
ಕರ್ನಾಟಕದ ಜನಪ್ರಿಯ ದೈವಗಳಲ್ಲಿ ಮಲೆಮಾದೇಶ್ವರನೂ ಒಬ್ಬನಾಗಿದ್ದಾನೆ. ಕರ್ನಾಟಕ, ಕೇರಳ ಮತ್ತು ತಮಿಳ್ನಾಡಿನಲ್ಲಿ ಲಕ್ಷಾಂತರ ಭಕ್ತರು ಈ ದೈವವನ್ನು ಆರಾಧಿಸುತ್ತಾರೆ. ಕರ್ನಾಟಕದ ಇಂತಹ ಬಹು ಮುಖ್ಯ ದೈವದ ದೇವಾಲಯವನ್ನು ಹಾಲುಮತಕ್ಕೆ ಸೇರಿದ ಧಾರ್ಮಿಕ ಪುರುಷನೊಬ್ಬನು ಕಟ್ಟಿಸಿದ್ದಾನೆ ಎಂಬುದು ಚರಿತ್ರೆಯ ಸತ್ಯವಾಗಿದೆ. ಅವನ ಹೆಸರು ಜುಂಜೇಗೌಡ. ಮಲೆಯ ಮಾದೇಶ್ವರ’ ಎಂಬ ಜನಪದ ಮಹಾಕಾವ್ಯವನ್ನು ವಿದ್ವಾಂಸರಾದ ಡಾ. ಪಿ.ಕೆ. ರಾಜಶೇಖರ ಅವರು ಸಂಗ್ರಹಿಸಿದ್ದಾರೆ. ಆ ಮಹಾಕಾವ್ಯದ ಒಂದು ಅಧ್ಯಾಯ
ಆಲಂಬಾಡಿ ಜುಂಜೇಗೌಡನ ಸಾಲು’ ಆಗಿದ್ದು, ಮಾದೇಶ್ವರನ ಮಹಿಮೆ ಹಾಲುಮತದತ್ತ ಹರಿದಾಗ, ಜುಂಜಪ್ಪ ಮತ್ತು ಮಾದೇಶ್ವರರ ನಡುವಿನ ಧಾರ್ಮಿಕ ಸಂಘರ್ಷವನ್ನು ಇದು ಕಟ್ಟಿಕೊಡುತ್ತದೆ.
ಮಲೆಮಾದೇಶ್ವರನ ಭಕ್ತನಾದ ಆಲಂಬಾಡಿ ಗ್ರಾಮದ ಜುಂಜಪ್ಪಗೌಡ ಹಾಲುಮತ ಕುರುಬ ಜನಾಂಗದವನು. ಮಲೈಮಾದೇಶ್ವರನು ತನ್ನಿಷ್ಟ ಬಂದವರನ್ನು ತನ್ನ ಶಿಷ್ಯರನ್ನಾಗಿ, ಭಕ್ತರನ್ನಾಗಿ ಮಾಡಿಕೊಂಡವನು. ವಿಚಿತ್ರವೆಂದರೆ ಮಾದೇಶ್ವರನು ಯಾರನ್ನು ತನ್ನ ಶಿಸುಮಕ್ಕಳನ್ನಾಗಿ ಮಾಡಿಕೊಳ್ಳಬೇಕೆಂದು ಬಯಸುತ್ತಾನೋ ಅವರು ಯಾರೂ ಮಾದೇಶ್ವರನನ್ನು ಸುಲಭವಾಗಿ ಒಪ್ಪಿಕೊಂಡವರಲ್ಲ. ಆಲಂಬಾಡಿ ಜುಂಜೇಗೌಡನ ಪಾತ್ರ ಮಲೆಯ ಮಾದೇಶ್ವರ ಮಹಾಕಾವ್ಯದಲ್ಲಿ ಕುರುಬ ಜನಾಂಗದ ಆ ಕಾಲದ ಭಾರಿ ಕುಳದ ಪ್ರತೀಕವಾಗಿ ಚಿತ್ರಿತವಾಗಿದೆ. ನಾರಾಯಣಸ್ವಾಮಿ(ರಂಗನಾಥ)ಯ ಪರಮ ಭಕ್ತನಾಗಿದ್ದ ಈ ನಿಷ್ಣಾತ ವೈಷ್ಣವ ಕುರುಬ ಪರಧೀಯನಿಂದ ತನ್ನ ದೇವಾಲಯವನ್ನು ಕಟ್ಟಿಸಿಕೊಳ್ಳಬೇಕೆಂದು ಬಯಸಿ ಅದನ್ನು ಸಾಧಿಸಿದ ಕಥೆಯು ಒಂದು ಮನಮೋಹಕ ಮಹಾಗಾಥೆಯೆನ್ನಬಹುದು.

