
ಭಾರತವು ಕೃಷಿ ಪ್ರಧಾನವಾದ ದೇಶವಾಗಿದೆ. ಇಲ್ಲಿನ ರೈತರು ಬಡತನವನ್ನೇ ನುಂಗಿ, ಬಡತನವನ್ನೇ ಹೊದ್ದು ಜೀವನ ನಡೆಸಿದ್ದುದು ಇತಿಹಾಸದಲ್ಲಿ ದಾಖಲಾಗಿದೆ. ಕೃಷಿಗೆ ಸಾಲ, ಮಳೆ ಬಂದರೆ ಬೆಳೆ, ಇಲ್ಲದಿದ್ದರೆ ಬರಗಾಲ. ಜೀವನ ನಿರ್ವಹಣೆಯೆ ದುಸ್ತರವಾದ ಸಂದರ್ಭದಲ್ಲಿ ಕೃಷಿಗೆ ಮತ್ತು ಬದುಕಿನ ಬಂಡಿಗೆ ಸಾಲಕೊಟ್ಟ ಧನವಂತರ ಶೋಷಣೆಯಿಂದ ಬಡರೈತ ನಲುಕಿ ಹೋಗುತ್ತಿದ್ದ. ಇಂದಿನ ಧಾರವಾಡ ಜಿಲ್ಲೆಗೆ ಒಳಪಟ್ಟ್ಟಿದ್ದ ಕೃಷಿ ಪ್ರಧಾನ ಪ್ರದೇಶವು ಹಲವಾರು ವರ್ಷಗಳ ಕಾಲ ಮಳೆಬೆಳೆಯಿಲ್ಲದೇ ಬೇಂಗಾಡಾಗಿ ಹೋಗುತ್ತಿತ್ತು. ಹತ್ತೊಂಬತ್ತನೆಯ ಶತಮಾನದ ಉತ್ತರಾರ್ಧ ಮತ್ತು ಇಪ್ಪತ್ತನೆಯ ಶತಮಾನದ ಮೊದಲ ದಶಕಗಳಲ್ಲಿ, ರೈತರು ಧನವಂತರಿಂದ ಬಡ್ಡಿಗೆ ಸಾಲವನ್ನು ಪಡೆಯುತ್ತಿದ್ದರು. ಒಂದಕ್ಕೆ ನಾಲ್ಕು ಬಡ್ಡಿಕೊಟ್ಟು ಬೆಳೆದ ಬೆಳೆಯನ್ನೆಲ್ಲಾ ಚಿಕ್ಕ ಪುಟ್ಟ ರೈತರು ಸಾಲಕ್ಕಾಗಿ ಕಳೆದುಕೊಳ್ಳುತ್ತಿದ್ದರು. ಇಂತಹ ಸಂದರ್ಭದಲ್ಲಿ ಮರಳುಗಾಡಿನಲ್ಲಿ ಉಧ್ಭವಿಸಿದ ಓಯಸಿಸ್‍ನಂತೆ, ಸಹಕಾರಿ ಕ್ಷೇತ್ರಕ್ಕೆ ಅಡಿಗಲ್ಲು ಹಾಕಿ ರೈತರ ಬದುಕಿಗೆ ಆಶಾಕಿರಣವಾಗಿ ಪರಿಣಮಿಸುತ್ತಾನೆ. ಒಬ್ಬ ರೈತನ ಮಗನಾಗಿ ಹುಟ್ಟಿ, ಸಹಕಾರಿ ಸಂಘವನ್ನು ಹುಟ್ಟುಹಾಕಿ ಆ ಭಾಗದ ರೈತರನ್ನು ಬಡ್ಡಿ ಕೊಡುವ ಸಾಲಗಾರರಿಂದ ಮುಕ್ತಗೊಳಿಸಿದ ಇವರ ವೀರಗಾಥೆಯು ಬಹು ರೋಚಕ ಕಥೆಯೆನ್ನಿಸಿದೆ. ಅವರೇ ಭಾರತ ಮಾತೆಯ ಧೀರ ಪುತ್ರ, ಮಣ್ಣಿನ ಮಗ, ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲರಾಗಿದ್ದಾರೆ.
