
ಪ್ರಾಚೀನ ಕಾಲದಲ್ಲಿ ನಮ್ಮ ಭಾರತ ದೇಶವನ್ನು ಭರತಖಂಡ’ ಎಂದು ಕರೆಯಲಾಗುತ್ತಿತ್ತು. ಈ ಪ್ರದೇಶವು ಇಂದಿನ ಭಾರತ, ನೇಪಾಳ, ಪಾಕಿಸ್ತಾನ, ಅಪಘಾನಿಸ್ತಾನ, ಶ್ರೀಲಂಕ, ಬ್ರಹ್ಮದೇಶ ಮೊದಲಾದ ದೇಶಗಳನ್ನು ಒಳಗೊಂಡಿತ್ತು. ಇಡೀ ಭರತಖಂಡವನ್ನು ಒಂದು ಛತ್ರದಡಿ ತಂದು ಆಳಿದ ಪ್ರಥಮ ಸಾಮ್ರಾಜ್ಯವು
ಮಗದ ಸಾಮ್ರಾಜ್ಯವಾಗಿದೆ. ಅದು ಒಬ್ಬ ಕುರುಬ ಸಮುದಾಯದಿಂದ ಬಂದ ಚಕ್ರವರ್ತಿಯೊಬ್ಬನಿಂದ ಸಾಧ್ಯವಾಗಿದ್ದುದು ಇಡೀ ಹಾಲುಮತಸ್ಥರ ಹೆಮ್ಮೆಯಾಗಿದೆ.
ಮಗದ ಸಾಮ್ರಾಜ್ಯವನ್ನು ಒಟ್ಟು ನಾಲ್ಕು ಸಂತತಿಗಳು ಆಳಿದ್ದು ಮೊದಲ ಮೂರು ಸಂತತಿಗಳ ಆಡಳಿತದಲ್ಲಿ ಅದನ್ನು `ಮೊದಲ ಮಗಧ ಸಾಮ್ರಾಜ್ಯ’ವೆಂದು ಕರೆಯಲಾಗಿದೆ. ಆ ಸಂತತಿಗಳೆಂದರೆ,
ಅ. ಹರ್ಯಾಂಕ ಸಂತತಿ : ನಾಲ್ಕು ಜನ ರಾಜರ ಆಳ್ವಿಕೆ ನಂತರ
- ಬಿಂಬಸಾರ(ಕ್ರಿ.ಪೂ. 544-492)
- ಅಜಾತಶತೃ(ಕ್ರಿ.ಪೂ. 492-460)
- ಉದಯಿನ್ (ಕ್ರಿ.ಪೂ. 460-444)
ಬ. ಶಿಶುನಾಗ ಸಂತತಿ
ಕ. ನಂದ ಸಂತತಿ - ಮಹಾಪದ್ಮನಂದ
- ಮಕ್ಕಳು, ಎಂಟು ಜನರು
ಡ. ಮೌರ್ಯ ಸಂತತಿ
- ಚಂದ್ರಗುಪ್ತ ಮೌರ್ಯ
- ಬಿಂಬಸಾರ
- ಅಶೋಕ (ಕ್ರಿ.ಪೂ. 272-232)
- ಬ್ರಹದ್ರಥ (ಕ್ರಿ.ಪೂ. 232- 195)
ಮಗಧವನ್ನು ಆಳಿದ ಈ ನಾಲ್ಕು ರಾಜಮನೆತನಗಳು ದಕ್ಷಿಣ ಭಾರತದಲ್ಲಿ `ವಿಜಯನಗರ ಸಾಮ್ರಾಜ್ಯ’(ಕ್ರಿ.ಶ. 1336-1565)ವನ್ನು ಕಟ್ಟಿ ಆಳಿದ ನಾಲ್ಕು ರಾಜಮನೆತನಗಳನ್ನು ಹೋಲುತ್ತವೆ ಮತ್ತು ಇವು ಧನಗಾರರಾದ ಕುರುಬರ ಸಾಧನೆಗಳಾಗಿವೆ. ಈ ಸಂತತಿಗಳಲ್ಲಿ ಕೊನೆಯದಾದ ಮೌರ್ಯ ವಂಶವು ಅತ್ಯಂತ ಪ್ರಸಿದ್ಧ ಮನೆತನವೆಂಬುದನ್ನು ಇತಿಹಾಸವು ಸಾರುತ್ತದೆ.
