ಎಂತಾದೇವ ನೋಡೋ ಮೈಲಾರಲಿಂಗ

ಎಂತಾಸ್ವಾಮಿ ನೋಡೋ ಗುಡ್ಡದ ರಾಯಾ
ಎಂತಾ ಮಾತ್ಮ ನೋಡೋ

ಕರ್ನಾಟಕದ ಬಳ್ಳಾರಿ ಮತ್ತು ಧಾರವಾಡ ಜಿಲ್ಲೆಗಳ ಸಂಲಗ್ನ ಸೀಮಾ ಪ್ರದೇಶಗಳಲ್ಲಿರುವ ಮೈಲಾರ ಮತ್ತು ದೇವರಗುಡ್ಡ ಗ್ರಾಮಗಳಲ್ಲಿ ನೆಲೆಸಿ ಮೈಲಾರಲಿಂಗ. ಗುಡದಯ್ಯ ನಾಮಗಳಿಂದ ಪ್ರಸಿದ್ಧನಾಗಿರುವ ದೇವನು ಕರ್ನಾಟಕದ ಸುಪ್ರಸಿದ್ಧ ಜನಪದ ದೈವವಾಗಿದ್ದಾನೆ. ಈ ಜನಪದ ದೈವದ ಪ್ರಭಾವ ವಲಯ ಸುವಿಸ್ತಾರವಾದುದು. ಕರ್ನಾಟಕದ ರಾಜಕೀಯ ಎಲ್ಲೆಗಳನ್ನೂ ಮೀರಿ ಉತ್ತರದಲ್ಲಿ ಮಧ್ಯಪ್ರದೇಶ, ಮಹಾರಾಷ್ಟ್ರಗಳಲ್ಲಿಯೂ, ದಕ್ಷಿಣದಲ್ಲಿ ಆಂಧ್ರ, ತಮಿಳು ನಾಡುಗಳಲ್ಲಿಯೂ ಕುಲದೇವರೆಂದು ಪೂಜೆಗೊಳ್ಳುತ್ತಿದೆ. ಭಾರತದಲ್ಲಿ ಇಷ್ಟು ವ್ಯಾಪಕವಾಗಿ ಕುಲದೇವರೆಂದು ಪೂಜೆಗೊಳ್ಳುವ ಇನ್ನೊಂದು ದೇವರಿಲ್ಲವೆಂದು ಹೇಳಬಹುದಾಗಿದೆ. ಆದ್ದರಿಂದ ಈ ದೈವತವನ್ನು ಕುರಿತು ವಿಧಿಗಳು, ಆಚರಣೆಗಳು, ನಂಬಿಕೆಗಳು, ಜಾತ್ರೆ ಹಬ್ಬಗಳು ಮತ್ತು ಜನಪದ ಸಾಹಿತ್ಯ ಅಪರಿಮಿತವಾಗಿರುವುದು ಸ್ವಾಭಾವಿಕವಾಗಿದೆ. ಪ್ರಸ್ತುತ ಪ್ರಬಂಧವು ಮೈಲಾರಲಿಂಗ ಕುರಿತು ಜನಪದ ಸಾಹಿತ್ಯಕ್ಕೆ ಮಾತ್ರ ಮೀಸಲಾಗಿದೆ. ಅದರಲ್ಲಿಯೂ ಕನ್ನಡ ಜನಪದ ಸಾಹಿತ್ಯವನ್ನು ಮಾತ್ರ ಇಲ್ಲಿ ಪರಿಗಣಿಸಲಾಗಿದೆ. ಏಕೆಂದರೆ ಮೇಲೆ ಹೇಳಿದಂತೆ ಅನ್ಯಭಾಷಿಕ ರಾಜ್ಯಗಳಲ್ಲಿಯೂ ಈ ಪರಂಪರೆ ಇರುವುದರಿಂದ ಆಯಾ ಭಾಷೆಗಳಲ್ಲಿಯೂ ಜನಪದ ಸಾಹಿತ್ಯವಿರುವ ಸಾಧ್ಯತೆಗಳಿವೆ. ಮರಾಠಿಯಲ್ಲಿ ಮೈಲಾರಲಿಂಗ (ಖಂಡೋಬಾ) ಕುರಿತಂತೆ ಜನಪದ ಸಾಹಿತ್ಯವಿರುವುದು ಈಗಾಗಲೆ ತಿಳಿದ ಮಾತೇ ಆಗಿದೆ.

ಮೈಲಾರಲಿಂಗ ಕುರಿತ ಜನಪದ ಸಾಹಿತ್ಯವನ್ನು ಕಥೆ, ಗೀತೆ, ಗಾದೆ ಮತ್ತು ಒಗಟುಗಳೆಂಬ ಜನಪದ ಸಾಹಿತ್ಯದ ನಾಲ್ಕು ಪ್ರಮುಖ ಪ್ರಕಾರಗಳಲ್ಲಿ ಇಲ್ಲಿ ವಿವೇಚಿಸಲಾಗುವುದು.

ಗೀತ ಸಾಹಿತ್ಯ : ಮೈಲಾರಲಿಂಗ ಕುರಿತು ಜನಪದ ಸಾಹಿತ್ಯದಲ್ಲಿ ಗೀತ ಸಾಹಿತ್ಯದ್ದು ಬಹುದೊಡ್ಡ ಕಣಜವಾಗಿದೆ. ಆದ್ದರಿಂದ ಪ್ರಥಮದಲ್ಲಿ ಅದನ್ನೇ ಪರಿಶೀಲನೆಗೆ ಎತ್ತಿಕೊಳ್ಳಲಾಗಿದೆ. ಈ ಪ್ರಕಾರವನ್ನು ಜಾನಪದ ಪುರಾಣ, ಆಖ್ಯಾಯಿಕೆಗಳು, ಬಿಡಿಪದಗಳು ಎಂದು ವಿಂಗಡಿಸಿ ಗಮನಿಸಲಾಗುವುದು.

ಜಾನಪದ ಪುರಾಣ : ಮೈಲಾರಲಿಂಗನನ್ನು ಕುರಿತು ಬಹುದೊಡ್ಡ ಪ್ರಮಾಣದಲ್ಲಿ ಜಾನಪದ ಗೀತಸಾಹಿತ್ಯ ಸೃಷ್ಟಿಯಾಗಿದ್ದರೂ ಮಲೆಯ ಮಾದೇಶ್ವರ, ಮಂಟಿಸ್ವಾಮಿ ದೈವಗಳ ಕುರಿತು ಜಾನಪದ ಮಹಾಕಾವ್ಯಗಳಿರುವಂತೆ ಈ ದೈವದ ಬಗೆಗೆ ಇಲ್ಲವಾಗಿದೆ.

ಆಖ್ಯಾಯಿಕೆಗಳು : ಮೈಲಾರಲಿಂಗ ಕುರಿತು ಜಾನಪದ ಪುರಾಣವಿರದಿದ್ದರೂ ಕಥನಗೀತರೂಪದಲ್ಲಿ ಖಂಡಕಾವ್ಯಗಳು ಲಭ್ಯವಿರುವುದು ಈ ಕೊರತೆಯನ್ನು ಕೆಲವು ಮಟ್ಟಿಗೆ ತುಂಬಿದಂತಾಗಿದೆ. ಆದರೆ ಇಲ್ಲಿ ದುಃಖದ ಸಂಗತಿಯೆಂದರೆ ಲಭ್ಯವಿರುವ ಇವುಗಳಲ್ಲಿ ಒಂದೆರಡನ್ನು ಬಿಟ್ಟರೆ ಉಳಿದುವೆಲ್ಲ ಈ ವರೆಗೂ ಜನಪದದ ನಾಲಿಗೆಗಳಲ್ಲಿಯೇ ಆಶ್ರಯ ಪಡೆದಿರುವುದು. ಆದ್ದರಿಂದ ಅಭ್ಯಾಸ ಮಾಡುವವರು ಹಾಡುಗಾರರನ್ನು ಹುಡುಕಿಕೊಂಡೇ ಹೋಗಬೇಕಾಗುತ್ತದೆ. ಪ್ರಸ್ತುತ ಲಭ್ಯವಿರುವ ಕಥನಗೀತೆಗಳೆಂದರೆ ೧. ಕೋಮಾಲಿ ಪದ, ೨. ಕುರುಬರ ಮಾಳವ್ವ, ೩. ರಡ್ಡೇರ ನೀಲಮ್ಮ, ೪. ತಿರುಪತಿ ತಿಮ್ಮಪ್ಪ ಮತ್ತು ಮೈಲಾರಲಿಂಗ, ೫. ಡೋಣಿಪದ ಇವುಗಳಲ್ಲಿ ಎರಡನ್ನು ಮಾತ್ರ ವಿವರವಾಗಿ ಇಲ್ಲಿ ಗಮನಿಸಲಾಗುವುದು.

ಕೋಮಾಲಿಪದ : ಜಾನಪದ ಕ್ಷೇತ್ರದಲ್ಲಿ ಖ್ಯಾತನಾಮರಾದ ಶ್ರೀ ಕ.ರಾ.ಕೃ ಅವರು ೧೯೬೩ ರಲ್ಲಿಯೇ ಈ ಕಥನಗೀತವನ್ನು ‘ಮೈಲಾರಲಿಂಗ ಈರಬಡಪ್ಪ’ ಎಂಬ ಸಂಗ್ರಹದಲ್ಲಿ ಪ್ರಕಟಿಸಿದ್ದಾರೆ.

“ಲಿಂಗಣ್ಣ ದೈವಾಗೊ ನೀಲಣ್ಣ ದೈವಾಗೊ
ಗಂಗೆ ಮಾಳವ್ವ ದೈವಾಗೊ”

ಎಂಬ ಪ್ರಾರ್ಥನೆಯೊಂದಿಗೆ ಈ ಗೀತೆ ಪ್ರಾರಂಭವಾಗುತ್ತದೆ. ಮೈಲಾರಲಿಂಗ ಗಂಡುಳ್ಳಗರತಿ ಕೋಮಲೆಯನ್ನು ಮೋಹಿಸಿ ಮಾಯದಿಂದ ಕರೆದುಕೊಂಡು ಬರುವುದೇ ಇಲ್ಲಿಯ ಕಥಾವಸ್ತು. ಮೈಲಾರಲಿಂಗ ಹಡಗಲಿ ಸೀಮೆಗೆ ಹೋಗುವುದು. ಕೋಮಲೆ ಮನೆ ಗುರ್ತುಹಚ್ಚುವುದು, ನೀರು ಹಣಿಸಲು ಬರುವಂತೆ ಕಾಡುವುದು, ಅವಳ ಸೆರಗು ಹಿಡಿದು ಭಾಷೆ ಪಡೆಯುವುದು, ತಿಪ್ಪೆ ಮತ್ತು ಬಾವಿ ದಡಗಳಲ್ಲಿ ಭೆಟ್ಟಿಯಾಗುವುದು; ಮಾಯದಿಂದ ಸೆಳೆದು ತರುವುದು ಮುಂತಾದ ಸಂದರ್ಭಗಳು ಸ್ವಾರಸ್ಯದ ಮಡುವುಗಳಾಗಿವೆ. ವಿಪ್ರಲಂಬ ಶೃಂಗಾರಕ್ಕೆ ನಿದರ್ಶನಗಳಾಗಿವೆ.