`ಮಲೆಯ ಮಾದಯ್ಯ ಯಾರೀಗೆ ಒಲದೀಯೆ;
ಆಲಂಬೋಡಿ ಗೌಡರಟ್ಟಿ ಒಳಗೆ,
ಹಾಲರಿವೆ ಸೇವೆ ಹಗಲಾದೋ’
ಜುಂಜೇಗೌಡನ ಮೇಯುವ ಹಸುಗಳ ಹಾಲನ್ನು ಕುಡಿದು, ಅವನ ಮಗ ಬೀರಯ್ಯನ ಕಣ್ಣು ಕಳೆದು, ನಿನ್ನ ಹಸುವಿನ ಹಾಲಿನಿಂದ ಅಭಿಷೇಕವಾಗಬೇಕು, ಎಣ್ಣೆ ಮಜ್ಜನವಾಗಬೇಕು. ಮಠ ಕಟ್ಟಬೇಕು, ಹನ್ನೆರಡು ಅಂಕಣದ ಗುಡಿ ಕಟ್ಟಿಸು’ ಎಂದು ಆಜ್ಞಾಪಿಸಿ, ಗುಡಿ ಕಟ್ಟಿಸಿಕೊಂಡು ಅವನಿಗೆ ಸಕಲೈಶ್ವರ್ಯ ನೀಡುತ್ತಾನೆ. ಈಗಲೂ ಪ್ರತಿವರ್ಷ ಈ ವಂಶದವರಿಂದ ಮಾದೇಶನಿಗೆ
ಹಾಲರುವೆ’ ಸೇವೆ ನಡೆಯುತ್ತದೆ. ದೀಪಾವಳಿ ಹಬ್ಬದಲ್ಲಿ ಹಾಲರುವೆ ಸೇವೆ (ಅರುವೆ=ಹರವೆ= ಮಣ್ಣಿನ ಪಾತ್ರೆ) ಬಹಳ ಪ್ರಸಿದ್ಧವಾದುದು. ಹಿಂದಿನ ದಿನ ಉಪವಾಸವಿದ್ದು, ಮಣ್ಣನ್ನು ಎಂಜಲು ಮಾಡದೆ ಬಿಸಿಲಿನಲ್ಲಿ ಒಣಗಿಸಿ ಜಲಗೊಂಬಿನ ಬಿಳಿ ಹಸುವಿನ ಹಾಲನ್ನು ತೆಗೆದುಕೊಂಡು ಬಂದು ಆನೆ ತಲೆದಿಂಬಿನಲ್ಲಿ ಇಡುತ್ತಿದ್ದರು. ಹಿಂದೆ ಹನ್ನೆರಡು (ಈಗ 101) ಮೈನೆರೆಯದ ಬಾಲಕಿಯರು ಹಾಲುಹಳ್ಳದಿಂದ ತೀರ್ಥ ತಂದು ಮಾದೇಶ್ವರನ ಪೂಜೆಗೆ, ಮಜ್ಜನಕ್ಕೆ ನೀಡುತ್ತಾರೆ. ಈರ ಮಕ್ಕಳು(ವೀರ ಮಕ್ಕಳು) ಕತ್ತಿ, ದೊಣ್ಣೆವರಸೆ ಮಾಡಿಕೊಂಡು ಹೋಗಿ ಲಿಂಗದ ಮೇಲೆ ಹಾಲೆರೆದು ಬರುತ್ತಿದ್ದರು. ಹಾಲು ಹಳ್ಳದಿಂದ ಕತ್ತಿ ಪವಾಡದ ಕೊಳದ ಮೂಲಕ ಬಾಲಕಿಯರು ಹಾಲುಹಳ್ಳದ ತೀರ್ಥವನ್ನು ಮಣ್ಣಿನ ಗಡಿಗೆಯಲ್ಲಿ ತೆಗೆದುಕೊಂಡು ಬರುತ್ತಾರೆ. ಒಂದೊಂದು ರೂಪಾಯಿ ಕಾಣಿಕೆ ಕೊಟ್ಟು, ಭಕ್ತಾದಿಗಳು ರಸ್ತೆಯಲ್ಲಿ ಸಾಲಾಗಿ ಮಲಗಿದಾಗ ಸಾಲೂರು ಮಠದ ಸ್ವಾಮಿಗಳು ಅವರ ಮೇಲೆ ಹಾಯ್ದು ಬರುತ್ತಾರೆ(ಡಾ. ಬಿ.ಎಸ್. ಸ್ವಾಮಿ, ಮಲೆಯ ಮಾದೇಶ್ವರ ಒಂದು ಅಧ್ಯಯನ, ಪುಟ 176). ಮಲೆಮಾದೇಶ್ವರ ಕಾವ್ಯದಲ್ಲಿ ಬರುವ ಜುಂಜೇಗೌಡನ ಸಾಲು’,
