ಕುರುಬರ ಗುರುಸ್ಥಾನದ ಮೂರು ಶಾಖೆಗಳು ವಿಜಾಪುರ ಜಿಲ್ಲೆಯಲ್ಲಿ ಜನ್ಮ ತಳೆದಿವೆ. ರೇವಣಸಿದ್ಧನ ಶಿಷ್ಯನಾದ ಶಾಂತ ಒಡೆಯರು, ಸೊನ್ನಲಗಿ ಸಿದ್ಧರಾಮನ ಶಿಷ್ಯನಾದ ಮಂಕ ಒಡೆಯರು ಹಾಗೂ ಸೋಮಲಿಂಗನ ಶಿಷ್ಯನಾದ ಅಮ್ಮೋಗಿ ಒಡೆಯರು – ಇವರೇ ಆ ಮೂರು ಶಾಖೆಯ ಮೂಲ ಪುರುಷರು. ಶಾಂತ ಒಡೆಯರ ಶಾಖೆ ಹಾಗೂ ಮಂಕ ಒಡೆಯರ ಶಾಖೆಗಳ ಬೇರು ಮುದ್ದೇಬಿಹಾಳ ತಾಲೂಕಿನ ಸರೂರದಲ್ಲಿ ಇದ್ದರೆ ಅಮ್ಮೋಗಿ ಒಡೆಯರ ಶಾಖೆಯ ಬೇರು ವಿಜಾಪುರ ತಾಲೂಕಿನ ಅರಕೇರಿಯಲ್ಲಿ ಇದೆ. ಈ ಮೂರೂ ಶಾಖೆಗಳು ಲಿಂಗಾಯತ ಚಳವಳಿಯ ಮುಖಾ ಮುಖಿಯಲ್ಲಿ ರೂಪು ತಳೆದಿವೆ. ಹನ್ನೆರಡನೆಯ ಶತಮಾನದಲ್ಲಿ ಮೊದಲಿನೆರಡು ಶಾಖೆಗಳು ರೂಪಗಂಡರೆ ಅಮ್ಮೋಗಿ ಒಡೆಯರ ಶಾಖೆ ಹದಿನಾರನೆಯ ಶತಮಾನದಲ್ಲಿ ರೂಪು ತಳೆದಿದೆ.

