
‘ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್’ ಎಂದು ರಾಮಪ್ಪ ಗೊರವಯ್ಯ ನಾಡಿನ ಭವಿಷ್ಯ ನುಡಿದಿದ್ದಾರೆ. ಮುತ್ತಿನ ರಾಶಿ ಮೂರು ಭಾಗ ಆದಿತಲೇ ಪರಾಕ್ ಎಂದರೆ ನಾಡಿನ ಮೂರು ಭಾಗದಲ್ಲಿ ಸಮೃದ್ಧ ಮಳೆ-ಬೆಳೆ ಆಗಲಿದ್ದು, ಉಳಿದ ಒಂದು ಭಾಗದಲ್ಲಿ ಮಳೆ-ಬೆಳೆಯ ಸಮಸ್ಯೆ ಆಗಲಿದೆ ಎಂಬುದು ಕಾರಣಿಕದ ಅರ್ಥ ಎನ್ನುತ್ತಾರೆ ಭಕ್ತರು.
ಗೊರವಯ್ಯ ಅಥವಾ ಗ್ವಾರಪ್ಪ ನುಡಿಯುವ ಭವಿಷ್ಯವನ್ನು ಹೆಚ್ಚಾಗಿ ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರು ನಂಬುತ್ತಾರೆ. ಜಾತ್ಯತೀತವಾಗಿ ಭಕ್ತರು ಮೈಲಾರ ಲಿಂಗೇಶ್ವರನನ್ನು ಆರಾಧಿಸುತ್ತಾರೆ. ಜಾತ್ಯತೀತವಾಗಿ ಗೊರವಯ್ಯ ದೀಕ್ಷೆ ಪಡೆಯಲು ಅವಕಾಶವಿದೆ. ಆದರೆ ಕುರುಬ ಹಾಲುಮತದ ಗೊರವಯ್ಯ ಮಾತ್ರ ಕಾರಣಿಕ ನುಡಿಯಲು ಅರ್ಹರಾಗಿರುತ್ತಾರೆ. ಎತ್ತರವಾದ ಕೊಲನ್ನು ಏರುವ ಗೊರವಯ್ಯ ಸದ್ದಲೇ ಪರಾಕ್ ಎನ್ನುತ್ತಾರೆ. ಜಾತ್ರೆಯಲ್ಲಿ ನೆರೆಯುವ ಲಕ್ಷಾಂತರ ಜನರು ಒಂದು ಕ್ಷಣಕ್ಕೆ ಮೌನ ವಹಿಸುತ್ತಾರೆ, ಆಗ ಪಿನ್ ಡ್ರಾಪ್ ಸೈಲನ್ಸ್ ಅನ್ನುತ್ತಾರಲ್ಲ ಅಂತಹ ಮೌನ ಆವರಿಸುತ್ತದೆ.

ಸದ್ದಲೇ ಎಂದು ಹೇಳಿದ ಬಳಿಕ ಆ ವರ್ಷದ ಕಾರಣಿಕವನ್ನು ನುಡಿಯುವುದು ಸಂಪ್ರದಾಯ. ಕಾರಣಿಕ ನುಡಿಯುವ ಗೊರವಯ್ಯ ಅಲ್ಲಿಂದ ಕೈಬಿಡುತ್ತಾನೆ. ಮೇಲಿನಿಂದ ಬೀಳುವ ಗೊರವಯ್ಯನನ್ನು ಭಕ್ತರು ಕೆಳಗೆ ಹಿಡಿಯುತ್ತಾರೆ. ಗೊರವಯ್ಯ ನುಡಿಯುವ ಕಾರಣಿಕವನ್ನು ಭವಿಷ್ಯ ಎನ್ನುವುದಕ್ಕಿಂತ ‘ದೈವವಾಣಿ’ ಎಂದು ಭಕ್ತರು ನಂಬುತ್ತಾರೆ. ‘ದೈವವಾಣಿ’ಯನ್ನು ಬೇರೆ ಬೇರೆ ಕ್ಷೇತ್ರಗಳ ಜನರು ಬೇರೆ ಬೇರೆ ಅರ್ಥವನ್ನು ವಿಶ್ಲೇಷಿಸಿಕೊಳ್ಳುತ್ತಾರೆ. ರೈತರು