ಬೇವಿನ ಕಾಳಿಯ ಸಾಲು’ ಮತ್ತು `ಸಂಕಮ್ಮನ ಸಾಲು’ ಎಂಬ ಕಾವ್ಯ ಪ್ರಕರಣಗಳು ಹಾಲುಮತ ಕುರುಬರ ಭಕ್ತಿಭಾವವನ್ನು ಪ್ರಕಟಪಡಿಸುವ ಅಧ್ಯಾಯಗಳಾಗಿವೆ. ಜುಂಜೇಗೌಡನ ಹಿರಿಯ ಮಗಳು ದೇವಾಜಮ್ಮ, ಕಿರಿಯ ಮಗಳು ಸಂಕಮ್ಮ ಮತ್ತು ಮಗ ಬೀರಪ್ಪ ಅದ್ವಿತೀಯ ಮುಗ್ಧ ಭಕ್ತರಾಗಿದ್ದಾರೆ. ಆದ್ದರಿಂದ ಮಾದೇಶ್ವರನ ಮತ್ತು ಹಾಲುಮತ ಕುರುಬರ ಸಂಬಂಧವು ಸಾಮಾಜಿಕ, ಧಾರ್ಮಿಕವಾಗಿ ತುಂಬಾ ಅನ್ಯೋನ್ಯತೆಯಿಂದ ಕೂಡಿತ್ತೆಂದು ಹೇಳಬಹುದು. ಹಾಲುಮತದವರಿಂದ ಸೇವೆ ಮಾಡಿಸಿಕೊಳ್ಳುತ್ತಿರುವ ಮಲೆಮಾದೇಶನು ವಿಶಾಲ ಹಾಲುಮತ ಸಮುದಾಯಕ್ಕೆ ಸೇರಿದವನಾಗಿರಬಹುದು. ಈ ಕುರಿತು ಆಳ ಮತ್ತು ಮುಕ್ತ ಅಧ್ಯಯನದ ಅವಶ್ಯಕತೆಯಿದೆ.
ಮಲೆಮಾದೇಶನು ಚಾರಿತ್ರಿಕ ವ್ಯಕ್ತಿಯಾಗಿದ್ದಾನೆ. ಇವನ ಕಾಲವನ್ನು ವಿದ್ವಾಂಸರು 14ನೆಯ ಶತಮಾನವೆಂದೂ, ಇನ್ನೂ ಕೆಲವರು ಹದಿನಾರನೆಯ ಶತಮಾನವೆಂದು ಹೇಳಿದ್ದಾರೆ(ಸ್ವಾಮಿ ಬಿ.ಎಸ್.(ಡಾ.), ಮಲೆಯಮಾದೇಶ್ವರ ಒಂದು ಅಧ್ಯಯನ, 1993, ನವೀನ ಪ್ರಕಾಶನ, ಪುಟ 145). ಮಾದೇಶ್ವರ ದೇವಾಲಯದ ಹಜಾರದ ಕಂಬದಲ್ಲಿರುವ ಆಲಂಬಾಡಿ ಜುಂಜೇಗೌಡ ದಂಪತಿಗಳದ್ದೆಂದು ಹೇಳಲಾಗುತ್ತಿರುವ ಎರಡು ಉಬ್ಬು ಚಿತ್ರಗಳನ್ನು ನೋಡಬಹುದು. `ಜುಂಜೇಗೌಡನ ಸಾಲಿ’ನಲ್ಲಿ ಪ್ರಸ್ತಾಪವಾಗುವ ಹಳ್ಳ, ಬೆಡ್ಡ ಮತ್ತು ಭೌಗೋಳಿಕ ಪರಿಸರವನ್ನು ಈಗಲೂ ಕಾಣುತ್ತೇವೆ. ಇವೆಲ್ಲ ಭೌತಿಕ ಆಧಾರಗಳಿಂದ ಜುಂಜೇಗೌಡನು ಒಬ್ಬ ಚಾರಿತ್ರಿಕ ವ್ಯಕ್ತಿಯಾಗಿದ್ದು, ಇತಿಹಾಸದ ಪುಟಗಳಲ್ಲಿ ಅಜರಾಮರವಾಗಿ ನಿಂತಿದ್ದಾನೆ.