ದೇಶದ ಮೊದಲ ಸಹಕಾರಿ ಸಂಘ ಸ್ಥಾಪನೆಯಾಗಿದ್ದು ಭಾರತ ಬ್ರಿಟೀಶರಿಂದ ಸ್ವಾತಂತ್ರ್ಯಗೊಳ್ಳುವುದಕ್ಕಿಂತ 42 ವರ್ಷಗಳಿಗಿಂತ ಮೊದಲು ಎನ್ನುವುದು ಒಂದು ವಿಶೇಷವಾದ ಸಂಗತಿಯಾಗಿದೆ. ಇದಲ್ಲದೇ ಈ ಸಹಕಾರಿ ಸಂಘವನ್ನು ಸ್ಥಾಪನೆ ಮಾಡುವಾಗ ಬ್ರಿಟೀಶ್ ಅಧಿಕಾರಿಗಳಿಗೆ ಶರತ್ತು ಹಾಕಿ, ತಮ್ಮ ಗ್ರಾಮಕ್ಕೆ ಕುಡಿಯುವ ನೀರಿನ ವ್ಯವಸ್ಥೆಯೊಂದಿಗೆ, ಗ್ರಾಮಕ್ಕೆ ರೈಲು ನಿಲ್ದಾಣ ಮಾಡಿಸಿಕೊಂಡ ಸಿದ್ಧನಗೌಡರು ಅದ್ವಿತೀಯ ಹೋರಾಟಗಾರರಂತೆ ಕಾಣುತ್ತಾರೆ.
ಇಂದಿನ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮವು ಅಂದೂ ಸಹ ಕೃಷಿ ಪ್ರಧಾನವಾದ ಗ್ರಾಮವಾಗಿತ್ತು. ಇಲ್ಲಿ ಜೋಳ, ಹತ್ತಿ, ಕಡಲೆ, ಸೂರ್ಯಕಾಂತಿ, ಮೆಣಸಿನಕಾಯಿ, ಉಳ್ಳಾಗಡ್ಡಿ, ಹೆಸರು ಅಕ್ಕಡಿಕಾಳು ಮುಂತಾದ ಬೆಳೆಗಳನ್ನು ಗ್ರಾಮದ 8716 ಎಕರೆ ಜಮೀನಿನಲ್ಲಿ ಬೆಳೆಯುವ ರೈತರೊಂದಿಗೆ ಕೃಷಿಯನ್ನು ನಂಬಿದ ಕೃಷಿ ಕೂಲಿಕಾರ್ಮಿಕರು ತಮ್ಮ ಜೀವನ ನಡೆಸುತ್ತಿದ್ದಾರೆ.
ಕಣಗಿನಹಾಳ ಗ್ರಾಮದ ಅಂದಿನ ಪ್ರಗತಿಪರ ರೈತರಾಗಿದ್ದ ಕುರುಬ ಜನಾಗದ ಸಣ್ಣ ರಾಮನಗೌಡ ಹಾಗೂ ಶ್ರೀಮತಿ ನೀಲಮ್ಮ ದಂಪತಿಗಳ ಉದರದಲ್ಲಿ ಕ್ರಿ.ಶ. 1843 ಮೇ 25ರ ಗುರುವಾರ ದಿವಸ ಸಿದ್ಧನಗೌಡರು ಹುಟ್ಟಿದರು. ಅಂದು ಸಿದ್ಧನಗೌಡರ ಜನನವಾದಾಗ ಅವರೇ ದೇಶದ ಮೊಟ್ಟ ಮೊದಲ ಸಹಕಾರಿ ವ್ಯಕ್ತಿಯಾಗುತ್ತಾರೆಂದು ಯಾರೂ ಎಣಿಸಿರಲಿಲ್ಲ. ಆ ವ್ಯಕ್ತಿ ಆರಂಭಿಸುವ ಸಹಕಾರಿ ತತ್ವವೇ ದೇಶದ ಲಕ್ಷಲಕ್ಷ ಜನರ ಬದುಕು ಮತ್ತು ಅವರ ಕುಟುಂಬಗಳನ್ನು ಸಾಕುವ ದಾರಿಯಾಗಬಲ್ಲದು ಎಂದು ಯಾರೂ ಕನಸು ಕಂಡಿರಲಿಲ್ಲ. ಸಿದ್ಧನಗೌಡರ ತಂದೆ-ತಾಯಿಗಳ ಪುಣ್ಯದ ಫಲವಾಗಿ ದೇಶವು ಮರೆಯಲಾರದ ಸಹಕಾರಿ ತತ್ವವನ್ನು ಪಡೆಯುವ ಶಕ್ತಿಯಾಗಿ ಮೊಳಕೆಯಾಗಿ ಅಂದು ಹೊರಬಂದಿತ್ತು ಎನ್ನುವುದು ಈಗ ಬರಿ ಇತಿಹಾಸವಾಗಿದೆ.