ಮಳೆ-ಬೆಳೆ, ಆರೋಗ್ಯ, ಜಾನುವಾರುಗಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಭವಿಷ್ಯವನ್ನು ವಿಶ್ಲೇಷಿಸುತ್ತಾರೆ. ಹಾಗೆಯೇ ಕಾರಣಿಕದ ರಾಜಕೀಯ ವಿಶ್ಲೇಷಣೆಯೂ ಆಗುತ್ತದೆ. ಉತ್ತರ ಕರ್ನಾಟಕ ಹಾಗೂ ಕಲ್ಯಾಣ ಕರ್ನಾಟಕ ಭಾಗದ ಜನರಿಗೆ ಮೈಲಾರ ಜಾತ್ರೆ ಎಂದರೆ ವಿಶೇಷ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಮೈಲಾರದಲ್ಲಿ ನಡೆಯುವ ಜಾತ್ರೆಯಲ್ಲಿ ಭಾಗವಹಿಸುತ್ತಾರೆ. ಆದರೆ ಈ ವರ್ಷ ಕೊರೊನಾ ವೈರಸ್‌ನಿಂದಾಗಿ ಮೈಲಾರ ಜಾತ್ರೆಯಲ್ಲಿ ಭಕ್ತರು ಭಾಗವಹಿಸುವುದನ್ನು ನಿಷೇಧಿಸಲಾಗಿತ್ತು. ಅದು ಬೇರೆ ವಿಚಾರ. ಹೀಗೆ ಮೈಲಾರದಲ್ಲಿ ಕಾರಣಿಕ ನುಡಿಯುವ ಗೊರವಯ್ಯ ಯಾರು? ಮೈಲಾರ ಲಿಂಗೇಶ್ವರ ಯಾರು?

ಭಂಡಾರದೊಡೆಯ ಶ್ರೀ ಮೈಲಾರಲಿಂಗೇಶ್ವರ
ಭಂಡಾರದೊಡೆಯ ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ ದೇವಸ್ಥಾನದ ಕಾರಣಿಕವನ್ನು ನುಡಿಯುವ ಗೊರವಯ್ಯ ವಂಶಪಾರಂಪರ್ಯವಾಗಿ ಹಾಲುಮತ ಕುಟುಂಬಕ್ಕೆ ಸೇರಿರಬೇಕು. ಪಶುಪಾಲನೆಯ ಕುರುಬನಾಗಿ ಜನಿಸಿ ಪಶುಗಳ್ಳರಾದ ಮಣಿ ಹಾಗೂ ಮಲ್ಲರನ್ನು ಸಂಹಾರಮಾಡಿದ ಎಂಬುದು ನಂಬಿಕೆ. ಸಾಕ್ಷತ್ ಪರಶಿವನಾದ ಶ್ರೀ ಮೈಲಾರಲಿಂಗೇಶ್ವರ ಹಾಲುಮತದ ಗೊರವನ ಬಾಯಿಂದ ಕಾರಣಿಕ ನುಡಿಸುತ್ತಾನೆ ಎಂಬ ನಂಬಿಕೆ ಭಕ್ತರಲ್ಲಿದೆ. ಗೊರವರು ಎಂದರೆ ವೃತ್ತಿಗಾಯಕರಲ್ಲಿ ಒಂದು ಸಂಪ್ರದಾಯದವರು. ಇವರು ಮೈಲಾರ ಮತ್ತು ಇತರ ಕಡೆಗಳಲ್ಲಿರುವ ಮೈಲಾರ ಲಿಂಗನ ಕ್ಷೇತ್ರಗಳಿಗೆ ನಡೆದುಕೊಳ್ಳುತ್ತಾರೆ. ದಕ್ಷಿಣ ಕರ್ನಾಟಕದಲ್ಲಿ ಇವರು ಹಾಡುತ್ತಿದ್ದ ಮೈಲಾರ ಲಿಂಗನ ಕಥೆ ಈಚೆಗೆ ಅಪರೂಪವಾಗುತ್ತಿದೆ.