ಆರ್ನೆ ಥಾಂಸನ್‌ರ ವರ್ಗಸೂಚಿಯಂತೆ ‘ಮಾಯೆ ಮಾಟಗಳಿಗೆ ಒಳಗಾದ ಹೆಂಡತಿ’ ಯ ವರ್ಗಕ್ಕೆ ಈ ಕಥೆ ಸೇರಬಹುದಾಗಿದೆ.[1]

ಈ ಜಾನಪದ ಗೀತಕಥೆಯ ಪ್ರಮುಖ ಆಶಯಗಳು ಮುಂದಿನಂತಿವೆ.

೧. ಅವು ಹಡಗಲಿ ಸೀಮೆಗೆ ಹೋಗ್ಯಾವು

೨. ಐದೇ ದಿನದ ಬಾಣತಿ, ಬೆಳ್ಳಿಗಿಂಡ್ಸಾಗೆ ನೀರ ತಗೊಂಡೆ, ಬಾಗಿಲಿಗೆ ತಾನೆ ಬರುತಾಳೆ.

೩. ಗಂಡ ಬಂದರು ಬರಲಿ. ಮೈದಯ್ಯ ಬಂದರು ಬರಲಿ, ಮುತ್ತಿನ ಸರಗ ನಾ ಬಿಡಲಾರೆ.

೪. ಸೆಳ್ಳವು ಸಪ್ಪರಕೆ ಅಡಿಗ್ಯಾನೆ ಮೈಲಾರಲಿಂಗ

೫. ತಿಪ್ಪೆಗೆ ಹೋಗಿ ಅಡಿಗ್ಯಾನೆ ಗೊರವಯ್ಯ

೬. ಕಡಗದ ಕೈಯ ಹಿಡಿದಾನೆ

೭. ನೀನೆ ನನ್ನಿಂದೆ ಬರಬೇಕು

೮. ಅಲ್ಲಿಂದ ಕೋಮಲೆ ಭಾವಿಗೆ ಹೋಗ್ತಾಳೆ.

೯. ಭಂಡಾರದ ಸೀಲು ತುಂಬ್ಯಾನೆ ಮೈಲಾರಲಿಂಗ, ಮಾಯ ಮಾಡಿಕೊಂಡು ಹೋಗುತ್ತಾನೆ.

೧೦. ಎಡವಿದ ಬೆರಳೊಂದಡಿಯಾಗಿ

೧೧. ಯಾವನ್ನ ನೋಡಿ ಮರೆತೀಯ

೧೨. ನನ್ನ ಮೇಲೊಬ್ಬಳ ರಾಣೆ ತಂದಿದ್ದೀರ

೧೩. ಗಂಡನು ಮಂಚಕೆ ಬರಲಿಲ್ಲ ಅಂದೇಳಿ

೧೪. ಕೋಮಲೆ ಶಿವನು ಮಲಗಿದ್ದರು

೧೫. ಬಲಗಾಡೆಲವಳು ಇರುತಾಳೆ, ಎಡಗಡೆಗೆ ನೀನು ಇರುವಂತಿ.[2]

ಕುರುಬರ ಮಾಳವ್ವನ ಪದ: ಕ. ವಿ. ವಿದ್ಯಾಲಯದ ಬೆಳಗಾವ ಸ್ನಾತಕೊತ್ತರ ಕೇಂದ್ರದಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಶ್ರೀ ಎಂ.ಬಿ. ನೇಗಿನಾಳ ಅವರ ೧೯೮೨ ರಲ್ಲಿ ಪ್ರಕಟವಾದ ‘ಮೈಲಾರಲಿಂಗ ಪದಗಳು’ ಸಂಗ್ರಹದಲ್ಲಿ ಇದು ಪ್ರಕಟವಾಗಿದೆ.

“ಚದುರ ನಿಂಗಣ್ಣ ಚಂದ್ರನ ಕಿರಣ
ಭಾಗ್ಯದ ಕೋಟಿ ಯೋಳಕೋಟಿ”

ಎಂದು ಆರಾಧ್ಯದೈವದ ಸೌಂದರ್ಯ ಸ್ತುತಿಯೊಂದಿಗೆ ಈ ಕಥನಗೀತ ಪ್ರಾರಂಭವಾಗುತ್ತದೆ. ೬ ಸಂಧಿಗಳವರೆಗೂ ವಿಸ್ತಾರವಾಗಿರುವ ಗೀತವಿದು.

ಕುರುಬರ ಮಾಳವ್ವನನ್ನು ಮೋಹಿಸಿ ಮಾಯದಿಂದ ಕರೆತರುವುದೇ ಕಥಾವಸ್ತು.

ದೇಸ ತಿರುಗಿ ಬ್ಯಾಸತ್ತು ಬಂದ ಮೈಲಾರಲಿಂಗಗೆ ಕದ ತೆರೆಯದೆ ಸಿರಿಗಂಗ, ಮತ್ತೊಂದು ಹೆಣ್ಣಿನ ಮನಿಗ್ಹೋದ್ಹೊ ಮಾರಾಯ ಬಂದ ದಾರಿಲಿ ಹೊರಟ್ಹೊಗೊ ಎಂದರೆ, ಮತ್ತೊಂದು ಹೆಣ್ಣನ್ನು ತರದಿದ್ರ ಸಿರಿಗಂಗೆ ಗುಡದಯ್ದನಲ್ಲೆ ಎಂದು ಪ್ರತಿಜ್ಞೆ ನಿಲ್ಲುತ್ತದೆ. ಸಿರಿಗಂಗ ಏಳು ಹೆಡೆಸರ್ಪ ತಂದು ಸತ್ಯ ಪರೀಕ್ಷೆಗೆ ನಿಂತರೆ, ಬಂದ ಅಣ್ಣಯ್ಯ ಗುಡದಯ್ಯನಿಗೆ ನಿನಗೂನು ಬ್ಯಾಡಾದ್ದು ನನಗೂನು ಬ್ಯಾಡ ಎನ್ನುತ್ತಾರೆ. ಸಿರಿಗಂಗ ಮಾರಾಯಾಗ ಬೆನ್ನು ಬೀಳುತ್ತಾಳೆ. ಮೈಲಾರಲಿಂಗ ಕುರುಬರ ಮನೆಯಲ್ಲಿ ದುಡಿದು, ಜಗಳಾಡಿ, ದೊಸಿಗನಾಗಿ ಮಾಯೆಯಿಂದ ಮಾಳವ್ವನನ್ನು ತರುತ್ತಾನೆ. ಗಂಗವ್ವ ಮಾಳವ್ವರ ಸವತಿ ಮಾತ್ಸರ್ಯದಲ್ಲಿ, ‘ನಾನಾಗಿ ಬಂದವಳಲ್ಲ’ ವೆಂದು ಮಾಳವ್ವ ತಿಳುವಳಿಕೆ ನುಡಿಯುತ್ತಾಳೆ. ಇಲ್ಲಿ ಉಕ್ತವಾದ ಪ್ರಸಂಗಗಳು ಕಥೆಯ ಚೆಲುವಿನಾಗರಗಳಾಗಿವೆ. ಕಥೆ ಆದಿಯಿಂದ ಅಂತ್ಯದವರೆಗೂ ಕುತೂಹಲ ಕೆರಳಿಸುತ್ತ ಮನ ತಣಿಸುತ್ತ ಸಾಗುತ್ತದೆ.

ಕುರುಬರ ಮಾಳವ್ವನನ್ನು ಮೋಹಿಸಿ ಮಾಯದಿಂದ ಕರೆತರುವ ಈ ಕಥೆಯೂ ಹಿಂದಿನ ಕಥೆಯಂತೆ ಅದೆ ವರ್ಗಕ್ಕೆ ಸೇರುತ್ತದೆ.

ಈ ಕಥೆಯ ಆಶಯಗಳು ಮುಂದಿನಂತಿವೆ.

೧. ದೇಸದೇಸವ ತಿರುಗಿ ಬ್ಯಾಸತ್ತು ನಾ ಬಂದೆ, ರಾತ್ರಿ ಸಿರಿಗಂಗ ಏ ಕದ ತಗಿಯೇ.

೨. ಮತ್ತೊಂದು ಹೆಣ್ಣಿನ ಮನಿಗ್ಹೋದ್ಯೋ ಮಾರಾಯ, ಮತ್ಯಾಕ ಇಲ್ಲಿ ಬಂದೆ?