ಕ್ರಿ.ಪೂ. 545-44ರಲ್ಲಿ ಆಡಳಿತಕ್ಕೆ ಬಂದ ಮಗಧ ಸಾಮ್ರಾಜ್ಯದ ನಾಲ್ಕನೆಯ ಸಂತತಿಯಾಗಿ ಮೌರ್ಯವಂಶವು ಅಧಿಕಾರಕ್ಕೆ ಬರುತ್ತದೆ. ಈ ವಂಶದ ಪ್ರಮುಖ ಅರಸರೆಂದರೆ ಚಂದ್ರಗುಪ್ತ ಮೌರ್ಯ, ಬಿಂಬಸಾರ ಮತ್ತು ದೇವನಾಂಪ್ರಿಯ(ಕ್ರಿ.ಪೂ. 492-461) ಎನ್ನಿಸಿದ್ದ ಅಶೋಕ ಚಕ್ರವರ್ತಿಗಳಾಗಿದ್ದಾರೆ. ಮೌರ್ಯ ಸಂತತಿಯವರು ಆಳಿದ್ದರಿಂದ ಮಗಧ ಸಾಮ್ರಾಜ್ಯಕ್ಕೆ ಮೌರ್ಯ ಸಾಮ್ರಾಜ್ಯವೆಂದೇ ಹೆಸರಾಯಿತು.
ಪ್ರಾಚೀನ ಭಾರತದ ಪ್ರಮುಖ ಅರಸು ಮನೆತನವಾದ ಮೌರ್ಯರು ಭಾರತದ ಬಹುಭಾಗವನ್ನು ಆಳಿದರು. ಭಾರತದಲ್ಲಿ ಅರಸುಮನೆತನದ ಅಡಿಪಾಯ ಮತ್ತು ವ್ಯವಸ್ಥಿತ ಆಡಳಿತ ಪದ್ಧತಿ ಇವರಿಂದಲೇ ಪ್ರಾರಂಭವಾಯಿತೆಂದು ಹೇಳಿದರೆ ವಸ್ತುನಿಷ್ಟವಾಗುತ್ತದೆ. ಇವರು ಉತ್ತರದ ಪಾಟಲೀಪುತ್ರವನ್ನು ರಾಜಧಾನಿಯಾಗಿ ಮಾಡಿಕೊಂಡು ಕ್ರಿ.ಪೂ. ನಾಲ್ಕನೆಯ ಶತಮಾನದ ಅಂತ್ಯದಲ್ಲಿ ಆಡಳಿತಕ್ಕೆ ಬಂದರು. ಚಂದ್ರಗುಪ್ತಮೌರ್ಯ ಇವರ ಮೊದಲ ಅರಸನಾಗಿದ್ದಾನೆ.
ನವನಂದರು ಬ್ರಾಹ್ಮಣರನ್ನು ರಾಜ್ಯಾಡಳಿತದಿಂದ ದೂರವಿಡಲು ಪ್ರಯತ್ನಿಸುತ್ತಾರೆ. ಗೌಳಿ ಕುರುಬರ ಮತ್ತು ಶೂದ್ರರ ಪ್ರಬಲ ಗಣತಂತ್ರದಲ್ಲಿ ಮಂತ್ರಿಯಾಗಿದ್ದ ರಾಕ್ಷಸನು ಇವರ ಮೆದುಳಾಗಿ ಕಾರ್ಯನಿರ್ವಹಿಸುತ್ತಾನೆ. ಇದನ್ನರಿತ ಕುಟಿಲ ಬ್ರಾಹ್ಮಣ ಚಾಣಕ್ಯನು ಕುರುಬ ಕುಲದಲ್ಲಿಯ ಮುರಾ(ಮೋರ್>ನವಿಲು)ಯೆಂಬ ಹೆಸರಿನ ಸಂತತಿಯವನಾದ ಚಂದ್ರಗುಪ್ತನೊಂದಿಗೆ ಸೇರಿಕೊಂಡು ಮುಳ್ಳನ್ನು ಮುಳ್ಳಿನಿಂದಲೇ ತೆಗೆದು ನಂದರನ್ನು ಪಟ್ಟದಿಂದ ಕೆಳಗೆ ಇಳಿಸಿ ಚಂದ್ರಗುಪ್ತನನ್ನು ಪಟ್ಟಕ್ಕೆ ತರುತ್ತಾನೆ.
ಮೋರ್’ ಎಂಬುದು ಸಂಸ್ಕøತೀಕರಣಗೊಂಡು ಮೌರ್ಯ ಎಂದಾಗಿದೆ. ಇಂದಿಗೂ ಕುರುಬರಲ್ಲಿ ಮೋರ್, ಮುರಾ, ಮೋರೆ ಎಂಬ ಕುಲ(ಬೆಡಗು)ಗಳಿವೆ.
`ಭೌದ್ಧರ ದಾಖಲೆಗಳ ಪ್ರಕಾರ ಇಡೀ ಭರತಖಂಡವನ್ನು ಒಂದು ಛತ್ರದಡಿ ತಂದು ರಾಜ್ಯವಾಳಿದ ಚಂದ್ರಗುಪ್ತನು ಒಬ್ಬ ಕುರುಬನಾಗಿದ್ದಾನೆ’ ಎಂದು ಡಬ್ಲು. ಎಂ. ಕ್ರೂಕ್ ಹೇಳುತ್ತಾನೆ. `Chandra Gupta who brought the whole of India under one umbrella was a Shepherd of the princely race according to Buddist annals’(Tribes and castes of the N.W.P. by W.M. Crooke B.A., Vol 1, P. 50, 1896).
ಭಾರತ ಪ್ರಜಾಪ್ರಭುತ್ವದ ಪ್ರಾತಿನಿಧಿಕ ಸಂಸ್ಥೆಯಾಗಿ ರಾಜಧಾನಿ ನವದೆಹಲಿಯಲ್ಲಿ `ಸಂಸದ ಭವನ’ ನಿಂತಿದೆ. ಈ ಭವನದ ಮುಂದೆ ಅಂದರೆ 5ನೆಯ ಗೇಟ್‍ನಲ್ಲಿ ಒಂದು ಸುಂದರವಾದ ಬಾಲಕನ ಶಿಲ್ಪ ಇದೆ. ಕೇವಲ ಚಡ್ಡಿ ಧರಿಸಿ ಒಂದು ಬಂಡೆಯ ಮೇಲೆ ಕೈಯಲ್ಲಿ ಚಿಕ್ಕ ಕೋಲೊಂದನ್ನು ಹಿಡಿದು ಮಂಡಿಯೂರಿ ಕುಳಿತಿರುವ ಈ ಸುಂದರ ಬಾಲಕನ ಶಿಲ್ಪದ ಕೆಳಗೆ ಈ ರೀತಿ ಬರೆದಿದೆ.

`The shepherd boy, Chandragupta Mourya dreaming of the India, he wants to be built’ ಇದರ ಅರ್ಥವೆನೆಂದರೆ, `ಭವ್ಯಭಾರತ ದೇಶದ ನಿರ್ಮಾಣದ ಕನಸನ್ನು ಕಾಣುತ್ತಿರುವ ಕುರುಬರ ಬಾಲಕ ಚಂದ್ರಗುಪ್ತ’ ಎಂಬ ಒಕ್ಕಣಿಕೆ ಎದ್ದು ಕಾಣುತ್ತದೆ. ಇವನೇ ಭಾರತದ ಮೊದಲ ಮಹಾನ್ ಸಾಮ್ರಾಜ್ಯವನ್ನು ಸ್ಥಾಪಿಸಿದ ಚಂದ್ರಗುಪ್ತ ಮೌರ್ಯ ಮತ್ತು ಇವನು ಕುರುಬವಂಶದ ಕುಡಿ ಎಂಬುದು ಹೆಮ್ಮೆಪಡುವ ವಿಚಾರವಾಗಿದೆ.

ಚಂದ್ರಗುಪ್ತನು ಸಕಲ ಅಧಿಕಾರವನ್ನೂ ತನ್ನ ಹಿಡಿತದಲ್ಲಿಯೇ ಇಟ್ಟುಕೊಂಡಿದ್ದ ನಿರಂಕುಶ ಪ್ರಭುವಾಗಿದ್ದನು. ಪ್ರಜೆಗಳ ಹಿತವೇ ತನ್ನ ಹಿತವೆಂದು ನಂಬುವ ಆದರ್ಶಪ್ರಾಯ ಚಕ್ರವರ್ತಿಯಾಗಿದ್ದನು. ಉತ್ಖನನಗಳು ಮೌರ್ಯರ ಕಾಲದ ಹಲವಾರು ಊರುಗಳನ್ನು ಪತ್ತೆ ಮಾಡಿವೆ. ಅವುಗಳಲ್ಲಿ ಪಾಟಲಿಪುತ್ರ, ಕೌಶಾಂಬಿ, ಉಜ್ಜಯನಿ ಮತ್ತು ತಕ್ಷಶಿಲೆಗಳು ಮುಖ್ಯ ನಗರಗಳಾಗಿವೆ.