ಅಮ್ಮೋಗಿಸಿದ್ದ, ಅಮಸಿದ್ದ, ಅಮಾಕಸಿದ್ದ ಮುಂತಾದ ಹೆಸರುಗಳಿಂದ ಕರೆಯಿಸಿಕೊಳ್ಳುವ ಈತ ಇತ್ತೀಚೆಗೆ ಅಮೋಘಸಿದ್ಧೇಶ್ವರ ಎಂಬ ಶಿಷ್ಟ ಹೆಸರಿನಿಂದ ಗುರುತಿಸಿಕೊಳ್ಳುತ್ತಿದ್ದಾನೆ. ಅಮ್ಮೋಗಿಸಿದ್ದ ಎನ್ನುವ ಹೆಸರಿಗೂ ವಚನಕಾರನಾದ ಅಮುಗಿದೇವನ ಹೆಸರಿಗೂ ಇರುವ ಉಚ್ಛಾರ ಸಾಮ್ಯದ ಕಾರಣದಿಂದ ಹಾಗೂ ಅವರಿಬ್ಬರ ಗುರು/ಆರಾಧ್ಯ ದೈವ ಸೋಮಲಿಂಗ ಆಗಿರುವ ಕಾರಣದಿಂದ ಇಬ್ಬರೂ ಅಭಿನ್ನರು ಎನ್ನುವ ಗೊಂದಲ ಉಂಟಾಗಿದೆ. ಅಮುಗಿದೇವ ವಚನಕಾರ; ಅವನ ಹೆಂಡತಿಯ ಹೆಸರು ರಾಯಮ್ಮ; ಅವನ ಮಕ್ಕಳ ಬಗೆಗೆ ಯಾವುದೇ ಉಲ್ಲೇಖವಿಲ್ಲ. ಆದರೆ ಅಮ್ಮೋಗಿಸಿದ್ದ ವಚನಕಾರನಲ್ಲ: ಅವನ ಹೆಂಡತಿಯ ಹೆಸರು ಪದ್ಮಾವತಿ; ಅವನಿಗೆ ಮೂರು ಜನ ಪುಣ್ಯದ ಮಕ್ಕಳು, ನಾಲ್ಕು ಜನ ಧರ್ಮದ ಮಕ್ಕಳು, ಇಪ್ಪತ್ತೊಂದು ಜನ ಧರ್ಮರು; ನೂರಾ ಒಂದು ಜನ ಧರ್ಮರ ಮಕ್ಕಳು; ಸಾವಿರದಾ ಏಳು ನೂರು ಮಕ್ಕಳು ಎಂದು ಅವನ ವಂಶಾವಳಿ ಇರುವುದಾಗಿ ತಿಳಿದು ಬರುತ್ತದೆ. ಅದೂ ಅಲ್ಲದೆ ಅಮುಗಿದೇವನ ಕಾಲ ಹನ್ನೆರಡನೆಯ ಶತಮಾನವಾದರೆ ಅಮ್ಮೋಗಿಸಿದ್ಧನ ಕಾಲ ಹದಿನಾರು ಹದಿನೇಳನೆಯ ಶತಮಾನವಾಗಿದೆ. ಮೇಲಾಗಿ ಅಮುಗಿದೇವ ‘ಶರಣ’ ಪಂಥೀಯನಾದರೆ ಅಮ್ಮೋಗಿಸಿದ್ದ ‘ಸಿದ್ಧ’ ಪಂಥೀಯನಾಗಿದ್ದಾನೆ. ಹೀಗಾಗಿ ಅವರಿಬ್ಬರೂ ಭಿನ್ನರು ಎನ್ನುವಲ್ಲಿ ಯಾವುದೇ ತೊಡಕು ಉಳಿದಿಲ್ಲ.

ಅಮ್ಮೋಗಿಸಿದ್ಧನ ನೆಲೆ ವಿಜಾಪುರದಿಂದ ಹತ್ತು ಹನ್ನೆರಡು ಕಿಲೋಮೀಟರ ದೂರದಲ್ಲಿರುವ ಅರಕೇರಿ. ಅವನ ಗುಡಿ ಇರುವುದು ಅರಕೇರಿ, ಜಾಲವಾದಿ ಹಾಗೂ ಸಿದ್ಧಾಪುರಗಳ ಸೀಮೆ ಕೂಡುವ ಜಾಗೆಯಲ್ಲಿ. ಮೂರು ಊರಿನ ಮೆಟ್ಟುಗಳು/ಜಾಗೆಗಳು ಕೂಡುವ ಸ್ಥಳವಾದ್ದರಿಂದ ಇದನ್ನು ಮುಮ್ಮೆಟಗುಡ್ಡವೆಂದು ಕರೆಯುತ್ತಾರೆ. ಈ ಊರಿನ ಸಮೀಪದಲ್ಲಿಯೇ ಅವನ ಗುರುವಾದ ಸೋಮಲಿಂಗನ ವಾಸಸ್ಥಾನವಾದ ಮಕಣಾಪುರವೆಂಬ ಊರಿದೆ. ಈ ಶಾಖೆಯ ಜನ ‘ಅರಕೇರಿ ಅರಮನಿ, ಭೀವರಗಿ ಗುರುಮನಿ, ಮಾಯ ಮಕಣಾಪುರ ಶಿವಸ್ಥಾನ ಗದ್ದಗಿ ಕಲ್ಲೂರ ಕಡೆಮಠ’ವೆಂಬ ಘೋಷವಾಕ್ಯ ಉಗ್ಗಡಿಸುತ್ತಾರೆ. ಈ ಉಗ್ಗಡಿಸುವಿಕೆ ಈ ಶಾಖೆಯ ಭೌಗೋಳಿಕ ವ್ಯಾಪ್ತಿಯನ್ನು ಸೂಚಿಸುವಂಥದ್ದಾಗಿದೆ.