೩. ವಾದವ ಹಾಕಿದರೆ ಮತ್ತೊಂದು ಹೆಣ್ಣ ತರುತೇನೇ

೪. ಮತ್ತೊಬ್ಳು ಹೇಗೆ ಬರುತಾಳೆ

೫. ಮತ್ತೊಂದು ಹೆಣ್ಣು ತರದಿದ್ರೆ ಸಿರಗಂಗಾ ಗುಡದಯ್ದನ ಅಲ್ಲೆ

೬. ಬೆಲ್ಲದಂತ ದೇವ ಎಲ್ಲಿಗೆ ಹೋಗಿದ್ದೆ ಗಲ್ಲದ ಮ್ಯಾಲೆ ಹೊಸ ಗಾಯೋ
ಉಪ ಆಶಯ : ಹೊಟ್ಟೆಯ ಮೇಲೆ ಬೋರಗಾಯೋ

೭. ಯೋಳನು ಹೆಡಿಯವ ಸರಪವ ತಂದಾಳೆ, ಸತ್ಯಪರೀಕ್ಷವ ನಡಿ ಅಂದೆ

೮. ನಿಮ್ಮತಂಗಿ ವಾದ ಹಾಕತಾಳೊ ನಮಬೀಗ ಇಲ್ಲಿಗೆ ನಿಮ್ಮ ಹೆಣ್ಣ ಬಿಡಗಡಿ

೯. ನಿನಗೂನು ಬ್ಯಾಡಾದ್ದು ನನಗೂನು ಬ್ಯಾಡನ್ಯೋ

೧೦. ಮಾರಾಯಾಗ ಬೆನ್ನು ಬೀಳತಾಳೋ

೧೧. ಕೂಡಿಕ್ಯಾವ ಹೇಗೆ ಕುರುಬರ ಮಾಳವ್ನೆ

೧೨. ಕುರುಬರ ಮನಿಯಾಗೆ ದುಡಿದಾನೊ

೧೩. ಕುರುಬರ ಕೂಟ ಏ ಜಗಳವೋ

೧೪. ಕುರುಬರ ಮಾಳಿಯ ಒಯ್ಯುವದಿದ್ದರೆ

೧೫. ಮಾಯದ ಬಂಡಾರೆ ಏ ಒಗದಾನೊ

೧೬. ದೋಸಿಗನ ರೂಪ ಏ ತಾಳತಾನೊ

೧೭. ಮಾಯದ ಬಂಡಾರ ಕಲಿಸ್ಯಾನೇಳ ಕೋಟಿ ಏ ಔಸದ ಮಾಡಿ ಕುಡಿಸ್ಯಾನೊ

೧೮. ಮುಂದ್ಮುಂದ ಮಾರಾಯ ಹಿಂದಹಿಂದ ಮಾಳವ್ವ

೧೯. ಗಂಗೀಗೂ ಮಾಳೀಗೂ ಕದನ ಕಾಳಗ ಹಚ್ಚಿ

೨೦. ಸಿರಿಗಂಗ ಏ ಅನ್ನ ಬೇಡವರ ಏ ಬರುತಾರೊ

೨೧. ಮಾಳೆ ಮಕ್ಕಳ ಬೇಡಾವೃ ಏ ಬರತಾರೊ

೨೨. ಗಂಗವ್ವ ನಾನಾಗಿ ಬಂದ್ಯೋಕ್ಸಲ್ಲೊ.

ಕೋಮಾಲಿ ಹಾಗೂ ಕುರುಬರ ಮಾಳವ್ವ ಎರಡರಲ್ಲೂ ಹೆಣ್ಣಿನ ಮೇಲೆ ಹೆಣ್ಣು ತರುವ ಕಥೆಯೇ ಇದ್ದು, ಎರಡರಲ್ಲೂ ಮಾಯದ ತಂತ್ರ ಇದಕ್ಕಾಗಿ ಬಳಸಿಕೊಳ್ಳಲಾಗಿದೆ. ಮೂಲದಲ್ಲಿ ಕಥೆಗಳೆರಡೂ ಒಂದೇ ಆಗಿದ್ದರೂ ಬೆಳವಣಿಗೆಯಲ್ಲಿ ಒಂದಿಷ್ಟು ಭಿನ್ನತೆಗಳು ಕಂಡು ಬರುತ್ತವೆ. ಕೋಮಾಲೆ ಗಂಡುಳ್ಳ ಹೆಣ್ಣು ಬಾಣತಿ ಬೇರೆ, ಆದರೆ ಕುರುಬರ ಮಾಳವ್ವ ಕನ್ಯೆಯಾಗಿದ್ದಾಳೆ. ಕೋಮಾಲೆಯಲ್ಲಿ ಹೆಣ್ಣುತರಲು ಸಹಜ ಹೊರಟರೆ, ಕುರುಬರ ಮಾಳವ್ವರಲ್ಲಿ ಪಣತೊಟ್ಟು ಹೊರಡುತ್ತಾನೆ. ಕೋಮಲೆಯನ್ನು ಕರೆತರುವಲ್ಲಿಗೆ ಆ ಪದ ಮುಕ್ತಾಯ ಕಂಡರೆ ಕುರುಬರ ಮಾಳವ್ವರಲ್ಲಿ ಸವತಿ ಮಾತ್ಸರ್ಯದ ಕಲಹಕ್ಕೆ ಇಂಬುಗೊಡುತ್ತದೆ. ಕೋಮಾಲೆಯಲ್ಲಿ ಬಲಗಡೆಗೆ ಕೋಮಾಲೆ, ಎಡಗಡೆಗೆ ಸಿರಿಗಂಗ ಎಂದು ಪ್ರತ್ಯೇಕ ಸ್ಥಾನಗಳನ್ನು ಏರ್ಪಡಿಸಿದರೆ ಕುರುಬರ ಮಾಳವ್ವರಲ್ಲಿ ಬಂದ ಭಕ್ತರಿಗೆ ಅನ್ನಕರುಣಿಸಲು ಸಿರಿಗಂಗೆಗೆ, ಸಂತಾನ ಕರುಣಿಸಲು ಕುರುಬರ ಮಾಳವ್ವಗೆ ಎಂಬಂತೆ ಪ್ರತ್ಯೇಕ ಕಾರ್ಯಗಳನ್ನು ವಹಿಸಿ ಕೊಡಲಾಗಿದೆ.

ಮೈಲಾರಲಿಂಗ ಕುರುಬರ ಮಾಳವ್ವ ಕಥನಗೀತದಂತೆಯೇ ಆದಿ ಚುಂಚನಗಿರಿಯ ಭೈರವಸ್ವಾಮಿ ಕುರುಬರ ಮಾಳವ್ವರ ಕಥನಗೀತವೂ[3] ಒಂದಿದ್ದು ಎರಡರಲ್ಲಿ ಅನೇಕ ಸಾಮ್ಯಗಳನ್ನು ಕಾಣಬಹುದಾಗಿದೆಯೆಂದು ಇಲ್ಲಿ ಸೂಚಿಸ ಬಯಸುತ್ತೇನೆ.

ಸಾಂಸ್ಕೃತಿಕ ಮಾನವಶಾಸ್ತ್ರದ ಹಿನ್ನೆಲೆಯಲ್ಲಿ ಮೇಲಿನ ಕಥೆಗಳೆರಡನ್ನೂ ನೋಡಿದಾಗ ಪ್ರಾಚೀನ ಕಾಲದ ಮಾನವ ಸ್ವಭಾವ ವಿಶೇಷವೊಂದು ಇಲ್ಲಿ ಪ್ರಧಾನವಾಗಿ ನಿಂತದ್ದು ಕಂಡು ಬರುತ್ತದೆ. ಏಕ ಪತ್ನಿತ್ವ ಜಾರಿಯಲ್ಲಿರುವ ಈ ಕಾಲದಲ್ಲಿ ಹೆಣ್ಣಿನ ಮೇಲೆ ಹೆಣ್ಣು ಇಡುವುದಾಗಲಿ ತರುವುದಾಗಲಿ ಸಾಮಾಜಿಕ ಅಪರಾಧವಾಗಿದ್ದಂತೆ ಪ್ರಾಚೀನ ಕಾಲದಲ್ಲಿ ಆಗಿರಲಿಲ್ಲ. ಪುರಷನೊಬ್ಬ ಹೆಣ್ಣುಗಳನ್ನನ್ನೇಕ ಆಳುವುದು, ಕದ್ದಾಗಲಿ, ಗೆದ್ದಾಗಲಿ ತರುವುದು ಪೌರುಷ ಗಂಡಸ್ತಿಕೆಗಳ ಸಂಕೇತವಾಗಿತ್ತು. ಅಷ್ಟೇ ಅಲ್ಲ ಸಾಮಾಜಿಕ ಅಂತಸ್ತೂ ಆಗಿತ್ತು. ಜಾನಪದ ದೇವತೆ ಮೈಲಾರಲಿಂಗನಲ್ಲಿಯೂ ಈ ಸ್ವಭಾವವನ್ನು ಆರೋಪಿಸಲಾಗಿದೆ.

“ಜನಪದ ಕವಿಗಳು ದೇವರುಗಳನ್ನು ತಮ್ಮಂತೆಯೇ ಕಲ್ಪಿಸಿಕೊಂಡು ತಮ್ಮ ಬೇಕು ಬೇಡಗಳನ್ನು ಅವರಿಗೂ ಆರೋಪಿಸಿದ್ದಾರೆ.

ದೇವರು ‘ಮೈಮೆ’ ಉಳ್ಳ ಶಕ್ತಿಶಾಲಿ ಮಾಯಾವಿ. ಅವರು ಮನಸ್ಸು ಮಾಡಿದರೆ ಲೋಕದಲ್ಲಿ ಅಸಾಧ್ಯವಾದುದು ಏನೂ ಇಲ್ಲ. ಬಹುಪಾಲು ಜನಪದ ದೇವತೆಗಳು ನಮ್ಮಂತೆಯೇ ಹಸಿವು ನೀರಡಕೆಯುಳ್ಳವರು, ಸ್ತ್ರೀಲೋಕವು, ಬಹು ಪತ್ನೀಪ್ರಿಯರು, ಪ್ರಶಂಶಾಪ್ರಿಯರು ಕಲಾಪ್ರಿಯರು…. “ಶ್ರೀ ನಂ. ತಪಸ್ವೀಕುಮಾರರ ಈ ಅಭಿಪ್ರಾಯಕ್ಕೆ” ಈ ಮತ್ತು ಮುಂದಿನ ಕಥೆಗಳು ಕೂಡ ನಿದರ್ಶನಗಳಾಗಿವೆ.

ರಡ್ಡೇರ ನೀಲಮ್ಮನ ಪದ ಈ ಮತ್ತು ಮುಂದಿನ ಇನ್ನೆರಡು ಕಥನ ಗೀತೆಗಳು ಈವರೆಗೂ ಎಲ್ಲಿಯೂ ಪ್ರಕಟವಾಗಿಲ್ಲ. ಪ್ರಾಧ್ಯಾಪಕ ಶ್ರೀ ಎಂ. ಬಿ. ನೇಗಿನಾಳರವರು ಶ್ರಮವಹಿಸಿ ಧ್ವನಿ ಮುದ್ರಿಸಿಗೊಂಡಿದ್ದಾರೆ.

ಬನ್ನೂರಿನ ರಡ್ಡೇರ ನೀಲಮ್ಮ ಆಗರ್ಭ ಶ್ರೀಮಂತಳು ಆದರೆ ಜಿಪುಣಾಗ್ರೇಸರಳು. ಅವಳ ಬಾಗಿಲಿಗೆ ಯಾವ ಭಿಕ್ಷುಕನೂ ಹೋಗುವಂತಿರಲಿಲ್ಲ. ಅವಳಿಗೆ ಬುದ್ದಿ ಕಲಿಸಲೆಂದು ಮೈಲಾರಲಿಂಗ ಗೊರವನ ವೇಷತಾಳಿ ಹೋದ. ನೀಲಮ್ಮ ಕೇಳಿದ ಮಜ್ಜಿಗೆಯನ್ನೂ ಕೊಡದೆ, ನೀರನ್ನು ಹಣಿಸದೆ ಹೆದರಿಸಿ ಓಡಿಸಿದಳು. ಈ ಪ್ರಸಂಗದಿಂದಾಗಿ ಅವಳ ಸಂಪತ್ತು ಕರಗಿತು. ಹೀನಸ್ಥಿತಿ ಬಂದಿತು. ಇದರ ಕಾರಣ ತಿಳಿಯಲು ಹೊತ್ತಿಗೆ ಕೇಳಬೇಕೆಂದು ನಿರ್ಧರಿಸಿದಳು.