ಸಿದ್ಧನಗೌಡರು ತಕ್ಕಮಟ್ಟಿಗೆ, ಅಂದರೆ ಆಂದಿನ ಕಾಲದ ಹಳ್ಳಿಶಾಲೆಯಲ್ಲಿ ಕೇವಲ ಏಳು ತಿಂಗಳು ಕಲಿತವರು. ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು’ ಎನ್ನುವಂತೆ ಮನೆಯ ಮುಖ್ಯ ಉದ್ಯೋಗ ಮತ್ತು ಮೊದಲಿನಿಂದಲೂ, ದೊಡ್ಡ ಕೃಷಿ ಕುಟುಂಬವಾಗಿದ್ದರಿಂದ ಇವರಿಗೆ ಓದಿಗಿಂತ ತಮ್ಮ ಮನೆಯ ಕೃಷಿ ಕುಟುಂಬದ ನೊಗವನ್ನು ಹೊರುವುದು ಅಗತ್ಯವಿತ್ತು. ಸಿದ್ಧನಗೌಡರ ಬಾಲ್ಯದ ಕುರಿತು ಬರೆಯುತ್ತ ಶ್ರೀ ಮಂಜುನಾಥ ಬೊಮ್ಮನಕಟ್ಟಿ ಅವರು ಹೀಗೆ ಬರೆಯುತ್ತಾರೆ, ಸಿದ್ಧನಗೌಡರು ಬಾಲ್ಯದಲ್ಲಿ ಇದ್ದಾಗ ಅವರ ತಂದೆ ಸಣ್ಣರಾಮನಗೌಡರ ಗೆಳೆಯರು ಸಹಜವಾಗಿಯೇ
ನೀನು ವಿಜಯನಗರ ಸ್ಥಾಪಿಸಿದ ಹುಕ್ಕ ಬುಕ್ಕರ ತರಹ ರಾಜಾ ಆಗ್ತಿಯೋ, ಕನಕದಾಸರಂಗ ಸತ್ಪುರುಷ ಅಕ್ಕಿಯೋ, ಮತ್ತ ಕಾಳಿದಾಸರಂಗ ಮಹಾ ಕವಿ ಆಗ್ತಿಯೋ ಎಂದು ಕೇಳುತ್ತಾರೆ. ಅದಕ್ಕೆ ಸಿದ್ಧನಗೌಡರು `ನಾನು ಸಿದ್ಧನಗೌಡನ ಆಗ್ತೀನಿ’ ಎಂದು ಹೇಳುತ್ತಾರೆ. ಇದರಿಂದ ಸಿದ್ಧನಗೌಡರು ಸ್ವಂತಿಕೆಯ ಬಲದಿಂದ ಅನೇಕ ಜನೋಪಕಾರಿ ಕೆಲಸಗಳನ್ನು ಮಾಡಿ ಅಜರಾಮರವಾಗಿದ್ದನ್ನು ನಾವು ಗಮನಿಸಬಹುದು. ಇವರದು ಆ ಕಾಲದಲ್ಲಿ ನೂರು ಕೂರಿಗೆ ಅಂದರೆ ನಾಲ್ಕುನೂರು ಎಕರೆ ಜಮೀನು ಇದ್ದ ಕೃಷಿ ಕುಟುಂಬವಾಗಿತ್ತು. ಸಣ್ಣ ರಾಮನಗೌಡರಿಗೆ ಸಿದ್ಧನಗೌಡರು ಏಕೈಕ ಮಗನಾಗಿದ್ದರಿಂದ ಕೃಷಿಯ ಭಾರ ಹೊರುವುದು ಅನಿವಾರ್ಯವಿದ್ದುದರಿಂದ ಓದನ್ನು ಮುಂದುವರೆಸಲಾಗಲಿಲ್ಲ. ಮತ್ತು ಕಲಿಕೆಗೆ ಬೇರೆ ಊರಿಗೆ ಹೋಗಬೇಕಾದ ಅನಿವಾರ್ಯವಿದ್ದುದರಿಂದ ಕೃಷಿಯ ಭಾರ ಸಿದ್ಧನಗೌಡರ ಮೇಲೆ ಬಿತ್ತು. ಸಿದ್ಧನಗೌಡರು ದೊಡ್ಡ ಜಮೀನುದಾರರಾಗಿದ್ದುದರಿಂದ ಮತ್ತು ಊರಿನ ಗೌಡಕಿ ಅವರದಾಗಿದ್ದರಿಂದ ಸಹಜವಾಗಿಯೇ ಗ್ರಾಮದ ಎಲ್ಲರಿಗೂ ಸಿದ್ಧನಗೌಡರು ಬೇಕಾದವರಾಗಿದ್ದರು. ಸಿದ್ಧನಗೌಡರು ಪ್ರಾಯಕ್ಕೆ ಬರುತ್ತಿದ್ದಂತೆ ಗ್ರಾಮದ ಎಲ್ಲಾ ಚಟುವಟಿಕೆಗಳಲ್ಲಿ ಭಾಗವಹಿಸಲು ಆರಂಭಿಸಿದರು. ಅಷ್ಟೇ ಅಲ್ಲದೇ ಗ್ರಾಮದಲ್ಲಿನ ಎಲ್ಲಾ ಚಟುವಟಿಕೆಗಳನ್ನು ಅಚ್ಚು ಕಟ್ಟಾಗಿ ನಿರ್ವಹಿಸುತ್ತಿದ್ದರು.