ಆಲಂಬಾಡಿಯ ಜುಂಜೇಗೌಡ ಒಬ್ಬ ಆಗರ್ಭ ಶ್ರೀಮಂತ ಮತ್ತು ವಿಷ್ಣುಭಕ್ತನಾಗಿದ್ದವನು. ಈ ಕಟ್ಟಾ ವಿಷ್ಣು ಅನುಯಾಯಿಯನ್ನು ಶೈವ ಸಂಪ್ರದಾಯಕ್ಕೆ ಸೆಳೆದುಕೊಳ್ಳುವ ಸರ್ವ ಪ್ರಯತ್ನವು ಕಾವ್ಯದಲ್ಲಿ ಎದ್ದುಕಾಣುತ್ತದೆ. ಶಿವನ ಒಂದು ರೂಪವಾದ ಮಾದೇಶನು, ಈ ವಿಷ್ಣುಭಕ್ತನಿಗೆ ಹಲವು ಹತ್ತಾರು ಕಿರುಕುಳಗಳನ್ನು ನೀಡುತ್ತಾನೆ. ಆದರೆ ವಿಷ್ಣು ಈ ಕಿರುಕುಳಗಳಿಂದ ತನ್ನ ಭಕ್ತನನ್ನು ರಕ್ಷಿಸಲಾಗುವುದಿಲ್ಲ ಎಂದು ಈ ಅಧ್ಯಾಯ ಹೇಳುತ್ತದೆ. ಕೊನೆಗೆ ಸೋತುಹೋದ ಜುಂಜೇಗೌಡ ತನ್ನ ಸಂಸಾರ, ಆಳು-ಕಾಳು, ಆಸ್ತಿಗಳನ್ನು ಉಳಿಸಿಕೊಳ್ಳಲು ಶೈವ ಧರ್ಮಕ್ಕೆ ಮತಾಂತರಗೊಂಡು, ಮಲೆ ಮಾದೇಶನ ಪ್ರಥಮ ಒಕ್ಕಲುಗಳಲ್ಲಿ ಮೊದಲನೆಯವನಾಗುತ್ತಾನೆ. ಈ ವಿಷಯವನ್ನು ಕಾವ್ಯ ಕಟ್ಟಿಕೊಡುವ ರೀತಿ ಹೃದಯಂಗಮವೂ, ಅಪ್ಯಾಯಮಾನವೂ ಆಗಿದೆ.
ಆಲಂಬಾಡಿಯ ಅಂದಚಂದ : ಕಾವ್ಯ ಸೂಕ್ತಿ
ಅಂದದ ಚಂದದ ಆಲಂಬಾಡಿ ಮಾದಪ್ಪ(ಮಲೆಮಾದೇಶ)ನ ಮನಸ್ಸನ್ನು ಸೆಳೆದುಕೊಂಡಿತು. ಆಲಂಬಾಡಿ ಸಂಪದ್ಭರಿತ ಸುಂದರ ಊರು. ಆ ಊರಿಗೆ ಅಲಂಕಾರಪ್ರಾಯನೆಂದರೆ ಕುರುಬರ ಕುಲಶ್ರೇಷ್ಠ ಜುಂಜೇಗೌಡ. ಆ ಕಾಲಕ್ಕೆ ಆ ಸುತ್ತಿನಲ್ಲಿಯೇ ಕುರುಬರಲ್ಲಿ ಅವನಂತಹ ಶ್ರೀಮಂತನು ಬೇರೆ ಯಾರೂ ಇರಲಿಲ್ಲ. ಅವನ ಸಿರಿ ಸಂಪದವನ್ನು ಹೇಳುತ್ತಾ ಹೋದರೆ ಅದಕ್ಕೆ ಕೊನೆ ಮೊದಲಿಲ್ಲ. “ಕುರುಬ ಜನಾಂಗಕ್ಕೆ ತಿಲಕಪ್ರಾಯನಾಗಿದ್ದ ಜುಂಜೇಗೌಡನ ಚಿತ್ರಕಲ್ಲು ಹಟ್ಟಿಗೆ ಚಿನ್ನದ ಕಂಬಗಳಂತೆ, ರನ್ನದ ತೊಲೆಗೊಂಬೆಗಳಂತೆ, ಹೊನ್ನಿನ ಹಂಚುಗಳಂತೆ, ಬೆಳ್ಳಿಯ ಗೋಡೆಗಳಂತೆ, ಸುಪ್ಪಾಣಿ ಸೂರುಗಳಂತೆ, ಮುತ್ತಿನ ಮುಂಬಾಗಿಲಂತೆ, ಪಚ್ಚೆಯ ನೆಲಗಟ್ಟಂತೆ, ವಜ್ರದ ಕಿಟಕಿಗಳಂತೆ, ಹವಳದ ಹಜಾರವಂತೆ ಮಾಣಿಕ್ಯದ ಹಂತಗಳಂತೆ ಅಲ್ಲದೇ ಅಪರಂಜಿ ಕಳಸಗಳಂತೆ!’’ ಎಂದು ಕಾವ್ಯ ವರ್ಣಿಸುತ್ತದೆ.