ಅಮ್ಮೋಗಿಸಿದ್ಧನ ಹೆರಿನಲ್ಲಿರುವ ‘ಸಿದ’್ಧ ಎನ್ನುವ ಉಪಾಧಿ ಅವನನ್ನು ಸಿದ್ಧ ಪಂಥದವನು ಎನ್ನುವುದನ್ನು ಸಾಬೀತು ಪಡಿಸುತ್ತದೆಯಾದರೂ ಅವನಿಗೆ ಸಿದ್ಧ ಪಂಥದ ಜೊತೆಜೊತೆಗೆ ನಾಥ, ಕಾಪಾಲಿಕ, ಸೋಮಸಿದ್ಧಾಂಥ, ಅವಧೂತ ಹಾಗೂ ಸೂಫಿಗಳ ನಿಕಟ ಸಂಪರ್ಕವಿರುವುದರಿಂದ ಅವನದು ಒಂದು ರೀತಿ ಸಂಕರ ಪಂಥವೆನ್ನಿಸುತ್ತದೆ. ಈತನ ಗುರು ‘ಗುರು ಗೌರಿ ಸೋಮಲಿಂಗ’ ಎಂದೇ ಪ್ರಖ್ಯಾತ. ಈತ ಕಾಪಾಲಿಕನಾಗಿದ್ದನೆಂದು ತಿಳಿದು ಬರುತ್ತದೆ. ಅಮ್ಮೋಗಿಸಿದ್ಧ ತನ್ನ ಶಿಶು ಮಗನೊಬ್ಬನಿಗೆ ಮಹಾಸಿದ್ದ (ಗೋರಖನಾಥನ ಇನ್ನೊಂದು ಹೆಸರು), ತನ್ನ ಹೊಟ್ಟೆಯ ಮಗನೊಬ್ಬನಿಗೆ ಕನ್ನಪ್ಪ (ಕಾನಿಫ ನಾಥನೆನ್ನುವ ಹೆಸರನ್ನು ಹೋಲುವ ಹೆಸರು) ಎಂದೂ ಹೆಸರಿಡುವ ಮೂಲಕ ನಾಥ ಪಂಥದಲ್ಲಿ ತನಗಿರುವ ನಿಷ್ಠೆಯನ್ನು ಮೆರೆದಿದ್ದಾನೆ. ತನ್ನ ಹೊಟ್ಟೆಯಲ್ಲಿ ಹುಟ್ಟಿದ ಮೊದಲ ಮಗನಿಗೆ ಅವಧುಸಿದ್ಧ ಎಂದು ಹೆಸರಿಟ್ಟಿದ್ದಾನೆ. ಇದು ಅಮ್ಮೋಗಿಸಿದ್ಧನಿಗೂ ಅವಧುತ ಪಂಥಕ್ಕೂ ಇರುವ ನಿಕಟ ಸಂಪರ್ಕದ ಕಡೆಗೆ ಬೆರಳು ಮಾಡಿ ತೋರಿಸುತ್ತದೆ. ಅಮ್ಮೋಗಿಸಿದ್ಧನ ಶಾಖೆಯ ಎರಡು ಮೂರು ತಲೆಮಾರುಗಳ ಸಿದ್ಧರೊಂದಿಗೆ ಭೂತಾಳಿಸಿದ್ಧನೆಂಬ ಸೇವಕನ ಹೆಸರು ಸದಾ ಕೇಳಿ ಬರುತ್ತದೆ. ಅವರು ಯೋಚಿಸಿದ್ದನ್ನು ಕಾರ್ಯರೂಪಕ್ಕೆ ತರುವ ಕೆಲಸವನ್ನು ಈತ ಮಾಡಿಕೊಂಡು ಬಂದಿದ್ದಾನೆ.