ಸಿದ್ದನಗೌಡರು ಸಂಕ್ರಮ್ಮನನ್ನು ಬಾಳ ಸಂಗಾತಿಯನ್ನಾಗಿ ಸ್ವೀಕರಿಸುವ ಮೂಲಕ ಸಂತೋಷದ ಬದುಕಿನ ಬಂಡಿಯಲ್ಲಿ ಪಯಣಿಸತೊಡಗಿದರು. ಮಾರೆಪ್ಪ-ಮುದ್ದಪ್ಪ ಎಂಬ ಅವಳಿ ಜವಳಿ ಮಕ್ಕಳೊಂದಿಗೆ ಹದಿಮೂರು ಮಕ್ಕಳಿಗೆ ಜನ್ಮ ನೀಡಿದ ದಂಪತಿಗಳಿಗೆ ವಿಧಿಯಾಟ ಎಂಬಂತೆ ಉಳಿದವರು ಮೂರುಜನ ಗಂಡು ಮಕ್ಕಳು. ಇವರ ಸಹೋದರಿಯಾಗಿ ಒಬ್ಬ ಹೆಣ್ಣು ಮಗಳು ಮಾತ್ರ. ಈ ಮಕ್ಕಳೊಂದಿಗೆ ಕೇವಲ ತಮ್ಮ ಕುಟುಂಬ ಎನ್ನವ ಮಟ್ಟಿಗೆ ಗೌಡರು ಯಾವಾಗಲೂ ಚಿಂತಿಸಿದವರಲ್ಲ. ಇಡೀ ಗ್ರಾಮವನ್ನು ತಮ್ಮ ಕುಟುಂಬ ಎಂದು ತಿಳಿದುಕೊಳ್ಳುವ ಮೂಲಕ ಗ್ರಾಮದ ಎಲ್ಲ ಕಾರ್ಯಗಳಲ್ಲಿಯೂ ದಂಪತಿಗಳು ಭಾಗವಹಿಸಿ ಸೇವೆ ಸಲ್ಲಿಸುತ್ತಿದ್ದುದು ನಿರಂತರವಾಗಿತ್ತು.
ಅದು 1905ನೆಯ ಇಸ್ವಿ. ಭಾರತದಲ್ಲಿ ಆಂಗ್ಲರ ಆಳ್ವಿಕೆಯ ಅಬ್ಬರ ಮತ್ತು ಧರ್ಪದ ಕಾಲ. ಬ್ರಿಟಿಶ್ ಅಧಿಕಾರಿಗಳ ಎದುರು ಎಂತಹ ಭಾರತೀಯನೂ ನಡು ಬಗ್ಗಿಸಿ, ಕೈಮುಗಿದು ನಿಂತುಕೊಂಡೇ ಮಾತನಾಡಬೇಕು. ಕಣಗಿನಹಾಳದ ದೊಡ್ಡ ಜಮೀನುದಾರರಾಗಿದ್ದ ಸಿದ್ಧನಗೌಡರು ತಮ್ಮ ಗ್ರಾಮದ ಅನೇಕ ಕೆಲಸಗಳಿಗಾಗಿ ತಾಲೂಕು ಮತ್ತು ಜಿಲ್ಲಾ ಕಚೇರಿಗಳಿಗೆ ಸಂಚರಿಸುತ್ತಿದ್ದರು. ದೇಶದ ಮೊದಲ ಸಹಕಾರಿ ಕಾಯ್ದೆಯ ಪ್ರಥಮ ರಿಜಿಸ್ಟ್ರಾರ್ ಆಗಿದ್ದ ಸರ್. ಜೇಮ್ಸ್ ಮೆಕ್ಯಾನಿಯಲ್‍ರು ಧಾರವಾಡ ಜಿಲ್ಲೆಯ ಆಕ್ಟಿಂಗ್ ಕಲೆಕ್ಟರರಾಗಿ ಬಂದಿದ್ದರು. ಹೊಸ ಕಲೆಕ್ಟರ್ ಬಂದಿದ್ದಾರೆ ಅವರನ್ನು ಕಂಡು ಮಾತನಾಡಿಸುವ ಮೂಲಕ ಗ್ರಾಮದ ಕುಡಿಯುವ ನೀರು ಮತ್ತು ಪ್ರಯಾಣಕ್ಕೆ ರೈಲಿನ ಕುರಿತು ವಿಚಾರಿಸಿದರಾಯಿತೆಂದು ಸಿದ್ಧನಗೌಡರು ಹೊಸ ಕಲೆಕ್ಟರ್ ಮೇಕ್ಯಾನಿಯಲ್ ಅವರನ್ನು ಬೇಟಿಯಾಗುತ್ತಾರೆ. ಅಂತಹ ಸಂದರ್ಭದಲ್ಲಿ ಧಾರವಾಡದ ಕಲೆಕ್ಟರ್ ಆಗಿದ್ದ ಜೇಮ್ಸಮ್ಯಾಕ್‍ವಿಲ್ ತಮ್ಮನ್ನು ಕಾಣಲು ಬಂದಿದ್ದ ಗದಗ ಜಿಲ್ಲೆಯ ಕಣಗಿನಹಾಳ ಗ್ರಾಮದ ಜಮೀನ್ದಾರನೊಬ್ಬನ ಹೆಗಲ ಮೇಲೆ ಕೈಹಾಕಿಕೊಂಡು ತಮ್ಮ ವಿಶ್ರಾಂತಿ ಗೃಹಕ್ಕೆ ಕರೆದುಕೊಂಡು ಹೋದಾಗ ಅಲ್ಲಿದ್ದವರು ಆಶ್ಚರ್ಯ ಸೂಚಿಸುತ್ತಾರೆ. ಬ್ರಿಟಿಶ್ ಸರಕಾರದಿಂದ ಜೇಮ್ಸ ಮ್ಯಾಕ್‍ನಿಯಲ್‍ರು ಧಾರವಾಡದ ಕಲೆಕ್ಟರ ಮತ್ತು ಭಾರತದ ಪ್ರಥಮ ಕೋಆಪರೇಟಿವ್ ರಿಜಿಸ್ಟ್ರಾರ್ ಆಗಿ ನೇಮಕಗೊಂಡಿದ್ದರು. ಇಡೀ ಭಾರತದಲ್ಲಿ ಯಾವ ವ್ಯಕ್ತಿಯೂ ಸಹಕಾರ ಸಂಘ ಸ್ಥಾಪಿಸಲು ಮುಂದೆ ಬಂದಿರಲಿಲ್ಲಲೀ ಕುರಿತು ಪ್ರಯತ್ನಿಸಿದ್ದ ಅವರು ಕೈಚೆಲ್ಲಿ ಕುಳಿತಿದ್ದರು. ಈ ಸಂದರ್ಭದಲ್ಲಿ ಬಿಳಿ ಅಂಗಿ, ಬಿಳಿ ದೋತಿ, ಹೆಗಲ ಮೇಲೆ ಕಂಬಳಿ, ತಲೆಗೆ ಪೇಟ ಸುತ್ತಿದ್ದ ಆ ಜಮೀನ್ದಾರರಾದ ಸಿದ್ಧನಗೌಡ ಸಣ್ಣರಾಮನಗೌಡ ಪಾಟೀಲರು ಅವರನ್ನು ಕಂಡು ಮಾತನಾಡಲು ಬಂದಿದ್ದರು. ಹಳೆ ಧಾರವಾಡ (ಇಂದಿನ ಗದಗ) ಜಿಲ್ಲೆಯ ಕಣಗಿನಹಾಳ ಎಂಬ ಪುಟ್ಟ ಗ್ರಾಮದ ಕುರುಬ ಜನಾಂಗಕ್ಕೆ ಸೇರಿದ ಇವರು ದೇಶದ ಮೊಟ್ಟ ಮೊದಲನೆಯ ಸಹಕಾರಿ ಪತ್ತಿನ ಸಂಘದ ಸ್ಥಾಪಕರು ಮತ್ತು ಸ್ಥಾಪನಾ ಅಧ್ಯಕ್ಷರು.

ಕಣಗಿನ ಹಾಳದಲ್ಲಿ ದೇಶದ ಪ್ರಪ್ರಥಮ ಸಹಕಾರಿ ಸಂಸ್ಥೆ ಆರಂಭವಾಯಿತು. ಅದರ ಹಿಂದಿನ ಶಕ್ತಿ ಎಂಟುನೂರು ಎಕರೆ ಜಮೀನು ಹೊಂದಿದ್ದ ಕುರುಬ ಸಮಾಜದ ಈ ಧೀಮಂತ ಯಜಮಾನ ಎಂಬುದು ಕುರುಬ ಸಮಾಜಕ್ಕೆ ಹೆಮ್ಮೆ ತರುವ ಸಂಗತಿಯಾಗಿದೆ. ಈ ಸಹಕಾರ ಸಂಘದ ನೋಂದಣಿ ಸಂಖ್ಯೆ ಒಂದು(ಅಂದರೆ ದೇಶದಲ್ಲಿಯೇ ಮೊದಲನೆಯದು ಎಂದರ್ಥ). ಅಂದು ಎರಡು ಸಾವಿರ ರೂಪಾಯಿಗಳಿಂದ ಆರಂಭವಾದ ಈ ಸಹಕಾರಿ ಸಂಘ ಇಂದು ಒಂದು ಕೋಟಿ ರೂಪಾಯಿಗೂ ಹೆಚ್ಚು ಆಯ-ವ್ಯಯ ಹೊಂದಿದೆ. ಅಂದು ಹನ್ನೆರಡು ಜನ ಸದಸ್ಯರಿದ್ದ ಸಂಘದಲ್ಲಿ ಇಂದು 900ಕ್ಕೂ ಹೆಚ್ಚು ಜನ ಸದಸ್ಯರಾಗಿದ್ದಾರೆ.