ಅಣ್ಣನ ಆಜ್ಞೆಯಂತೆ ಎಲ್ಲಮ್ಮ ಜೋಗತಿಯ ವೇಷದಲ್ಲಿ ಬಂದು ಕವಡೆ ಹಾಕಿ ನೀಲಮ್ಮನಿಗೆ ‘ಗೊರವನೊಬ್ಬನನ್ನು ನೀನು ಪೀಡಿಸಿದ್ದು ಕಾರಣ’ ಎಂದು ಹೇಳಿ ‘ಅವನನ್ನು ಕರೆದು ತಂದು ಉಪಚರಿಸಿ ಮೈಲಾರಕ್ಕೆ ಹೋಗಿ ಬಾ’ ಎಂದು ಉಪಾಯವನ್ನು ಸೂಚಿಸಿದಳು.

ಅದೇ ರೀತಿ ನೀಲವ್ವ ಗೊರವನೊಬ್ಬನನ್ನು ಹುಡುಕಿ ತಂದಳು. ಆತನ ಸೇವೆ ಮಾಡಿದಳು. ಆತ ಕೊಟ್ಟ ಅನೇಕ ಕಿರುಕುಳಗಳನ್ನು ಸಹಿಸಿದಳು. ಕೊನೆಗೆ ಐದು ಅಂಕಣದ ಬಂಡಿ ಕಟ್ಟಿಸಿಗೊಂಡು ಮೈಲಾರಕ್ಕೆ ಬರುವ ಹರಕೆ ಹೊತ್ತಳು. ಅದರಂತೆ ಮೈಲಾರಕ್ಕೆ ಸಡಗರದಿಂದ ಹೋಗಿ ಐದನೂರು ಡೋಣಿ ತುಂಬಿಸಿದಳು. ಅಲ್ಲಿಗೆ ಮೈಲಾರಲಿಂಗ ಸುಪ್ರಸನ್ನನಾಗಿ ಮೊದಲಿನ ಸಿರಿ ನೀಲಮ್ಮನಿಗೆ ಕರುಣಿಸಿದ.

ಮೈಲಾರಲಿಂಗನ ಮಹಿಮೆಯನ್ನು ಸಾರುವುದು ಈ ಕಥೆಯ ಉದ್ದೇಶ. ಭಕ್ತಿರಸ ಇದರ ಸ್ಥಾಯಿ.

ಆರ್ನೆಥಾಂಸನ್‌ರ ಸಾಮಾನ್ಯ ಕಥೆಗಳ ಗುಂಪಿನಲ್ಲಿ ಅತಿಮಾನುಷ ವಿರೋಧವರ್ಗಕ್ಕೆ ಈ ಕಥೆ ಸೇರಬಹುದಾಗಿದೆ.

ಲೇಖನದ ಅತಿ ವಿಸ್ತಾರದ ಭಯದಿಂದ ಈ ಮತ್ತು ಮುಂದಿನ ಕಥೆಗಳಿಗೆ ಆಶಯಗಳನ್ನು ಬರೆದಿರುವುದಿಲ್ಲ.

ತಿರುಪತಿ ತಿಮ್ಮಪ್ಪ ಮತ್ತು ಮೈಲಾರಲಿಂಗಪ್ಪ ಪದ :

ಇದು ಸುದೀರ್ಘವಾದ ಕಥನಗೀತವಾಗಿದೆ. ಮೈಲಾರಲಿಂಗಪ್ಪ ತನನ ಮದುವೆಗಾಗಿ ತಿರುಪತಿ ತಿಮ್ಮಪ್ಪನಲ್ಲಿ ಏಳು ಕೋಟಿ ಸಾಲ ಮಾಡುವುದು, ಸಾಲ ತೀರಿಸಲು ಒತ್ತಾಯ ಬಂದ ಪ್ರಸಂಗದಲ್ಲಿ ಕೌಶಲ್ಯ ಪ್ರದರ್ಶಿಸಿ ಜಾರಿಕೊಳ್ಳುವುದು ಈ ಕಥನ ಗೀತೆಯ ವಸ್ತುವಾಗಿದೆ. ಹಾಸ್ಯರಸ ಪ್ರಧಾನವಾಗಿ ಕಾಣಿಸಿಕೊಳ್ಳುತ್ತದೆ. ಏಳುಕೋಟಿ ಏಳುಕೋಟಿಗೂ ಎಂಬ ಉದ್ಘೋಷಕ್ಕೂ, ಏಳು ಕೋಟಿ ಕೂಡಲಿಲ್ಲ ಮೈಲಾರಲಿಂಗನ ಸಾಲ (ಶನಿ) ಹರಿದಿಲ್ಲ ಮತ್ತು ‘ಮಂದಿ ಕರಕೊಂಡು ಮೈಲಾರಕ ಬಾ’ ಎಂಬ ಗಾದೆ ಮಾತುಗಳಿಗೂ ಈ ಕಥೆಯೆ ಹಿನ್ನಲೆಯೆಂದು ಹೇಳಲಾಗುತ್ತದೆ.

ಸುಪ್ರಸಿದ್ಧನಾದ ತಿರುಪತಿ ತಿಮ್ಮಪ್ಪನ ಮೇಲೆ ಮೈಲಾರಲಿಂಗನ ಘನತೆಯನ್ನು ತೋರುವುದು ಈ ಕಥನ ಗೀತೆಯ ಉದ್ದೇಶವಿದ್ದಂತಿದೆ. ಮೈಲಾರಲಿಂಗನಿಗಿಂತಲೂ ಪೂರ್ವದಲ್ಲಿಯೇ ಪ್ರಸಿದ್ಧಿ ಹೊಂದಿದ್ದ ತಿರುಪತಿ ತಿಮ್ಮಪ್ಪನೊಂದಿಗೆ ಮೈಲಾರಲಿಂಗನ ಸ್ನೇಹ ಯಾವುದೊಂದು ನಿಮಿತ್ತವಾಗಿ ಮಾಡಿಸುವಲ್ಲಿ ಈತನನ್ನು ಅವನ ಸಾಮಾನ ನನ್ನಾಗಿಸುವ, ಸಾಲಕೊಟ್ಟ ತಿಮ್ಮಪ್ಪನನ್ನು ಮೈಲಾರಲಿಂಗ ತನ್ನ ಚತುರತೆಯಿಂದ ಮಂಕುಗೊಳಿಸಿ ಕೌಶಲ್ಯ ವಿಜಯ ಸಾಧಿಸುವಲ್ಲಿ ಅವನಿಗಿಂತಲೂ ದೊಡ್ಡವನನ್ನಾಗಿಸುವ ಉದ್ದೇಶಗಳು ಅಡಿಗಿದಂತೆ ಇವೆ.

ಡೋಣಿ ಪದ ಇದೂ ಸುದೀರ್ಘವಾದ ಪದವಾಗಿದೆ. ಬೆಳವಲನಾಡಿನ ಭಕ್ತರು ಮೈಲಾರ ಕ್ಷೇತ್ರಕ್ಕೆ ಬಂದಾಗ, ಗುಡದಯ್ಯನ ದರ್ಶನವನ್ನಪೇಕ್ಷಿಸಿ ನಾಲ್ವತ್ತುಜನ ಚಂದಾಪುರದ ಹತ್ತಿರ ತುಂಗಭದ್ರೆಯನ್ನು ಡೋಣಿಯ ಸಹಾಯದಿಂದ ದಾಟಿ ಬಂದರು. ಗುಡದಯ್ಯನ ದರ್ಶನ ಪಡೆದು ಭಕ್ತಿಯಿಂದ ದೋಣಿ ತುಂಬಿಸಿ ಪುನಃ ಮೈಲಾರಕ್ಕೆ ಹೊರಟರು. ದಾರಿಯಲ್ಲಿ ಹೊನ್ನೆತ್ತೆವ್ವನ ದರ್ಶನಮಾಡಿಕೊಂಡು ಚಂದಾಪುರದ ಅಗಸಿಗೆ ಬಂದಾಗ ಹೊತ್ತು ಹೋಗಿತ್ತು. ದೋಣಿ ನಡೆಸುವ ಅಂಬಿಗ ದೋಣಿಯನ್ನು ಕಟ್ಟಿಹಾಕಿ ಹೊರಟುಹೋಗಿದ್ದ. ಮೈಲಾರದಲ್ಲಿ ಚಿಕ್ಕ ಮಕ್ಕಳನ್ನು ಬಿಟ್ಟು ಬಂದಿದ್ದು ಈ ಹಿರಿಯರೆಲ್ಲರು ಚಿಂತಾಕ್ರಾಂತರಾದರು.

ಆ ಮಬ್ಬು ಕತ್ತಲೆಯಲ್ಲಿ ಹುಡುಗನೊಬ್ಬ ಬಂದು ಡೋಣಿಯಲ್ಲಿ ಹೊಳೆ ದಾಟಿಸುವುದಾಗಿ ಕರೆದುಕೊಂಡು ಹೊರಟ, ಡೊಣಿ ನಡುಹೊಳೆಗೆ ಬಂದಾಗ ಗರಗರ ತಿರುಗತೊಡಗಿತು. ಹುಡುಗ ಎಲ್ಲರಿಗೂ ಮನೆದೇವರನ್ನು ನೆನೆಯಲು ಹೇಳಿದ. ಎಲ್ಲರೂ ‘ಏಳು ಕೋಟಿ ಏಳು ಕೋಟಿಗೊ’ ಎಂದು ಕೂಗಿದರು. ದೋಣಿ ಸುರಕ್ಷಿತವಾಗಿ ದಡಕ್ಕೆ ಸೇರಿದಾಗ ಹುಡುಗ ಮಾಯವಾಗಿದ್ದ.