ಚಂದ್ರಗುಪ್ತನ ಆಡಳಿತದ ಪ್ರಮುಖ ವಿಷಯವೆಂದರೆ ಅದರ ಬಹು ದೊಡ್ಡ ಸೈನ್ಯವಾಗಿದೆ. ರೋಮನ್ ಬರಹಗಾರ ಪ್ಲಿನಿಯ ಹೇಳಿಕೆಯ ಪ್ರಕಾರ ಅವನಲ್ಲಿ 6,00,000 ಕಾಲ್ದಳ, 30,000 ರಾವುತರು, 9,000 ಆನೆಗಳು ಇದ್ದವು(ಶರ್ಮ ಆರ್.ಎಸ್., ಪ್ರಾಚೀನ ಭಾರತ., 1996, ನವಕರ್ನಾಟಕ ಪ್ರಕಾಶನ, ಪುಟ 131).
ಇನ್ನೊಂದು ಮೂಲವು ಮೌರ್ಯರಲ್ಲಿ 8,000 ಯುದ್ಧ ರಥಗಳಿದ್ದವೆಂದೂ ಹೇಳುತ್ತದೆ. ಇವೆಲ್ಲವುಗಳ ಜೊತೆಗೆ ಅವರು ಒಂದು ನೌಕಾಬಲವನ್ನೂ ಹೊಂದಿದ್ದುದು ತಿಳಿದುಬರುತ್ತದೆ. ಇಷ್ಟು ದೊಡ್ಡ ಸೈನ್ಯವನ್ನು ಆರು ಸಮಿತಿಗಳ ನೆರವಿನಿಂದ ಮುನ್ನೆಡಸಲಾಗುತ್ತಿತ್ತೆಂದೂ ಮೆಗಾಸ್ತನೀಸನು ಬರೆಯುತ್ತಾನೆ(ಶರ್ಮ ಆರ್.ಎಸ್., ಪ್ರಾಚೀನ ಭಾರತ., 1996, ನವಕರ್ನಾಟಕ ಪ್ರಕಾಶನ, ಪುಟ 131).
ಕಾಲಾನಂತರ ಈ ಸಾಮ್ರಾಟನು ಜೈನಧರ್ಮ ಸ್ವೀಕರಿಸಿ, ಸಾಮ್ರಾಜ್ಯದ ಆಡಳಿತವನ್ನು ಮಗ ಬಿಂಬಸಾರನಿಗೆ ನೀಡಿ ಗುರು ಭದ್ರಬಾಹುವಿನೊಂದಿಗೆ ದಕ್ಷಿಣದ ಶ್ರವಣಬೆಳಗೊಳಕ್ಕೆ ಬಂದು ಕಟವಪುರ ಅಥವಾ ಕಳ್ಸಪುರ ಬೆಟ್ಟದಲ್ಲಿ ನೆಲೆಯಾಗಿ ನಿಂತನೆಂಬ ಐತಿಹ್ಯವಿದೆ. ಪ್ರಾಕೃತ ಭಾಷಿಕರು ಕರ್ನಾಟಕವನ್ನು ತಲುಪಿದ್ದು ಭದ್ರಬಾಹು-ಚಂದ್ರಗುಪ್ತರ ಕಾಲದಲ್ಲಿ ಎಂದು ಹೇಳಬಹುದು. ಭದ್ರಬಾಹು-ಚಂದ್ರಗುಪ್ತರ ಜೈನ ಐತಿಹ್ಯವು ನಮಗೆ ತುಂಬ ಪರಿಚಿತವಾಗಿದೆ. ಚಂದ್ರಗುಪ್ತನ ಆಡಳಿತದ ಅಂತ್ಯ ಕಾಲದಲ್ಲಿ(ಸು.ಕ್ರಿ.