ಗೊರವಯ್ಯ-ಗ್ವಾರಪ್ಪ ಶಬ್ದದ ಮೂಲ ಗೊರವರನ್ನು ದಕ್ಷಿಣ ಕರ್ನಾಟಕದಲ್ಲಿ ಗೊರವ, ವಗ್ಗಯ್ಯ, ಗೊಗ್ಗಯ್ಯ, ಗಡಬದ್ದಯ್ಯ, ಕಡಬಡ್ಡ ಎಂದೂ ಉತ್ತರ ಕರ್ನಾಟಕದಲ್ಲಿ ವ್ಯಾಘ, ಗ್ವಾರಪ್ಪ ಎಂದು ಕರೆಯುವುದು ರೂಢಿ. ಗೊರವ ಶಬ್ದಕ್ಕೆ ಕಿಟ್ಟೆಲ್ ನಿಘಂಟಿನಲ್ಲಿ ಒಂದು ಬಗೆಯ ಶೈವ ಭಿಕ್ಷುಕರು ಎಂದು ಹೇಳಿದೆ. ಗುರು ಎಂಬುದೇ ಗೊರವ ಶಬ್ದದ ಮೂಲ ಎಂಬುದು ಕೆಲವರ ಅಭಿಪ್ರಾಯ. ಗೊಗ್ಗ ಎಂದರೆ ಮೈಲಾರ ಲಿಂಗೇಶ್ವರನ ಹಿಂಬಾಲಕರು ಎಂದು ಕಿಟ್ಟೆಲ್ ನಿಘಂಟಿನ ವಿವರಣೆ ಇದೆ.

ಮೈಲಾರಲಿಂಗನ ಲೀಲೆಗಳನ್ನು ಹೇಳುವ ಗೊರವರು
ಗೊರವರು ಮೇಳ ನಡೆಸುವುದೂ ಇದೆ. ರಾತ್ರಿಯೆಲ್ಲ ನಡೆಯುವ ಈ ಮೇಳದಲ್ಲಿ ಮೂರು ಜನ ಭಾಗವಹಿಸುತ್ತಾರೆ. ನಡುವೆ ಇರುವ ಕತೆಗಾರ ಡಮರುಗ ಆಡಿಸುತ್ತ ಕತೆಯನ್ನು ನಿರೂಪಿಸುತ್ತ ಹೋದರೆ, ಉಳಿದ ಇಬ್ಬರು ಅದೇ ರೀತಿ ನುಡಿಸುತ್ತ ಹಿಮ್ಮೇಳದಲ್ಲಿದ್ದು ಹಾಡುತ್ತಾರೆ. ಈ ಸಂದರ್ಭದಲ್ಲಿ ಮೈಲಾರಲಿಂಗನ ಲೀಲೆಗಳನ್ನು ಪ್ರಮುಖವಾಗಿ ಹಾಡುತ್ತಾರೆ. ಆದರೆ ಮೈಸೂರು ಭಾಗದಲ್ಲಿ ಕೆಲವರು ಮಾದೇಶ್ವರ ಮತ್ತು ಮಂಟೇಸ್ವಾಮಿ ಕಾವ್ಯಗಳನ್ನು ಹಾಡುವುದೂ ಇದೆ. ಭಕ್ತರ ಮನೆಗಳಲ್ಲಿ ಹಿಂದೆ ಇಂಥ ಮೇಳಗಳು ನಡೆಯುತ್ತಿದ್ದವು. ದಕ್ಷಿಣ ಕರ್ನಾಟಕದ ಗೊರವರಿಗೂ ಉತ್ತರ ಕರ್ನಾಟಕದ ಗೊರವರಿಗೂ ವೇಷಭೂಷಣದಲ್ಲಿ ಅಲ್ಪ ಸ್ವಲ್ಪ ವ್ಯತ್ಯಾಸಗಳಿವೆ. ದಕ್ಷಿಣದವರಲ್ಲಿ ಕಂಬಳಿಯ ನಿಲುವಂಗಿ. ಗೊರಳಲ್ಲಿ ಭಂಡಾರ ಇಡುವ ಹುಲಿಚರ್ಮದ ಚೀಲ. ಕವಡೆಸರ. ಹೆಗಲಲ್ಲಿ ಭಿಕ್ಷಾಪಾತ್ರೆ, ದೋಣಿ, ಕೈಯಲ್ಲಿ ಡಮರುಗ, ತ್ರಿಶೂಲ- ಇವು