ಇತ್ತ ಅದೇ ಹುಡುಗ ‘ಗೊರವಪ್ಪನ’ ವೇಷದಿಂದ ಹರಪನಹಳ್ಳಿಗೆ ಹೋಗಿ ದೋಣಿ ಮುಳುಗಿ ನಾಲ್ವತ್ತು ಜನ ಸತ್ತರೆಂದು ಸುದ್ದಿ ಹೇಳಿದ. ಪೋಲಿಸರು ಬಂದು ಗೋಣೆಪ್ಪನನ್ನು ಹಿಡಿದೊಯ್ದ ಬಂದೀಖಾನೆಗೆ ಹಾಕಿದರು. ಗೊರವಪ್ಪ ಗೋಣೆಪ್ಪನ ಮನೆಯವರನ್ನು ಸಮಾಧಾನಗೊಳಿಸಿದ. ಪೋಲಿಸರಿಗೆ ತಾನು ಜಾಮೀನು ಆಗುವುದಾಗಿಯೂ, ಮೇಲೆ ಹಣವನ್ನು ಕೊಡುವುದಾಗಿಯು ಹೇಳಿದ. ಅವರ ಟೇಬಲ್ ಮೇಲೆ ಭಂಡಾರ ಮೆತ್ತಿದ ನಾಣ್ಯಗಳ ರಾಶಿಯನ್ನೆ ಹಾಕಿದ. ಪೋಲಿಸರು ಆ ನಾಣ್ಯಗಳನ್ನು ಎಷ್ಟು ಎಣಿಸಿದರೂ ಅವು ತೀರಲಿಲ್ಲ. ಬೆರಗಾದ ಪೋಲಿಸರು ಗೊರವನ ಕ್ಷಮೆ ಕೇಳಿ ಗೋಣೆಪ್ಪನನ್ನು ಬಿಟ್ಟು ಕೊಟ್ಟರು. ಜಾತ್ರೆಯ ಕಾಲಕ್ಕೆ ಯಾವತ್ತೂ ದೋಣಿ ಅಡಿಸುವ ಹಾಗೂ ಬಂದೋಬಸ್ತ ಮಾಡುವ ಏರ್ಪಾಡು ಮಾಡಲು ಒಪ್ಪಿಕೊಂಡರು.

ಆಡಿ ಬಂತಾಡಿ ಬಂತ | ಹರಗೋಲ
ಕೋಲಾಡಿ ಕೊಂಕಿ ಬಂತ
|

ನಂಬಿದ ಭಕ್ತರ ಯೋಗಕ್ಷೇಮವನ್ನು ಸ್ವಾಮಿಯು ಹೊರುತ್ತಾನೆಂದು ಸಾರುವುದೆ ಈ ಕಥನಗೀತೆಯ ಉದ್ದೇಶವಾಗಿದೆ.

ಈ ವರೆಗೂ ಪ್ರಮುಖವಾದೈದು ಕಥನ ಗೀತೆಗಳನ್ನು ನೋಡಿದ್ದಾಯಿತು. ಇನ್ನು ಮುಂದೆ ಅಪಾರವಾಗಿರುವ ಬಿಡಿ ಪದ್ಯಗಳನ್ನು ಗಮನಿಸೋಣ.

ಬಿಡಿಪದ್ಯಗಳು – ಕರ್ನಾಟಕದಾದ್ಯಂತ ಹಲವಾರು ಜನಪದ ಗೀತ ಸಂಪ್ರದಾಯಗಳು ಪ್ರಚಲಿತವಿದೆ. ಕೋಲಾಟದ ಪದಗಳು, ಅಂಟಿಕೆ – ಪಂಟಿಕೆ ಪದಗಳು, ಹಂತಿಯ ಹಾಡುಗಳು, ಹುತ್ತರಿ ಹಾಡುಗಳು, ಬೀಸುವ ಪದಗಳು, ಕುಟ್ಟುವ ಪದಗಳು, ಮಾನನವಮಿಯ ಪದಗಳು ಹಾಗೂ ದೇವರ ಪದಗಳು.

ದೇವರ ಪದಗಳು ಬಿಡಿರೂಪದಲ್ಲಿ ಅಸಂಖ್ಯವಾಗಿ ಲಭ್ಯವಿವೆ. ಇವು ಸ್ತುತಿ ಪದಗಳೆಂದೇ ತಿಳಿಯಲ್ಪಡುತ್ತವೆ. ಗ್ರಾಮದೇವತೆ, ಗೃಹದೇವತೆ, ಕುಲದೇವತೆ, ಪ್ರಾದೇಶಿಕ ದೇವತೆ, ಪುರಾಣ ದೇವತೆಗಳನ್ನು ಕುರಿತು ಮಾಡಿದ ಪ್ರಾರ್ಥನಾ ಗೀತೆಗಳೆ ಇವು.

ಮೈಲಾರಲಿಂಗನನ್ನು ಕುರಿತು ಬಿಡಿಪದಗಳು ಬಹುದೊಡ್ಡ ಪ್ರಮಾಣದಲ್ಲಿ ಲಭ್ಯವಿವೆ. ಈ ದಿಶೆಯಲ್ಲಿ ಪ್ರಾಧ್ಯಾಪಕ ಡಾ. ಎಂ. ಬಿ. ನೇಗಿನಾಳರವರ ‘ಮೈಲಾರಲಿಂಗನ ಪದಗಳು’ ಎಂಬ ಸಂಗ್ರಹವೊಂದನ್ನು ಬಿಟ್ಟರೆ, ಬಹುದೊಡ್ಡ ಪ್ರಮಾಣದಲ್ಲಿ ಹಾಡುಗಳು ಜನಪದದ ನಾಲಿಗೆಯ ಮೇಲೆಯೇ ನಿಂತಿವೆ. ಇವು ಇಂಗಿಹೋಗದ ಮುನ್ನ ಸಂಗ್ರಹಿಸಿ ಪ್ರಕಟಿಸುವುದು ತೀರ ಅವಶ್ಯವಿದೆಯೆಂದು ಈ ಸಂದರ್ಭದಲ್ಲಿ  ಸೂಚಿಸಬಯಸುತ್ತೇನೆ.

ಬಿಡಿಪದ್ಯಗಳು ಸ್ತುತಿಪದ್ಯಗಳ ಗುಂಪಿಗೆ ಸೇರತಕ್ಕುವುಗಳಾದರೂ, ಸ್ತುತಿ ವೈವಿಧ್ಯಮಯವಾಗಿರುವುದರಿಂದ ಹಾಡುಗಳಲ್ಲಿಯೂ ಏಕತಾನತೆಗೆ ಬದಲಾಗಿ ವೈವಿಧ್ಯತೆಗಳು ಕಂಡು ಬರುತ್ತವೆ. ಇಲ್ಲಿ ಅಂತ ಕೆಲವು ವಿಧಗಳನ್ನು ನೋಡಬಹುದಾಗಿದೆ.

ಸ್ತುತಿ ಪದ್ಯಗಳಲ್ಲಿ ‘ಉದಯರಾಗ’ಗಳದ್ದೊಂದು ಪ್ರಚಲಿತವಾದ ಪ್ರಕಾರವಾಗಿದೆ. ಮೈಲಾರಲಿಂಗನನ್ನು ಕುರಿತು ಹಲವಾರು ಜಾನಪದ ಉದಯರಾಗಗಳು ಲಭ್ಯವಿದೆ.

ಏಳುಸ್ವಾಮಿಬೆಳಗಾದಾವೊ | ಮೈಲಾರಲಿಂಗಎದ್ದುಮಜ್ಜನಮಾಡಯ್ಯಾ

ಈ ಉದಯರಾಗ ೯ ಪದ್ಯಗಳದ್ದಿದ್ದು ಪ್ರತಿಪದ್ಯದಲ್ಲೂ ಜಾನಪದ ಸೊಗಸು ಹೊರಸೂಸುತ್ತವೆ.

ಕಬ್ಬಕ್ಕಿಕರಿಹಕ್ಕಿನೆಲಗುಬ್ಬೀ… | ದೇವಾಕಬ್ಬಕ್ಕಿಕರಿಹಕ್ಕಿನೆಲಗುಬ್ಬೀಮೊದಲಾಗಿಪಕ್ಷಿಪಾರಿವಾಳಗಿಳಿಹಿಂಡುಮೊದಲಾಗಿಏಳಯ್ಯಬೆಳಗಾದಾವೋ
ಏಳ್ತಂದೆಬೆಳಗಾದಾವೋ… | ಗುಡ್ಡದರಾಯಾಎದ್ದುಮಜ್ಜನಮಾಡಯ್ಯಾ.

ಸ್ತುತಿ ಪದ್ಯಗಳಲ್ಲಿ ಆರಾಧ್ಯದೈವದ ಶೌರ್ಯವರ್ಣನೆಗೆ ಹಿರಿದಾದ ಪ್ರಾಶಸ್ತ್ಯವಿದೆ. ಮೈಲಾರಲಿಂಗನನ್ನು ಈ ರೀತಿಯಲ್ಲಿ ಸ್ತುತಿಸುವ ಪದಗಳೂ ಹಲವಾರು.

ಅಪ್ಪಗುಡದಯ್ಯಬರುತಾನ | ರಣದಾಗರಣಗೆಜ್ಜೆತಾನುಹೊಡೆತಾನೊ | ಕುದುರೆದ್ದುಕುದುರೆದ್ದುಕುಣಿಯುತಾವ.
ರಣಕೆಗೆಜ್ಜೀತಾನು | ಹೊಡಿತಾನೊಗುಡುದಯ್ಯದಯಿತರದಂಡುಮುರದಾನ | ಕುದುರೆದ್ದುಕುದುರೆದ್ದುಕುಣಿಯತಾವ |

ಮೈಲಾರಲಿಂಗ ಮಲ್ಲಮಣಿಕರೆಂಬ ರಾಕ್ಷಸ ಸೋದರರೊಡನೆ ಹೋರಾಡಿದ್ದು ಇಲ್ಲಿಯ ಪದ್ಯಗಳ ವಸ್ತುವಾಗಿದೆ.

ಆರಾಧ್ಯ ದೈವದ ಸೌಂದರ್ಯವರ್ಣನೆ ಸ್ತುತಿಪದಗಳ ತೀರ ಸಾಮಾನ್ಯ ಅಂಶವಾಗಿದೆ.