ಅಮ್ಮೋಗಿಸಿದ್ಧನ ಕುರಿತು ಒಂದು ಪುರಾಣ ರೂಪಿ ಕತೆಯಿದೆ. ಆತ ಕೈಲಾಸದಲ್ಲಿ ಶಿವಪಾರ್ವತಿಯರ ಸೇವೆ ಮಾಡಿಕೊಂಡಿದ್ದನೆಂತಲೂ ಕೈಲಾಸದಿಂದ ಭೂಲೋಕಕ್ಕೆ ಬರುವಾಗ ಮಳೆಕೀಲು, ಬೆಳೆಕೀಲು, ಪ್ರಸಾದ ಗಂಟು. ಬಡವರಿಗೆ ಭಾಗ್ಯ, ಹುಟ್ಟು ಬಂಜೆಯರಿಗೆ ತೊಟ್ಟಿಲ ಭಾಗ್ಯಗಳನ್ನು ಪಡೆದು ಬಂದಿದ್ದನೆಂದು ಈ ಪುರಾಣ ಕಥನ ಹೇಳುತ್ತದೆ. ಇವನ್ನೆಲ್ಲ ರೂಪಕಗಳೆಂದು ಭಾವಿಸುವುದಾದರೆ ಅವೆಲ್ಲಾ ಫಲಪ್ರಾಪ್ತಿಯ ಸಂಕೇತಗಳೇ ಆಗಿವೆ. ಮಣ್ಣು, ಹೆಣ್ಣು ಹಾಗೂ ಬಡವರು ಸಂಕಷ್ಟಗಳಿಂದ ದೂರ ಇರಬೇಕೆಂದು ಈ ಶಾಖೆಯವರ ಆಶಯವಾಗಿದೆ ಅನ್ನಿಸುತ್ತದೆ. ಅಮ್ಮೋಗಿಸಿದ್ಧ ತನ್ನ ಜೀವಮಾನದಲ್ಲಿ ಹಲವಾರು ಮಹಿಳೆಯರ ಬಂಜೆತನ ನೀಗಿಸಿದ ಕತೆಗಳು ಬರುತ್ತವೆ; ಕಂಬಳಿ ಬೀಸಿ ಮಳೆ ಬರಿಸಿದ ಘಟನೆಗಳು ಬರುತ್ತವೆ; ಮಳೆಯ ನೀರಿನ ರಭಸಕ್ಕೆ ಕೊಚ್ಚಿ ಹೋಗದ ಹಾಗೆ ಹೊಲದ ಒಡ್ಡುಗಳ ನಿರ್ಮಾಣ ಮಾಡುವ ತಂತ್ರಜ್ಞಾನವನ್ನು ಬಲ್ಲವನಾಗಿದ್ದಾನೆ.