ದೇವೇಂದ್ರರಾಯನಂತೆ ಸಿರಿ ಸಂಪತ್ತಿನ ಐಭೋಗದಲ್ಲಿ ವಾಲಾಡುತ್ತಿರುವ ಜುಂಜೇಗೌಡನಿಗೆ ಆಲಪ್ಪೇಗೌಡ(ಹಾಲಪ್ಪಗೌಡ), ಬ್ಯಾಲಪ್ಪೇಗೌಡ, ಕುರುಬೀರೇಗೌಡ, ಮರಿಜುಂಜೇಗೌಡ, ಬೆಟ್ಟೇಗೌಡ ಎಂಬ ಐವರು ತಮ್ಮಂದಿರು. ಜುಂಜೇಗೌಡನ ತಮ್ಮ ಒಬ್ಬ ಮರಿಜುಂಜೇಗೌಡನು ಇದ್ದುದರಿಂದ ದೊಡ್ಡಜುಂಜೇಗೌಡನ್ನು ಡೊಳ್ಳುಹೊಟ್ಟೆ ಜುಂಜೇಗೌಡ ಎಂದು ಕರೆಯುತ್ತಿದ್ದರು. ಅಣ್ಣ ಹಾಕಿದ ಗೆರೆಯನ್ನು ತಮ್ಮಂದಿರೆಂದೂ ದಾಟುತ್ತಿರಲಿಲ್ಲ. ಅಣ್ಣನನ್ನು ಕಂಡರೆ ಭಯಭಕ್ತಿ, ನಯ, ವಿನಯ, ಗೌರವಾದರಗಳಿಂದ ನಡೆದುಕೊಳ್ಳುತ್ತಿದ್ದರು. ಅಣ್ಣನ ಆಜ್ಞಾನುಸಾರವಾಗಿ ಮನೆಗೆಲಸಗಳನ್ನೆಲ್ಲಾ ಮಾಡಿಕೊಂಡು ಹೋಗುತ್ತಿದ್ದರು. ಹೀಗೆ ಜುಂಜೇಗೌಡ, ಆರೋಗ್ಯ ಐಶ್ವರ್ಯಗಳಿಂದ ಸುಖಶಾಂತಿ ಸಂತೃಪ್ತಿಗಳಿಂದ ಹಾಲುಸಾಗರವಾಗಿ ಬಾಳುತ್ತಿದ್ದಾನೆ.
ಇಂತಹ ಸೌಂದರ್ಯದ ಬೀಡು, ಐಶ್ವರ್ಯದ ಆಗರವಾದ ಆಲಂಬಾಡಿ, ಶೈವ ಅನುಯಾಯಿಗಳನ್ನು ಸೇಳೆದಿದ್ದುದರಲ್ಲಿ ಆಶ್ಚರ್ಯವಿಲ್ಲ. ಅಂತೆಯೇ ವೈಷ್ಣವ ಅನುಯಾಯಿಯಾದ ಜುಂಜೇಗೌಡನನ್ನು ಶೈವಕ್ಕೆ ಸೆಳೆಯುವ ಪ್ರಯತ್ನಗಳ ಫಲಾಫಲಗಳನ್ನು ಕಾವ್ಯ ವಿವರಿಸುತ್ತ ಹೋಗುತ್ತದೆ. ನಾರಾಯಣಸ್ವಾಮಿಯ ಪರಮಭಕ್ತನಾದ ಜುಂಜೇಗೌಡ ಪರಿಶುದ್ಧ ಮನಸ್ಸಿನ ಹೃದಯವಂತನಾಗಿದ್ದನು. ಅವನಿಗೆ ಏಳುಹುಂಡಿ ದನಗಳು, ಏಳುಹುಂಡಿ ಕುರಿಗಳು ಇದ್ದವು. ಅವುಗಳನ್ನು ಮರಿಜುಂಜೇಗೌಡ ಹನ್ನೆರಡು ಜನ ಆಳುಗಳ ಜೊತೆಯಲ್ಲಿ ಕಾಡಿಗೆ ಹೊಡೆದುಕೊಂಡು ಹೋಗಿ ಮೇಯಿಸಿಕೊಂಡು ಬರುತ್ತಿದ್ದನು. ದನಕರುಗಳಿಂದ ತುಂಬಿದ ಘನೈಶ್ವರ್ಯದ ಜುಂಜೇಗೌಡನ ಮನೆಯ ಮೇಲೆ ಮಾದಪ್ಪನ ದೃಷ್ಟಿಬಿತ್ತು. ಇತ್ತ ಮರಿಜುಂಜೇಗೌಡ ದನಗಳನ್ನು ಕಾಯುವಾಗ ಜೋಲುಗೊಂಬಿನ ಹಸು ಯಾವ ಮಾಯದಲ್ಲೂ ಹಿಂಡಿನಿಂದ ಬೇರ್ಪಟ್ಟು, ಮಲೆಯಲ್ಲಿರುವ ಏಳುಬಾಯಿಯ ಹೊನ್ನುತ್ತಕ್ಕೆ ಹಾಲು ಕರೆದು ಬರುತ್ತದೆ.