ಪೂ.300) ಸಂಭವಿಸಿದ ಆರ್ಯಾವರ್ತದ ಒಂದು ಭಯಂಕರ ಕ್ಷಾಮದಿಂದ ರಕ್ಷಿಸಿಕೊಳ್ಳಲು, ಸಾವಿರಾರು ಅನುಯಾಯಿಗಳೊಡನೆ ಭದ್ರಬಾಹು-ಚಂದ್ರಗುಪ್ತರು ಉಜ್ಜಯಿನಿಯಿಂದ ದಕ್ಷಿಣಾಭಿಮುಖವಾಗಿ ಬಂದದ್ದು, ಅವರು ಶ್ರವಣಬೆಳ್ಗೊಳದಲ್ಲಿ ಸಮಾಧಿ ಸಂಪಾಧಿಸಿಕೊಂಡಿದ್ದು ತಿಳಿದಿದೆ. ಅಲ್ಲಿಂದ ಭದ್ರಬಾಹುವಿನ ಶಿಷ್ಯರು ಇನ್ನೂ ದಕ್ಷಿಣಕ್ಕೆ ಮುಂದುವರೆದು ತಮಿಳಗಂ ತಲುಪಿದ್ದು, ಈ ಐತಿಹ್ಯದ ಪ್ರಾಧಾನ ಅಂಶಗಳಾಗಿವೆ. ಇದನ್ನು ಪ್ರತಿಪಾದಿಸುವ ಅತಿಪೂರ್ವ ಕಾಲದ(ಕ್ರಿ.ಶ. 600) ಶಾಸನಗಳು ಶ್ರವಣಬೆಳ್ಗೊಳದ ಚಿಕ್ಕಬೆಟ್ಟದಲ್ಲಿ ದೊರಕಿರುವುದಲ್ಲದೇ, ಆನಂತರ ಕಾಲದ ಇನ್ನಿತರ ದಾಖಲೆಗಳೂ ಬೇರೆಡೆ ಲಭ್ಯವಾಗಿರುವವು(ಷ. ಶೆಟ್ಟರ್(ಡಾ.), ಶಂಗಂ ತಮಿಳಗಂ ಮತ್ತು ಕನ್ನಡ ನಾಡು-ನುಡಿ, ಅಭಿನವ ಪ್ರಕಾಶನ, ಬೆಂಗಳೂರು, 2007, ಪುಟ 75).
ಚಂದ್ರಗುಪ್ತ ಮೌರ್ಯನು ಪಂಜಾಬ ಮತ್ತು ತಕ್ಷಶಿಲೆಯನ್ನು ಕ್ರಿ.ಪೂ. 305ರ ಸುಮಾರಿಗೆ ಅಪಘಾನಿಸ್ಥಾನಕ್ಕೆ ಸೇರಿದ್ದ ಗಾಂಧಾರದ ಉಳಿದ ಭಾಗಗಳನ್ನು ಸೆಲ್ಯೂಕಸ್‍ನಿಕಟರ್‍ನ ಮೇಲೆ ಯುದ್ಧ ಮಾಡಿ ವಶಪಡಿಸಿಕೊಂಡನು. ವಿಜಯಿಯಾದ ಮೌರ್ಯ ದೊರೆ ಮತ್ತು ಸೆಲ್ಯೂಕಸ್‍ನ ನಡುವೆ ಮದುವೆಯ ಬಾಂಧವ್ಯ ಬೆಳೆಯಿತು ಎಂದು ವರದಿಗಳು ತೀಳಿಸುತ್ತವೆ. ಇತಿಹಾಸಕಾರ ಪ್ಲುಟಾರ್ಕನ ಪ್ರಕಾರ ಚಂದ್ರಗುಪ್ತ ಮೌರ್ಯನು ಈ ಮದುವೆಯಲ್ಲಿ 500 ಆನೆಗಳನ್ನು ಸೆಲ್ಯೂಕಸ್‍ನಿಗೆ ನೀಡಿದನು. ಅಲೆಗ್ಸಾಂಡರನು ಗೆದ್ದಿದ್ದ ಪ್ರದೇಶಗಳನ್ನು ತಮ್ಮತಮ್ಮಲ್ಲಿಯೇ ಹಂಚಿಕೊಂಡಿದ್ದ ಮತ್ತು ಹಿಂದೆ ಅವನ ಜೊತೆಗಾರರಾಗಿದ್ದ ದಂಡನಾಯಕರ ಮೇಲೆ ಯುದ್ಧ ಮಾಡುವ ಸ್ವಾತಂತ್ರ್ಯ ಸೆಲ್ಯೂಕಸ್‍ನಿಗೆ ಇತ್ತು. ಆದರೆ ಹಾಗೆ ಮಾಡಿದ್ದಲ್ಲಿ ಅವನು ಗ್ರೀಸಿಗೆ ತೀರ ಒಂಟಿಯಾಗಿ ಹಿಂತಿರುಗಬೇಕಾಗುತ್ತಿತ್ತು.