ಮುಖ್ಯವಾದವು. ತಲೆಯ ಮೇಲೆ ಬಿಳಿಯ ರುಮಾಲು ಇರುತ್ತದೆ. ಕೆಲವೊಮ್ಮೆ ಕರಡಿಯ ಕೂದಲ ಕುಲಾವಿ ಧರಿಸುವುದೂ ಉಂಟು. ಉತ್ತರದವರು ಮೇಲಿನ ವೇಷಭೂಷಣಗಳ ಜೊತೆಗೆ ಒಕ್ಕಳಗಂಟೆ, ರಟ್ಟೆಬಳೆ, ಕಾಲಗೆಜ್ಜೆ, ಹುಲಿ ಚರ್ಮ, ಕೊರಳ ಕವಡೆ ನಡುಪಟ್ಟಿ, ಎಲೆಸಂಚಿ, ಮತ್ತು ಪಿಳ್ಳಂಗೊವಿ ಮೊದಲಾದುವನ್ನು ಬಳಸುತ್ತಾರೆ. ಕರಡಿ ಕೂದಲ ಟೋಪಿ, ಕರಿಯ ನಿಲುವಂಗಿ, ಅದರ ಮೇಲೆ ಕವಡೆ ಪಟ್ಟಿಗಳನ್ನು ಧರಿಸುವುದು ಸಾಮಾನ್ಯ. ಗೊರವರಿಗೂ ದೀಕ್ಷೆ ಕೊಡುವ ಸಂಪ್ರದಾಯ ಇದೆ. ಮನೆಯ ಹಿರಿಯ ಮಗ ಈ ದೀಕ್ಷೆಗೆ ಅರ್ಹ. ಹೆಚ್ಚಾಗಿ ಇವರು ಹಾಲು ಮತದ ಕುರುಬರೇ ಆಗಿರುತ್ತಾರೆ. ಉಳಿದಂತೆ ಇತರ ಜಾತಿಯವರೂ ದೀಕ್ಷೆ ಪಡೆಯುತ್ತಾರೆ. ಅವರನ್ನು ‘ದೇವರನ್ನು ಹೊತ್ತವರು’ ಎಂದು ಕರೆಯುತ್ತಾರೆ.
ಕಾಲಿಗೆ ಎಕ್ಕಡ ಹಾಕುವುದಿಲ್ಲ, ಗಾಡಿ ಮೇಲೆ ಕೂರುವುದಿಲ್ಲ
ಗುರುವಿನಿಂದ ದೀಕ್ಷೆ ಪಡೆಯುವಾಗ ಕಾಲಿಗೆ ಮಿಂಚು, ಕೈಗೆ ಕಂಕಣ, ಪಂಚಕಳಸ, ಕಂಬಳಿ ಗದ್ದುಗೆಗಳೊಡನೆ ತಮ್ಮ ದೇವರುಗಳ ಹೆಸರಿನಲ್ಲಿ ಪ್ರಮಾಣ ಮಾಡುತ್ತಾರೆ. ‘ಒಂದು ದನ ಹೋಗಿ ಒಂದು ಹೊಲದಲ್ಲಿ ಮೇಯ್ತಾ ಇದ್ದರೆ ಮೇಯುತ್ತೆ ಎಂದು ಹೇಳುವುದಿಲ್ಲ: ಕರ ಹಾಲು ಕುಡಿಯುತ್ತಿದ್ದರೆ ಕುಡಿಯುತ್ತೆ ಎಂದು ಹೇಳುವುದಿಲ್ಲ. ಕಾಲಿಗೆ ಎಕ್ಕಡ ಹಾಕುವುದಿಲ್ಲ, ಗಾಡಿ ಮೇಲೆ ಕೂರುವುದಿಲ್ಲ. ಸರ್ಪವನ್ನು ಹೊಡೆಯುವುದಿಲ್ಲ. ತಾಯಿ ತಂದೆ ದೂಷಣೆ ಮಾಡುವುದಿಲ್ಲ-ಇದು ಅವರ ಪ್ರಮಾಣವಚನ. ಮೈಲಾರ ಲಿಂಗನ ಕ್ಷೇತ್ರಗಳು ದಕ್ಷಿಣ ಭಾರತದಲ್ಲಿ ಅನೇಕ ಇವೆ. ಅದರಲ್ಲೂ ಕರ್ನಾಟಕದಲ್ಲಿ ಹೇರಳ. ಹಾವೇರಿ ಜಿಲ್ಲೆಯ ದೇವರಗುಡ್ಡ (ಹಿರಿಯ ಮೈಲಾರ), ದೇವಿ ಹೊಸೂರು. ಬೀದರ್ ಜಿಲ್ಲೆಯ ಮೈಲಾರಪುರ, ಬಳ್ಳಾರಿ ಜಿಲ್ಲೆಯ ಮಣ್ಣು ಮೈಲಾರ, ಬೆಳಗಾವಿ ಜಿಲ್ಲೆಯ ಕಾರಿಮನಿ, ಮಂಗಸೂಳಿ, ಶಿವಮೊಗ್ಗ ಜಿಲ್ಲೆಯ ಕುಬಟೂರು. ಮೈಸೂರು ಜಿಲ್ಲೆಯ ಮುಡುಕುತೊರೆ, ಬೆಂಗಳೂರು ಜಿಲ್ಲೆಯ ಹೆನ್ನಾಗರಗ್ರಾಮ, ಮಂಡ್ಯ ಜಿಲ್ಲೆಯ ಮೈಲಾರಪಟ್ಟಣ- ಮುಂತಾದ ಕಡೆ ಮೈಲಾರ ಲಿಂಗನ ಕ್ಷೇತ್ರಗಳನ್ನು ನೋಡಬಹುದಾಗಿದೆ. ಇವುಗಳಲ್ಲಿ ದೇವರಗುಡ್ಡ ಕ್ಷೇತ್ರವೇ ಮುಖ್ಯವಾದುದು. ಮೈಲಾರಲಿಂಗನ ಕುರಿತ ಧಾರ್ಮಿಕ ಕಾವ್ಯ

ಮೈಲಾರಲಿಂಗನ ಕುರಿತ ಧಾರ್ಮಿಕ ಕಾವ್ಯ
ಮೈಲಾರ ಲಿಂಗೇಶ್ವರನನ್ನು ಕುರಿತು ಅನೇಕ ಕಾವ್ಯಗಳಿವೆ. ಸ್ಥಳಪುರಾಣ ರೂಪದಲ್ಲಿ ಸಂಸ್ಕೃತ ಕಾವ್ಯವೊಂದು ದೊರೆತಿದೆ. ಜನಪದ ಕತೆಯೂ ಇದೆ. ಈಗಿನ ಗೊರವ ಸಂಪ್ರದಾಯದ ಮೇಲೆ ಬೆಳಕು ಚೆಲ್ಲುವ ಬೇರೊಂದು ಕಥೆ ಕಂಠಸ್ಥ ಹಾಡಿನ ರೂಪದಲ್ಲಿದ್ದು ಈಗ ಕಣ್ಮರೆಯಾಗಿದೆ. ಮೈಲಾರಲಿಂಗ ಮತ್ತು ಕೋಮಲೆಯರ ಪ್ರಣಯ ಪ್ರಸಂಗಕ್ಕೆ ಸೇರಿದ ಜನಪದ ಕಥನಗೀತೆ ಚಿತ್ರದುರ್ಗ, ತುಮಕೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಲಭ್ಯವಾಗಿದೆ. ಹಿರಿಯ ಮೈಲಾರದ ಸುತ್ತಿನಲ್ಲಿ ಮೈಲಾರಲಿಂಗನನ್ನು ಕುರಿತ ಧಾರ್ಮಿಕ ಕಾವ್ಯವೊಂದು ಈಗಲೂ ಪ್ರಚಲಿತವಾಗಿದೆ. ದೇವರ ಮಹಿಮೆಗಳು ಮತ್ತು ಪವಾಡಗಳ ಹಿನ್ನೆಲೆಯಲ್ಲಿ ಅಪೂರ್ವ ಕಲ್ಪನೆ, ನೈಜಚಿತ್ರಣ, ಆಯಾ ನೆಲದ ಭಾಷೆಯ ಅಪರೂಪದ ಶೈಲಿ ವಿಶಿಷ್ಟ ಸಂಭಾಷಣೆ-ಇವುಗಳಿಂದಾಗಿ ಇದರ ಕಥೆಗಾರಿಕೆ ಬಹಳ ಸೊಗಸಾದುದು.