ಹೋಗುತಾನಕರಿಯಬಂಗಾರದಬಾಕಿನಂಥದೊರೆಯಾ” ||||
ಚದುರನಿಂಗಣ್ಣ | ಚಂದ್ರನಕಿರಣಭಾಗ್ಯದಕೋಟಿ, | ಏಳಕೋಟಿ,
ಆರಾಧ್ಯದೈವದಜಾತ್ರೆವರ್ಣನೆಯೂಒಂದುಪ್ರಕಾರದಸ್ತುತಿಯೇ
ಒಂದಕಒಂದುತಾಕಲಾಡತಾವಲೆಕ್ಕವಿಲ್ಲದಕೊಲ್ಲಾರಿವೇನಒಂದಕಒಂದುತಾಕಲಾಡತಾವಲೆಕ್ಕವಿಲ್ಲದಕೊಲ್ಲಾರಿವೇನಕಣ್ಣೆಗೆಹರವಕಾಣುವತೈತೆಯೋಳುಕೋಟಿಜಾತುರಿವೇನಮರ್ತ್ಸದೊಳಗೆಮೈಲಾರದೇವರ ………. |

ಆರಾಧ್ಯ ದೈವದ ಕೋಪಕ್ಕೆ ಗುರಿಯಾದಲ್ಲಿ ಅವನೇನೇನು ಮಾಡಬಲ್ಲ ನೆಂಬುದೂ ಸ್ತುತಿಯ ಒಂದಂಶವೆ ಆಗಿದೆ.

ಕಣ್ಣೆಟ್ಟವರಬಿಡದೇಳಂದನೆದರಿಟ್ಟವರಬಿಡದೇಳಂದಕರಿಯಸೀರೆಯಉಡಸೇನಂದಹಸರಬಳಿಯವಇಡತೇನಂದೊಬೋರಗಿನ್ನರಿಹಿಡಿಸೇನಂದಎಲಿಚಂಚಿಚವುರವಹೊರತೇನಂರ್ದ್ರೋಇಂದುನಿಮ್ಮನಿಗೆಸ್ವಾಮಿಬಂದಾ | ಆಯ್ತಾರದಿಂದಾ

ಈ ಪದ್ಯದಲ್ಲಿ ಮೈಲಾರಲಿಂಗನ ಸಂಪ್ರದಾಯಕ್ಕೆ ಸಂಬಂದಿಸಿದ ಹಲವಾರು ಆಚರಣೆಗಳೂ ಉಕ್ತವಾಗಿವೆ. ಬಿಡಿ ಪದ್ಯಗಳಲ್ಲಿ ಇವನ್ನೂ ಕಾಣಬಹುದಾಗಿದೆ. ದೇವನಿಗೆ ಪ್ರಾರ್ಥನೆ ಸಲ್ಲಿಸುವುದು ಸ್ತುತಿಪದದ ಉದ್ದೇಶವೆ ಆಗಿದೆ.

ಹಸುವಿಗೆಹಾಲುಕೊಡ | ಸಿಸುವಿಗನ್ನುವಕೊಡಸೇರಬಂಗಾರಇವರಿಗೆ | ಬಂಡೆಲ್ಲಬಂಡೆಲ್ಲಬಂಡಾರವೋ

ಇಂಥ ಬಿಡಿ ಪದ್ಯಗಳಲ್ಲಿ ಮೈಲಾರಲಿಂಗನನ್ನಲ್ಲದೆ ಅವನ ಪರಿವಾರದ ಇತರ ದೇವತೆಗಳನ್ನೂ, ಪರಿಸರದ ಊರುಗಳ ದೇವತೆಗಳನ್ನೂ ವರ್ಣಿಸಿರುವುದು ಕಂಡುಬರುತ್ತದೆ. ಅಲ್ಲದೆ ಹಲವಾರು ಆಚರಣೆಗಳು, ಕೆಂಚವೀರರ ಪವಾಡಗಳು, ಬಿಲ್ಲು ಏರುವುದು, ಕಾರ್ಣಿಕ ಹೇಳುವುದು ಮುಂತಾದ ಅನೇಕಾನೇಕ ವಿಷಯಗಳು ಉಕ್ತವಾಗಿವೆ. ಮೈಲಾರಲಿಂಗನ ಸಂಪೂರ್ಣ ಅಧ್ಯಯನಕ್ಕೆ ಈ ಪದಗಳನ್ನೆಲ್ಲ ಸಂಗ್ರಹಿಸಿ ಪ್ರಕಟಿಸುವುದು ಅತ್ಯವಶ್ಯವಿದೆ.

ಹಾಡುಗಳ ಭಾಷಾಸ್ವರೂಪ : ಮೈಲಾರಲಿಂಗನ ಹಾಡುಗಳನ್ನು ಹೇಳುವವರಲ್ಲಿ ಗೊರವರು ಪ್ರಮುಖರಾಗಿದ್ದಾರೆ. ಇವರು ನಾಡಿನ ವಿವಿಧ ಭಾಗಗಳಲ್ಲಿ ಸಂಚರಿಸುತ್ತಲೆ ಇರುವುದರಿಂದ ಆಯಾ ಭಾಗಗಳ ಆಡುನುಡಿಯ ಪ್ರಭೇದ ವೈಶಿಷ್ಟ್ಯಗಳು ಅವರ ಹಾಡುಗಳಲ್ಲಿ ನುಸುಳುವುದು ಸಹಜ. ಹಾಡುಗಳು ಬಾಯಿಂದ ಬಾಯಿಗೆ ತಲೆಯಿಂದ ತಲೆಗೆ ಪರಂಪರೆಯಾಗಿ ಹರಿದು ಬರುವಂಥವುಗಳು. ಸಾಮಾಜಿಕ ಬದಲಾವಣೆಗಳಾದಂತೆ ಹಾಡುಗಳೂ ಆ ಪ್ರಭಾವಕ್ಕೆಸಹಜವಾಗಿಯೇ ಒಳಗೊಳ್ಳುತ್ತವೆ. ಆಗ ಹಾಡುಗಳ ಭಾಷೆಯಲ್ಲಿ ಸಾತತ್ಯ ಮತ್ತು ಪರಿವರ್ತನೆಗಳ ಒಂದು ವಿಶಿಷ್ಟ ಸಮ್ಮೇಳನ ಅನಿವಾರ್ಯವಾಗಿ ತೋರಿ ಬರುತ್ತದೆ. ಮೈಲಾರಲಿಂಗನ ಹಾಡುಗಳಲ್ಲಿ ಪ್ರಾಚೀನರೂಪುಗಳು ಉಳಿದು ಬಂದಿರುವುದರ ಜೊತೆಗೆ ಹೊಸರೂಪಗಳೂ ಹಣೆಕಿಕ್ಕಿವೆ. ಆಯ್ದಾನೆ (ಕ್ರಿಯಾಪದ), ನಡಗ್ವಾಟಿ (ಹ. ಗ. ನಡೆಗೋಂಟಿ), ತುಡುವು (ಮಿ) (ಹ. ಗ. ತುಡುಮ ಒಂದು ವಾದ್ಯ) ಮುಂತಾದವು ಪ್ರಾಚೀನ ರೂಪಗಳಿಗೆ ಉದಾಹರಣೆಗಳಾದರೆ, ಪೋಲಿಸ್, ಬೆಂಡಮಜಲು, ನಿಸಾನಿ, ಜವಾಬು ಮುಂತಾದುವು ಹೊಸಗನ್ನಡ ಸ್ವೀಕರಿಸಿದ ರೂಪಗಳಿಗೆ ಉದಾಹರಣೆಗಳಾಗಿವೆ. ಅಲ್ಲದೆ ಕರ್ತುಕ, ಮೂರತವಾಗು, ಮುದ್ರಿ ಮುಂತಾದ ತದ್ಬವರೂಪಗಳಿಗೆ ಇಲ್ಲಿ ವಿಶಿಷ್ಟವಾದ ಅರ್ಥಗಳಿವೆ.

ಕನ್ನಡ ಆಡುನುಡಿಯಲ್ಲಿ ಸಾಮಾನ್ಯವಾಗಿ ಮಹಾಪ್ರಾಣ ಕಂಡುಬರದಿರುವಂತೆ ಇಲ್ಲಿಯ ಹಾಡುಗಳಲ್ಲಿಯೂ ಕಂಡು ಬರುವುದಿಲ್ಲ. ಹಾಡುಗಾರರು ಅಕ್ಷರಸ್ಥ ರಾಗಿದ್ದರೆ ಮಾತ್ರ ಅಪ್ಪಿತಪ್ಪಿ ಮಹಾಪ್ರಾಣಗಳು ನುಸುಳುತ್ತವೆ. ಹಾಗೆಯೆ ಶಬ್ದ ಮಧ್ಯದ ‘ಹ’ ಕಾರವೂ ಲೋಪವಾಗಿರುತ್ತದೆ.

ಉದಾ. ಮಹಾತ್ಮಾ – ಮಾತ್ಮಾ, ಬಹುದು – ಬವುದು.

ಎಷ್ಟೋ ಪ್ರಸಂಗಗಳಲ್ಲಿ ಒಂದೇ ಶಬ್ದ ಒಬ್ಬನಲ್ಲಿಯೇ ಹಲವು ರೀತಿಯ ಉಚ್ಛಾರವನ್ನು ಪಡೆಯುತ್ತದೆ. ಹೊಡದಾನು – ಹೊಡುದಾನ-ಹೊಡ್ದಾನ. ಮೈಲಾರ – ಮಯಲಾರ – ಮಯಿಲಾರ, ಕೈಲಾಸ – ಕಯಲಾಸ – ಕಯಿಲಾಸ ಮುಂತಾದವು. ಇದರಿಂದಾಗಿ ತ್ರಿಪದಿಗಳೆ ಆಗಿರುವ ರಚನೆಗಳಲ್ಲಿ ಗಣ, ಗಣಾಂಶಗಳು ವಿಕೃತಗೊಳ್ಳುತ್ತವೆ.

ಛಂದಸ್ಸು ಕುರಿತು – ತ್ರಿಪದಿ ಜನಪದ ಸಾಹಿತ್ಯದಲ್ಲಿ ಸರ್ವವ್ಯಾಪಿ ಯಾಗಿರುವುದು ಸಾಮಾನ್ಯವಾಗಿದೆ. ಆದರೆ ಇಲ್ಲಿಯ ಹಾಡುಗಳಲ್ಲಿ ಏಳೆ ಪ್ರಧಾನ ವಾಗಿರುವುದು ಕಂಡು ಬರುತ್ತದೆ. ಈ ಲಕ್ಷಣದ ಆಧಾರದ ಮೇಲೆ ಮೈಲಾರಲಿಂಗ ಕುರಿತು ಜನಪದ ಸಾಹಿತ್ಯ ಸೃಷ್ಟಿ ಬಹು ಪ್ರಾಚೀನ ಕಾಲದಿಂದಲೇ ನಡೆದು ಬಂದಿತ್ತೆಂದು ಊಹಿಸಬಹುದಾಗಿದೆ.