ಇಲ್ಲಿ ಉದ್ಧರಿಸಿರುವ ಭಾರತವನ್ನು ಕುರಿತ ಗ್ರೀಕ್ ವರದಗಳೆಲ್ಲವೂ ಪಾಟಲೀಪುತ್ರ(ಪಾಟ್ನಾ)ದ ಆಸ್ಥಾನಕ್ಕೆ ಸೆಲ್ಯೂಕಸ್‍ನು ಕಳಿಸಿಕೊಟ್ಟಿದ್ದ ಮೇಗಾಸ್ತನಿಸ್ ಎಂಬ ರಾಯಭಾರಿ ದಾಖಲಿಸಿದಂತವುಗಳಾಗಿವೆ. ದಾಖಲೆಗಳು ಕೂಡ ಇಂದು ನಮಗೆ ಲಭ್ಯವಿರುವುದು ಇತರರು ತಮ್ಮ ಕೃತಿಗಳಲ್ಲಿ ಮಾಡಿರುವ ಉಲ್ಲೇಖಗಳಲ್ಲಿ ಮಾತ್ರ ಎಂಬುದು ಗಮನಾರ್ಹವಾದುದು. ಉಳಿದಂತೆ ಮೂಲ ಕೃತಿ ಸಂಪೂರ್ಣವಾಗಿ ನಾಶವಾಗಿದೆ. ಸೆಲ್ಯೂಕಸ್‍ನ ಮಗಳನ್ನು ಚಂದ್ರಗುಪ್ತನ ಮಗ ಬಿಂದುಸಾರನಿಗೆ ಕೊಟ್ಟು ಮದುವೆ ಮಾಡಿದರು ಎಂದು ಹೇಳಲಾಗುತ್ತದೆ. ಆದರೆ ಇದು ಸಾಧ್ಯವಿಲ್ಲ ಎಂದು ವಾದಿಸುವವರೂ ಇದ್ದಾರೆ. ಗ್ರೀಕರ ಮದುವೆಯ ನಿಯಮಗಳಲ್ಲಿ ಇದಕ್ಕೆ ಅವಕಾಶವಿರಲಿಲ್ಲ ಹಾಗೂ ಭಾರತೀಯ ಜಾತಿ ವ್ಯವಸ್ಥೆ ಇದಕ್ಕೆ ಅವಕಾಶ ನೀಡುತ್ತಿರಲಿಲ್ಲ ಎಂಬ ಎರಡು ಆಕ್ಷೇಪಣೆಗಳನ್ನು ಅವರು ಎತ್ತುತ್ತಾರೆ. ಆದರೆ ಇದು ಅಸಾಧ್ಯವೇನಲ್ಲ ಎಂದೆನ್ನಿಸುತ್ತದೆ. ಮ್ಯಾಸಿಡೋನಿಯಾದವರು ಗ್ರೀಸಿನ ಗಡಿಭಾಗದಲ್ಲಿಂದ್ದಂತಹ ಒರಟು ಗ್ರೀಕರಾಗಿದ್ದರು. ಅವರು ಅಥೆನ್ಸಿನಂತಹ ನಗರ ಪ್ರಭುತ್ವಗಳಲ್ಲಿ ಚಾಲ್ತಿಯಲ್ಲಿದ್ದ ಗ್ರೀಕ್ ನಿಯಮಗಳನ್ನೇನೂ ಪಾಲಿಸುತ್ತಿರಲಿಲ್ಲ. ಅಲೆಗ್ಸಾಂಡರನು ಪರ್ಷಿಯಾದ ಇಬ್ಬರು ರಾಜಕುಮಾರಿಯರನ್ನು ಮದುವೆಯಾಗಿದ್ದನು. ಜಾತಿ ನಿಯಮಗಳನ್ನು ಮಗಧ ದೊರೆಗಳು ಲೆಕ್ಕಕ್ಕೆ ಇಟ್ಟಿರಲಿಲ್ಲ. ಇನ್ನು ಮೌರ್ಯರಲ್ಲಂತೂ ಅದಕ್ಕೆ ಇನ್ನೂ ಮಹತ್ವ ಕೊಟ್ಟಿರಲಿಲ್ಲ. ಆರ್ಯೀಕರಣಗೊಂಡಿದ್ದರೂ ಕೂಡ ಅವರು ಮೂಲ ನಿವಾಸಿಗಳ ಅಥವಾ ಮಿಶ್ರ ಕುಲಕ್ಕೆ ಸೇರಿದವರಾಗಿದ್ದರು. ಮೌರ್ಯ(ಪಾಲಿಯಲ್ಲಿ ಮೋರಿಯ) ಎನ್ನುವ ಹೆಸರು ನವಿಲು ಅವರ ಕುಲ ಲಾಂಛನವಾಗಿತ್ತು ಎಂಬುದನ್ನು ಸೂಚಿಸುತ್ತದೆ. ಆದರೆ ಅವರು ವೈದಿಕ ಆರ್ಯರಾಗಿದ್ದುದಕ್ಕೆ ಸಾಧ್ಯವಿಲ್ಲ ಎಂದಾಗುತ್ತದೆ.