ಅಮ್ಮೋಗಿ ಒಡೆಯರ ಪಂಥ ಎರಡು ಧಾರೆಯಲ್ಲಿ ಮುಂದುವರೆದು ಬಂದಿದೆ. ಮೊದಲ ಧಾರೆ ಪುಣ್ಯದ ಮಕ್ಕಳ ಧಾರೆ. ಇದು ಅಮ್ಮೋಗಿಸಿದ್ದನ ಶಿಶು ಮಕ್ಕಳ ಶಾಖೆ. ಎರಡನೆಯದು ಧರ್ಮದ ಮಕ್ಕಳ ಧಾರೆ. ಇದು ಅವನ ಹೊಟ್ಟೆಯ ಮಕ್ಕಳ ಶಾಖೆ. ಮೊದಲ ಧಾರೆ ಅಮ್ಮೋಗಿಸಿದ್ದ ತನ್ನ ವಿವಾಹ ಪೂರ್ವದಲ್ಲಿ ಬೆಳೆಯಿಸಿದ ಪಂಥವೆನ್ನಿಸಿದೆ. ಆತ ನಾಥ ಪಂಥದ ಪ್ರಭಾವದಲ್ಲಿದ್ದಾಗ ‘ಗುರು-ಶಿಷ್ಯ ಪರಂಪರೆ’ಯನ್ನು ಅನುಸರಿಸಿ ಬೆಳೆದ ಪಂಥ ಇದಾಗಿದೆ. ಸ+ಉಮಾ> ಸೋಮ ಸಿದ್ಧಾಂತದ ಪ್ರಭಾವಕ್ಕೆ ಬಂದ ನಂತರ ‘ಪಿತೃ-ಪುತ್ರ’ ಪರಂಪರೆ ಅನುಸರಿಸಿ ಧರ್ಮದ ಮಕ್ಕಳ ಶಾಖೆ ಬೆಳೆದು ಬಂದಿದೆ.

ಪುಣ್ಯದ ಮಕ್ಕಳ ಶಾಖೆಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವವರು ಮೂರು ಜನ ಶಿಷ್ಯರು. ಭಂಡಾರಕವಟೆ ಮಾಸಿದ್ದಪ್ಪ, ತೆರೆವಾಡ ಮಂಗರಾಯ ಹಾಗೂ ಕರಣಿ ಮಲಕಾರಿಸಿದ್ದ ಇವರೇ ಆ ಮೂರು ಜನ ಶಿಷ್ಯರು. ಧರ್ಮದ ಮಕ್ಕಳ ಶಾಖೆಯಲ್ಲಿ ಮೊದಲಿಗೆ ಕಾಣಿಸಿಕೊಳ್ಳುವವರು ನಾಲ್ಕು ಜನ ಹೊಟ್ಟೆಯ ಮಕ್ಕಳು. ಅವತಾರ ಅವಧುಸಿದ್ಧ ಬುದ್ದ್ಯುಳ್ಳ ಬಿಳಿಯಾನಿಸಿದ್ಧ, ಆಚಾರಗೌಡ ಸೋಮಣ್ಣ ಮುತ್ತ್ಯಾ ಹಾಗೂ ಕಡೆಹುಟ್ಟ ಕನ್ನಮುತ್ಯಾ ಇವರೇ ಆ ನಾಲ್ಕು ಜನ ಧರ್ಮದ ಮಕ್ಕಳು. ಅಮ್ಮೋಗಿಸಿದ್ದ ಗಳಿಸಿದ ಚರಾಸ್ತಿ ಸ್ಥಿರಾಸ್ತಿಯ ಪಾಲವಾಟನೆಯಲ್ಲಿ ಎರಡೂ ಧಾರೆಯವರ ಮಧ್ಯ ಬಿಕ್ಕಟ್ಟು ಬಂದು ಮೂಲ ನೆಲೆಯಿಂದ ಪುಣ್ಯದ ಮಕ್ಕಳು ಬೇರೆ ಬೇರೆ ದಿಕ್ಕಿನ ಕಡೆಗೆ ವಲಸೆ ಹೋಗಿ ಚರವಾಗುತ್ತಾರೆ. ಧರ್ಮದ ಮಕ್ಕಳು ಅರಕೇರಿ ಸಮೀಪದ ಭೀವರಗಿಯಲ್ಲಿ ಗುರುಮನೆಯನ್ನು ಸ್ಥಾಪಿಸಿಕೊಂಡು ಸ್ಥಿರವಾಗುತ್ತಾರೆ. ಭೀವರಿಗೆ ಗುರುಮನೆಯನ್ನು ಕೇಂದ್ರವನ್ನಾಗಿಸಿಕೊಂಡು ಇಪ್ಪತ್ತೊಂದು ಮಠಗಳನ್ನು ಸ್ಥಾಪಿಸಿಕೊಂಡು ಭೀವರಗಿ ಕೇಂದ್ರವನ್ನು ಭದ್ರಗೊಳಿಸುತ್ತಾರೆ. ಆ ಇಪ್ಪತ್ತೊಂದು ಧರ್ಮರಲ್ಲಿ ಮಲಕಾರಿಸಿದ್ಧನೆನ್ನುವವ ಅತ್ಯಂತ ಪ್ರಭಾವಶಾಲಿಯಾಗಿದ್ದಾನೆ. ಹತ್ತೂರಿನ ಓಗೆಣ್ಣಮುತ್ತ್ಯಾ ಹಾಗೂ ಅಚೇಗಾಯಿ ಶೀಲಿಸಿದ್ಧ ಇನ್ನಿಬ್ಬರು ಪ್ರಭಾವಿ ಸಿದ್ಧರಾಗಿದ್ದಾರೆ.