ಸಿದ್ದನಗೌಡರು ಇಷ್ಟಕ್ಕೆ ತೃಪ್ತಿಪಟ್ಟುಕೊಳ್ಳಲಿಲ್ಲ. ತಮ್ಮ ಊರಿನ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಸಿದ್ದನಗೌಡರು ಕಣಗಿನಹಾಳದಲ್ಲಿ ರೇಲ್ವೆ ನಿಲ್ದಾಣ ಮಾಡಿಕೊಡಬೇಕು ಮತ್ತು ಕುಡಿಯುವ ನೀರಿಗೆ ಒಂದು ದೊಡ್ಡಬಾವಿಯನ್ನು ತೋಡಿಸಿಕೊಡಬೇಕು ಎಂಬ ಷರತ್ತಿನೊಂದಿಗೆ ಸಹಕಾರಿ ಸಂಘದ ಸ್ಥಾಪನೆಗೆ ಜೇಮ್ಸ ಮ್ಯಾಕ್‍ವಿಲ್ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು. ಅದೇ ರೀತಿ ಅವರೂರಲ್ಲಿ ರೇಲ್ವೆ ನಿಲ್ದಾಣ ಸ್ಥಾಪಿಸಲು ತಮ್ಮ ಸ್ವಂತ ಜಮೀನನ್ನು ದಾನವಾಗಿ ಕೊಟ್ಟರು. ಬಾವಿಯನ್ನು ತೋಡಿಸಲು ಅದೇ ಬ್ರಿಟಿಶ್ ಅಧಿಕಾರಿ ಚಾಲನೆ ನೀಡಿದರು. ಈಗ ಈ ಸಹಕಾರಿ ಸಂಘ, ಬಾವಿ ಮತ್ತು ಕಣಗಿನಹಾಳದ ರೇಲ್ವೆ ನಿಲ್ದಾಣಗಳಿಗೆ ನೂರುವರ್ಷ ತುಂಬಿ ಶತಮಾನೋತ್ಸವವನ್ನು ಆಚರಿಸಿಕೊಂಡಿವೆ.
ಸಿದ್ಧನಗೌಡರು ಬ್ರಿಟೀಶ್ ಅಧಿಕಾರಿಗಳನ್ನು ಕಾಡಿಬೇಡಿ ತಮ್ಮ ಊರಿಗೆ ಶಾಲೆಯನ್ನು ಮಂಜೂರು ಮಾಡಿಸಿಕೊಂಡರು. ಈ ಶಾಲೆಯು ಅಂದು ಸಿದ್ಧನಗೌಡರ ಪ್ರಯತ್ನದ ಫಲವಾಗಿ 11.8.1880ರಲ್ಲಿ ಆರಂಭವಾಯಿತು. 1903ರಲ್ಲಿ ಸಿದ್ಧನಗೌಡರ ಸತತ ಪ್ರಯತ್ನದ ಫಲವಾಗಿ ಗ್ರಾಮದಲ್ಲಿ ಏಳನೆಯ ತರಗತಿಯವರೆಗೆ ಶಾಲೆಯು ಆರಂಭವಾಗಿ ನಡೆದುಕೊಂಡು ಬರುತ್ತದೆ. ಈ ಸಂದರ್ಭದಲ್ಲಿ ತಮ್ಮ ಮಗ ಅನಂತಗೌಡನನ್ನು ಏಳನೆ ತರಗತಿಯ ಮೊದಲ ವಿದ್ಯಾರ್ಥಿಯಾಗಿ ಶಾಲೆಗೆ ನೋಂದಣಿ ಮಾಡಿಸಿ, ಊರಲ್ಲಿಯ ಮಕ್ಕಳಿಗೆ ದಾರಿತೋರುತ್ತಾರೆ. ಈ ಸಂದರ್ಭದಲ್ಲಿ ಸ್ವತಃ ಸಿದ್ಧನಗೌಡರು ಸಹಿ ಮಾಡಿದ ದಾಖಲೆಗಳನ್ನು ಅವರ ಕುಟುಂಬದವರು ಜೋಪಾನವಾಗಿ ಕಾಯ್ದುಕೊಂಡಿರುವುದು ಕಂಡುಬರುತ್ತದೆ.
