಾಲ್ಕನೆಯವನು ಮಲಗಂಬ ಆದ; ಐದನೆಯವನು ಹೊರವ ಕಲ್ಲು ಆದ; ಆರನೆಯವನು ಬಡ್ಡಗಲ್ಲು ಆದ, ಏಳನೆಯವನು ಒಳಕಲ್ಲು ಆದ. ಹೀಗೆ ಕೊಲ್ಲಲು ಹೋದವರೆಲ್ಲ ಕಲ್ಲೇ ಆಗಿ ಹೋದರು ಎನ್ನುವ ಘಟನೆ ಅವನು ಎದುರಿಸಿದ ವೀರರು ಎನ್ನುವುದನ್ನು ಸೂಚಿಸುತ್ತಿವೆಯೋ ಅಥವಾ ಸಪ್ತ ವ್ಯಸನಗಳನ್ನು ಜಡಕಲ್ಲು ಮಾಡಿದುದರ ಸಂಕೇತವೋ ಏನೋ; ಸ್ಪಷ್ಟವಿಲ್ಲ. ಇವನೂ ಸಿದ್ಧಿಪುರುಷ ಎಂಬ ಮಾತು ಹಾಡುಗಳಲ್ಲಿ ಮೇಲಿಂದ ಮೇಲೆ ಬಂದಿರುವುದರಿಂದ ಸಿದ್ಧಿ ಪುರುಷನ ಜನನಕ್ಕೆ ಇನ್ನೊಬ್ಬ ಸಿದ್ಧಿ ಪುರುಷನ ಆಶೀರ್ವಾದ ಬೇಕಾಗುತ್ತದೆಯೆಂಬ ಭಾವನೆ ಬಹಳ ಹಳೆಯಕಾಲದ್ದು. ಸಿದ್ಧರಾಮೇಶ್ವರರು ಜನಿಸಿದುದೂ ರೇವಣಸಿದ್ದೇಶ್ವರರ ಆಶೀರ್ವಾದದಿಂದಲೇ. ಹಾಗೆಯೇ ಬೀರಪ್ಪನ ಜನನಕ್ಕೆ ಕಾರಣವಾಗಿದ್ದರೆ ರೇವಣ ಸಿದ್ದೇಶ್ವರರು ಎಂದ ಮೇಲೆ ಚಾರಿತ್ರಿಕ ವ್ಯಕ್ತಿ ಇರಬೇಕೆನಿಸುತ್ತದೆ. ಯಾವ ಪದ್ಯಗಳಲ್ಲೂ, ಆತನ ಹೆಸರಿಗೆ ತಕ್ಕಂತೆ, ಅವನು ಗೈದ ವೀರಕಾರ‍್ಯಗಳ ಉಲ್ಲೇಖ,
ದೇವರುಗಳೂ ಆಯಾಯ ಜಾತಿಯವರಿಗೇ ಪ್ರತ್ಯೇಕವಾಗಿದ್ದುದಕ್ಕೆ ಬೀರಪ್ಪನೊಂದು ನಿದರ್ಶನ. ಕೆಳವರ್ಗದ ಜನ, ಪ್ರಸಿದ್ಧ ದೇವಾಲಯಗಳಿಗೆ ಹೊಗಿ, ಅಲ್ಲಿ ಮನ್ನಣೆ ಪಡೆಯದಿದ್ದ ಕಾಲದಲ್ಲಿ, ಪ್ರತ್ಯೇಕ ದೇವರುಗಳನ್ನೇ ರಚಿಸಿಕೊಂಡುದರಿಂದ ಬೀರಪ್ಪ ಅವರಿಗೇ ದೇವರಾಗಿ ಉಳಿದಂತಿದೆ. ಮೇಲ್ಜಾತಿಯವರಲ್ಲಿ ಮಹಾಪುರುಷರಿದ್ದು ಅವರ ಬಗೆಗೆ ದೊಡ್ಡ ದೊಡ್ಡ ಕವಿಗಳು