ಅಮ್ಮೋಗಿಸಿದ್ಧ ಪರಂಪರೆಯ ಸಿದ್ಧರು ಕರ್ನಾಟಕ ಹಾಗೂ ಮಹಾರಾಷ್ಟ್ರಗಳ ಗಡಿಭಾಗದಲ್ಲಿ ತಮ್ಮ ರೈತಪರ ಹಾಗೂ ಮಹಿಳಾಪರ ನಿಲುವಿನ ಕಾರಣವಾಗಿ ಇಂದು ದೈವವಾಗಿ ಪೂಜೆಗೊಳ್ಳುತ್ತಲಿದ್ದಾರೆ. ಕೋಳಿ ಕೂಗಿದ ಜಾಗೆಯಲ್ಲೆಲ್ಲ ಅಮ್ಮೋಗಿಸಿದ್ಧನ ಗುಡಿಗಳಿವೆ ಎಂದು ಜನ ಆಡಿಕೊಳ್ಳುವ ಮಾತಿನಲ್ಲಿ ಅತಿಶಯೋಕ್ತಿಯಿಲ್ಲ. ಬರಗಾಲದಿಂದ ಸದಾ ತತ್ತರಿಸಿದ ಇಲ್ಲಿನ ಜನರಿಗೆ ಈ ಸಿದ್ಧರ ಹೆಸರಿನಲ್ಲಿ ನಡೆಯುವ ಜಾತ್ರೆಯ ಸಂದರ್ಭದಲ್ಲಿ ಇಂದಿನ ಒಡೆಯರು/ಮಾರಾಯರು ಹೇಳಿಕೆ ಮಾಡುತ್ತಾರೆ. ಪರಿಸ್ಥಿತಿ ಎಂಥದೇ ಬಂದರೂ ಅದನ್ನು ಎದುರಿಸುವ ಆತ್ಮ ಸ್ಥೈರ್ಯವನ್ನು ಮಾರಾಯರ ಹೇಳಿಕೆಗಳು ರೈತರಲ್ಲಿ ತುಂಬುತ್ತವೆ. ಮುಂಗಾರಿ ಮಳೆ/ಬೆಳೆ ಹೋದರೆ ಹಿಂಗಾರಿ ಮಳೆ/ಬೆಳೆ ಕೊಟ್ಟು ಜನ ಜಾನುವಾರುಗಳನ್ನು ರಕ್ಷಿಸುತ್ತೇನೆಂದು ದೈವದ ಪ್ರತಿನಿಧಿಯಾಗಿ ಮಾರಾಯರು ಭರವಸೆ ನೀಡುತ್ತಾರೆ. ಅವರ ಈ ನಿಲುವನ್ನು ಜಾತ್ರೆ ಉತ್ಸವದಂಥ ಆಚರಣೆಯಲ್ಲಿ ನೋಡಬಹುದಾಗಿದೆ. ಕಲ್ಲೂರ, ಚಬನೂರ, ಆಚೆಗಾವಿ, ತೆರೆವಾಡ, ಭಂಡರಕವಟೆ, ಕುಚನೂರ ಮುಂತಾದ ಊರುಗಳಲ್ಲಿ ಹೇಳಿಕೆ ಹಾಗೂ ಸೂಚಗಳ ಮೂಲಕ ಕಂಗಾಲದವರ ಎದೆಯಲ್ಲಿ ಆಶಾಕಿರಣವನ್ನು ಮೂಡಿಸಲಾಗುತ್ತದೆ.