ಏಳೆಯಒಂದುಪದ್ಯ _ ಮಲ್ಲಯ್ | ನೆನಿಯಾಕೆಮಲ್ಲೀಗಿ | ಹೂಬೇಕೆಮಲ್ಲೀಗಿ | ತೋಪೇ | ಮಯಿಲಾರೆ |

ಒಂದು ಏಳೆಯನ್ನೆ ಹಾಡುಗಾರರು ವಿವಿಧ ವಿಧ ಹಾಗೂ ದಾಟಿಗಳಲ್ಲಿ ಹಾಡುವುದರಿಂದ ಇದು ಕೆಲವೊಮ್ಮೆ ತ್ರಿಪದಿಯೂ ಆಗಿ ಮಾರ್ಪಡುವುದುಂಟು.

ಸಾಹಿತ್ತಿಕ ಅಂಶ – ಜನಪದ ಸಾಹಿತ್ಯದ ನಿಜವಾದ ಸೊಬಗು ಶ್ರವಣದಲ್ಲಿದಿಯೆ ಹೊರತು ಓದುವುದರಲ್ಲಿಲ್ಲ. ಕೇಳಿಯೆ ಆ ಆನಂದವನ್ನು ಆಸ್ವಾದಿಸಬೇಕು. ದೇವರ ವರ್ಣನೆಯಲ್ಲಿ ಪ್ರಯೋಗಗೊಳ್ಳುವ ಕೆಲವು ಹೋಲಿಕೆಗಳನ್ನು ಇಲ್ಲಿ ನೋಡಬಹುದು.

ಬಾ ನನ್ನ ಮಾ ಗುರುವೇ |
ಹಾಲ ಮ್ಯಾಲಿನ ಕೆನಿಯ | ಸೈ |
ಹಾಲ ಮ್ಯಾಲಿನ ಕೆನಿಯೆ
ಯಾಲಕ್ಕಿಗೊನಿಯೆ | ಸಂಪಿಗೆ ತೆನಿಯೆ
ಬಾ ನನ್ನ ಮಾಗುರುವೇ

ಮಹಾಗುರುವಾದ ಆತ ಹಾಲು ಮೇಲಿನ ಕೆನೆ, ಯಾಲಕ್ಕಿಯ ಗೊನೆ, ಸಂಪಿಗೆಯ ತೆನೆಯಂತೆ ಇದ್ದಾನಂತೆ.

‘ಹೋಗುತಾನ ಕರಿಯ | ಬಂಗರದ
ಬಾಕಿನಂಥಾ ದೊರಿಯ |
‘ಚದುರ ನಿಂಗಣ್ಣ | ಚಂದ್ರನ ಕಿರಣ
ಭಾಗ್ಯದ ಕೋಟಿ | ಏಳ ಕೋಟಿ

ಮೈಲಾರಲಿಂಗ ಬಂಗಾರದ ಬಾಕು ಎಂದರೆ ಚಿನ್ನದ ಕಿರುಗತ್ತಿಯಂತೆ ಇದ್ದಾನಂತೆ.

ಹೀಗೆ ಅಪೂರ್ವ ಸೊಬಗುಳ್ಳ ಪ್ರತಿಮೆಗಳನ್ನು ಹಾಡುಗಾರರು ತಮ್ಮ ಆರಾಧ್ಯದೈವ ಮೈಲಾರಲಿಂಗನ ಬಗೆಗೆ ಬಳಸಿದ್ದಾರೆ. ಇವಕ್ಕೆ ಯಾವ ಅಭಿಜಾತ ಕವಿಯೂ ತಲೆದೂಗಬೇಕು. ಆದರೆ ಜಾನಪದ ಸಾಹಿತ್ಯದ ಎಲ್ಲೆಡೆ ಇದೇ ಮಟ್ಟದ ಕಲ್ಪಕತೆಯನ್ನು ಬಯಸುವುದು ಸಮಂಜಸವೂ ಅಲ್ಲ. ವಾಸ್ತವವೂ ಅಲ್ಲ.

ಮೈಲಾರಲಿಂಗನ ಹಾಡುಗಳನ್ನು ಹೇಳುವ ಗೊರವರು ಹೆಚ್ಚಿನ ವಾದ್ಯಗಳ ಸಹಾಯವಿಲ್ಲದೆ ಕೈಯಲ್ಲಿಯ ಗಂಟೆ ಮತ್ತು ಡಮರುಗಳ ಸಹಾಯದಿಂದ ಬಹು ಸುಶ್ರಾವ್ಯವಾಗಿ ಹಾಡುತ್ತಾರೆ. ದೇವರಗುಡ್ಡ ಇಲ್ಲವೆ ಮೈಲಾರ ಕ್ಷೇತ್ರಗಳಿಗೆ ಹುಣ್ಣಿಮೆ ಇಲ್ಲವೆ ಜಾತ್ರೆಗಳಂದು ಹೋದಲ್ಲಿ ರಾತ್ರಿಯಡೀ ಇಂಥ ಪದಗಳನ್ನು ಅಪ್ರಯತ್ನ ಪೂರ್ವಕವಾಗಿ ಕೇಳಬಹುದು.

ಮೈಲಾರಲಿಂಗನನ್ನು ಕುರಿತು ಜನಪದ ಸಾಹಿತ್ಯದಲ್ಲಿ ಪವಾಡಗಳನ್ನು ಮಾಡುವ ಕಂಚೆವೀರರು ಹೇಳುವ ಒಡಪುಗಳೂ ಸೇರುತ್ತವೆ. ವೀರಭದ್ರದೇವರ ಒಡಪುಗಳನ್ನೇ ಹೋಲುವ ಈ ಒಡಪುಗಳೂ ದೇವರ ಶೌರ್ಯ, ಧೈರ್ಯ, ಸಾಹಸಗಳನ್ನು ಬಿತ್ತರಿಸುತ್ತವೆ. ಇವುಗಳ ಸಂಗ್ರಹವಾಗಲಿ, ಬಿಡಿ ಒಡಪುಗಳಾಗಲಿ ಈ ವರೆಗೂ ಪ್ರಕಟವಾಗದಿರುವುದು ಈ ದೆಶೆಯಲ್ಲಿ ಮಾಡಬೇಕಾದ ಕಾರ್ಯ ಎಷ್ಟೊಂದು ಇದೆಯೆಂದು ತೋರಿಸಿಕೊಡುತ್ತದೆ.

ಕುರುಬರ ಡೋಳ್ಳಿನ ಹಾಡುಗಳಲ್ಲಿಯೂ ಮೈಲಾರಲಿಂಗನ ಪದಗಳು ಇವೆ. ಆದರೆ ಎಷ್ಟೋಸಲ ‘ಬೀರಪ್ಪ’ ಕ್ಕೆ ಬದಲಾಗಿ ‘ಮೈಲಾರ’ ಎಂದು ಹೇಳಿಕೊಂಡು ಹಾಡಿಬಿಡುತ್ತಾರೆ. ಬೀರಪ್ಪ – ಮೈಲಾರ ದೇವರುಗಳಲ್ಲಿ ಅವರು ಅಂತರ ಕಾಣದಿರುವುದೆ ಇದಕ್ಕೆ ಕಾರಣವಾಗಿದೆ. ದೇವರ ಮಹಿಮಾಸ್ತವನವೆ ಈ ಹಾಡುಗಳಲ್ಲಿಯೂ ಕಂಡುಬರುತ್ತದೆ.

ಮೈಲಾರಲಿಂಗ ಕುರಿತು ಜನಪದ ಗೀತಸಾಹಿತ್ಯವನ್ನು ಈವರೆಗೂ ಸಮೀಕ್ಷಿಸಿದ್ದಾಯಿತು. ಈಗ ಕಥಾ ಸಾಹಿತ್ಯ ಗಮನಿಸೋಣ.

ಕಥಾ ಸಾಹಿತ್ಯ – ಜಾನಪದ ವಿದ್ವಾಂಸರಾದ ಸ್ಮಿತ್ ಥಂಸನ್ ಅವರು ವಾಕ್ ಸಂಪ್ರದಾಯದ ಕಥೆಗಳನ್ನು ಎರಡು ಬಗೆಗಳಲ್ಲಿ ವರ್ಗೀಕರಿಸುತ್ತಾರೆ. ಐತಿಹ್ಯ ಸಂಪ್ರದಾಯಗಳು ಮತ್ತು ಕಟ್ಟುಕತೆಗಳು ಎಂದು. ಆದ್ದರಿಂದ ಮೈಲಾರಲಿಂಗ ಕುರಿತ ಐತಿಹ್ಯ ಸಂಪ್ರದಾಯಗಳನ್ನು ಪ್ರಥಮದಲ್ಲಿ ಪರಶೀಲಿಸಲಾಗುವುದು.

ಐತಿಹ್ಯಗಳು – ಐತಿಹ್ಯಗಳು ಐತಿಹಾಸಿಕ ಹಾಗೂ ಅರ್ಧ ಐತಿಹಾಸಿಕ ಸಂಗತಿಗಳನ್ನು ಉದ್ದೇಶಿಸಿದವನಾಗಿರುತ್ತದೆ. ‘ಐತಿಹ್ಯಗಳು ಹೇಳುವವರೂ ಕೇಳುವವರೂ ನಿಜವೆಂದೇ ಭಾವಿಸಿರುವ ಕಥೆಗಳು, ಹೊರನೋಟದಲ್ಲಿ ಹೀಗಿದ್ದರೂ ವಿವರಗಳು ಇಷ್ಟು ಸರಳ ಸುಲಭವಲ್ಲವೆಂದು ತಿಳಿದರೆ ಸಾಕ್ತು ಎಂದು ಶ್ರೀ ಹಾ. ಮಾ. ನಾಯಕರು ಈ ಬಗೆಗೆ ಅಭಿಪ್ರಾಯಪಡುತ್ತಾರೆ.[4]

ಐತಿಹ್ಯಗಳಲ್ಲಿ ಸ್ಥಳ ಐಹ್ಯಗಳು, ವ್ಯಕ್ತಿ ಐತಿಹ್ಯಗಳು, ಕಾರ್ಯಕಾರಣ ಕಥೆಗಳು, ಘಟನಾ ಐತಿಹ್ಯಗಳೆಂದು ಹಲವು ವಿಧಗಳನ್ನು ಹೇಳಲಾಗಿದೆ. ಮೈಲಾರಲಿಂಗನನ್ನು ಕುರಿತಂತೆ ದೊರೆಯುವ ಹಲವಾರು ಐತಿಹ್ಯಗಳು ಈ ಎಲ್ಲ ವಿಧಗಳಿಗೂ ಉದಾಹರಣೆಗಳಾಗುವಂತಿವೆ. ಇಲ್ಲಿ ವ್ಯಕ್ತಿ ಐತಿಹ್ಯವೊಂದನ್ನು ಮಾತ್ರ ವಿವರಿಸುತ್ತೇನೆ.