ಕತೆ ಬರೆದರೆ ಬೀರಪ್ಪನಂತಹರ ಬಗೆಗೆ ಆ ಜಾತಿಯ ಜನರೇ ಹಾಡುಗಳಲ್ಲಿ ಅವನನ್ನು ಹಾಡಿ, ಹೊಗಳಿ, ಆತನ ಸ್ಮರಣೆ ಉಳಿಸಿಕೊಂಡು ಬಂದಿರುತ್ತಾರೆ. ಅಂತಹದಕ್ಕೊಂದು ಉದಾಹರಣೆಯಾಗಿ ಮೆರೆದಿದ್ದಾನೆ ಬೀರಪ್ಪ. ಈ ಬೀರಪ್ಪ ಆದಿ ಜನಾಂಗಕ್ಕೆ ಸೇರಿದವನಿದ್ದು ದ್ರಾವಿಡ ಕುಲಸಂಬಂಧವನ್ನು ಸೂಚಿಸುವಂತಿದ್ದಾನೆ. ಹಲವು ದೇವರುಗಳ ಆರಾಧನೆ ಜನಪದರಿಗೆ ಪ್ರಿಯವಾದ ವಿಷಯ. ಆ ರೀತಿಯಲ್ಲಿ, ಕುರುಬರು, ಬೀರಪ್ಪನ ಆರಾಧನೆಯ ಜೊತೆಗೆ ಇನ್ನು ಬೇರೆಯವರನ್ನು ಆರಾಧಿಸುತ್ತಾರೆ. ಕುರುಬರಲ್ಲಿ ’ಬೀರಪ್ಪ’ ಎಂಬುದು ಅತ್ಯಂತ ಜನಪ್ರಿಯ ಹೆಸರು. ದೇವತಾಪುರುಷನಲ್ಲದ ’ಬೀರಪ್ಪ’ಗಳ ಬಗೆಗೆ ಹಲವು ಕಥೆಗಳೂ[5] ಉಪಲಬ್ಧವಿವೆ. ನಾವು ಅವೆಲ್ಲವುಗಳನ್ನು ದೇವತಾಪುರುಷ ಬೀರಪ್ಪನಿಗೇ ಸಂಬಂಧಿಸಿದವುಗಳೆಂದು ಭ್ರಮಿಸಬೇಕಾಗಿಲ್ಲ ಪವಾಡ, ಅದ್ಭುತತೆ ಜನರಿಗೆ ಹಿಡಿಸುತ್ತಿದ್ದ ಹಿಂದಿನ ಕಾಲದಲ್ಲಿ ಬೀರಪ್ಪನ ಕಲೆಯ ಬಗೆಗೂ ಇಂತಹ ಅಂಶಗಳನ್ನು ಸೇರಿಸಿ, ಕುರುಬರು ಹಾಡುವುದರಿಂದ ಅದೊಂದು ಒಪ್ಪಬಲ್ಲ ಕತೆಯಲ್ಲ ಎಂಬ ಭಾವನೆ ಶಿಷ್ಟ ಕವಿಗಳಿಗಿತ್ತು. ಬೀರಪ್ಪನು ವೀರನೂ, ಸಾತ್ವಿಕನೂ, ಹಿತಕಾರಿಯೂ, ಸಿದ್ಧಿಪುರುಷನೂ, ಉದ್ಯೋಗಶೀಲನೂ, ಕಲಾವಿದನೂ ಆಗಿರುವುದರಿಂದ ಈ ಎಲ್ಲ ಗುಣಗಳನ್ನು ಮೆಚ್ಚುವ ಕುರುಬರು ಅವನನ್ನು ಬಹು ಪುರಾತನ ಕಾಲದಿಂದ ಕೊಂಡಾಡುತ್ತ ಬಂದಿರುವುದು ಸ್ತುತ್ಯವೇ ಸರಿ.
kanaja