ಅಮ್ಮೋಗಿ ಒಡೆಯರು ವೃತ್ತಿಯಿಂದ ಪಶುಪಾಲಕರಾಗಿದ್ದವರು. ಪಶುಪಾಲಕರಲ್ಲಿ ಸಾಮಾನ್ಯವಾಗಿ ಮಹಿಳಾ ವಿರೋಧಿ ನಿಲುವಿರುತ್ತದೆ. ಅದಕ್ಕೆ ಪೂರಕವಾಗಿ ನಾಥ ಪಂಥದ ಸೈದ್ಧಾಂತಿಕತೆಯೂ ಸೇರಿಕೊಂಡು ಮಹಿಳಾ ವಿರೋಧಿ ನಿಲುವು ಇನ್ನಷ್ಟು ಪ್ರಖರವಾಗಿದೆ. ಸ್ವತಃ ಅಮ್ಮೋಗಿಸಿದ್ಧ ಪದ್ಮಾವತಿಯನ್ನು ಮದುವೆಯಾಗುವಾಗ ಅವಳ ಪಕ್ಕದಲ್ಲಿ ತಾನು ಕುಳಿತುಕೊಳ್ಳದೆ ತನ್ನ ಬೆತ್ತವನ್ನು ಕುಳ್ಳರಿಸುತ್ತಾನೆ. ಅಂಥದ್ದರ ಮಧ್ಯದಲ್ಲೂ ಈ ಪರಂಪರೆಯಲ್ಲಿ ಅಲ್ಲಲ್ಲಿ ಮಹಿಳಾಪರವಾದ ನಿಲುವು ಕಾಣಿಸುತ್ತಿರುವುದು ಆರೋಗ್ಯಪೂರ್ಣ ಲಕ್ಷಣವಾಗಿದೆ. ಹತ್ತೂರಿನ ಆಚರಣೆ ಹಾಗೂ ಅಚೇಗಾವಿಯಲ್ಲಿ ನಡೆವ ಜಕ್ಕೇರಿ ಹಂಗೊಡ ಆಚರಣೆಗಳು ಮಹಿಳೆಯನ್ನು ಗೌರವಿಸುವಂಥವಾಗಿವೆ. ಅಮ್ಮೋಗಿಸಿದ್ಧನ ಎರಡನೆಯ ಮಗನಾದ ಬಿಳಿಯಾನಿಸಿದ್ಧನ ಹೆಂಡತಿಯಾದ ಕೊಂತವ್ವ ತನ್ನ ನೇರ ನಿಷ್ಠುರ ನಡೆಯಿಂದ ಪುರುಷರನ್ನು ಪ್ರಶ್ನಿಸುವ ಕೆಲಸ ಮಾಡಿದ್ದಾಳೆ. ಆ ಕಾರಣವಾಗಿ ಕಷ್ಟವನ್ನೂ ಎದುರಿಸಿದ್ದಾಳೆ.

-ಡಾ.ಚನ್ನಪ್ಪ ಕಟ್ಟಿ

https://www.youtube.com/watch?v=Hd5e3SHDIOM
https://www.youtube.com/watch?v=yLBNO5zzcTo

Leave a Reply

Your email address will not be published. Required fields are marked *

error: Content is protected !!