ಶ್ರೀ ಸಿದ್ಧನಗೌಡ ಪಾಟೀಲರು ಮಹಾನ್ ದೈವಭಕ್ತರಾಗಿದ್ದರು. ಇವರ ಮನೆದೇವರು ಮೈಲಾರಲಿಂಗನಾಗಿದ್ದನು. ಇವರು ತಮ್ಮ ಅಜ್ಜ ರಾಮನಗೌಡರ ಕಾಲದಿಂದಲೂ ಮೈಲಾರಲಿಂಗನ ಭಕ್ತರಾಗಿದ್ದರು. ಇವರ ಅಜ್ಜ ರಾಮನಗೌಡರು ತಮ್ಮ ಹೊಲದಲ್ಲಿ ಉಳುಮೆ ಮಾಡುತ್ತಿದ್ದಾಗ, ರಂಟೆಗೆ ತಾಗಿದ ಕಲ್ಲನ್ನು ತೆಗೆಸಿನೋಡುತ್ತಾರೆ. ಅದು ಮೈಲಾರಲಿಂಗನ ಮೂರ್ತಿಯಾಗಿರುತ್ತದೆ. ಆ ಮೂತಿಗೆ ಒಂದು ದೇವಸ್ಥಾನವನ್ನು ಕಟ್ಟಿಸಿ ಅಲ್ಲಿ ಆ ಮೂರ್ತಿಯನ್ನು ಪ್ರತಿಷ್ಠಾಪಿಸುತ್ತಾರೆ. ಈ ದೇವಾಲಯವು ಇಂದಿಗೂ ಕಣಗಿನಹಾಳದಲ್ಲಿ ಕಂಡುಬರುತ್ತದೆ. ಈ ದೇವಾಲಯವನ್ನು ಕಟ್ಟಿ ಸುಮಾರು 200-300 ವರ್ಷಗಳಾಗಿರಬಹುದೆಂದು ಆ ಊರಿನ ಹಿರಿಯರು ಹೇಳುತ್ತಾರೆ. ಮೈಲಾರ ದೇವರ ಅನನ್ಯ ಭಕ್ತರಾಗಿದ್ದ ಇವರು ತಮ್ಮ ಮಗನಿಂದ ಅದೇ ಊರಿನಲ್ಲಿ ಮೈಲಾರನ ಶಿಬಾರವನ್ನು ಕಟ್ಟಿಸುತ್ತಾರೆ.
ಅಂದಿನ ಕಾಲದಲ್ಲಿ ಹಳ್ಳಿಗಳಲ್ಲಿ ಆಸ್ಪತ್ರೆಗಳು ಇರಲಿಲ್ಲ. ಸ್ವಲ್ಪ ದೊಡ್ಡದಾದ ಹೋಬಳಿಯಂತಹ ಸ್ಥಳಗಳಲ್ಲಿ ಆಯುರ್ವೇದ ಆಸ್ಪತ್ರೆಗಳು ಇದ್ದವು. ಗ್ರಾಮದ ಜನತೆಯು ತಮ್ಮ ಆರೋಗ್ಯದ ತೊಂದರೆಗಳಿಗೆ ದೂರದ ಆಯುರ್ವೇದ ವೈದ್ಯರನ್ನು ಹುಡುಕಿಕೊಂಡು ಹೋಗುತ್ತಿದ್ದರು. ಕಣಗಿನಹಾಳದ ಜನರು ಸಹ ತಮಗೆ ಅನಾರೋಗ್ಯ ಉಂಟಾದಾಗ ದೂರದ ನರೇಗಲ್ಲ ಗ್ರಾಮದ ಬಾಳಪ್ಪ ಎಂಬ ವೈದ್ಯನಲ್ಲಿಗೆ ಹೋಗುತ್ತಿದ್ದರು. ತನ್ನ ಊರಿನ ಜನರಿಗೆ ಉಂಟಾಗುವ ಈ ತೊಂದರೆಯನ್ನು ಮನಗಂಡು ಸಿದ್ಧನಗೌಡರು ತಾವೇ ಆಯುರ್ವೇದದ ಔಷಧಿಗಳನ್ನು ಕುರಿತು ಅಭ್ಯಾಸ ಮಾಡತೊಡಗಿದರು. ಗ್ರಾಮದ ಜನರ ಸಣ್ಣಪುಟ್ಟ ಆರೋಗ್ಯದ ಸಮಸ್ಯೆಗಳಿಗೆ ತಾವೇ ಔಷಧಿಕೊಟ್ಟು ಉಪಚರಿಸುತ್ತಿದ್ದರು. ತಮಗೆ ಅರ್ಥವಾಗದ ರೋಗಗಳಿದ್ದರೆ, ಅಂತಹ ರೋಗಿಗಳನ್ನು ತಾವೇ ಸ್ವತಃ ಗಾಡಿಮಾಡಿಕೊಂಡು ಬಾಳಪ್ಪನಲ್ಲಿಗೆ ಕರೆದೋಯ್ದು ತೋರಿಸುತ್ತಿದ್ದರು. ಇಂತಹ ಮಾನವೀಯತೆಯನ್ನು ಹೊಂದಿದ್ದ ಸಿದ್ಧನಗೌಡರು ಒಬ್ಬ ಆದರ್ಶ ಮಾನವರಾಗಿದ್ದುದು ಕಂಡುಬರುತ್ತದೆ. ಇವರ ನಡತೆ, ಆದರ್ಶಗಳು ಮಹಾಭಾರತದ ಭೀಷ್ಮರನ್ನು ನೆನಪಿಗೆ ತರುತ್ತವೆ.