ಮೈಲಾರಲಿಂಗ-ಕೋಮಲೆಯರ ಪ್ರಣಯ
ಈ ಸಂಬಂಧದಲ್ಲಿರುವ ಜನಪದ ಕಥೆ ಅಪರೂಪವಾದುದು. ತುಪ್ಪದ ಮಾಳಮ್ಮ ಶ್ರೀಮಂತ ಹೆಣ್ಣುಮಗಳು, ತನ್ನ ಐದು ಜನ ಅಣ್ಣಂದಿರಾದ ಚಿಕ್ಕಸಿದ್ದ, ದೊಡ್ಡಸಿದ್ದ, ಬೀರಜ್ಜ, ಕರಿಯಾಲ, ಕೆಂದಾಲ ಎಂಬುವರಿಗೆ ಮಾಳಮ್ಮ ಬುತ್ತಿಯನ್ನು ಹೊತ್ತು ತರುತ್ತಿದ್ದಳು. ಏಳು ಹೆಡೆಯ ಸರ್ಪವನ್ನೇ ಅವಳು ಬುತ್ತಿಯ ಬುಟ್ಟಿಯನ್ನು ಹೊರಲು ತನ್ನ ಸಿಂಬಿಯನ್ನಾಗಿ ಮಾಡಿಕೊಂಡಿದ್ದಳು. ಆಗ ಮೈಲಾರಲಿಂಗ ಮಾಳಮ್ಮ ಬುತ್ತಿ ಹೊತ್ತು ಹೋಗುತ್ತಿದ್ದ ಕಡೆಗೆ ಬಂದು ಅವಳನ್ನು ತಡೆದು ನಿಲ್ಲಿಸಿ ಗಂಗೆ ಮಾಲಿಯೊಡನೆ ತನಗೊಂದು ಮದುವೆಯಾಗಿದೆ. ತನ್ನ ಲಿಂಗಕ್ಕೊಂದು ಮದುವೆಯಾಗಬೇಕು ಎಂದು ಹೇಳಿದ. ಅವನ ವೇಷ ಅಪ್ಪಟ ಗೊರವನಂತಿತ್ತು. ಈ ವಿಚಿತ್ರ ವೇಷದವನನ್ನು ನೋಡಿದ ಮಾಳಮ್ಮ ರಾಕ್ಷಸ ಬಂದನೆಂದು ಹೆದರಿದಳು. ಆಕೆಯ ಅಣ್ಣಂದಿರು ಹತ್ತಿರದಲ್ಲೇ ಕುರಿ ಕಾಯುತ್ತಿದ್ದರು. ತಂಗಿ ಕೂಗಿದ ಶಬ್ದ ಕೇಳಿದ ಚಿಕ್ಕಸಿದ್ದ ಏಳು ಯೋಜನ ಉದ್ದದ ಬೂರಗ ಮರ ಹತ್ತಿ ನೋಡಿದ. ಆಕಾಶಕ್ಕೂ ಭೂಮಿಗೂ ಒಂದೇ ಆಗಿ ಮೈಲಾರಲಿಂಗ ನಿಂತಿದ್ದನ್ನು ಕಂಡ. ಯಾರೋ ರಾಕ್ಷಸನಿರಬೇಕೆಂದು ಹೆದರಿದ.