ಮಸ್ತಕದ ಮ್ಯಾಲೆ ಜೋರೆಂಬ ಹಾಲ ಹಿಂಡುವುದು
ನೋಡಿ ನಮ್ಮ ಶಿವನಾ! ಜೊರ್ರನೆ ಸುರಿಯುತ್ತಿದ್ದ ಹಾಲು ಹುತ್ತವನ್ನೆಲ್ಲ ತುಂಬಿ ಉಕ್ಕಿತು. ಕೋಡಿಕಟ್ಟಿ ಹರಿಯಿತು. ಹಸುವು ದಿನವೂ ಈ ಕೆಲಸ ಮಾಡುತ್ತಿತ್ತು.
ಇತ್ತ ಮನೆಯಲ್ಲಿ ಕರುಬುಟ್ಟು ಹಾಲುಕರೆಯುವಾಗ ಆ ಹಸು ರಕ್ತವನ್ನು ಕರೆಯುತ್ತದೆ. ಇದನ್ನು ಆಲಮ್ಮನು ತನ್ನ ಪತಿಗೆ ತಿಳಿಸುತ್ತಾಳೆ. ಬೆಕ್ಕಸಬೆರಗಾದ ಅಣ್ಣತಮ್ಮಂದಿರು ಮಾತಾಡಿಕೊಂಡು, ಕಾಡಿನಲ್ಲಿ ಅದನ್ನು ಅನುಸರಿಸಿ ಹೋಗುತ್ತಾರೆ. ಅಣ್ಣತಂಮಂದಿರು ಹಿಟ್ಟುಬುತ್ತಿಯನ್ನು ಕಟ್ಟಿಕೊಂಡು, ಕೈಯಲ್ಲಿ ಕೊಡಲಿ, ಮಚ್ಚು ತೆಗೆದುಕೊಂಡು ಬಾಡುಬಾಕಂನ ಗುತ್ತಿಯನ್ನು ಪ್ರವೇಶಿಸಿ ಹಸು ಹಾಲು ಕರೆದಿದ್ದ ಹುತ್ತವನ್ನು ನೋಡಿದರು. ಹಾಲು ಉಕ್ಕಿ ಹರಿದಿತ್ತು. ಸಿಟ್ಟಿನಿಂದ ಅಣ್ಣ ತಮ್ಮಂದಿರು ಅಲ್ಲಿರುವ ಮುಳ್ಳಿನ ಪೊದೆ, ಹುಲ್ಲು ಕೆತ್ತಿಹಾಕಿದರು. ಹುತ್ತದ ಮೇಲೆ ಬೆಳೆದಿದ್ದ ಕೆಮ್ಮತ್ತಿ ಮರವನ್ನು ಸೇರಿಸಿ ಹುತ್ತವನ್ನು ಸವಣಿಸಿದರು. ಹೀಗೆ ಕೆತ್ತಿ ಬೀಸಾಕುವಾಗ ಹುತ್ತದ ಒಳಗೆ ಕುಳಿತಿದ್ದ ಮಾದಪ್ಪನ ಹಣೆಗೆ ಏಟು ಬಿತ್ತು. ಮಚ್ಚಿನೇಟು ಬಿದ್ದ ಕೂಡಲೇ,
“ಅಯ್ಯಪ್ಪಾ ಹೊನ್ನುತ್ತದಲ್ಲಿ ನಾನು
ವಾಸಮಾಡ್ಕೊಂಡಿದ್ದಿ
ಯಾರಪ್ಪ ಹೊಡೆದೋರು?’’
ಎಂದು ಮಾದಪ್ಪ ಕೇಳುತ್ತಾನೆ. ಅಣ್ಣತಮ್ಮಂದಿರು ಇದೇನು ಹುತ್ತದಲ್ಲಿ ಪಿಸಾಚಿಯೋ, ದೆವ್ವವೋ’ ಎಂದು ಹೆದರಿ ಲಗುಬಗೆಯಿಂದ ಅಲ್ಲಿನ ಮುಳ್ಳು ಪೊದೆಗೆ ಬೆಂಕಿ ಹಚ್ಚಿದರು. ಇವರು ಹೊರಟು ಹೋಗಲು ಸಜ್ಜಾದಾಗ ಮಾದೇಶ ಆಕಾಶ-ಭೂಮಿಗೆ ಏಕಾಗುವಂತೆ ಆಕಾರ ತಾಳಿ ನಿಲ್ಲುತ್ತಾನೆ. ಜುಂಜೇಗೌಡ ಬೆದರಿದರೂ, ಹೆದರದೇ
ಅಲಾಲಾ ಪರದೇಶಿ ನೀನ್ಯಾರು ಎಂದು ಕೇಳುತ್ತಾನೆ. ಅದಕ್ಕೆ ಮಾದಪ್ಪನು ಇದೇ ಸಮಯವೆಂದು ತನ್ನ ಮನದಾಸೆಯನ್ನು ಅವನ ಮುಂದೆ ಅರಹುತ್ತಾನೆ.