ದೇಶದ ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲರು ಕೊಟ್ಟ ಸಹಕಾರಿ ಚಳುವಳಿಯನ್ನು ದೇಶ ಎಂದಿಗೂ ಮರೆಯುವುದಿಲ್ಲ. ಈ ಕಾರ್ಯದೊಂದಿಗೆ ಅವರು ಕಣಗಿನಹಾಳ ಗ್ರಾಮಕ್ಕೆ ನೀಡಿದ ಅನೇಕ ಜನೋಪಕಾರಿ ಕೆಲಸಗಳು ಇಂದಿಗೂ ಅವರನ್ನು ಜೀವಂತವಾಗಿಟ್ಟಿವೆ. ಅವರು ಅಂದು ಕಣಗಿನಕಾದಲ್ಲಿ ಸ್ಥಾಪಿಸಿದ ಕೃಷಿ ಪತ್ತಿನ ಸಹಕಾರಿ ಸಂಘದ ಸ್ಥಾಪನೆಯಿಂದ ಸಹಕಾರಿ ಚಳುವಳಿ ದೇಶದಲ್ಲಿ ಅಸ್ತಿತ್ವಕ್ಕೆ ಬರುವ ಮೂಲಕ ಅವರು ಸಹಕಾರಿ ಕ್ಷೇತ್ರದಲ್ಲಿ ಸದಾ ಅಜರಾಮರವಾಗಿದ್ದಾನೆ.

ಕ್ರಿ.ಶ. 1933 ಜುಲೈ 17ರಂದು ಸಿದ್ದನಗೌಡ ಪಾಟೀಲರು ಸ್ವರ್ಗಸ್ಥರಾದರು. ಅವರು ಇಹಲೋಕ ತ್ಯಜಿಸಿದರೂ ಅವರ ಆದರ್ಶ ಕಾರ್ಯಗಳು ಇಂದಿಗೂ ಅಮರವಾಗಿ ಉಳಿದಿವೆ. ಇಂದು ರಾಜ್ಯದಲ್ಲಿ ಸಾವಿರಾರು ಸಹಕಾರಿ ಸಂಘಗಳು ಸ್ಥಾಪನೆಗೊಂಡು ಸಾವಿರಾರು ಕೋಟಿ ವ್ಯವಹಾರ ನಡೆಸುತ್ತ ದೇಶವನ್ನು ಅಭಿವೃದ್ಧಿ ಪಥದಲ್ಲಿ ಒಯ್ಯುತ್ತಿವೆ. ಆದರೆ ರಾಜ್ಯದ, ದೇಶದ ಸಹಕಾರಿ ಸಂಘಗಳ ವ್ಯಕ್ತಿಗಳಿಗೆ ಈ ದೇಶದ ಪ್ರಥಮ ಸಹಕಾರಿ ಸಂಘದ ಸ್ಥಾಪಕ ಮತ್ತು ಅಧ್ಯಕ್ಷರಾಗಿದ್ದ ಸಿದ್ದನಗೌಡರ ಹೆಸರು ಗೊತ್ತಿಲ್ಲ. ಅವರ ಒಂದು ಭಾವಚಿತ್ರವನ್ನು ಸಹಕಾರಿ ಸಂಘದ ಕಚೇರಿಯಲ್ಲಿ ತೂಗು ಹಾಕಿಲ್ಲ. ಈ ಜಾಗ್ರತಿಗೆ ಕುರುಬ ಸಮಾಜವು ಮೊದಲ ಹೆಜ್ಜೆ ಇಡಬೇಕಾಗಿದೆ.
(ಸಿದ್ಧನಗೌಡರ ಕುರಿತು ಕೆಲವು ವಿವರಗಳನ್ನು ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲ ಎಂಬ ಕೃತಿಯಿಂದ ಪಡೆಯಲಾಗಿದೆ – ಲೇಖಕ)
ನ್ನು ಸಹಕಾರಿ ಪಿತಾಮಹ ಸಿದ್ಧನಗೌಡ ಪಾಟೀಲ ಎಂಬ ಕೃತಿಯಿಂದ ಪಡೆಯಲಾಗಿದೆ – ಲೇಖಕ)