ವ್ಯಕ್ತಿ ಐತಿಹ್ಯ – ದೇವರ ಗುಡ್ಡದ ದೇವಾಲಯದಲ್ಲಿ ಗುಡದಯ್ದನವೆಂದು ಹೇಳಲಾಗುವ ಜೋಡಿ ಚರ್ಮದ ಪಾದರಕ್ಷೆಗಳನ್ನು ಇಡಲಾಗಿದೆ. ಪ್ರತಿವರ್ಷ ಕಾರಹುಣ್ಣಿಮೆಯೆಂದು ಹಳೆಯವನ್ನು ತೆಗೆದು ಹೊಸವನ್ನು ಇಡುತ್ತಾರೆ. ಇದು ಅನೂಚಾನವಾಗಿ ನಡೆದು ಬಂದಿದೆ.[5]

ಈ ಸಂಗತಿಯ ಹಿನ್ನಲೆಯಲ್ಲಿ ಐತಿಹ್ಯವೊಂದು ಹುದುಗಿದೆ. ಗುಡದಯ್ದ ಪ್ರತಿದಿನ ರಾತ್ರಿ ಈ ಪಾದತ್ರಾಣಗಳನ್ನು ಮೆಟ್ಟಿಕೊಂಡು ತನ್ನ ವೇಶ್ಯೆಯರ ಮನೆಗಳಿಗೆ ಹೋಗಿ ಬರುತ್ತಾನೆ. ಅವನು ಹಾಗೆ ಹೋಗಿಬಂದ ಪರಿಣಾಮವಾಗಿ ಒಂದು ವರ್ಷದಲ್ಲಿ ಜೋಡುಗಳು ಸವೆದುಹೋಗುತ್ತವೆಯೆಂದೂ ಅಲ್ಲದೆ ಎಷ್ಟೋ ಸಲ ಜೋಡುಗಳಿಗೆ ಹುಲ್ಲು, ಊಬುಗಳೂ ಹತ್ತಿಕೊಂಡಿರುತ್ತವೆಯೆಂದೂ ಹೇಳುತ್ತಾರೆ.

ಇದೇ ರೀತಿಯಾಗಿ ದೇವರ ಗುಡ್ಡ, ಮೈಲಾರ, ಡೆಂಕಣಿ ಮರಡಿ, ಕರಿಯಾಲ ಸ್ಥಳಗಳನ್ನು ಕುರಿತು ಸ್ಥಳ ಐತಿಹ್ಯಗಳೂ ಇವೆ.

ಭಕ್ತರಿಗೆ ಅನ್ನ ಕರುಣಿಸಲು ಗಂಗಿ ಮಾಳವ್ಯ, ಸಂತಾನ ಕರುಣಿಸಲು ಕುರುಬರ ಮಾಳವ್ವ ಎಂಬಂತೆ ಕಾರ್ಯ ಕಾರಣ ಐತಿಹ್ಯವೂ ಇದೆ.

ಮೈಲಾರಲಿಂಗನನ್ನು ಕುರಿತಂತೆ ಇಂಥ ಐತಿಹ್ಯಗಳನ್ನು ಸಂಗ್ರಹಿಸಿ ಪ್ರತ್ಯೇಕವಾಗಿ ಪ್ರಕಟಿಸುವುದೂ ತೀರ ಅವಶ್ಯವಿದೆ.

ಕಟ್ಟು ಕಥೆಗಳು : ಮೈಲಾರಲಿಂಗ ಜನಪದ ದೈವವಾಗಿರುವುದರಿಂದ ಅವನನ್ನು ಕುರಿತಂತೆ ಗದ್ಯದಲ್ಲಿ ಕಥಾರೂಪ ಸಾಹಿತ್ಯ ಸಾಕಷ್ಟು ಸೃಷ್ಟಿಯಾಗಿರಬೇಕೆಂಬ ಜಿಜ್ಞಾಸೆಯಿಂದ ಹೊರಟವರಿಗೆ ಭಾರೀ ನಿರಾಶೆಯೆ ಎದುರಾಗುತ್ತದೆ. ಮೈಲಾರಲಿಂಗನ ಕುರಿತು ಗದ್ಯದಲ್ಲಿ ಕಥಾರೂಪ ಸಾಹಿತ್ಯ ನಿರ್ಮಾಣವೇ ಆಗಲಿಲ್ಲವೋ ಅಥವಾ ನಿರ್ಮಾಣವಾದದ್ದು ಹಾಡಿನ ರೂಪದಲ್ಲಿದ್ದರಿಂದ ನಮ್ಮವರೆಗೂ ಬಂದು ಮುಟ್ಟುಲಿಲ್ಲವೋ ಎಂಬುದು ಪ್ರಶ್ನೆಯಾಗಿದೆ.

ಮೈಲಾರಲಿಂಗ ಕುರಿತು ಜಾನಪದ ಸಾಹಿತ್ತಿಕ ಬಗೆಯನ್ನು ಈ ವರೆಗೂ ಸಮೀಕ್ಷಿಸಲಾಯಿತು. ಈಗ ಭಾಷಿಕ ಬಗೆಗಳನ್ನು ಕುರಿತೂ ವಿವೇಚನೆ ಮುಂದುವರಿಸುವಾ.

ಗಾದೆ ಮತ್ತು ಒಗಟುಗಳು – ನುಡಿಗಟ್ಟುಗಳೂ ಸೇರಿ ಇವು ಭಾಷಿಕ ಬಗೆಗಳಾಗಿವೆ. ಈ ಪ್ರಕಾರದಲ್ಲಿ ಮೈಲಾರಲಿಂಗನನ್ನು ಕುರಿತು ಒಗಟುಗಳಿದ್ದಂತೆ ಕಂಡು ಬರುವುದಿಲ್ಲ. ಗಾದೆಗಳು ಕೂಡ ಎರಡುಮೂರು ಮಾತ್ರ ಕಂಡುಬರುತ್ತವೆ. ಅವುಗಳೆಂದರೆ

೧. ಗುಡ್ಡ ಸುತ್ತಿ ಮೈಲರಕ ಹೋದಂಗ

೨. ಏಳು ಕೋಟಿ ಕೊಡಲಿಲ್ಲ ಮೈಲಾರಲಿಂಗನ ಶನಿ ಹರಿಲಿಲ್ಲ.

೩. ಮಂದಿ ಕರಕೊಂಡು ಮೈಲಾರಕ ಬಾ

ಮೊದಲ ಎರಡೂ ಗಾದೆಗಳಿಗೆ ಅನೇಕ ಪಾಠಾಂತರಗಳಿವೆ. ಮೊದಲಿನದನ್ನು ‘ಕೊಂಕಣ ಸುತ್ತಿ ಮೆಲಾರಕ ಹೋದಂಗ’ ಎಂದೂ, ಎರಡನೆಯದರಲ್ಲಿ ‘ಶನಿ ಹರಿಲಿಲ್ಲ’ ಎಂಬಲ್ಲಿ ‘ಸಾಲ ಹರಿಲಿಲ್ಲ’ ತೇರು ಎಳಿಲಿಲ್ಲ’ ಎಂದೂ ಪಾಠಾಂತರಗಳಿವೆ.

ಯಾವುದೊಂದು ಗಾದೆ ರೂಪಗೊಳ್ಳಬೇಕಾದರೂ ಅದಕ್ಕೊಂದು ಕಾರಣ, ಹಿನ್ನೆಲೆ ಇದ್ದೇ ಇರುತ್ತದೆ. ಈ ದೃಷ್ಟಿಯಿಂದ ಮೊದಲಿನ ಗಾದೆಮಾತನ್ನು ಪರಿಶೀಲಿಸಿದರೆ, ಈ ದೇವತೆ ಕೊಂಕಣದ ಗುಡ್ಡಗಳಲ್ಲಿ ಮೊದಲು ವಾಸವಾಗಿದ್ದು ಅನಂತರ ದೂರದ ಈ ಮೈಲಾರಕ್ಕೆ ಬಂದನೆಂದು ತೋರುತ್ತದೆ. ‘ಉದ್ದೇಶಿತ ಸ್ಥಳವನ್ನು ನೇರವಾಗಿ ತಲ್ಪದೆ ಬಳಸುದಾರಿಯಿಂದ ತಲ್ಪುವುದು’ ಎಂಬರ್ಥದಲ್ಲಿ ಈ ಗಾದೆ ಮಾತನ್ನು ವ್ಯವಹಾರದಲ್ಲಿ ಬಳಸುತ್ತಾರೆ.

ಎರಡು ಮತ್ತು ಮೂರನೆಯ ಗಾದೆ ಮಾತುಗಳಿಗೆ ‘ತಿರುಪತಿ ತಿಮ್ಮಪ್ಪ ಮೈಲಾರಲಿಂಗಪ್ಪ’ ಪದದಲ್ಲಿರುವ ಪ್ರಸಂಗವನ್ನು ಇತರ ಅನೇಕ ಪ್ರಸಂಗಗಳನ್ನು ಹಿನ್ನೆಲೆಯಾಗಿ ಹೇಳುತ್ತಾರೆ. ಆದರೆ ಇಲ್ಲಿಯ ಏಳುಕೋಟಿಗೂ ಮೈಲಾರಲಿಂಗನಿಗೂ ಬೇರೆಯೆ ಅರ್ಥ ಸಂಬಂಧಗಳಿದ್ದಂತೆ ತೋರುತ್ತದೆ. ವಿದ್ವಾಂಸರು ಇತ್ತ ಗಮನ ಹರಿಸುವರೆಂದು ನಂಬುತ್ತೇನೆ.

ಯಕ್ಷಗಾಯನ – ಮೈಲಾರಲಿಂಗನನ್ನು ಕುರಿತು ಒಂದು ಯಕ್ಷಗಾನವೂ ಪ್ರಚಾರದಲ್ಲಿದೆ. ಮಣಿಕ- ಮಲ್ಲರೆಂಬ ರಾಕ್ಷಸರ ಸಂಹಾರವೆ ಇದರ ಕಥಾವಸ್ತು. ಇದು ಇತ್ತೀಚೆಗೆ ರಚಿತವಾದಂತೆ ಕಂಡು ಬರುತ್ತದೆ.

https://www.youtube.com/watch?v=BiEm6wtm6NY
https://www.youtube.com/watch?v=bJRlEFd4dJg

Leave a Reply

Your email address will not be published. Required fields are marked *

error: Content is protected !!