“ನೋಡಪ್ಪ ಜುಂಜೇಗೌಡ,
ನಾನು ಮಲೆ ಮಾದಪ್ಪ ನನಕಂದ
ನನಗೆ ಒಂದಂಕ್ಣ ಕಲ್‍ಗುಡಿ ಕಟ್ಟೋದುಂಟಾದ್ರೆ
ನಿನಗೀಗರೋ ಭಾಗ್ಯವಲ್ಲ ಕಂದಾ
ನಾನಿನ್ನಷ್ಟು ಭಾಗ್ಯ ಕೊಡ್ತಿದಿನಿ !’’ ಎಂದು ಹೇಳಿ ಬೆಳ್ಗೊಂಬನ್ನು ಹಿಡಿದುಕೊಂಡು ಹಿಂತುರುಗಿ ನೋಡದೇ ಆಲಂಬಾಡಿಗೆ ಬರುತ್ತಾನೆ. ಕೈಕಾಲುಮುಖ ತೊಳೆದುಕೊಂಡು ಕೆಲಸದ ಮೇಲೆ ಹೊರಟನು.
ನಾರಾಯಣ ಕಾಯಲಿಲ್ಲ ಅವನ
ಇತ್ತಕಡೆ ಮಾದಪ್ಪ ಹೀಗೆ ಯೋಚಿಸಿದನು. “ಎಷ್ಠೇಳುದ್ರೂ ಜುಂಜಯ್ಯ ನನ್ಮಾತ ಕೇಳ್ದೆ ಹೋದ್ನಲ್ಲ. ಈ ಸಲ ಹೋಗಿ ಅವುರ್ಗೆ ಒಕ್ಲು ಮಾಡ್ಕೋಬೇಕು’’ ಯೋಚಿಸುತ್ತ ಮಾದಪ್ಪ ಮುತ್ತಿನ ಜೋಳಿಗೆಯನ್ನು ಮುಂಗೈಗೆ ಆಧಾರ ಮಾಡಿಕೊಂಡು ಎಳಗಾವಿ ಎಳೆದೊದ್ದು ಸುಳುಗಾವಿ ಮುಸುಕಿಟ್ಟು ಬೂರುಗದ ಕಾಯನ್ನೇ ಜಂಗುಮಾಡಿಕೊಂಡು ಎಕ್ಕದ ಕಾಯನ್ನೇ ಕರಡಿಗೆ ಮಾಡಿಕೊಂಡು ಎಲಚಿ ಕಾಯನ್ನು ರುದ್ರಾಕ್ಷಿ ಮಾಡಿಕೊಂಡು ಬೆಳ್ಳಿ ಬೆತ್ತವನ್ನು ಕೈಯಲ್ಲಿ ಹಿಡಿದು ಹನ್ನೆರಡು ಹೆಜ್ಜೆ ಹುಲಿಯ ಮೇಲೆ ಕುಳಿತು, ಆಲಂಬಾಡಿಗೆ ಸಾಗಿ ಬರುತಾರೆ ಮಾದೇವ, ನೋಡಿ ನಮ್ಮ ಶಿವನಾ!
ಹೀಗೆ ಆಲಂಬಾಡಿಗೆ ಬಂದ ಮಾದಪ್ಪನು ಜುಂಜಯ್ಯನ ಒಕ್ಕಲು ಕಣದ ಹತ್ತಿರ ಪ್ರತ್ಯಕ್ಷನಾಗುತ್ತಾನೆ. ಕಣದ ತುಂಬ ಬೆಳೆದು ಹರಡಿದ ಕಳ್ಳೆ ರಾಶಿ ಇತ್ತು ಪೂಜೆ ಮಾಡುತ್ತಿದ್ದರು. ತಮ್ಮ ಮರಿಜುಂಜಯ್ಯನಿಗೆ ಹೇಳಿ ಕಾವಲಾಕಿ ಉಳಿದವರು ಹೊಟುಹೋದರು. ಮಾದಪ್ಪ ಕೋರಾನ್ನದ್ ಬಿಕ್ಷೆ ಕೇಳುತ್ತಾನೆ. ಅಂದು ಶುಕ್ರವಾರವಾದ್ದರಿಂದ ಇವನಿಗೆ ಭಿಕ್ಷೆ ನೀಡುವುದಿಲ್ಲ. ವಾಗ್ವಾದವಾಗುತ್ತದೆ. ಒಂದು ಕೋಲನ್ನು ತೆಗೆದುಕೊಂಡು ಮರಿಜುಂಜಯ್ಯ ಕ್ಯಯೆತ್ತಿ ಹೊಡೆಯಲು ಬಂದರೆ ಮಾಯಗಾರ ಮಾದಪ್ಪ ಭಸ್ಮ ಎರಚಿ ಅವನನ್ನು ನಿಂತಲ್ಲಿಯೇ ನಿಲ್ಲುವಂತೆ ಮಾಡುತ್ತಾನೆ. ಒಂದು ಹಿಡಿ ಕಳ್ಳೆಕಾಯಿ ತೆಗೆದುಕೊಂಡು ಮಾಯವಾಗುತ್ತಾನೆ.