ಅಶೋಕನ ಮೊದಲ ರಾಣಿಯು ಸಾಂಚಿ ಅಥವಾ ಭಿಲ್ಲಾದ ಬಳಿಯ ಒಬ್ಬ ವರ್ತಕನ ಮಗಳು. ಗಿರ್‍ನಾರ್‍ರನ್ನು ಆಳುತ್ತಿದ್ದ ಪುಷ್ಯಮಿತ್ರ ಎನ್ನುವ ವರ್ತಕ(ಇವನು ಅಶೋಕನ ಒಬ್ಬ ಹೆಂಡತಿಯ ಸಹೋದರ)ನನ್ನು ಸ್ವಲ್ಪ ಕಾಲ ರಾಷ್ಟ್ರೀಯ ಎಂದು ಕರೆಯುತ್ತಿದ್ದರು. ರಾಷ್ಟ್ರೀಯ ಎನ್ನುವುದನ್ನು ಭಾವಮೈದುನ ಎಂದು ಅನುವಾದಿಸಬೇಕೆ ವಿನಹ ಕೆಲವರು ಅನುವಾದಿಸಿರುವಂತೆ ರಾಷ್ಟ್ರದ ತೆರಿಗೆಗಳನ್ನು ಸಂಗ್ರಹಿಸುವವನು ಎಂದಲ್ಲ. ಅಶೋಕನಿಗೆ ಮ್ಯಾಸಿಡೋನಿಯಾದ ಅಥವಾ ಗ್ರೀಕೋ-ಪರ್ಷಿಯನ್ ಮಹಿಳೆಯೊಬ್ಬಳು ಮಲತಾಯಿ ಆಗಿದ್ದಿರಬಹುದಾದ ಸಾಧ್ಯತೆಗಳಿವೆ. ಆದರೆ ಅಶೋಕನ ತಾಯಿ ಯವನ ಮಹಿಳೆಯಾಗಿದ್ದ ಸಾಧ್ಯತೆಗಳಿಲ್ಲ.
ಭಾರತದ ಮೊದಲ ಮಹಾಸಾಮ್ರಾಜ್ಯವನ್ನು ಕಟ್ಟಿದ ಹೆಮ್ಮೆ ಈ ಹಾಲುಮತ ಜನಾಂಗದ್ದಾಗಿದೆ ಎಂಬುದನ್ನು ಬೇರೆ ಹೇಳಬೇಕಾಗಿಲ್ಲ. ಇವನ ಮಗನೇ ಚಕ್ರವರ್ತಿ ಬಿಂಬಸಾರ, ಅವನ ಮಗ ಅಶೋಕ ಚಕ್ರವರ್ತಿ. ಇಂದಿನ ರಾಷ್ಟ್ರದ್ವಜದ ಮಧ್ಯದಲ್ಲಿರುವ ಮತ್ತು ರಾಷ್ಟ್ರಲಾಂಚನ ಕೆಳಗೆ ಇರುವ ಅಶೋಕ ಚಕ್ರವನ್ನು ಧರ್ಮ ಚಕ್ರ’ ಎಂದು ಕರೆಯುತ್ತೇವೆ. ಈ ಧರ್ಮಚಕ್ರವನ್ನು ಭಾರತಕ್ಕೆ ಕೊಟ್ಟ
ದೇವನಾಂಪ್ರಿಯ’ ಅಶೋಕ ಕುರುಬ ಮೂಲದ ರಾಜ ಎಂಬುದು ಸಹ ಗಮನಾರ್ಹ ಅಂಶವಾಗಿದೆ.