ಮುದ್ದಾಡಲು ಪ್ರಾರಂಭಿಸಿದ ನಾಯಿಗಳು
ಆರು ಸಾವಿರ ಕುರಿ ಹಾಲು ಕರೆದು ತನ್ನ ಎರಡು ನಾಯಿಗಳಿಗೂ ಇಟ್ಟು ಆ ರಾಕ್ಷಸನನ್ನು ಸೀಳಿ ಬನ್ನಿ ಎಂದು ಹೇಳಿ ಛೂಬಿಟ್ಟ. ನಿಮ್ಮ ಅಣ್ಣನ ನಾಯಿಗಳು ನನ್ನನ್ನು ಏನೂ ಮಾಡಲಾರವು ಎಂದ ಗೊರವಯ್ಯ ಭಂಡಾರವನ್ನು ನಾಯಿಗಳ ಮುಖಕ್ಕೆ ಬಡಿದ. ವೈರವನ್ನು ಬಿಟ್ಟ ನಾಯಿಗಳು ಆತನನ್ನು ಮುದ್ದಾಡಲು ಪ್ರಾರಂಭಿಸಿದುವು. ಅನಂತರ ಗೊರವಯ್ಯ ಮಾಳಮ್ಮನ ರಟ್ಟೆ ಹಿಡಿಯಲು ಹೋದ. ತನ್ನ ಕೊರಳಿನ ಸರ್ಪ ಕಚ್ಚುತ್ತದೆ ಎಂದು ಮಾಳಮ್ಮ ಬೆದರಿಸಿದಳು. ಅದಕ್ಕೂ ಗೊರವಯ್ಯ ಭಂಡಾರ ಹಾಕಿದ. ಆಗ ಅವಳ ಕತ್ತು ಬಿಟ್ಟು ಗೊರವಯ್ಯನ ಕತ್ತಿಗೆ ಬಂದು ಸುತ್ತಿಕೊಂಡಿತು ಆ ಸರ್ಪ. ಅನಂತರ ಮಿಕ್ಕ ಅಣ್ಣಂದಿರು ಓಡಿಬಂದು ದೊಣ್ಣೆಗಳಿಂದ ಗೊರವಯ್ಯನಿಗೆ ಪೆಟ್ಟು ಹಾಕಿದರು. ಆದರೆ ಆ ಪೆಟ್ಟುಗಳು ಮಾಳಿಗೆ ತಗಲಿ ಅವಳ ಮೈಮೇಲೆ ಬಾಸುಂಡೆಗಳೆದ್ದುವು.
ಆರು ಸಾವಿರ ಕುರಿ ಮೇಯಿಸಬೇಕು
ತುಪ್ಪದ ಮಾಳಿಯ ಲಗ್ನ ಆಗಲು ಬಂದಿರುವುದಾಗಿ ಗೊರವಯ್ಯ ಹೇಳಿದಾಗ ಅಣ್ಣಂದಿರು ‘ಆರು ಸಾವಿರ ಕುರಿ ಮೇಯಿಸಬೇಕು. ಮೂರು ಸಾವಿರ ಮರಿಗೆ ಹಾಲು ಕುಡಿಸಬೇಕು. ಕುರಿ ಮರಿಗಳಿಗೆ ಸೊಪ್ಪು ತರಬೇಕು. ಏಳು ಮೊಳದ ಜಾಡಿಯನ್ನು ಒಂದು ದಿನಕ್ಕೆ ತೆಗೀಬೇಕು. ಇಷ್ಟು ಮಾಡಿದರೆ ನಮ್ಮ ತಂಗಿ ಕೊಟ್ಟು ಲಗ್ನ ಮಾಡ್ತೀವಿ ಎಂದರು. ಅದಕ್ಕೂ ಗೊರವಯ್ಯ ಒಪ್ಪಿಕೊಂಡ. ಮಾಯದಿಂದ ಗಂಗೇಮಾಳಿಯನ್ನು ಕರೆಸಿದ. ಇಬ್ಬರೂ ಕೂಡಿ ಎಲ್ಲ ಕೆಲಸಗಳನ್ನೂ ಮುಗಿಸಿದರು. ಕಂಬಳಿ ನೇದು ಕೊಟ್ಟರು. ಇಷ್ಟಾದರೂ ಅಣ್ಣಂದಿರು ಮದುವೆಗೆ ಒಪ್ಪಲಿಲ್ಲ. ಗೊರವ ಕೊನೆಗೆ ತುಪ್ಪದ ಮಾಳಿಯನ್ನು ನಾಯಿಯಾಗಿ ಮಾರ್ಪಡಿಸಿ ತನ್ನೊಂದಿಗೆ ಕರೆದುಕೊಂಡು ಹೊರಟುಬಿಟ್ಟ. ಅಣ್ಣಂದಿರು ಬೆನ್ನಟ್ಟಿ ಬಂದರು. ಆಗ ಗೊರವಯ್ಯ ಐದು ಜನರ ಕತ್ತುಗಳಿಗೂ ಮೂರು ಮೂರು ಕವಡೆ ಕಟ್ಟಿ ಐದು ಬಟ್ಟಲು ಐದು ಡಮರುಗ ಕೊಟ್ಟು ದೋಣಿ ಸೇವೆ ಮಾಡಿಸಿದ. ಮೂಲತಃ ಗೊರವರಿಗೆ ಮೈಲಾರಲಿಂಗನೇ ಗೊರವ ದೀಕ್ಷೆ ಕೊಟ್ಟನೆನ್ನುವ ವಿಚಾರ ಈ ಪ್ರಸಂಗದಲ್ಲಿ ವಿದಿತವಾಗುತ್ತದೆ. ಈ ಜನಪದ ಕಥೆ ನೃತ್ಯರೂಪದಲ್ಲಿ ಈಗಲೂ ಅಲ್ಲಲ್ಲಿ ಬಳಕೆಯಲ್ಲಿದೆ.

ಪಡ್ಲಿಗಿ ತುಂಬಿಸುವುದು
ಗೊರವರು ಮಾಡುವ ಸಾಮೂಹಿಕ ನೃತ್ಯಕ್ಕೆ ಗೊರವರ ಕುಣಿತ ಎಂದು ಹೇಳುತ್ತಾರೆ. ಒಂದು ತಂಡದಲ್ಲಿ ಸುಮಾರು ಹತ್ತರಿಂದ ಹನ್ನೆರಡು ಮಂದಿ ಇರುತ್ತಾರೆ. ಕುಣಿತ ಆರಂಭಿಸುವ ಮೊದಲು ಹಿರಿಯ ಗೊರವ ಪಿಳ್ಳಂಗೀವಿ ಊದಿ ಡಮರುಗ ಬಾರಿಸುತ್ತಾರೆ. ಅನಂತರ ಡಮರುಗದ ಗತಿಗೆ ತಕ್ಕಂತೆ ಮುಂದೆಜ್ಜೆ ಹಿಂದೆಜ್ಜೆ ಹಾಕುತ್ತ ಕುಣಿಯ ತೊಡಗುತ್ತಾರೆ. ಟೊಪ್ಪಿಗೆಯನ್ನು ಮುಂದೆ ಚಾಚುತ್ತ, ವೃತ್ತಾಕಾರದಲ್ಲಿ ಸುತ್ತುತ್ತ ಕುಣಿತಕ್ಕೆ ವೈವಿಧ್ಯತೆ ತರುವುದುಂಟು.
ಗೊರವರ ಕುಣಿತ ಸಾರ್ವಜನಿಕವಾಗಿ ಪ್ರದರ್ಶನಕ್ಕೆ ಮಾತ್ರ ಸೀಮಿತಗೊಂಡಿಲ್ಲ. ಭಕ್ತರು ನೂತನ ಗೃಹಪ್ರವೇಶ ಇತರ ಶುಭಕೆಲಸಗಳನ್ನು ಮಾಡುವ ಮೊದಲು ಗೊರವರನ್ನು ಕರೆಸಿ ಕುಣಿತ ಮಾಡುತ್ತಾರೆ. ಇದಕ್ಕೆ ‘ದೋಣಿ ತುಂಬಿಸುವುದು’ ಎಂದು ಕರೆಯಲಾಗುವುದು. ಸಣ್ಣ ದೋಣಿಯಲ್ಲಿ ಪಾಯಸ ಮತ್ತು ಹಾಲನ್ನು ಕೈಯಲ್ಲಿ ಮುಟ್ಟದೇ, ಬಾಯಿಂದ ಇಡೀ ದೋಣಿಯನ್ನು ಕಚ್ಚಿಕೊಂಡು ಹಾಗೆಯೇ ಸೇವಿಸುವುದು ವಿಶೇಷ.