ಕಲ್ಲುಗುಡಿ ಕಟ್ಟುಸ್ತುನಿ ಅಂದ
ಮನೆಗೆ ಬಂದ ಜುಂಜೇಗೌಡನಿಗೆ ಹೆಂಡತಿ ಓದೋಶಾಲೆಗೆ ಹೋದ ಏಳುಜನ ಮಕ್ಕಳು ಬಂದಿಲ್ಲ ಎಂದು ಹೇಳಿದಳು. ಹೆಂಡತಿ ಆಲಮ್ಮ ಹೆದರಿ ಗಡಗಡ ನಡುಗುತ್ತಾಳೆ. ಕೊರವಂಜಮ್ಮನ ಮಾತಿನಂತೆ ಏಳ್ಮಲೆ ಮಾದೇಶ್ವರನಿಗೆ ಒಕ್ಕಲಾಗೋಣ ಎಂದು ಒರಲುತ್ತಾಳೆ. ಆದರೆ ಜುಂಜೆಗೌಡ ಬಿಲ್ ಕುಲ್ ಒಪ್ಪುವುದಿಲ್ಲ. ಮನೆಯಲ್ಲಿ ಊಟಕ್ಕಿಟ್ಟುಕೊಂಡಿದ್ದ ಧಾನ್ಯಗಳು ಮಣ್ಣಾಗುತ್ತವೆ. ಹಣ, ವಜ್ರವೈಡೂರ್ಯಗಳು ಕಲ್ಲುಗಳಾಗುತ್ತವೆ. ಏಳು ಹುಂಡಿ ದನಗಳು, ಏಳು ಹುಂಡಿ ಕುರಿಗಳು ತೇಲುಗಣ್ಣು ಮೇಲುಗಣ್ಣು ಆಗಿ ಸಾಯುತ್ತವೆ. ಮನೆಯಲ್ಲಿ ಮುದ್ದೆಗೆ ರಾಗಿ ಕಾಳಿಲ್ಲ. ಆಲಮ್ಮ ಬೇಲಿ ಮೇಲಿನ ಸೊಪ್ಪು ತಂದು ಬೇಯಿಸಿದರೆ ಮನೆಗೆ ನೆಂಟರು ಬಂದು ಉಂಡುಹೋಗುತ್ತಾರೆ. ಮಾಯಕಾರ ಮಾದೇಶನ ದಯದಿಂದ ಅದು ಮೃಷ್ಟಾನ್ನವಾಗುತ್ತದೆ. ಆದರೆ ಮನೆಯವರಿಗೆ ಉಪವಾಸ, ಪಕ್ಕದಲ್ಲಿ ತಮ್ಮಂದಿರಿಲ್ಲ, ಮಕ್ಕಳಿಲ್ಲ. ಜುಂಜೇಗೌಡ ಕಂಗೆಟ್ಟು ಹೋಗುತ್ತಾನೆ.
“ಅಯ್ಯೋ ಆದಿನಾರಾಯಣ್ ಸ್ವಾಮಿ,
ಮುಡುಕ್ತೊರೆ ಮಲ್ಲಮ್ಮ ನಮಗೆಂತೇ ಕಷ್ಟ ಬಂದ್ಬುಡ್ತು
ನೀವಾರೂ ನಮ್ ಕಷ್ಟ ನೋಡಿ ಕಾಪಾಡ್ಬಾರ್ದಾ..’’
ಎಂದು ಹಲುಬುತ್ತಾನೆ. ಆದರೆ ಏನು ಮನೆ ದೇವರ ಸುಳಿವೇ ಇಲ್ಲ. ಹೀಗೆ ಪರಿಪರಿ ಕಾಡಿದ ಮಾದೇಶನ ಒಕ್ಕಲಾಗಿ ಅವನಿಗೆ ಕಲ್ಲುಗುಡಿಯೊಂದನ್ನು ಕಟ್ಟಿಸಿಕೊಡುತ್ತಾನೆ.