ಮೌರ್ಯರ ಆಳ್ವಿಕೆಯು ಭಾರತದ ಇತಿಹಾಸದಲ್ಲಿ ಪ್ರಮುಖ ಘಟ್ಟವಾಗಿದೆ. ದೇಶವನ್ನು ಗ್ರೀಕರ ದಾಳಿಯಿಂದ ಮುಕ್ತಗೊಳಿಸಿ ರಾಜ್ಯಕ್ಕೆ ಸಮರ್ಥವಾದ ಆಡಳಿತವನ್ನು ಒದಗಿಸಿದ ಯಶಸ್ಸು ಚಂದ್ರಗುಪ್ತನಿಗೆ ಸಲ್ಲುತ್ತದೆ. ಕೌಟಿಲ್ಯನಂತಹ ಪ್ರಧಾನಿಯ ನೆರವಿನಿಂದ ಪ್ರಜಾಸೌಕರ್ಯಕ್ಕಾಗಿ ಸುಭದ್ರವಾದ ದಕ್ಷವಾದ ಆಡಳಿತ ವ್ಯವಸ್ಥೆಯನ್ನು ಅರಸು ರೂಪಿಸಿದನು. ಇವನ ರಾಜ್ಯಕ್ಕೆ ಗ್ರೀಕ್ ರಾಯಭಾರಿಯಾಗಿ ಬಂದ ಮೆಗಾಸ್ತಾನೀಸನು ದೇಶದ ಅಂದಿನ ವೈಭವವನ್ನು ಕಂಡು ದಂಗುಬಡಿದನು. ಅಂದಿನ ಭಾರತೀಯರ ನಡೆ-ನುಡಿ, ಆಚಾರ-ವ್ಯವಹಾರಗಳು, ಸಾಮಾಜಿಕ, ರಾಜಕೀಯ ಪರಿಸ್ಥಿತಿಗಳನ್ನು ಕುರಿತು ತನ್ನದೊಂದು ವರದಿಯನ್ನು ತಯಾರಿಸಿದನು. `ಇಂಡಿಕಾ’ ಎಂದು ಹೆಸರಾದ ಈ ಗ್ರಂಥ ಪೂರ್ಣವಾಗಿ ದೊರೆತಿಲ್ಲವೆಂಬುದೊಂದು ಕೊರತೆಯಾಗಿದೆ. ಸಿಕ್ಕಿರುವುದೆಲ್ಲ ಅವನ ಗ್ರಂಥದಿಂದ ಆಯ್ದ ಉಲ್ಲೇಖಗಳು ಮಾತ್ರ. ಅವನ ಹೇಳಿಕೆಯಂತೆ ಅಂದಿನ ಭಾರತೀಯರು ಪ್ರಾಮಾಣಿಕರೂ, ಆತ್ಮತ್ರೃಪ್ತರೂ ಅಹಿಂಸಾಪರರೂ ಆಗಿದ್ದರು. ಒಂದು ಕಡೆ ಯುದ್ಧಭೂಮಿಯಲ್ಲಿ ಘೋರ ಕದನ ನಡೆಯುತ್ತಿದ್ದರೂ, ನೆರೆಯ ಕ್ಷೇತ್ರದಲ್ಲಿ ರೈತನು ನಿರಾತಂಕವಾಗಿ ಭೂಮಿಯನ್ನು ಉಳುವುದರಲ್ಲಿ ಮಗ್ನನಾಗಿರುತ್ತಿದ್ದನೆಂಬ ಅವನ ಹೇಳಿಕೆ ಅಂದಿನ ಜನರ ಧರ್ಮಪರತೆ, ಕರ್ತವ್ಯ ಜ್ಞಾನಕ್ಕೆ ಸಾಕ್ಷಿ. ಕೌಟಿಲ್ಯನ ಅರ್ಥಶಾಸ್ತ್ರದಿಂದಲೂ ಅಂದಿನ ಸ್ಥಿತಿಗಳು ತಿಳಿದು ಬರುತ್ತವೆ.
ಡಾ. ಲಿಂಗದಹಳ್ಳಿ ಹಾಲಪ್ಪ